ಪ್ರಸಾದ್ ಲಕ್ಕೂರು
ಚಾಮರಾಜನಗರ: ಬೇಸಿಗೆ ಆರಂಭವಾಗಿದ್ದು ಬಿಸಿಲಿನ ತಾಪ ಏರುತ್ತಿದೆ. ಇಂತಹ ಸಂದರ್ಭದಲ್ಲಿ ಜಾನುವಾರುಗಳಿಗೆ ಮೇವಿನ ಅಭಾವ ಕಾಡುವ ಸಾಧ್ಯತೆ ಇರುತ್ತದೆ. ಆದರೆ, ಕಳೆದ ಬಾರಿ ಮುಂಗಾರು ಮತ್ತು ಹಿಂಗಾರು ಮಳೆ ಸಾಕಷ್ಟು ಸುರಿದಿದ್ದರಿಂದ ಜಾನುವಾರುಗಳಿಗೆ ಮೇವಿನ ಕೊರತೆಯಿಲ್ಲ.
ರೈತರ ಬಳಿಯೇ ೩೮ ವಾರಗಳ ಕಾಲ (ನವೆಂಬರ್‌ನಿಂದ ಜೂನ್ ತನಕ) ಜಾನುವಾರುಗಳಿಗೆ ಬೇಕಾಗುವಷ್ಟು ಮೇವು ದಾಸ್ತಾನಿದೆ. ಬಿಳಿಜೋಳ ಮತ್ತು ಮುಸುಕಿನ ಜೋಳದ ಒಣ ಕಡ್ಡಿ, ನೆಲಗಡಲೆ ಹಾಗೂ ಹುರುಳಿಯ ಒಣ ಸೊಪ್ಪು, ಭತ್ತ, ರಾಗಿ ಹುಲ್ಲು, ದ್ವಿದಳ ಧಾನ್ಯಗಳ ಹೊಟ್ಟನ್ನು ರೈತರು ಸಂಗ್ರಹ ಮಾಡಿ ಬಣವೆ ಮಾಡಿಕೊಂಡಿದ್ದಾರೆ.
ಇದಲ್ಲದೆ ಕೃಷಿ ಪಂಪ್‌ಸೆಟ್ ಜಮೀನುಗಳ ಬದುಗಳಲ್ಲಿಯೂ ನೆಫಿಯರ್, ಆಫ್ರಿಕನ್ ಟಾಲ್‌ನಂತಹ ಇತರೆ ಹಸಿರು ಮೇವು ಬೆಳೆಯಲಾಗುತ್ತಿದೆ. ಪಶುಪಾಲನೆ ಇಲಾಖೆಯು ಮೇವು ಬೆಳೆಯಲು ನೀರಾವರಿ ಇರುವ ರೈತರಿಗೆ ಮೇವಿನ ಬೀಜದ ಕಿಟ್‌ಗಳನ್ನು ವಿತರಿಸಿದೆ.
ಜಿಲ್ಲೆಯಲ್ಲಿ ೨೦ನೇ ಜಾನುವಾರು ಗಣತಿ ಪ್ರಕಾರ ಒಟ್ಟು ೨,೫೯,೨೭೯ ದನ, ಕರು, ಎಮ್ಮೆಗಳಿವೆ. ಒಟ್ಟು ೨,೭೮,೧೯೯ ಕುರಿ, ಮೇಕೆಗಳು ಇವೆ. ಈ ಎಲ್ಲಾ ರಾಸುಗಳಿಗೆ ಜಿಲ್ಲೆಯಲ್ಲಿ ಒಟ್ಟು ೩೮ ವಾರಗಳಿಗೆ ಸಾಕಾಗುವಷ್ಟು ಮೇವಿನ ಲಭ್ಯತೆ ಇದೆ.
ಈಗಾಗಲೇ ಜಿಲ್ಲಾದ್ಯಂತ ಇರುವ ೮೪ ಪಶು ಚಿಕಿತ್ಸಾಲಯಗಳ ಮೂಲಕ ೫ ಕೆ. ಜಿ. ತೂಕದ ೩ ಸಾವಿರ ಮೇವಿನ ಬೀಜದ ಕಿಟ್‌ಗಳನ್ನು ರೈತರಿಗೆ ವಿತರಿಸಲಾಗಿದೆ ಎಂದು ಪಶುಪಾಲನೆ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.
ಜಿಲ್ಲೆಯಲ್ಲಿ ಬಂಡೀಪುರ, ಬಿಳಿಗಿರಿರಂಗನ ಬೆಟ್ಟ ಹುಲಿ ಸಂರಕ್ಷಿತಾರಣ್ಯಗಳು ಹಾಗೂ ಮಲೆ ಮಹದೇಶ್ವರ ಬೆಟ್ಟ, ಕಾವೇರಿ ವನ್ಯಜೀವಿ ಧಾಮಗಳಿವೆ. ಇವುಗಳ ಅಂಚಿನಲ್ಲಿ ಇರುವ ಗ್ರಾಮಗಳಲ್ಲಿ ಜಾನುವಾರುಗಳನ್ನು ಸಾಕುವವರು ಮೇಯಲು ಕಾಡಂಚಿಗೆ ಬಿಡುತ್ತಾರೆ. ಹಾಗಾಗಿ ಈ ಹಿಂಡು ದನಗಳ ಮಾಲೀಕರು ಮೇವು ಸಂಗ್ರಹ ಮಾಡಿಲ್ಲ. ಆದರೆ, ಕಾಡಂಚಿನ ಬರಡು ಭೂಮಿಯಲ್ಲಿ ಒಣ ಮೇವು ಲಭ್ಯವಿದೆ.
ಮೇವು ಸಂರಕ್ಷಿಸಲು ಸೂಚನೆ
ಜಿಲ್ಲೆಯ ರೈತರು ತಮ್ಮ ಜಮೀನು, ಮನೆಗಳ ಬಳಿ, ಹಿತ್ತಿಲುಗಳಲ್ಲಿ ಬಣವೆಗಳ ಮೂಲಕ ಸಂಗ್ರಹಿಸಿರುವ ಭತ್ತ, ಮುಸು ಕಿನ ಜೋಳ, ಬಿಳಿಜೋಳ, ರಾಗಿ, ಕಡಲೆ ಕಾಯಿ, ಅವರೆ, ಉದ್ದು, ಅಲಸಂದೆ, ತೊಗರಿ, ಹೆಸರು ಬೇಳೆ, ಕಡಲೆಕಾಳು, ಹುರುಳಿ ಮುಂತಾದ ಬೆಳೆಗಳ ಹುಲ್ಲುಗ ಳನ್ನು ಸಂರಕ್ಷಿಸಿಕೊಳ್ಳಬೇಕು. ರೈತರು ಮೇವನ್ನು ಸುಡದೆ ಹಾಗೂ ಮಳೆ ನೀರಿ ನಿಂದ ಕೊಳೆತು ಹೋಗದಂತೆ ಎಚ್ಚರ ವಹಿಸಬೇಕು. ಪಂಪ್‌ಸೆಟ್ ನೀರಾವರಿ ಹೊಂದಿರುವ ರೈತರು ಪಶುಪಾಲನೆ ಇಲಾಖೆ ನೀಡಿರುವ ಮೇವಿನ ಬೀಜವನ್ನು ಬಿತ್ತನೆ ಮಾಡಿ ಹಸಿರು ಮೇವು ಬೆಳೆದುಕೊಳ್ಳಬೇಕು. ಬೇಸಿಗೆ ಸಮಯದಲ್ಲಿ ಜಾನುವಾರುಗಳಿಗೆ ಹಸಿರು ಮೇವು ಮತ್ತು ಕುಡಿಯುವ ನೀರು ಪೂರೈಸಬೇಕು ಎಂದು ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.