ಮಲ್ಟಿಪ್ಲೆಕ್ಸ್ ಸೇರಿದಂತೆ ರಾಜ್ಯದ ಎಲ್ಲಾ ಚಿತ್ರಮಂದಿರಗಳಲ್ಲಿನ ಪ್ರವೇಶ ದರವನ್ನು ಗರಿಷ್ಟ ರೂ.೨೦೦ ಗೆ ನಿಗದಿ ಪಡಿಸಿರುವ ರಾಜ್ಯ ಸರ್ಕಾರದ ಕ್ರಮ ಸ್ವಾಗತಾರ್ಹವಾಗಿದೆ. ರಾಜ್ಯದ ಅದರಲ್ಲೂ ಬೆಂಗಳೂರಿನ ಮಲ್ಟಿಪ್ಲೆಕ್ಸ್ ಮತ್ತು ಇತರ ವೈಭವೋಪೇತ ಚಲನಚಿತ್ರ ಮಂದಿರಗಳಲ್ಲಿ ಪ್ರವೇಶ ದರವನ್ನು ಮನಸೋ ಇಚ್ಛೆ ನಿಗದಿ ಅಮೇಲೆ ಹೊರೆಯನ್ನು ಹೊರಿಸಿದ್ದರು.
ಹೀಗಾಗಿ ಅನೇಕ ಚಿತ್ರಮಂದಿರಗಳು ಪ್ರೇಕ್ಷಕರಿಲ್ಲದೆ ಭಣಗುಡುತ್ತಿದ್ದವು. ಇದರಿಂದಾಗಿ ಸಣ್ಣ, ಮಧ್ಯಮ ಮಟ್ಟದ ಚಿತ್ರಗಳು ಕೂಡ ಪ್ರೇಕ್ಷಕರಿಲ್ಲದೇ ನರಳುವಂತಾಯಿತು. ಬೆಂಗಳೂರು, ಮೈಸೂರು ಮುಂತಾದ ಮಹಾನಗರಗಳಲ್ಲಿ ಚಿತ್ರಮಂದಿರಗಳು ಒಂದರ ಹಿಂದೆ ಒಂದು ಮುಚ್ಚಿ, ಈಗ ಕೇವಲ ಕೆಲವೇ ಚಿತ್ರಮಂದಿರಗಳು ಅಸ್ತಿತ್ವದಲ್ಲಿವೆ. ೬೦ರ ದಶಕದಲ್ಲಿ ಚಿತ್ರಮಂದಿರಗಳಲ್ಲಿನ ಪ್ರವೇಶ ದರ ಕೇವಲ ೬೫ ಪೈಸೆ ಇದ್ದಿತು. ಈಗ ಕೆಲವು ವೈಭವೋಪೇತ ಚಿತ್ರಮಂದಿರಗಳ ಪ್ರವೇಶ ದರ ೧೦೦೦ ರೂ. ಮೀರಿದೆ. ಚಲನಚಿತ್ರ ಮಂದಿರಗಳಲ್ಲಿ ದರವನ್ನು ನಿಗದಿ ಪಡಿಸುವ ಮೂಲಕ ರಾಜ್ಯ ಸರ್ಕಾರ ಚಿತ್ರಮಂದಿರಗಳ ಮೇಲೆ ಸ್ವಲ್ಪಮಟ್ಟಿನ ನಿಯಂತ್ರಣ ಸಾಧಿಸಿದಂತಾಗಿದೆ. ಇದು ಉತ್ತಮ ನಿರ್ಧಾರವಾಗಿದ್ದು, ಸಿನಿಮಾ ಪ್ರೇಕ್ಷಕರ ಪಾಲಿಗೆ ಒಳ್ಳೆಯ ಬೆಳವಣಿಗೆಯಾಗಿದೆ.
– ಕೆ.ವಿ.ವಾಸು, ವಿವೇಕಾನಂದ ನಗರ, ಮೈಸೂರು



