Mysore
20
overcast clouds
Light
Dark

ಬೆಟ್ಟದಲ್ಲಿ ಬಗೆದಷ್ಟೂ ಶೋಷಿತ ಗ್ರಾಮಗಳು; ಕನಿಷ್ಠ ಸೌಲಭ್ಯವೂ ಇಲ್ಲದೇ ಯಮಯಾತನೆ ಅನುಭವಿಸುತ್ತಿರುವ ಕಾಡೊಳಗಿನ ಜನರು

• ರವಿಚಂದ್ರ ಚಿಕ್ಕೆಂಪಿಹುಂಡಿ

ಇಂದಿಗೆ 21 ದಿನಗಳ ಹಿಂದಕ್ಕೆ ಸೀಮಿತ ಮನಸ್ಥಿತಿಯ ಅಸಂಖ್ಯಾತ ಜನರಿಗೆ ಇಂಡಿಗನತ್ತ-ಮೆಂದಾರೆ ಎಂಬ ಕುಗ್ರಾಮಗಳು ದಕ್ಷಿಣ ಭಾರತದ ಸುಪ್ರಸಿದ್ಧ ಯಾತ್ರಾ ಸ್ಥಳ ಮಲೆ ಮಹದೇಶ್ವರ ಬೆಟ್ಟದ ಕಾಲ ಬುಡದಲ್ಲೇ ಇವೆ ಎಂಬ ಪರಿಕಲ್ಪನೆಯೂ ಇರಲಿಲ್ಲ.

ಆ ರೀತಿ ಇದ್ದ ಗ್ರಾಮಗಳೆರಡು ಇಂದು ರಾಷ್ಟ್ರ ಮಟ್ಟದಲ್ಲಿ ಮುನ್ನೆಲೆಗೆ ಬಂದು ನಿಂತಿದ್ದೇಕೆ ಎಂಬ ಮೂಲವನ್ನು ಹುಡುಕುತ್ತಾ ಹೋದರೆ ಕಾಡೊಳಗಿನ ಜಲಪಾತದ ಮೂಲ ಹುಡುಕಿದಂತೆ ಹಲವು ಟಿಸಿಲುಗಳು ಒಡಮೂಡುತ್ತವೆ. ಏ.26ರಂದು ಇಂಡಿಗನತ್ತದಲ್ಲಿ ನಡೆದ ಮತಗಟ್ಟೆ ಧ್ವಂಸ ಪ್ರಕರಣದಿಂದ ಇಂದು ಈ ಎರಡೂ ಗ್ರಾಮಗಳು ರಾಷ್ಟ್ರ ಮಟ್ಟದಲ್ಲಿ ಗಮನ ಸೆಳೆದಿವೆ. ಅಲ್ಲಿಯವರೆಗೂ ಈ ಗ್ರಾಮಗಳು ಎಲ್ಲಿವೆ? ಹೇಗಿವೆ? ಅಲ್ಲಿನ ಜನಜೀವನ ಹೇಗೆ? ಅಲ್ಲಿನ ನಿವಾಸಿಗಳಿಗೆ ಮೂಲ ಸೌಕರ್ಯ ಎಷ್ಟರಮಟ್ಟಿಗೆ ಲಭಿಸಿದೆ? ಮೂಲ ಸೌಲಭ್ಯದ ಹಕ್ಕು, ಮಕ್ಕಳ ಕಡ್ಡಾಯ ಶಿಕ್ಷಣದ ಹಕ್ಕು ಇಲ್ಲಿ ಸ್ವಲ್ಪವಾದರೂ ಕಾರ್ಯರೂಪಕ್ಕೆ ಬಂದಿದೆಯೆ? ಅವರ ಬದುಕು ತಕ್ಕಮಟ್ಟಿಗಾದರೂ ಗೆಲುವಾಗಿದೆಯೇ? ಎಂಬುದು ಹೊರಗಿನ ಜನರಿಗಿರಲಿ ಸ್ವತಃ ಆಡಳಿತದ ನೊಗ ಹೊತ್ತಿರುವ ಅಧಿಕಾರಿ ವರ್ಗ, ಸ್ಥಳೀಯ ಜನಪ್ರತಿನಿಧಿಗಳು, ಶಾಸಕರು, ಜಿಲ್ಲಾ ಉಸ್ತುವಾರಿ ಸಚಿವರು, ಸರ್ಕಾರಕ್ಕೂ ಅರಿವಿದ್ದಂತೆ ಕಾಣುತ್ತಿಲ್ಲ.

ಊರು ಹುಟ್ಟಿದಾಗಿನಿಂದಲೂ ಮೂಲ ಸೌಲಭ್ಯವಿಲ್ಲದೆ ಸತತವಾಗಿ ನೊಂದಿರುವ ಜನ ರೋಸಿಹೋಗಿ ಮತದಾನದ ದಿನ ಅತಿರೇಕದಿಂದ ವರ್ತಿಸಿ ಮತಗಟ್ಟೆ ಧ್ವಂಸ ಮಾಡಿದ್ದು, ಅಧಿಕಾರಿಗಳ ಮೇಲೆ ಕಲ್ಲು ತೂರಿದ್ದು, ಮೆಂದಾರೆ ಪೋಡಿನವರ ಮೇಲೆ ಹಲ್ಲೆ ಮಾಡಿದ್ದು ಇಂದು ಅವರನ್ನು ತಪ್ಪಿತಸ್ಥರನ್ನಾಗಿ ನಿಲ್ಲಿಸಿದೆ. ಈ ಪ್ರಕರಣದಲ್ಲಿ ನ್ಯಾಯ-ಶಿಕ್ಷೆ ಕಾನೂನಿನ ಕೈಲಿದೆ; ಅದು ಇನ್ನೊಂದು ವಿಚಾರ. ಇದನ್ನು ಹೊರತುಪಡಿಸಿ ಇಡೀ ಪ್ರಕರಣವನ್ನು ಬೇರೆ ಆಯಾಮದಲ್ಲಿ ನೋಡಿದರೆ ಸಮಸ್ಯೆಯ ಬೇರುಗಳನ್ನು ಹುಡುಕಬಹುದು. ಇಂಡಿಗನತ್ತ ಗ್ರಾಮ ಮಲೆ ಮಹದೇಶ್ವರ ಬೆಟ್ಟದಿಂದ ನಾಗಮಲೆಗೆ ಹೋಗುವ ದುರ್ಗಮ ದಾರಿಯಲ್ಲಿದೆ.

ಬೆಟ್ಟದಿಂದ 8 ಕಿ.ಮೀ. ಅಂತರಲ್ಲಿರುವ ಈ ಊರಿನ ಜನರು ಕೇಳುತ್ತಿರುವುದು ಡಾಂಬರು ರಸ್ತೆಯನ್ನೇನೂ ಅಲ್ಲ. ವಾಹನ ಸಂಚಾರಕ್ಕೆ ಅನುಕೂಲವಾಗುವಂತೆ ಮೆಟ್ಲಿಂಗ್ ಮಾಡಿದ ಉತ್ತಮ ಮಣ್ಣು ರಸ್ತೆ, ವಾಹನ ಸೌಲಭ್ಯ, ವಿದ್ಯುತ್ ಸಂಪರ್ಕ, ಕುಡಿಯುವ ನೀರು ಮುಂತಾದ ನಾಲ್ಕು ಮುಖ್ಯ ಮೂಲ ಸೌಕರ್ಯಗಳನ್ನು. ಇದಕ್ಕಾಗಿ ಅವರು 15-20 ವರ್ಷಗಳಿಂದಲೂ ಬೇಡಿಕೆ ಇಡುತ್ತಲೇ ಬಂದಿದ್ದಾರೆ. ಈ ಬೇಡಿಕೆ ಈಡೇರಿಸುವುದು ರಾಜ್ಯ-ಕೇಂದ್ರ ಸರ್ಕಾರಗಳಿಗೆ
ಕಷ್ಟವೇನಲ್ಲ, ಇಚ್ಛಾಶಕ್ತಿ ಇದ್ದರೆ.

ಇವರು ನೀಡುತ್ತಿರುವ ಮತದಾನದಿಂದ ಚುನಾಯಿತರಾಗಿ ಹೋದವರು ನೀವು ಸಮಸ್ಯೆ ಹೇಳುತ್ತಲೇ ಇರಿ ನಾವು ಕೇಳುತ್ತಲೇ ಇರುತ್ತೇವೆ ಎಂಬ ಧೋರಣೆ ತಳೆದರೆ ತಾಳ್ಮೆಯ ಕಟ್ಟೆಯೊಡೆಯದೇ ಇರುತ್ತದೆಯೆ? ಅಂತಿಮವಾಗಿ ಒಂದು ದಿನ ಅಂತಹದೊಂದು ಘಟನೆ ಸಂಭವಿಸಿದೆ. ಆ ಕಾರಣಕ್ಕಾಗಿ ಇಂದು ಇಂಡಿಗನತ್ತ ಗ್ರಾಮ ಮುನ್ನೆಲೆಗೆ ಬಂದಿದೆ. ಇನ್ನು ತಮ್ಮ ಹಕ್ಕುಗಳಿಗಾಗಿ ಹೋರಾಟ ಮಾಡುತ್ತಿದ್ದರೂ ತಮ್ಮ ಮತದಾನದ ಹಕ್ಕನ್ನು ಚಲಾಯಿಸಲು ಬಂದು ಹಲ್ಲೆಗೊಳಗಾದ ಮೆಂದಾರೆ ಪೋಡಿನ ಜನರ ಬದುಕು ಇಂಡಿಗನತ್ತ ಗ್ರಾಮದವರಿಗಿಂತಲೂ ಹೀನಾಯವಾಗಿದೆ.

ಇಂಡಿಗನತ್ತದಿಂದ ಮೆಂದಾರೆಗೆ ವಾಹನ ಸೌಲಭ್ಯವೇ ಇಲ್ಲ. ನಡೆದೇ ಬೆಟ್ಟ ಹತ್ತಿಹೋಗಬೇಕು. ಕುಡಿಯುವ ನೀರು ಇಲ್ಲ. ಬಿತ್ತಿ ಬೆಳೆಯಲು ಯಾರಿಗೂ ಜಮೀನಿಲ್ಲ, ಅರಣ್ಯದ ಕಿರು ಉತ್ಪನ್ನ ಸಂಗ್ರಹಿಸಲು ಲೈಸನ್ಸ್‌ ಇಲ್ಲ. ಕೂಲಿಯಷ್ಟೇ ಆಧಾರ. ಈಗ ಇಂಡಿಗನತ್ತ ಗ್ರಾಮದವರು ಹಲ್ಲೆ ನಡೆಸಿದ್ದರಿಂದ ನೊಂದು ಹೋಗಿರುವ ಇಲ್ಲಿನ ಜನ ಕೂಲಿ ಮಾಡಿ ಬದುಕಲು ಎಲ್ಲಾದರೇನು ನಮಗೆ ಪುನರ್ವಸತಿ ಕಲ್ಪಿಸದರೆ ಸಾಕು ಎಂಬ ದಯನೀಯ ಸ್ಥಿತಿಗೆ ಬಂದು ತಲುಪಿದ್ದಾರೆ.

ಇದಕ್ಕಿಂತಲೂ ಭೀಕರವಾದ ಪರಿಸ್ಥಿತಿಯಿರುವ ಮೆದಗನಾಣೆ, ಪಡಸಲನತ್ತ, ತೊಳಸಿಕೆರೆ, ತೇಕಾಣೆ, ತೋಕೆರೆ ಪಾಲಾರ್ ಕೊಂಬುಡಿಕ್ಕಿ, ಆನೆಹೊಲ, ಕೀರ್ನಹೊಲ, ಗೊರಸಾಣೆ, ಕೊಕ್ಕಬರೆ, ತೋಕೆರೆ, ದೊಡ್ಡಾಣೆ ಸೇರಿದಂತೆ ಸುಮಾರು 20ಕ್ಕೂ ಹೆಚ್ಚು ಗ್ರಾಮಗಳು-ಪೋಡುಗಳು ಮಲೆ ಮಹದೇಶ್ವರ ಬೆಟ್ಟದ ವ್ಯಾಪ್ತಿಯಲ್ಲಿರುವ ಕಾಡಿನೊಳಗೆ ಇದ್ದು, ಇಲ್ಲಿನವರು ಪ್ರತಿನಿತ್ಯ ಮೂಲಸೌಲಭ್ಯದ ಸಮಸ್ಯೆಗಳನ್ನು ಎದುರಿಸುತ್ತಾ, ಯಾತನಾಮಯವಾಗಿ ದಿನ ದೂಡುತ್ತಿದ್ದಾರೆ.
ಇಂಡಿಗನತ್ತ ಗ್ರಾಮದ ಮತಗಟ್ಟೆ ಧ್ವಂಸ ಪ್ರಕರಣದಿಂದ ಇಲ್ಲಿನ ಸಮಸ್ಯೆಗಳ ತೀವ್ರತೆಯನ್ನು ಅರಿತ ‘ಆಂದೋಲನʼ ಮಲೆ ಮಹದೇಶ್ವ ಬೆಟ್ಟದ ವ್ಯಾಪ್ತಿಯಲ್ಲಿರುವ ಇನ್ನುಳಿದ ಗ್ರಾಮಗಳ ಪರಿಸ್ಥಿಯನ್ನೂ ಅವಲೋಕನ ಮಾಡಲು ಕೆಲವು ಗ್ರಾಮಗಳಿಗೆ ಭೇಟಿ ಕೊಟ್ಟಾಗ ಅಲ್ಲಿನ ಜನರ ಯಾತನಾಮಯ ಬದುಕಿನ ದಿಗ್ದರ್ಶನವಾಯಿತು.

ಹನೂರು-ಮಲೆ ಮಹದೇಶ್ವರ ಬೆಟ್ಟದ ಮುಖ್ಯ ರಸ್ತೆಯಲ್ಲಿ ಬೆಟ್ಟಕ್ಕೂ ಮೊದಲು ಸುಮಾರು 7-8 ಕಿ.ಮೀ. ದೂರದಲ್ಲಿ ಸಿಗುವ ಹಾಲಹಳ್ಳ ನಿಲ್ದಾಣದಿಂದ ಬಲಕ್ಕೆ ತಿರುಗಿದರೆ ಮಲೆ ಮಹದೇಶ್ವರಬೆಟ್ಟ ಸಂರಕ್ಷಿತಾರಣ್ಯದ ದಾರಿ ಆರಂಭವಾಗುತ್ತದೆ. ದಾರಿ ಎಂದರೆ ತಕ್ಕಮಟ್ಟಿಗಿನ ಮಣ್ಣು ರಸ್ತೆಯೂ ಅಲ್ಲ. ಕೊರಕಲು ಕಲ್ಲುಗುಂಡಿನ ಹಾದಿಯಲ್ಲಿ 3 ಕಿ.ಮೀಯಷ್ಟು ದೂರ ಸಾಗಿದರೆ ಕೊಕ್ಕಬೋರೆ, 8 ಕಿ.ಮೀ. ದೂರ ಸಾಗಿದರೆ ತೋಕೆರೆ, 15 ಕಿ.ಮೀ.ಯಷ್ಟು ದೂರ ಸಾಗಿದರೆ ಕೊನೆಯಲ್ಲಿರುವ ದೊಡ್ಡಾಣೆ ಎಂಬ ಮೂರು ಊರುಗಳು ಸಿಗುತ್ತವೆ. ಈ ಮೂರು ಊರುಗಳಿಗೂ ಮುಖ್ಯವಾಗಿ ಬೇಕಾಗಿರುವುದು ರಸ್ತೆ, ವಿದ್ಯುತ್, ನೀರು, ವಾಹನ ಸೌಲಭ್ಯ.

ಇಲ್ಲಿಗಿರುವ ಏಕೈಕ ವಾಹನ ಸೌಲಭ್ಯವೆಂದರೆ ಶ್ರೀ ಮಲೆ ಮಹದೇಶ್ವರ ಸ್ವಾಮಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದ ನಿರ್ವಹಣೆಯಲ್ಲಿರುವ ಜನವನ ಜೀಪ್. ಆ ಸೌಲಭ್ಯವೂ ಕೂಡ ಬೆಳಿಗ್ಗೆ ಶಾಲಾ ಮಕ್ಕಳನ್ನು ಕರೆ ತರಲು ಒಂದು ಬಾರಿ ಮತ್ತೆ ಸಂಜೆ ಮಕ್ಕಳನ್ನು ಸ್ವಸ್ಥಾನಕ್ಕೆ ಬಿಡಲು ಒಂದು ಬಾರಿಯ ಪ್ರಯಾಣಕ್ಕೆ ಮಾತ್ರ ಅವಕಾಶ. ಈ ವೇಳೆ ಖಾಲಿಯಾಗಿ ಹೋಗಿ ಬರುವ ವಾಹನಕ್ಕೆ ಅಲ್ಲಿನ ನಿವಾಸಿಗಳು ಏರಿ(ಹೆಚ್ಚು ಎಂದರೆ 8 ಮಂದಿ) ಹಾಲಹಳ್ಳದ ಮುಖ್ಯರಸ್ತೆಗೂ ಅಥವಾ ತಮ್ಮ ಸ್ವಸ್ಥಾನಕ್ಕೂ ತಲುಪಬಹುದು ಉಳಿದಂತೆ ಕಾಲು ನಡಿಗೆಯೇ ಗತಿ.

“ಆಂದೋಲನ’ ಭೇಟಿ ನೀಡಿದ ಈ ಮೂರೂ ಊರುಗಳು ಇಂಡಿಗನತ್ತಕ್ಕಿಂತ ಹೀನಾಯ ಸ್ಥಿತಿಯಲ್ಲಿವೆ. ಉಳಿದ ಗ್ರಾಮಗಳು ಇದಕ್ಕಿಂತ ಭಿನ್ನವಾಗಿಲ್ಲ ಎಂಬುದು ಪ್ರತ್ಯಕ್ಷದರ್ಶಿಗಳ ಮಾತು. ಹಾಗಾಗಿ ಇನ್ನುಳಿದ ಗ್ರಾಮಗಳವರು ರೊಚ್ಚಿಗೆದ್ದು ಇಂಡಿಗನತ್ತ ಗ್ರಾಮದಂತಹ ಘಟನೆ ಮರುಕಳಿಸಬಾರದು ಎಂದರೆ ಅಧಿಕಾರಿಗಳು, ಜನಪ್ರತಿನಿಧಿಗಳು, ಸರ್ಕಾರ ಮತ್ತಷ್ಟು ನಿರ್ಲಕ್ಷ್ಯ ವಹಿಸದೆ ಈ ಗ್ರಾಮಗಳಿಗೆ ತ್ವರಿತವಾಗಿ ಕನಿಷ್ಠ ಮೂಲ ಸೌಕರ್ಯ ಕಲ್ಪಿಸಲಿ ಎಂಬುದೇ ʼಆಂದೋಲನʼದ ಆಶಯ.

ತೋಕೆರೆ ಕೆರೆಯನ್ನು ತುಂಬಿಸಿದರೆ ಅರ್ಧ ಜೀವ ಬಂದಂತೆ

ಕೊಕ್ಕಬರೆಯನ್ನು ದಾಟಿ ಅದೇ ದುರ್ಗಮ ದಾರಿಯಲ್ಲಿ ಮುಂದಕ್ಕೆ ಸುಮಾರು 5-6 ಕಿ.ಮೀ. ಸಾಗಿದರೆ ಮಂಜುಮಲೆ ಎಂಬ ಬೆಟ್ಟದೊಳಗೊಂದು ಬೋರೆಯ ಮೇಲೆ 66 ಕುಟುಂಬಗಳಿರುವ, 198 ಜನರನ್ನು ಹೊಂದಿರುವ ತೋಕೆರೆ ಗ್ರಾಮ ಎದುರಾಗುತ್ತದೆ.

ಒಂದು ಕಾಲದಲ್ಲಿ ವ್ಯವಸಾಯದ ಜೊತೆಗೆ ದೊಡ್ಡಿದನಗಳನ್ನು ಸಾಕಿಕೊಂಡು ಸಮೃದ್ಧಿಯಾದ ಹಾಲು, ಮೊಸರು, ಬೆಣ್ಣೆ, ತುಪ್ಪ ಹಾಗೂ ಜಾನುವಾರುಗಳ ಮಾರಾಟದಿಂದ ಆದಾಯದ ಮೂಲ ಮಾಡಿಕೊಂಡಿದ್ದ ಇಲ್ಲಿನವರಿಗೆ ಅರಣ್ಯ ಇಲಾಖೆಯವರು ದೊಡ್ಡಿ ದನಗಳನ್ನು ಕಾಡಿಗೆ ಬಿಡಬಾರದೆಂದು ವಿಧಿಸಿರುವ ನಿರ್ಬಂಧದಿಂದ ಈಗ ತುಟಿಗೆ ಸವರಲೂ ತುಪ್ಪ ಇಲ್ಲ ಎಂದು ಮಾರ್ಮಿಕವಾಗಿ ನುಡಿಯುತ್ತಾರೆ.

ಇಲ್ಲಿಯೂ ಕೂಡ ಆರ್.ಧ್ರುವನಾರಾಯಣ ಅವರು ಸಂಸದರಾಗಿದ್ದಾಗ ಕೊರೆಸಿದ ಒಂದು ಸೋಲಾರ್‌ ವಿದ್ಯುತ್‌ ಸೌಲಭ್ಯವುಳ್ಳ ಬೋರ್‌ವೆಲ್‌ನಿಂದ ತಕ್ಕಮಟ್ಟಿಗೆ ನೀರು ಸಿಗುತ್ತದೆ. ಊರಿನ ಮಧ್ಯೆ ಇಡೀ ಊರಿಗೆ ನೀರಿನ ಮೂಲವಾಗಿದ್ದ ಒಂದು ಕೆರೆ ಇದ್ದು, ಈಗ ಬತ್ತಿಹೋಗಿದೆ. ಈ ಕೆರೆಯ ಹೂಳು ತೆಗೆಸಿ, ಬೆಟ್ಟದ ಮೂಲದಿಂದ ನೀರು ಹರಿದುಬಂದು ಈ ಕೆರೆಯನ್ನು ಸೇರುವಂತೆ ಮಾಡಿದರೆ ಅರ್ಧ ಜೀವ ಬಂದಂತೆ ಎನ್ನುತಾರೆ. ಬಹಳಷ್ಟು ಕುಟುಂಬಗಳಿಗೆ 3-4 ಎಕರೆಯಷ್ಟು ಪಟ್ಟಾ ಜಮೀನು ಇದ್ದು, ಇನ್ನೂ ತಾತ ಮುತ್ತಾತನ ಹೆಸರಿನಲ್ಲೇ ಇವೆ. ಇವರ ಹೆಸರಿನಲ್ಲಿ ಖಾತೆ, ಪಹಣಿ ಇಲ್ಲದೆ ಕಂದಾಯ ಇಲಾಖೆಯ ಯಾವುದೇ ಸೌಲಭ್ಯ ಸಿಗುತ್ತಿಲ್ಲ. ಕೇಂದ್ರ ಸರ್ಕಾರದಿಂದ ಸಿಗುವ ಕಿಸಾನ್ ಸಮ್ಮಾನ್ ಹಣವೂ ಇಲ್ಲ. ಈಗ ಇರುವವರ ಹೆಸರಿಗೆ ಖಾತೆ, ಪಹಣಿ ಆದರೆ ಬದುಕಿಕೊಳ್ಳುತ್ತೇವೆ ಎನ್ನುತ್ತಾರೆ. ಇನ್ನು ವಿದ್ಯುತ್ ಬೇಕೆ ಬೇಕು ಎಂಬುದು ಕೊನೆಯ ಬೇಡಿಕೆ.

ದಿಕ್ಕುದಿಸೆ ಇಲ್ಲದ ದೊಡ್ಡಾಣೆ

ತೋಕೆರೆಯನ್ನು ದಾಟಿ ಕೊರಕಲುಗಳನ್ನು ಮೀರಿದ ದಾರಿಯಲ್ಲದ ದಾರಿಯಲ್ಲಿ 8-10 ಕಿ.ಮೀ., ಹಾಲಹಳ್ಳ ಮುಖ್ಯ ರಸ್ತೆಯಿಂದ ಸುಮಾರು 15 ಕಿ.ಮೀ. ಸಾಗಿದರೆ ಜೀವ ಅರೆಜೀವವಾಗುತ್ತದೆ. ಇಂತಹ ದಿಕ್ಕುದಿಸೆ ಇಲ್ಲದ ಜಾಗದಲ್ಲಿ ಬಿಡುಬೀಸಾಗಿ ಬಿದ್ದಿರುವ ಊರಿನಲ್ಲಿ 158 ಕುಟುಂಬಗಳು, ಈ ಕುಟುಂಬಗಳಲ್ಲಿ ಅಣ್ಣ-ತಮ್ಮ, ದಾಯಾದಿಗಳು ಅವರ ಸಂಸಾರಗಳು ಹೀಗೆ 525 ಜನರಿದ್ದಾರೆ. ಇಲ್ಲಿನವರು ದೈನಂದಿನ ವ್ಯವಹಾರ, ಆಸ್ಪತ್ರೆ ಮುಂತಾದವುಗಳಿಗೆ ಹಾಲಹಳ್ಳದ ಮುಖ್ಯ ರಸ್ತೆಗೆ ಬರಬೇಕೆಂದರೆ 15 ಕಿ.ಮೀ, ದುರ್ಗಮ ರಸ್ತೆಯಲ್ಲಿ ನಡೆದೇ ಬರಬೇಕು. ಇಲ್ಲ ಕಾಡು ದಾರಿಯಲ್ಲಿ ಬೆಟ್ಟಸಾಲನ್ನು ಹತ್ತಿ ಇಳಿದು ಮಾರ್ಟಳ್ಳಿಗೆ ಹೋಗಬೇಕು. ಹಾಗಾಗಿ ಇವರು ವಾರಕ್ಕೆ ಒಮ್ಮೆಯಾದರೂ ನಗರ ಪ್ರದೇಶದ ಸುಳಿಯಬೇಕೆಂದರೂ ಹೆರಿಗೆ ನೋವಿನಷ್ಟೇ ಸಂಕಟ.

ಈ ಕಾರಣದಿಂದ ಇಲ್ಲಿನವರು ಮಕ್ಕಳನ್ನು ವಿದ್ಯಾಭ್ಯಾಸಕ್ಕಾಗಿ ಮಾರ್ಟಳ್ಳಿ, ರಾಮಾಪುರ, ಮಹದೇಶ್ವರ ಬೆಟ್ಟ ಮುಂತಾದೆಡೆ ವಸತಿ ಶಾಲೆಗಳಿಗೆ ಸೇರಿಸಿದ್ದಾರೆ. ಇವರಿಗೆ ನೀರಿಗಿಂತ ಪ್ರಮುಖ ಬೇಡಿಕೆ ವಾಹನ ಸೌಲಭ್ಯ. ವ್ಯವಸಾಯವನ್ನೇ ಮುಖ್ಯ ಕಸುಬಾಗಿಸಿಕೊಂಡಿರುವ ಇಲ್ಲಿನ ಬಹುಪಾಲು ಜನರಿಗೆ 2ರಿಂದ 5 ಎಕರೆಯವರಿಗೂ ಪಟ್ಟಾ ಜಮೀನಿದೆ. ಬಹಳಷ್ಟು ಜನರಿಗೆ ತಮ್ಮ ತಾತಮುತ್ತಾನ ನಂತರ ಖಾತೆ ಪಹಣಿ ಆಗಿಲ್ಲ. ಹಾಗಾಗಿ ಸರ್ಕಾರಿ ಸೌಲಭ್ಯವೂ ಇಲ್ಲ. ಹಾಗಾಗಿ ಕಂದಾಯ ಇಲಾಖೆ ದೊಡ್ಡ ಮನಸ್ಸು ಮಾಡಿ ನಮ್ಮ ಹೆಸರಿಗೆ ಖಾತೆ ಮಾಡಿಕೊಟ್ಟರೆ ಕಾಡಿ ನೊಳೆಗೆ ಹೇಗೋ ನೆಮ್ಮದಿ ಕಂಡುಕೊಳ್ಳುತ್ತೇವೆ ಎನ್ನುತ್ತಾರೆ.

ಕೊಕ್ಕಬೋರೆ ನೀರಿನ ಬರ ನೀಗಿಸಬೇಕಿದೆ

ಎದ್ದುಬಿದ್ದು ಸಾಗುವ ವಾಹನದಲ್ಲಿ ಅಥವಾ ಕಾಲು ನಡಿಗೆಯಲ್ಲಿ ಜೀವ ಕೈಯಲ್ಲಿ ಹಿಡಿದುಕೊಂಡು ಹಾಲಹಳ್ಳದಿಂದ 3 ಕಿ.ಮೀ.ಯಷ್ಟು ದೂರ ಸಾಗಿದರೆ ಕೊಕ್ಕಬೋರೆ ಗ್ರಾಮ ಸಿಗುತ್ತದೆ. 82 ಕುಟುಂಬದ 274 ಜನರನ್ನು ಹೊಂದಿರುವ ಈ ಊರಿಗೆ ಇರುವುದು ಒಂದೇ ಬೋರ್‌ವೆಲ್. ಅದೂ ಕೂಡ ಆ‌ .ಧ್ರುವನಾರಾಯಣ ಅವರು ಸಂಸದರಾಗಿದ್ದಾಗ ಕೊರೆಸಿದ್ದು, ಅಲ್ಲಿಯವರೆಗೂ ಅಲ್ಲಿನವರಿಗೆ ತೋಡು ಬಾವಿಯೇ ಆಸರೆಯಾಗಿತ್ತು. ದಾರದಂತೆ ನೀರು ಬೀಳುವ ಈ ಬೋರ್‌ವೆಲ್‌ ನಿಂದ ಒಂದು ದಿನಕ್ಕೆ ಒಂದು ಕುಟುಂಬಕ್ಕೆ ಹೆಚ್ಚೆಂದರೆ 50 ಲೀಟರ್ ನೀರು ಸಿಗಬಹುದು. ಆ ನೀರಿನಲ್ಲೇ ಇಡೀ ಕುಟುಂಬ ಕುಡಿಯಲು, ಅಡುಗೆ ಮಾಡಲು, ಸ್ನಾನ ಮಾಡಲು, ಬಟ್ಟೆ ಒಗೆಯಲು, ದನಕರುಗಳಿಗೆ ಕುಡಿಯಲು ಸರಿಪಡಿಸಿಕೊಳ್ಳಬೇಕು. ಹಾಗಾಗಿ ಈ ಊರಿನವರಿಗೆ ಮುಖ್ಯವಾಗಿ ಬೇಕಿರುವುದು ನೀರಿನ ವ್ಯವಸ್ಥೆ, ವಿದ್ಯುತ್. ದಿನಗಟ್ಟಲೆ ಕಾದು ದಾರದಂತೆ ಬೀಳುತ್ತಿರುವ ನೀರನ್ನು ಸಂಗ್ರಹಿಸಲು ಹೆಣಗಾಡುತ್ತಿರುವ ಮಹಿಳೆ ಇದರ ನಡುವೆಯೇ ದಾವು ಹಿಂಗಿಸಿಕೊಳ್ಳುತ್ತಿರುವ ವೃದ್ದೆ. ಕಾಡು ಪ್ರಾಣಿಗಳ ಹಾವಳಿಗೆ ಹೆದರಿ ರಾಗಿ, ಅವರೆ, ಸಾಮೆ, ನವಣೆ ಮುಂತಾದ ಬೆಳೆಗಳನ್ನಷ್ಟೇ ಬೆಳೆಯುತ್ತಿರುವ ಇವರಿಗೆ ಸೋಲಾರ್ ತಂತಿಬೇಲಿಗೆ ಅನುಕೂಲ ಕಲ್ಪಿಸಬೇಕಿದೆ.