೧೯೨೧ರಲ್ಲಿ ನಾಲ್ವಡಿ ಕೃಷ್ಣರಾಜ ಒಡೆಯರ್ ಕಟ್ಟಿಸಿದ್ದ ಈ ಮಾರುಕಟ್ಟೆ ಈಗ ಅವ್ಯವಸ್ಥೆಯ ಆಗರ
ಮೈಸೂರು: ಹಣ್ಣು-ಸೊಪ್ಪು, ತರಕಾರಿ ಮುಂತಾದ ದಿನ ಬಳಕೆಯ ವಸ್ತುಗಳ ಖರೀದಿಗೆ ನೂರಾರು ಜನರು ನಿತ್ಯ ಬಂದು ಹೋಗುವ ನಗರದ ಪಾರಂಪರಿಕ ಹೆಗ್ಗುರುತುಗಳಲ್ಲಿ ಒಂದಾದ ಅಗ್ರಹಾರದ ವಾಣಿವಿಲಾಸ ಮಾರುಕಟ್ಟೆ ಜೀರ್ಣಾವಸ್ಥೆಗೆ ತಲುಪಿ ವರ್ಷಗಳೇ ಕಳೆದಿದ್ದರೂ ಆಳುವವರು ಕಟ್ಟಡದ ದುರಸ್ತಿಗೆ ಮುಂದಾಗುತ್ತಿಲ್ಲ.
ಮಾರುಕಟ್ಟೆ ಕಟ್ಟಡ ಉತ್ತರ ಭಾಗದ ಮಳಿಗೆಗಳ ಸಜ್ಜಾ ಕುಸಿದು ಇಂದಿಗೆ (ಮೇ ೧೨) ನಾಲ್ಕು ವರ್ಷಗಳು ಪೂರ್ಣಗೊಂಡರೂ ಈವರೆಗೂ ಯಾವುದೇ ಸಮಗ್ರ ದುರಸ್ತಿ ಅಥವಾ ಜೀರ್ಣೋದ್ಧಾರ ಕಾರ್ಯ ಆರಂಭವಾಗಿಲ್ಲ. ಹೀಗಾಗಿ, ಪಾರಂಪರಿಕ ಕಟ್ಟಡ ಈಗ ಶಿಥಿಲಾವಸ್ಥೆಯಲ್ಲೇ ದಿನಗಳನ್ನು ದೂಡುತ್ತಿದ್ದು, ಆತಂಕದಲ್ಲೇ ವ್ಯಾಪಾರಿಗಳು ಮತ್ತು ಸಾರ್ವಜನಿಕರು ವ್ಯವಹಾರ ನಡೆಸುವಂತಾಗಿದೆ.
೧೯೨೧ರಲ್ಲಿ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ತಮ್ಮ ತಾಯಿ ಕೆಂಪನಂಜಮ್ಮಣ್ಣಿ ಅವರ ಹೆಸರಿನಲ್ಲಿ ನಿರ್ಮಿಸಿದ್ದ ಈ ಐತಿಹಾಸಿಕ ಮಾರುಕಟ್ಟೆ ಶತಮಾನದ ಸಂಭ್ರಮ ಕಂಡಿದ್ದರೂ ಅದರ ಸಂರಕ್ಷಣೆಗೆ ಬೇಕಾದ ಕಾಳಜಿ ತೋರುತ್ತಿಲ್ಲ. ‘ಎಲ್’ ಆಕಾರದಲ್ಲಿ ನೂರೊಂದು ಗಣಪತಿ ದೇವಸ್ಥಾನದಿಂದ ಅಗ್ರಹಾರ ವೃತ್ತ ಹಾಗೂ ವಾಣವಿಲಾಸ ರಸ್ತೆಯಲ್ಲಿರುವ ಗಣಪತಿ ದೇವಸ್ಥಾನದವರೆಗೆ ಹರಡಿರುವ ಮಾರುಕಟ್ಟೆ, ಒಂದು ಕಾಲದಲ್ಲಿ ನಗರದ ಪ್ರಮುಖ ವ್ಯಾಪಾರ ಕೇಂದ್ರವಾಗಿತ್ತು. ಆದರೆ ಈಗ ಒಳಗೆ ಹೋದರೆ ಅವ್ಯವಸ್ಥೆಯ ದರ್ಶನವಾಗುತ್ತದೆ.
ಗೋಡೆಗಳ ತಳಭಾಗದಲ್ಲಿ ಇಲಿಗಳು ಬಿಲ ತೋಡಿಕೊಂಡಿವೆ. ಮರಗಳ ಬೇರುಗಳಿಂದ ನೆಲಕ್ಕೆ ಹಾಸಿರುವ ಚಪ್ಪಡಿಗಳು ಮೇಲೆದ್ದಿವೆ. ಚರಂಡಿ ದುರಸ್ತಿ ಆಗದೆ ನೆಲಹಾಸಿನ ಕಲ್ಲುಗಳು ಕುಸಿದು ಅರ್ಧ ಅಡಿ ಆಳದ ಗುಂಡಿಗಳು ನಿರ್ಮಾಣವಾಗಿವೆ. ಮಳಿಗೆಗಳ ಮೇಲ್ಭಾಗದ ಸಜ್ಜಾಗಳು ಯಾವ ಕ್ಷಣದಲ್ಲಾದರೂ ಕುಸಿಯುವ ಭೀತಿ ಇದೆ.
ಹಲವು ಕಡೆ ಗೋಡೆಗಳಲ್ಲಿ ಬಿರುಕು ಕಾಣಿಸಿಕೊಂಡಿದ್ದು, ಮಳಿಗೆಗಳ ಮೇಲಿನ ಗೋಪುರಗಳು ಜರ್ಝರಿತಗೊಂಡಿವೆ. ಪ್ರತಿ ವರ್ಷವೂ ಹೆಂಚುಗಳು ಹಾಗೂ ಸೂರಿನ ಭಾಗಗಳು ಕಳಚುತ್ತಿರುವುದು ವ್ಯಾಪಾರಿಗಳ ಆತಂಕವನ್ನು ಮತ್ತಷ್ಟು ಹೆಚ್ಚಿಸಿದೆ. ಮಾರುಕಟ್ಟೆಯ ಮುಖ್ಯ ಪ್ರವೇಶದ್ವಾರ ಬೀಳುವ ಹಂತ ತಲುಪಿದ್ದರಿಂದ ಅದನ್ನು ಎರಡು ಕಡೆಗಳಿಂದ ಮುಚ್ಚಿ ದಶಕಗಳೇ ಕಳೆದಿದೆ. ೨೦೨೨ರಲ್ಲಿ ಉತ್ತರ ಭಾಗದ ಸಜ್ಜಾ ಕುಸಿದ ವೇಳೆ ಮೂವರು ಪ್ರಾಣಾಪಾಯದಿಂದ ಪಾರಾಗಿದ್ದರು. ಆ ಘಟನೆ ಬಳಿಕವೂ ಯಾವುದೇ ಶಾಶ್ವತ ಕ್ರಮ ಕೈಗೊಳ್ಳದಿರುವುದು ವ್ಯಾಪಾರಿಗಳ ಆಕ್ರೋಶಕ್ಕೆ ಕಾರಣವಾಗಿದೆ. ಈಗಲೂ ಹಲವರು ಹೆಂಚು, ಟಾರ್ಪಲ್ ಹಾಗೂ ತಾತ್ಕಾಲಿಕ ಶೀಟ್‌ಗಳನ್ನು ಬಳಸಿ ಮಳೆ-ಬಿಸಿಲಿನ ನಡುವೆಯೇ ವ್ಯಾಪಾರ ನಡೆಸುತ್ತಿದ್ದಾರೆ.
” ಮಾರುಕಟ್ಟೆಯಲ್ಲಿ ಮುಚ್ಚಿರುವ ಮುಖ್ಯದ್ವಾರ ಈಗ ಗಾಂಜಾ ಅಡ್ಡೆಯಾಗಿದೆ. ಶೌಚಾಲಯ ಇದ್ದರೂ ಮತ್ತೊಂದು ಶೌಚಾಲಯ ಕಟ್ಟಿದ್ದಾರೆ. ಅದನ್ನು ಕೂಡ ತೆರೆದಿಲ್ಲ. ಮಾರುಕಟ್ಟೆಯ ನೆಲ ಕಿತ್ತು ಕಲ್ಲುಗಳು ಮೇಲೆ ಎದ್ದು ಬಂದಿವೆ. ಇಲ್ಲಿರುವ ಎಲ್ಲ ವ್ಯಾಪಾರಿಗಳೂ ಬಾಡಿಗೆಯನ್ನು ತಪ್ಪದೆ ಪಾವತಿಸುತ್ತಾರೆ. ಮಾರುಕಟ್ಟೆಯನ್ನು ನಾವೇ ನಿರ್ವಹಣೆ ಮಾಡಿಕೊಳ್ಳುತ್ತೇವೆ ಎಂದರೂ ಬಿಡುತ್ತಿಲ್ಲ. ತಾವೂ ಮಾಡುತ್ತಿಲ್ಲ. ಇದಕ್ಕೆ ಯಾವಾಗ ಪರಿಹಾರ?”
ಗುರು, ಬಾಳೆಎಲೆ ವ್ಯಾಪಾರಿ
” ಮಾರುಕಟ್ಟೆಯು ನಿರ್ವಹಣೆಯಿಲ್ಲದೆ ನಿತ್ಯ ಸೊರಗಿ ಹಾಳಾಗುತ್ತಿದೆ. ಇದರ ಬಗ್ಗೆ ನಗರಪಾಲಿಕೆ ಅಧಿಕಾರಿಗಳು, ಪಾರಂಪರಿಕ ಸಮಿತಿಯವರ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗಿಲ್ಲ. ಮಾರುಕಟ್ಟೆ ಮುಖ್ಯದ್ವಾರ ಮುಚ್ಚಿ ದಶಕಗಳೇ ಕಳೆಯುತ್ತಿವೆ. ಇಲ್ಲಿಯವರೆಗೂ ಅದನ್ನು ತೆರೆದಿಲ್ಲ. ಇಲ್ಲಿನ ವ್ಯಾಪಾರಿಗಳಿಗೆ ಬಹಳಷ್ಟು ತೊಂದರೆಯಾಗಿದೆ. ನೆಲಗಳು ಕಿತ್ತು ಹೋಗಿವೆ. ರಾಜರು ಕಟ್ಟಿರುವ ಕಟ್ಟಡವನ್ನು ಸಂರಕ್ಷಿಸಿಕೊಳ್ಳಿ.”
ಲೋಕೇಶ್, ತೆಂಗಿನಕಾಯಿ ವ್ಯಾಪಾರಿ
” ಈ ಮಾರುಕಟ್ಟೆಯ ಕಾಯಕಲ್ಪಕ್ಕಾಗಿ ೨೦೧೫ರಲ್ಲಿಯೇ ಮೈಸೂರು ಮಹಾನಗರ ಪಾಲಿಕೆ ೩೫ ಕೋಟಿ ರೂ. ವೆಚ್ಚದ ಪ್ರಸ್ತಾವವನ್ನು ಸರ್ಕಾರಕ್ಕೆ ಸಲ್ಲಿಸಿತ್ತು. ಆದರೆ, ಇಂದಿಗೂ ಒಂದು ರೂಪಾಯಿಯೂ ಬಿಡುಗಡೆಯಾಗಿಲ್ಲ. ಪಾರಂಪರಿಕ ಕಟ್ಟಡ ಸಂರಕ್ಷಣೆ ಬಗ್ಗೆ ಸರ್ಕಾರ ಹಾಗೂ ಪಾಲಿಕೆ ನಿರ್ಲಕ್ಷ್ಯ ವಹಿಸುತ್ತಿವೆ ಎಂಬ ಆರೋಪ ಕೇಳಿಬರುತ್ತಿದೆ. ಮಾರುಕಟ್ಟೆಗಳಿಂದ ಸಂಗ್ರಹವಾಗುವ ಬಾಡಿಗೆ ಪಾಲಿಕೆಯ ಖಜಾನೆಗೆ ಸೇರುತ್ತದೆ. ಆದರೆ ನಿರ್ವಹಣೆಗೆ ಅಗತ್ಯವಾದ ಹಣವನ್ನು ವೆಚ್ಚ ಮಾಡುವ ಮನಸ್ಸು ಇಲ್ಲ. ಹಿಂದೆ ಸುಂಕದ ಕಟ್ಟೆಗಳಿಂದ ಬಂದ ಹಣವನ್ನು ಮಾರುಕಟ್ಟೆ ನಿರ್ವಹಣೆಗೆ ಬಳಸುತ್ತಿದ್ದರು. ಆ ವ್ಯವಸ್ಥೆಯೂ ನಿಂತು ಹತ್ತು ವರ್ಷಗಳಾಗಿವೆ ಎಂದು ವ್ಯಾಪಾರಿ ಗುರು ಆಕ್ರೋಶ ವ್ಯಕ್ತಪಡಿಸುತ್ತಾರೆ. ನಗರದ ವ್ಯಾಪಾರ, ಪರಂಪರೆ ಮತ್ತು ಸಂಸ್ಕೃತಿಯ ಭಾಗವಾಗಿರುವ ವಾಣಿವಿಲಾಸ ಮಾರುಕಟ್ಟೆ ಇಂದು ನಿರ್ಲಕ್ಷ್ಯದಿಂದ ಕುಸಿತದ ಭೀತಿ ಮೂಡಿಸಿದೆ. ಇನ್ನೊಂದು ದುರಂತ ಸಂಭವಿಸುವ ಮುನ್ನವೇ ಸರ್ಕಾರ ಹಾಗೂ ಪಾಲಿಕೆ ಎಚ್ಚೆತ್ತುಕೊಂಡು ತುರ್ತು ಸಂರಕ್ಷಣಾ ಕ್ರಮ ಕೈಗೊಳ್ಳಬೇಕೆಂದು ವ್ಯಾಪಾರಿಗಳು ಆಗ್ರಹಿಸಿದ್ದಾರೆ.





