ಕೇಶವ್ ಎಂ.
ಅರಮನೆಗೆ ೨,೧೯,೯೧೮ ಮಂದಿ, ಮೃಗಾಲಯಕ್ಕೆ ೧.೫೭ ಲಕ್ಷ ಮಂದಿ ಭೇಟಿ
ಮೈಸೂರು: ದಸರಾ ಮಹೋತ್ಸವದ ಹಿನ್ನೆಲೆಯಲ್ಲಿ ಅರಮನೆ ಹಾಗೂ ಮೈಸೂರು ಮೃಗಾಲಯಕ್ಕೆ ಲಕ್ಷಾಂತರ ಮಂದಿ ಪ್ರವಾಸಿಗರು ಭೇಟಿ ನೀಡಿದ್ದು, ಇದರಿಂದ ಲಕ್ಷಾಂತರ ರೂ. ಆದಾಯವೂ ಬಂದಿದೆ.
ದಸರಾ ಉದ್ಘಾಟನೆಯಾದ ಅ.೧೧ರಿಂದ ಜಂಬೂಸವಾರಿ ಮೆರವಣಿಗೆ(ಅ.೨೧)ವರೆಗೆ ಸ್ಥಳೀಯರು ಹಾಗೂ ದೇಶ-ವಿದೇಶಗಳ ಪ್ರವಾಸಿಗರು ಲಗ್ಗೆ ಇಟ್ಟಿದ್ದಾರೆ. ಅರಮನೆ ನಗರಿ ವಿಶೇಷತೆಗಳನ್ನು ಕಣ್ತುಂಬಿಕೊಂಡಿದ್ದಾರೆ.
ಮೃಗಾಲಯಕ್ಕೆ ಭೇಟಿ ನೀಡಿದವರ ವಿವರ: ೨೦೨೬ರ ದಸರಾ ಸಂದರ್ಭದಲ್ಲಿ ೧.೫೭ ಲಕ್ಷ ಪ್ರವಾಸಿಗರು ಮೃಗಾಲಯಕ್ಕೆ ಭೇಟಿ ನೀಡಿದ್ದು, ಒಟ್ಟು ೧೯೩.೧೯ ಲಕ್ಷ ರೂ. ಆದಾಯ ಬಂದಿದೆ. ಆಯುಧ ಪೂಜೆ ದಿನ ೨೦, ೨೬೪ ಮಂದಿ ಪ್ರವಾಸಿಗರು ಭೇಟಿ ನೀಡಿದ್ದು, ೨೫.೬೭ ಲಕ್ಷ ರೂ. ಆದಾಯ ಬಂದಿದೆ. ವಿಜಯದಶಮಿಯ ದಿನ ೧೯,೭೪೫ ಪ್ರವಾಸಿಗರು ಭೇಟಿ ನೀಡಿದ್ದು, ೨೫.೧೫ ಲಕ್ಷ ರೂ. ಆದಾಯ ಬಂದಿದೆ. ಅರಮನೆಗೂ ಪ್ರವಾಸಿಗರ ಸಂಖ್ಯೆ ಹೆಚ್ಚಳ: ದಸರಾ ಮಹೋತ್ಸವ ಸಂದರ್ಭದಲ್ಲಿ ಹಿರಿಯರು ೧,೭೨,೭೧೯, ಮಕ್ಕಳು ೨೪,೮೬೧, ವಿದ್ಯಾರ್ಥಿಗಳು ೨೦,೪೪೮, ವಿದೇಶಿಯರು ೧,೮೬೨, ವಿದೇಶಿಯರ ಮಕ್ಕಳು ೨೮ ಮಂದಿ ಸೇರಿದಂತೆ ಒಟ್ಟಾರೆ ೨,೧೯,೯೧೮ ಪ್ರವಾಸಿಗರು ಅರಮನೆಗೆ ಭೇಟಿ ನೀಡಿದ್ದಾರೆ.
” ದಸರಾ ಮಹೋತ್ಸವದಲ್ಲಿ ಮೈಸೂರಿನ ಅರಮನೆಯ ಸೊಬಗನ್ನು ಕಣ್ತುಂಬಿಕೊಂಡಿರುವುದಕ್ಕೆ ಸಂತಸವಾಗಿದೆ. ಇಲ್ಲಿನ ಐತಿಹಾಸಿಕ ಕಟ್ಟಡಗಳು, ರಾಜರ ಕಥೆಗಳನ್ನು ಕೇಳಿದ್ದೇವೆ. ಅರಮನೆ ನೋಡಲು ರೋಮಾಂಚನಕಾರಿಯಾಗಿದೆ.”
-ವಿಜಯ ಮೋದಿ, ಪ್ರವಾಸಿಗ, ಗುಜರಾತ್
” ಅರಮನೆಯ ಇತಿಹಾಸ ತಿಳಿದು, ನೋಡಲು ಬಂದಿದ್ದೇವೆ. ಭವ್ಯ ಅರಮನೆಯನ್ನು ನೋಡಿದಾಗ ಮೈಸೂರಿನ ಸಂಪ್ರದಾಯ, ವೈಭವವು ಕಣ್ಣ ಮುಂದೆ ಬರಲಿದೆ. ಮೈಸೂರು ಸುಂದರತಾಣಗಳ ಜೊತೆಯಲ್ಲಿ ಐತಿಹಾಸಿಕ ಕಲೆಗಳನ್ನೂ ಹೊಂದಿದೆ.”
-ಶಿಜಿ, ಪ್ರವಾಸಿಗ, ಕೇರಳಂ




