Mysore
18
clear sky

Social Media

ಶನಿವಾರ, 03 ಜನವರಿ 2026
Light
Dark

ಗ್ರಾಮೀಣ ಭಾಗದ ಕೃಷಿಕರ ನಿದ್ದೆಗೆಡಿಸಿದ ಆದೇಶ

ಸಿ ಮತ್ತು ಡಿ ಜಾಗ ಅರಣ್ಯಕ್ಕೆ ಮೀಸಲಾಗಿರುವ ಆದೇಶಕ್ಕೆ ವಿರೋಧ; ಡಿ.20ರಂಉ ಜಿಲ್ಲೆಯಲ್ಲಿ ಹೋರಾಟಕ್ಕೆ ವೇದಿಕೆ ಸಜ್ಜು

ಲಕ್ಷ್ಮಿಕಾಂತ್ ಕೊಮಾರಪ್ಪ
ಸೋಮವಾರಪೇಟೆ: ಸಿ ಮತ್ತು ಡಿ ಜಾಗವನ್ನು ಅರಣ್ಯಕ್ಕೆ ಮೀಸಲಾಗಿಸುವ ಆದೇಶ, ಸೆಕ್ಷನ್ ೪ ಸೇರಿದಂತೆ ಇನ್ನಿತರ ಸಮಸ್ಯೆಗಳು ಗ್ರಾಮೀಣ ಭಾಗದ ಕೃಷಿಕರ ನಿದ್ದೆಗೆಡಿಸಿವೆ. ರೈತರ ಮನವಿಗೆ ಸಕರಾತ್ಮಕ ಪ್ರತಿಕ್ರಿಯೆ ದೊರಕದ ಹಿನ್ನೆಲೆಯಲ್ಲಿ ಡಿ. ೨೦ರಂದು ಮಡಿಕೇರಿಯಲ್ಲಿ ಬೃಹತ್ ಹೋರಾಟ ನಡೆಸಲು ರೈತರು ಸಜ್ಜಾಗುತ್ತಿದ್ದಾರೆ.

ಸೋಮವಾರಪೇಟೆ ತಾಲ್ಲೂಕಿನ ಶಾಂತಳ್ಳಿ ಹೋಬಳಿ ವ್ಯಾಪ್ತಿಯ ಪುಷ್ಪಗಿರಿ ಬೆಟ್ಟಶ್ರೇಣಿ ಪ್ರದೇಶಗಳಲ್ಲಿ ನೆಲೆಸಿರುವ ಮಂದಿಗೆ ಅರಣ್ಯ ಇಲಾಖೆಯ ಈಗಿನ ಕಾನೂನುಗಳು ಭಾರೀ ಸಮಸ್ಯೆ ತಂದೊಡ್ಡುತ್ತಿದ್ದು, ಅಸ್ತಿತ್ವದ ಪ್ರಶ್ನೆಯನ್ನೂ ಹುಟ್ಟುಹಾಕಿದೆ. ಅಲ್ಲದೆ ಪಟ್ಟಣ ವ್ಯಾಪ್ತಿಯಲ್ಲಿರುವ ಅನೇಕ ಗ್ರಾಮಗಳೂ ಕೂಡ ಸಿ ಮತ್ತು ಡಿ ವರ್ಗೀಕರಣದ ಅಡಿಯಲ್ಲಿ ಸೇರ್ಪಡೆಗೊಂಡಿವೆ. ಮನೆಗಳನ್ನು ಕಟ್ಟಿಕೊಂಡು ವಾಸವಿರುವ ಪ್ರದೇಶ, ತೋಟ-ಗದ್ದೆಗಳಿರುವ ಜಾಗಗಳೂ ಸಿ ಮತ್ತು ಡಿ ವ್ಯಾಪ್ತಿಗೆ ಒಳಪಟ್ಟಿರುವುದರಿಂದ ಸಮಸ್ಯೆ ಗಂಭೀರತೆ ಪಡೆದುಕೊಂಡಿದೆ.

ರೈತರು ಅನೇಕ ವರ್ಷಗಳಿಂದ ಕೃಷಿ ಮಾಡಿಕೊಂಡು ಬಂದಿರುವ ಭೂಮಿಯನ್ನು ಅವೈಜ್ಞಾನಿಕವಾಗಿ ಕೃಷಿಗೆ ಯೋಗ್ಯವಲ್ಲದ ಭೂಮಿ ಎಂದು ಪರಿಗಣಿಸಿ, ಇಂತಹ ಭೂಮಿ ಯನ್ನು ಸಿ ಮತ್ತು ಡಿ ಭೂಮಿಯೆಂದು ವರ್ಗೀಕರಿಸಲಾಗಿದೆ. ಈ ಭೂಮಿಯನ್ನು ಅರಣ್ಯ ಇಲಾಖೆಗೆ ವರ್ಗಾಯಿಸುವ ಸಂಬಂಧ ಅರಣ್ಯ ವ್ಯವಸ್ಥಾಪನಾಧಿಕಾರಿಗಳು ಆದೇಶಗಳನ್ನು ಹೊರಡಿಸುತ್ತಿರುವುದು ರೈತರ ನೆಮ್ಮದಿ ಕಸಿಯುವಂತೆ ಮಾಡಿದೆ.

ಸುಪ್ರೀಂ ಕೋರ್ಟ್ ನಿರ್ದೇಶನದ ಪ್ರಕಾರ ರಾಜ್ಯ ಸರ್ಕಾರ ಅರಣ್ಯ ವ್ಯವಸ್ಥಾಪನಾಧಿಕಾರಿ ಹುದ್ದೆಯನ್ನು ಸೃಷ್ಟಿಸಿ ಈ ಸಂಬಂಧ ಪರಿಶೀಲಿಸಿ ಕ್ರಮ ವಹಿಸಲು ಸೂಚಿಸಿದ್ದು, ಆ ಅಧಿಕಾರಿಗಳು ಗ್ರಾಮ ಮಟ್ಟದಲ್ಲಿ ಸರ್ವೇ ನಂಬರ್‌ಗಳನ್ನು ಗುರುತಿಸಿ ಅಽಸೂಚನೆ ಹೊರಡಿಸುತ್ತಿದ್ದಾರೆ. ಕಚೇರಿಯಲ್ಲಿ ಕುಳಿತುಕೊಳ್ಳುವ ಅಧಿಕಾರಿಗಳು ಕಚೇರಿಯಲ್ಲಿರುವ ದಾಖಲೆಗಳನ್ನು ಮಾತ್ರ ಪರಿಶೀಲಿಸಿ ಇಂತಹ ಕ್ರಮಕೈಗೊಂಡಿರುವುದು ಮೇಲ್ನೋಟಕ್ಕೆ ಸ್ಪಷ್ಟವಾಗಿದ್ದು, ಸಿ ಮತ್ತು ಡಿ ಜಾಗವನ್ನು ವಾಸ್ತವಿಕವಾಗಿ ಪರಿಶೀಲನೆಯನ್ನೇ ನಡೆಸದಿರುವುದು ಕಂಡುಬಂದಿದೆ.

ಈ ಹಿನ್ನೆಲೆಯಲ್ಲಿ ರೈತರು ಹೋರಾಟದ ಹಾದಿ ಹಿಡಿದಿದ್ದು, ರೈತ ಸಂಘದ ನೇತೃತ್ವದಲ್ಲಿ ಮಡಿಕೇರಿಯಲ್ಲಿ ಡಿ. ೨೦ರಂದು ಪ್ರತಿಭಟನಾ ಸಭೆ ಆಯೋಜಿಸಿದೆ. ಇದಕ್ಕೆ ಸೋಮವಾರಪೇಟೆ ತಾಲ್ಲೂಕು ರೈತ ಹೋರಾಟ ಸಮಿತಿ ಹೆಚ್ಚಿನ ಬಲ ತುಂಬುತ್ತಿದೆ. ಸಂಘದ ಪದಾಧಿಕಾರಿಗಳು ಈಗಾಗಲೇ ಗ್ರಾಮೀಣ ಭಾಗಗಳಿಗೆ ತೆರಳಿ ಗ್ರಾಮ ಮಟ್ಟದಲ್ಲಿ ಸಭೆಗಳನ್ನು ಆಯೋಜಿಸಿ ಸಿ ಮತ್ತು ಡಿ ಹಾಗೂ ಅರಣ್ಯ ಇಲಾಖೆಯ ಸೆಕ್ಷನ್ ೪ ರ ವಿಷಯಗಳ ಬಗ್ಗೆ ಅರಿವು ಮೂಡಿಸುತ್ತಿದ್ದಾರೆ.

ಸಮಿತಿಯ ಪದಾಧಿಕಾರಿಗಳು ಶಾಂತಳ್ಳಿ ಹೋಬಳಿ ವ್ಯಾಪ್ತಿಯ ತಲ್ತರೆಶೆಟ್ಟಳ್ಳಿ, ಹರಗ, ಬೆಟ್ಟದಳ್ಳಿ, ಗೌಡಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗೌಡಳ್ಳಿ ಗ್ರಾಮ, ಶುಂಠಿ, ಶುಂಠಿಮಂಗಳೂರು, ಬೀಟಿಕಟ್ಟೆ, ಹಾರಳ್ಳಿ, ಹಣಕೋಡು, ಬಸವನಕೊಪ್ಪ, ಕೋಟೆಯೂರು, ಹಿರಿಕರ, ಚೌಡ್ಲು, ನೇಗಳ್ಳೆ ವ್ಯಾಪ್ತಿಗಳಲ್ಲಿ ಈಗಾಗಲೇ ಸಭೆಗಳನ್ನು ನಡೆಸಿ, ೨೦ರಂದು ನಡೆಯುವ ಪ್ರತಿಭಟನೆಯ ಬಗ್ಗೆ ಮಾಹಿತಿ ನೀಡುತ್ತಿದ್ದಾರೆ.

ಇದರೊಂದಿಗೆ ಸೋಮವಾರಪೇಟೆ ತಾಲ್ಲೂಕು ಅಭಿವೃದ್ಧಿ ಹೋರಾಟ ಸಮಿತಿ ಕೂಡ ಬೆಂಬಲ ನೀಡಿದೆ. ಸಮಸ್ಯೆಯ ಬಗ್ಗೆ ಶಾಸಕ ಡಾ. ಮಂಥರ್ ಗೌಡ ಅವರ ಗಮನಕ್ಕೂ ತರಲಾಗಿದ್ದು, ಬೆಳಗಾವಿಯಲ್ಲಿ ನಡೆಯುವ ಚಳಿಗಾಲದ ಅಧಿವೇಶನದಲ್ಲಿ ಸರ್ಕಾರದ ಗಮನ ಸೆಳೆಯುವ ಭರವಸೆ ನೀಡಿದ್ದಾರೆ. ಪ್ರತಿಭಟನೆಗೂ ಮುನ್ನವೇ ಅಧಿವೇಶನದಲ್ಲಿ ಸಮಸ್ಯೆ ಚರ್ಚೆಗೆ ಬರುತ್ತದೆಯೇ ಎಂಬುದನ್ನು ಕಾದುನೋಡಬೇಕಿದೆ.

 

Tags:
error: Content is protected !!