Mysore
15
few clouds

Social Media

ಬುಧವಾರ, 17 ಡಿಸೆಂಬರ್ 2025
Light
Dark

ಮಂಜಿನ ನಗರಿಯಲ್ಲಿ ಮೈ ಕೊರೆಯುವ ಚಳಿ  

ಹೆಚ್ಚುತ್ತಿರುವ ಶೀತ ವಾತಾವರಣ; ಸದ್ಯಕ್ಕಿಲ್ಲ ಮಳೆಯ ಆತಂಕ 

ಮಡಿಕೇರಿ: ಮಂಜಿನ ನಗರಿ ಮಡಿಕೇರಿಯಲ್ಲಿ ದಿನದಿಂದ ದಿನಕ್ಕೆ ಚಳಿ ಹೆಚ್ಚಾಗುತ್ತಿದ್ದು, ಫೆಬ್ರವರಿವರೆಗೆ ಇದೇ ವಾತಾವರಣ ಮುಂದುವರಿಯಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ಅಸ್ವಾಭಾವಿಕ ತಿರುಗುವಿಕೆಯ ಕಾರಣದಿಂದ ಉತ್ತರದ ಶೀತ ಮಾರುತಗಳು ದಕ್ಷಿಣದ ರಾಜ್ಯಗಳ ಕಡೆ ಅಧಿಕ ಪ್ರಮಾಣದಲ್ಲಿ ಬೀಸುತ್ತಿರುವುದರಿಂದ ತೀವ್ರ ಚಳಿಯ ವಾತಾವರಣ ಸೃಷ್ಟಿಯಾಗಿದೆ. ಡಿ.೧೫ರಂದು ಈ ತಿರುಗುವಿಕೆಯ ವ್ಯಾಪ್ತಿ ವಿಸ್ತಾರಗೊಂಡು ಬಂಗಾಳಕೊಲ್ಲಿಯ ಕಡೆಯಿಂದ ಗಾಳಿ ಬೀಸಲು ಆರಂಭವಾಗಲಿದೆ. ಇದರಿಂದ ರಾಜ್ಯದಲ್ಲಿ ಅಲ್ಪ ಪ್ರಮಾಣದಲ್ಲಿ ಉಷ್ಣಾಂಶ ಏರಿಕೆಯಾಗುವ ಲಕ್ಷಣಗಳಿವೆ.

ರಾಜ್ಯದ ಉತ್ತರದ ಜಿಲ್ಲೆಗಳಲ್ಲಿ ಅತೀ ಕಡಿಮೆ ತಾಪಮಾನ ದಾಖಲಾಗುತ್ತಿದೆ. ದಕ್ಷಿಣದ ಜಿಲ್ಲೆಗಳಲ್ಲಿಯೂ ತಾಪಮಾನ ದಿನದಿಂದ ದಿನಕ್ಕೆ ಇಳಿಕೆಯಾಗುತ್ತಿದೆ. ಮಡಿಕೇರಿಯಲ್ಲಿ ಕನಿಷ್ಠ ೧೦ರಿಂದ ೧೨ ಡಿಗ್ರಿ ಸೆಲ್ಸಿಯಸ್‌ನಷ್ಟು ತಾಪಮಾನ ದಾಖಲಾಗುತ್ತಿದೆ. ಇದರಿಂದ ಮಂಜಿನ ನಗರಿಯಲ್ಲಿ ಮೈ ಕೊರೆಯುವ ಚಳಿ ಕಂಡುಬರುತ್ತಿದ್ದು, ರಾತ್ರಿ ಮತ್ತು ಬೆಳಗಿನ ಜಾವ] ಮನೆಯಿಂದ ಹೊರಬರುವುದು ಕಷ್ಟವೆನ್ನುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ.

ಇದನ್ನು ಓದಿ: ‘ಲಾ-ನಿನಾ’ ಚಳಿ: ಜನರ ಆರೋಗ್ಯದ ಮೇಲೆ ದುಷ್ಪರಿಣಾಮ

ಡಿಸೆಂಬರ್ ತಿಂಗಳಿನಲ್ಲಿ ಜಿಲ್ಲೆಗೆ ಹೆಚ್ಚಿನ ಪ್ರವಾಸಿಗರು ಭೇಟಿ ನೀಡುತ್ತಿದ್ದಾರೆ. ಇಲ್ಲಿನ ಚಳಿಯ ವಾತಾವರಣಕ್ಕೆ ಕೆಲ ಪ್ರವಾಸಿಗರು ಮನಸೋತರೆ, ಮತ್ತೆ ಕೆಲವರು ವಿಪರೀತ ಚಳಿಗೆ ನಡುಗುವಂತಾಗಿದೆ. ಶೀತ ವಾತಾವರಣಕ್ಕೆ ಫೈರ್ ಕ್ಯಾಂಪ್, ಹೀಟರ್, ಸ್ವೆಟರ್, ಟೋಪಿ, ಸಾಕ್ಸ್ ಮೊರೆ ಹೋಗುತ್ತಿದ್ದಾರೆ. ಆದರೂ ಪ್ರವಾಸಿ ತಾಣಗಳಿಗೆ ಹೆಚ್ಚಿನ ಸಂಖ್ಯೆಯ ಪ್ರವಾಸಿಗರು ಭೇಟಿ ನೀಡುತ್ತಿದ್ದು, ಇಲ್ಲಿನ ವಿಭಿನ್ನ ವಾತಾವರಣವನ್ನು ಎಂಜಾಯ್ ಮಾಡುತ್ತಿದ್ದಾರೆ.

ಜಿಲ್ಲೆಯಲ್ಲಿ ಈಗಾಗಲೇ ಭತ್ತ ಮತ್ತು ಕಾಫಿ ಬೆಳೆ ಕಟಾವಿಗೆ ಬಂದಿದ್ದು, ಹಲವೆಡೆ ಕೊಯ್ಲು ಆರಂಭವಾಗಿದೆ. ಈಗಿನ ವಾತಾವರಣ ಕಟಾವು ಮಾಡಿದ ಬೆಳೆಗಳನ್ನು ಒಣಗಿಸಲು ಪೂರಕವಾಗಿದ್ದು, ಬೆಳೆ ತೇವಾಂಶದಲ್ಲಿರದಂತೆ ಎಚ್ಚರ ವಹಿಸುವುದರೊಂದಿಗೆ ಒಣಗಿಸಲು ಯಾವುದೇ ಅಡ್ಡಿಯಿಲ್ಲ ಎಂದು ಹವಾಮಾನ ಇಲಾಖೆಯ ವಿಜ್ಞಾನಿಗಳು ತಿಳಿಸಿದ್ದಾರೆ.

” ಉತ್ತರ ಭಾರತದ ಅಸ್ವಾಭಾವಿಕ ತಿರುಗುವಿಕೆಯ ಕಾರಣದಿಂದ ಉತ್ತರದ ಶೀತ ಮಾರುತಗಳು ದಕ್ಷಿಣದ ರಾಜ್ಯಗಳ ಕಡೆ ಅಧಿಕ ಪ್ರಮಾಣದಲ್ಲಿ ಬೀಸುತ್ತಿರುವುದರಿಂದ ತೀವ್ರ ಚಳಿಯ ವಾತಾವರಣ ಸೃಷ್ಟಿಯಾಗಿದೆ. ಇದು ಫೆಬ್ರವರಿವರೆಗೆ ಹೀಗೆಯೇ ಮುಂದುವರಿಯಲಿದ್ದು, ಚಳಿ ಹೆಚ್ಚಾಗುವ ಸಾಧ್ಯತೆಯಿದೆ. ಆದರೆ ಕೃಷಿಗೆ ಸಂಬಂಧಿಸಿದಂತೆ ಯಾವುದೇ ಆತಂಕ ಸದ್ಯಕ್ಕಿಲ್ಲ. ರೈತರು ನಿರಾತಂಕವಾಗಿ ಕಟಾವು ಕಾರ್ಯ ನಡೆಸಬಹುದು.”

-ಡಾ.ಸುಮಂತ್ ಕುಮಾರ್ ಜಿ.ವಿ, ಸಹ ಸಂಶೋಧಕ, ಹವಾಮಾನ ವಿಭಾಗ (ನಾಗನಹಳ್ಳಿ),ಮೈಸೂರು.

ಚಳಿ ವಾತಾವರಣ ಮುಂದುವರಿಕೆ..!: 

ಕಾಸರಗೋಡು ಸೇರಿದಂತೆ ಕರ್ನಾಟಕ ರಾಜ್ಯಾದ್ಯಂತ ಒಣ ಹವೆಯೊಂದಿಗೆ ತೀವ್ರ ಚಳಿಯ ವಾತಾವರಣ ಮುಂದುವರಿಯಲಿದೆ. ಕೋಲಾರ, ಚಿಕ್ಕಬಳ್ಳಾಪುರ ಜಿಲ್ಲೆಗಳಲ್ಲಿ ಅಲ್ಲಲ್ಲಿ ಮೋಡದ ವಾತಾವರಣ ಇರಲಿದೆ. ಡಿ.೧೭ರಂದು ರಾಜ್ಯದ ದಕ್ಷಿಣ ಒಳನಾಡಿನ ಮೈಸೂರು, ಮಂಡ್ಯ, ಚಾಮರಾಜನಗರ, ರಾಮನಗರ, ಬೆಂಗಳೂರು ಗ್ರಾಮಾಂತರ ಹಾಗೂ ನಗರ, ಕೋಲಾರ, ಚಿಕ್ಕಬಳ್ಳಾಪುರ, ತುಮಕೂರು, ಚಿತ್ರದುರ್ಗ ಜಿಲ್ಲೆಗಳಲ್ಲಿ ಮೋಡದ ವಾತಾವರಣದ ಮುನ್ಸೂಚನೆ ಇದ್ದು, ಒಂದೆರಡು ಕಡೆ ತುಂತುರು ಮಳೆಯ ಸಾಧ್ಯತೆಯೂ ಇದೆ. ಮಲೆನಾಡಿನ ಕೊಡಗು, ಹಾಸನ, ಚಿಕ್ಕಮಗಳೂರು ಹಾಗೂ ಶಿವಮೊಗ್ಗ ಜಿಲ್ಲೆಗಳಲ್ಲೂ ಡಿ.೧೭ರಂದು ಅಲ್ಲಲ್ಲಿ ಮೋಡದ ವಾತಾವರಣದ ಮುನ್ಸೂಚನೆ ಇದೆ. ಕರಾವಳಿ ಜಿಲ್ಲೆಗಳಲ್ಲಿ ಘಟ್ಟದ ಕೆಳಗಿನ ಪ್ರದೇಶಗಳಲ್ಲಿ ಅಲ್ಲಲ್ಲಿ ಹಗುರ ಮೋಡದ ವಾತಾವರಣ ಇರಬಹುದು. ಡಿ.೧೮ ಅಥವಾ ೧೯ರಿಂದ ಮತ್ತೆ ತೀವ್ರ ಚಳಿಯ ವಾತಾವರಣ ಮುಂದುವರಿಯುವ ಲಕ್ಷಣಗಳಿವೆ ಎಂದು ಹವಮಾನ ಇಲಾಖೆ ಮುನ್ಸೂಚನೆ ನೀಡಿದೆ.

ನವೀನ್ ಡಿಸೋಜ

 

 

Tags:
error: Content is protected !!