ಚಿರಂಜೀವಿ ಸಿ.ಹುಲ್ಲಹಳ್ಳಿ
ಮೈಸೂರು: ನಗರದ ಹೃದಯ ಭಾಗದಲ್ಲಿರುವ ರಾಮಚಂದ್ರ ಅಗ್ರಹಾರದ ರಾಮಾನುಜ ರಸ್ತೆ ಮತ್ತು ಬಸವೇಶ್ವರ ರಸ್ತೆಗೆ ಚಾಚಿಕೊಂಡಿರುವ ಖಾಲಿ ನಿವೇಶನವೊಂದು ಇದೀಗ ಕಸದ ತಾಣವಾಗಿ ಮಾರ್ಪಟ್ಟಿದೆ.
ಈ ನಿವೇಶನದ ಸುತ್ತಮುತ್ತಲಿನ ಮನೆಗಳಲ್ಲಿ ಉತ್ಪತ್ತಿಯಾಗುವ ದೈನಂದಿನ ಕಸ, ಕಟ್ಟಡ ನಿರ್ಮಾಣದ ಅವಶೇಷಗಳು(ಡೆಬ್ರಿಸ್), ಪ್ಲಾಸ್ಟಿಕ್ ತ್ಯಾಜ್ಯ ಹಾಗೂ ಇತರೆ ವಿಲೆಯಾಗದ ವಸ್ತುಗಳನ್ನು ನಿರಂತರವಾಗಿ ಸುರಿಯುತ್ತಿ ರುವ ಪರಿಣಾಮ ಸ್ಥಳೀಯರು ದುರ್ವಾಸನೆ, ಅನೈರ್ಮಲ್ಯ ಹಾಗೂ ಸಾಂಕ್ರಾಮಿಕ ರೋಗಗಳ ಭೀತಿಯ ನಡುವೆ ಬದುಕುವಂತಾಗಿದೆ.
ಕಳೆದ ಹಲವು ವಾರಗಳಿಂದ ಖಾಲಿ ನಿವೇಶನದಲ್ಲಿ ಕಸದ ರಾಶಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಕೇವಲ ಮನೆಯ ತ್ಯಾಜ್ಯ ಮಾತ್ರವಲ್ಲದೆ ಕಟ್ಟಡ ನಿರ್ಮಾಣ ಹಾಗೂ ಕೆಡವುವ ಕಾಮಗಾರಿಗಳಿಂದ ಉಂಟಾಗುವ ಅವಶೇಷ (ಡೆಬ್ರಿಸ್) ಕೂಡ ದೊಡ್ಡ ಪ್ರಮಾಣದಲ್ಲಿ ಸುರಿಯಲಾಗುತ್ತಿದೆ. ಮುರಿದ ಇಟ್ಟಿಗೆ, ಕಾಂಕ್ರೀಟ್ ತುಂಡುಗಳು, ಮಣ್ಣು, ಕಲ್ಲು, ಸಿಮೆಂಟ್ ಅವಶೇಷಗಳು ಮತ್ತು ಪ್ಲಾಸ್ಟಿಕ್ ಚೀಲಗಳ ರಾಶಿಯಿಂದ ಖಾಲಿ ನಿವೇಶನ ಭರ್ತಿಯಾಗತೊಡಗಿದೆ.
ಕೆಲವರು ರಾತ್ರಿ ವೇಳೆ ವಾಹನಗಳಲ್ಲಿ ತ್ಯಾಜ್ಯ ತಂದು ಸುರಿದು ಹೋಗುತ್ತಿದ್ದಾರೆ. ಮತ್ತೊಂದೆಡೆ ಮನೆಗಳಿಂದ ಉತ್ಪತ್ತಿಯಾಗುವ ಕಸವನ್ನು ಪಾಲಿಕೆಯ ವಾಹನಗಳಿಗೆ ನೀಡುವ ಬದಲು ನೇರವಾಗಿ ಈ ನಿವೇಶನಕ್ಕೆ ಎಸೆದು ಹೋಗುವ ಪ್ರವೃತ್ತಿಯೂ ಹೆಚ್ಚಾಗಿದೆ. ಈ ಪರಿಣಾಮ ಕಸದ ರಾಶಿಯ ಸುತ್ತ ನೊಣ, ಸೊಳ್ಳೆಗಳು ಹೆಚ್ಚಾಗಿ ಸಂತಾನೋತ್ಪತ್ತಿ ಮಾಡುತ್ತಿದ್ದು, ಸಾಂಕ್ರಾಮಿಕ ರೋಗ ಗಳ ಭೀತಿ ಎದುರಾಗಿದೆ.
ಬೀದಿ ನಾಯಿಗಳು, ದನಗಳ ಹಾವಳಿ: ಕಸದ ರಾಶಿಯಲ್ಲಿ ಆಹಾರ ತ್ಯಾಜ್ಯ ಹೆಚ್ಚಿರುವುದರಿಂದ ಬೀದಿ ನಾಯಿಗಳು ಮತ್ತುಬೀಡಾಡಿ ದನಗಳು ಬೀಡುಬಿಡುತ್ತಿವೆ. ಕಸವನ್ನು ಚೆಲ್ಲಾ ಪಿಲ್ಲಿಯಾಗಿ ಹರಡುವುದರಿಂದ ದುರ್ವಾಸನೆ ತೀವ್ರವಾಗಿದೆ. ನಿವಾಸಿಗಳು ಮನೆಗಳ ಬಾಗಿಲು-ಕಿಟಕಿಗಳನ್ನು ಮುಚ್ಚಿಕೊಳ್ಳಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.
ಎಚ್ಚರಿಕೆ ಫಲಕಕ್ಕೂ ಇಲ್ಲ ಬೆಲೆ: ಖಾಲಿ ನಿವೇಶನದಲ್ಲಿ ಕಸ ಹಾಕಿದರೆ ದಂಡ ವಿಧಿಸಲಾ ಗುವುದು ಎಂದು ನಗರಪಾಲಿಕೆ ಎಚ್ಚರಿಕೆ ಫಲಕ ಅಳವಡಿಸಿದ್ದರೂ ಅದರಿಂದ ಯಾವುದೇ ಪರಿಣಾಮ ಕಂಡುಬಂದಿಲ್ಲ. ಫಲಕದ ಎದುರೇ ಕಸ ಸುರಿಯಲಾಗುತ್ತಿದೆ. ಪಾಲಿಕೆ ಅಧೀಕಾರಿಗಳು ಇತ್ತ ಗಮನಹರಿಸಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.
ಮದ್ಯಸೇವನೆ ಅಡ್ಡೆಯಾಗಿ ಮಾರ್ಪಾಡು:
ಖಾಲಿ ನಿವೇಶನ ಇರುವುದರಿಂದ ವಿದ್ಯುತ್ ದೀಪಗಳ ಅಳವಡಿಕೆ ಇಲ್ಲದಿರುವ ಕಾರಣಪುಂಡರು ರಾತ್ರಿ ವೇಳೆ ಮದ್ಯ ಸೇವಿಸುವ ಅಡ್ಡೆಯನ್ನಾಗಿ ಮಾಡಿಕೊಂಡಿದ್ದಾರೆ. ಕುಡಿದು ಎಸೆದಿರುವ ಮದ್ಯದ ಬಾಟಲಿಗಳು, ಟೆಟ್ರಾ ಪ್ಯಾಕ್‌ಗಳು ಎಲ್ಲೆಂದರಲ್ಲಿ ಹರಡಿಕೊಂಡಿವೆ.
” ಖಾಲಿ ನಿವೇಶನ ಇರುವುದರಿಂದ ಕಟ್ಟಡ ತ್ಯಾಜ್ಯ, ಮನೆ ತ್ಯಾಜ್ಯಗಳು, ಮದ್ಯಸೇವನೆಯ ಅಡ್ಡೆಯಾಗಿ ಖಾಲಿ ನಿವೇಶನ ಬಳಕೆಯಾಗುತ್ತಿದೆ. ಇದರಿಂದ ಸಾರ್ವಜನಿಕರ ಓಡಾಟಕ್ಕೆ ತೊಂದರೆಯಾಗುವ ಜೊತೆಗೆ ಸುತ್ತಮುತ್ತಲಿನ ಪರಿಸರವನ್ನು ಹದಗೆಡಿಸುತ್ತಿದೆ. ಹೀಗಾಗಿ ಸಂಬಂಧಪಟ್ಟವರು ಕ್ರಮ ವಹಿಸಬೇಕು.”
-ಸಿದ್ದಪ್ಪ, ನಿವಾಸಿ
” ರಾಮಾನುಜ ರಸ್ತೆಯ ಭಾಗದಲ್ಲಿ ಮನೆಯ ಕಸ, ಇತರೆ ತ್ಯಾಜ್ಯಗಳನ್ನು ಎಸೆಯಲಾಗುತ್ತಿದೆ. ನಿವೇಶನದ ಮಧ್ಯ ಭಾಗದಲ್ಲಿ ಕಟ್ಟಡ ತ್ಯಾಜ್ಯಗಳನ್ನು ಸುರಿಯಲಾಗುತ್ತಿದೆ. ಇನ್ನು ಬಸವೇಶ್ವರ ರಸ್ತೆಯ ಬಳಿ ದನಗಳ ಹಾವಳಿ ಹೆಚ್ಚಾಗಿ ಅಲ್ಲಿಯೇ ಸಗಣಿಯ ಗುಡ್ಡೆಗಳಾಗುತ್ತಿವೆ. ಇದರಿಂದ ಅನೈರ್ಮಲ್ಯ ಉಂಟಾಗುತ್ತಿದೆ.”
-ಧನುಷ್, ಸ್ಥಳೀಯ





