ಶೇಖರ್ ಆರ್. ಬೇಗೂರು
ಬೇಗೂರು(ಗುಂಡ್ಲುಪೇಟೆ ತಾ.): ಹೋಬಳಿಯ ಸುತ್ತಮುತ್ತಲಿನ ಗ್ರಾಮಗಳ ಹಲವು ರಸ್ತೆಗಳಲ್ಲಿ ರೈತರು ಹುರುಳಿ ಒಕ್ಕಣೆ ಮಾಡುತ್ತಿ ರುವುದರಿಂದ ಹುರುಳಿ ಒಕ್ಕಣೆಯಿಂದ ವಾಹನ ಸವಾರರು ಪರದಾಡುತ್ತಿದ್ದಾರೆ.
ವಾಹನ ಸವಾರರು ರಸ್ತೆಗಳಲ್ಲಿ ಸಂಚರಿಸುವಾಗ ತಮ್ಮ ವಾಹನಗಳಿಗೆ ಸಿಲುಕಿದ ಹುರುಳಿ ಸೆತ್ತೆಯಿಂದ ವಾಹನಗಳು ಕೆಟ್ಟು ನಿಲ್ಲುತ್ತಿದ್ದು ವಾಹನ ರಿಪೇರಿಗೆ ಹಣ ವ್ಯಯಿಸಬೇಕಾದ ಪರಿಸ್ಥಿತಿ ಒಂದೆಡೆ ಯಾದರೆ ಕೆಲ ಸಂದರ್ಭಗಳಲ್ಲಿ ಹುರುಳಿ ಸೆತ್ತೆ ಸಿಲುಕಿ ತಾಪಮಾನ ದಿಂದ ವಾಹನಗಳು ಕ್ಷಣ ಮಾತ್ರ ದಲ್ಲೇ ಬೆಂಕಿಗಾಹುತಿಯಾಗುತ್ತಿವೆ.
ಕೇರಳದ ಪ್ರವಾಸಿಗರು ಹೊನ್ನೇಗೌಡನಹಳ್ಳಿ ಗೋಪಾಲಪುರ ರಸ್ತೆಯಲ್ಲಿ ಸಂಚರಿಸುತ್ತಿದ್ದ ವೇಳೆ ಮತ್ತು ಭೀಮನಬೀಡು ಗ್ರಾಮದ ಬಳಿ ಕಾರಿನ ಚಕ್ರಕ್ಕೆ ಹುರುಳಿ ಸೆತ್ತೆ ಸಿಕ್ಕಿಕೊಂಡು ಕ್ಷಣಮಾತ್ರದಲ್ಲಿ ಕಾರು ಬೆಂಕಿಯಿಂದ ಸಂಪೂರ್ಣ ಸುಟ್ಟು ಹೋಗಿತ್ತು. ಕಬ್ಬಳ್ಳಿ ಮತ್ತು ಬಾಚಹಳ್ಳಿ ಗ್ರಾಮಕ್ಕೆ ತೆರಳುತ್ತಿದ್ದ ಸಾರಿಗೆ ಬಸ್ ಚಕ್ರಕ್ಕೆ ಹುರುಳಿ ಸೆತ್ತೆ ಸುತ್ತಿಕೊಂಡ ಪರಿಣಾಮ ಆಕ್ಸೆಲ್ ಕಟ್ಟಾಗಿ ಬಸ್ ಒಂದು ರಸ್ತೆಯಲ್ಲಿ ನಿಂತಿತ್ತು.
ಬೇಗೂರು, ಹೆಡಿಯಾಲ, ಕಬ್ಬಳ್ಳಿ, ಸೋಮಹಳ್ಳಿ, ಕಾಳನ ಹುಂಡಿ, ನಿಟ್ರೆ, ಅಗತಗೌಡನಹಳ್ಳಿ ಮುಂತಾದ ಗ್ರಾಮಗಳಲ್ಲಿ ಹುರುಳಿ ಬೆಳೆಯನ್ನು ಹೆಚ್ಚಾಗಿ ಬೆಳೆಯು ತ್ತಿದ್ದು ಈ ಭಾಗದ ರೈತರು ರಸ್ತೆಗಳನ್ನೇ ಒಕ್ಕಣೆ ಕಣಗಳನ್ನಾಗಿ ಮಾಡಿಕೊಂಡಿದ್ದಾರೆ. ರೈತರಿಗೆ ಕೃಷಿ ಯಂತ್ರದ ಯೋಜನೆ ಅಡಿ ಹುರುಳಿ ಒಕ್ಕಣೆ ಯಂತ್ರವನ್ನು ಬಾಡಿಗೆಗೆ ಪಡೆದು ಒಕ್ಕಣೆ ಮಾಡುವಂತೆ ಅರಿವು ಮೂಡಿಸಬೇಕಾಗಿದೆ.
ರೈತರು ರಸ್ತೆಯಲ್ಲಿ ಸಂಚರಿಸುವ ವಾಹನಗಳಿಗೆ ತೊಂದರೆಯಾಗದಂತೆ ಕಡಿಮೆ ಪ್ರಮಾಣದಲ್ಲಿ ಹುರುಳಿ ಸೆತ್ತೆ ಹಾಕಿಕೊಂಡು ಒಕ್ಕಣೆ ಮಾಡಿದರೆ ತೊಂದರೆಯಿಲ್ಲ. ಅಧಿಕ ಪ್ರಮಾಣದಲ್ಲಿ ಹುರುಳಿ ಸೆತ್ತೆಗಳನ್ನು ರಸ್ತೆ ಗಳಲ್ಲಿ ಎತ್ತರಕ್ಕೆ ಹಾಕುವುದರಿಂದ ಅವಘಡಗಳು ಸಂಭವಿಸುತ್ತಿವೆ. -ಸಿದ್ದು, ಆಟೋ ಚಾಲಕ, ಕೋಟೆಕೆರೆ