Mysore
18
broken clouds

Social Media

ಭಾನುವಾರ, 22 ಡಿಸೆಂಬರ್ 2024
Light
Dark

ನೆನಪಿನ ಬುತ್ತಿಯೊಂದಿಗೆ ಹೊರಟ ಆರಕ್ಷಕರು

ನಗುಮುಖದಿಂದಲೇ 2024ರ ದಸರಾಗೆ ವಿದಾಯ, ಕುಟುಂಬಸ್ಥರಿಗಾಗಿ ಅಗತ್ಯ ವಸ್ತುಗಳ ಖರೀದಿ

ಎಚ್.ಎಸ್.ದಿನೇಶ್ ಕುಮಾರ್

ಮೈಸೂರು: ದಸರಾ ಸಂದರ್ಭದಲ್ಲಿ ಭದ್ರತಾ ಕಾರ್ಯಕ್ಕಾಗಿ ಆಗಮಿಸಿದ್ದ ರಾಜ್ಯದ ವಿವಿಧ ಜಿಲ್ಲೆಗಳ ಪೊಲೀಸರು ದಸರಾ ಮಹೋತ್ಸವದ ನೆನಪಿನ ಬುತ್ತಿಯೊಂದಿಗೆ ನಗು ಮುಖದಿಂದಲೇ ತಮ್ಮ ತಮ್ಮ ಸ್ಥಳಗಳಿಗೆ ತೆರಳಿದರು.

ಕಳೆದ 15 ದಿನಗಳಿಂದ ದಸರಾ ಕರ್ತವ್ಯ ನಿರ್ವಹಿಸುತ್ತಿದ್ದ ಮಂಗಳೂರು, ಬೆಂಗಳೂರು, ಧಾರವಾಡ, ಕಲಬುರ್ಗಿ, ಹಾವೇರಿ, ಹಾಸನ, ಕೊಡಗು ಹಾಗೂ ಚಿಕ್ಕಮಗಳೂರು ಸೇರಿದಂತೆ ವಿವಿಧ ಜಿಲ್ಲೆಗಳಿಂದ ಬಂದಿದ್ದ ಪೊಲೀಸರು ಬೆಳಿಗ್ಗೆ ತಮ್ಮಕುಟುಂಬದವರನ್ನುನೋಡುವ ಕಾತರದಿಂದ 2024ರ ದಸರಾ ಹಬ್ಬಕ್ಕೆ ವಿದಾಯ ಹೇಳಿ ಸಂತಸದಿಂದ ತಮ್ಮ ಊರುಗಳಿಗೆ ನಡೆದರು.

ದಸರಾ ಮಹೋತ್ಸವದ ಭದ್ರತೆಗಾಗಿ ನಗರ ಪೊಲೀಸ್ ಆಯುಕ್ತರಾದ ಸೀಮಾ ಲಾಟ್ಕರ್ ನೇತೃತ್ವದಲ್ಲಿ ವಿವಿಧ ಜಿಲ್ಲೆಗಳ ಮೂವರು ಉಪ ಪೊಲೀಸ್ ಆಯುಕ್ತರು, ಇಬ್ಬರು ಡಿಐಜಿಗಳು, 27 ಎಸ್‌ಪಿಗಳು, 989 ಅಡಿಷನಲ್ ಎಸ್‌ಪಿ, ಡಿವೈಎಸ್‌ಪಿ, ಇನ್‌ಸ್ಪೆಕ್ಟರ್‌ಗಳು ಸೇರಿದಂತೆ 5000 ಪೊಲೀಸರನ್ನು ನಿಯೋಜಿಸಲಾಗಿತ್ತು.

ಯುವ ದಸರಾ, ಯುವ ಸಂಭ್ರಮ, ಅರಮನೆ ಆವರಣದಲ್ಲಿನ ಕಾರ್ಯಕ್ರಮಗಳು, ವಸ್ತು ಪ್ರದರ್ಶನ, ಮೃಗಾಲಯ, ನಗರದ ಪ್ರಮುಖ ರಸ್ತೆಗಳೂ ಸೇರಿದಂತೆ ನಗರದ ಸುತ್ತಮುತ್ತಲಿನ ವಿವಿಧ ಸ್ಥಳಗಳಲ್ಲಿ ತಮಗೆ ವಹಿಸಿದ್ದ ಭದ್ರತಾ ವ್ಯವಸ್ಥೆಯನ್ನು ವಿವಿಧ ಜಿಲ್ಲೆಗಳ ಪೊಲೀಸರು ಯಶಸ್ವಿಗಾಗಿ ನಿರ್ವಹಿಸಿದರು.

ದಸರಾ ಹಬ್ಬದ ಅಂತಿಮ ದಿನವಾದ ಜಂಬೂಸವಾರಿ ಸಾಗುವ ಮಾರ್ಗದುದ್ದಕ್ಕೂ ಬೆಳಿಗ್ಗೆ 8 ಗಂಟೆಯಿಂದ ರಾತ್ರಿ 11 ಗಂಟೆಯವರೆಗೂ ಬಂದೋಬಸ್ತ್ ಕಾರ್ಯ ನಿರ್ವಹಿಸಿದ ಪೊಲೀಸರು ಯಾವುದೇ ಅಹಿತಕರ ಘಟನೆ ನಡೆಯದಂತೆ ನೋಡಿಕೊಳ್ಳುವಲ್ಲಿ ಯಶಸ್ವಿ ಯಾದರು. ಭದ್ರತೆಗಾಗಿ ಆಗಮಿಸಿದ್ದ ಪೊಲೀಸ್ ಅಧಿಕಾರಿ ಗಳಿಗಾಗಿ ನಗರದ ಬಹುತೇಕ ವಸತಿ ಗೃಹಗಳಲ್ಲಿ ಸ್ವ ಇಚ್ಛೆಯಿಂದ ಕೆಲ ಕೊಠಡಿಗಳನ್ನು ಹೋಟೆಲ್‌ನ ಮಾಲೀಕರು ನೀಡಿದ್ದರು. ಅಲ್ಲದೆ ಸಿಪಿಐ ವಸತಿ ಗೃಹ, ಪೊಲೀಸ್‌ ಅಕಾಡೆಮಿ ವಸತಿಗೃಹಗಳಲ್ಲಿ ಅಧಿಕಾರಿ ಗಳಿಗೆ ವಾಸ್ತವ್ಯ ಹೂಡಲು ವ್ಯವಸ್ಥೆಗೊಳಿಸಲಾಗಿತ್ತು. ಪೊಲೀಸ್‌ ಪೇದೆ ಹಾಗೂ ಮುಖ್ಯಪೇದೆಗಳಿಗೆ, ಪೊಲೀಸ್ ಭವನ, ಖಾಸಗಿ ಛತ್ರಗಳು, ಶಾಲಾ- ಕಾಲೇಜುಗಳು, ಸಮುದಾಯ ಭವನ ಸೇರಿದಂತೆ ಸುಮಾರು 20 ಸ್ಥಳಗಳಲ್ಲಿ ವಾಸ್ತವ್ಯಕ್ಕೆ ಅನುವು ಮಾಡಿ ಕೊಡಲಾಗಿತ್ತು. ಅದರಂತೆ ವಾಸ್ತವ್ಯ ಹೂಡಿದ್ದ ಪೊಲೀಸರು ಯಶಸ್ವಿಯಾಗಿ ಕಾರ್ಯ ನಿರ್ವಹಿಸಿದರು.

ವಿವಿಧ ಜಿಲ್ಲೆಗಳ ಪೊಲೀಸರು ಭಾನುವಾರ ಬೆಳಿಗ್ಗೆ ತಮ್ಮ ಊರುಗಳಿಗೆ ತೆರಳುವ ಮುನ್ನ ನಗರದ ಪ್ರಮುಖ ಮಳಿಗೆಗಳಲ್ಲಿ ಹಾಗೂ ಸಿಎಆರ್ ಮೈದಾನದ ಬಳಿ ಶಾಪಿಂಗ್ ಮಾಡಿದರು. ತಮ್ಮ ಕುಟುಂಬದ ಸದಸ್ಯರಿಗಾಗಿ ಬಟ್ಟೆ, ಮಕ್ಕಳಿಗಾಗಿ ಆಟಿಕೆ ಸಾಮಾನುಗಳು, ದಸರಾ ನೆನಪಿಗಾಗಿ ಇಲ್ಲಿನ ಮರದ ಕಲಾಕೃತಿಗಳನ್ನು ಖರೀದಿಸಿದರು.

ಒಟ್ಟಾರೆಯಾಗಿ ದಸರಾ ಹಬ್ಬದ ವೇಳೆ ರಕ್ಷಣಾ ಕಾರ್ಯಕ್ಕಾಗಿ ಆಗಮಿಸಿದ್ದ ಪೊಲೀಸರು ತಮ್ಮ ಕರ್ತವ್ಯವನ್ನು ನಿಷ್ಠೆಯಿಂದ ನೆರವೇರಿಸಿದರು. ದಸರಾ ಹಬ್ಬದ ಸವಿಯನ್ನೂ ಸವಿದು ಖುಷಿ ಯಿಂದಲೇ ಮೈಸೂರಿನಿಂದ ಹಿಂತಿರುಗಿದರು.

ಮೈಸೂರು ದಸರಾ ಸೂಪ‌ರ್, ಇಲ್ಲಿಗೆ ಬರುವ ಮೊದಲು ಯಾಕಾದರೂ ಭದ್ರತೆಗಾಗಿ ಮೈಸೂರಿಗೆ ನಿಯೋಜಿಸಿದ್ದಾರೋ ಎಂಬ ಬೇಸರವಿತ್ತು. ಕಳೆದ 5 ದಿನಗಳಿಂದ ನಡೆದ ದಸರಾ ಕಾರ್ಯಕ್ರಮಗಳನ್ನು ವೀಕ್ಷಿಸಿದ ನನಗೆ ಮುಂದಿನ ದಸರಾ ಹಬ್ಬಕ್ಕೂ ಭದ್ರತೆಗಾಗಿ ನಿಯೋಜಿಸಿದರೆ ಚಂದ ಎನಿಸುತ್ತದೆ.
-ವೀರಣ್ಣಗೌಡ, ಹುಬ್ಬಳ್ಳಿ ಪೊಲೀಸ್‌ ಠಾಣೆ

ದಸರಾ ಬಂದೋಬಸ್ತ್ ಕಾರ್ಯದಲ್ಲಿ ಪಾಲ್ಗೊಂಡಿದ್ದುದು ಸಂತಸ ತಂದಿದೆ. ಕರ್ತವ್ಯದ ಜೊತೆಗೆ ಮೈಸೂರು ಸುತ್ತಲಿನ ಪ್ರೇಕ್ಷಣೀಯ ಸ್ಥಳಗಳನ್ನು ವೀಕ್ಷಿಸುವ ಸೌಭಾಗ್ಯವೂ ದೊರೆಯಿತು. ಮುಂದಿನ ಬಾರಿ ದಸರಾ ಕರ್ತವ್ಯಕ್ಕೆ ನಿಯೋಜಿಸಿದರೆ ಕುಟುಂಬ ಸಮೇತ ಮೈಸೂರಿಗೆ ಬರುತ್ತೇನೆ.
-ಮನೋಜ್ ಕುಮಾರ್, ರಾಯಚೂರು ಪೊಲೀಸ್ ಠಾಣೆ.

ನಾನು ಹಲವಾರು ಬಾರಿ ದಸರಾ ಭದ್ರತೆಗಾಗಿ ಬಂದಿದ್ದೇನೆ. ಈ ಬಾರಿಯಷ್ಟು ಜನರನ್ನು ನನ್ನ ಜೀವಮಾನ ದಲ್ಲೇ ನೋಡಿರಲಿಲ್ಲ. ಎಲ್ಲಿ ನೋಡಿದರೂ ಜನ ಜಾತ್ರೆ. ಇಂತಹ ಅನುಭವ ಎಲ್ಲರಿಗೂ ಸಿಗುವುದಿಲ್ಲ. ಮೈಸೂರು ದಸರಾ ಹಬ್ಬವನ್ನು ವರ್ಣಿಸಲು ಸಾಧ್ಯವಿಲ್ಲ.
-ಭಾರತಿ ತಳವಾರ್, ಗದಗ ಪೊಲೀಸ್ ಠಾಣೆ.

Tags: