ಹೊಸ ವರ್ಷದ ಹೊಸ್ತಿಲಲ್ಲಿರುವ ನಾವು 2025ರ ವರ್ಷಪೂರ್ತಿ ಸುಂದರ ಹಾಗೂ ಕಹಿ ಘಟನೆಗಳನ್ನು ಮೆಲುಕು ಹಾಕಿದ್ದು. ಅದೇ ಮಾದರಿಯಲ್ಲಿ ಪ್ರಸಕ್ತ ವರ್ಷ ಜಗತ್ತಿನ ಕ್ರೀಡಾ ಲೋಕದಲ್ಲಿನ ಸಾಧನೆಗಳ ಸಂಕ್ಷಿಪ್ತ ಮಾಹಿತಿಯನ್ನು ನೀಡಲಾಗಿದೆ. ನಿರ್ಗಮನದ ಹೊಸ್ತಿಲಿನಲ್ಲಿರುವ ಈ ವರ್ಷದಲ್ಲಿ ಐಪಿಎಲ್ ಟ್ರೋಫಿಗೆ ಆರ್‌ಸಿಬಿ ಮುತ್ತಿಟ್ಟಿದ್ದು, ಚಾಂಪಿಯನ್ಸ್ ಟ್ರೋಫಿ ಗೆಲುವು, ಸೌತ್ ಆಫ್ರಿಕಾ ಐಸಿಸಿ ಟೆಸ್ಟ್ ಚಾಂಪಿಯನ್, ಅಂಧರ ಮಹಿಳಾ ಕ್ರಿಕೆಟ್‌ನಲ್ಲಿ ಭಾರತ ತಂಡದ ವಿಶ್ವ ಚಾಂಪಿಯನ್ ಕಿರೀಟ ಧರಿಸಿ ಇತಿಹಾಸ ಬರೆಯಿತು.
ಮಹಿಳಾ ತಂಡ ಹೊಸ ಚಾಂಪಿಯನ್: ವರ್ಷಾಂತ್ಯದಲ್ಲಿ ತವರಿನಲ್ಲಿ ನಡೆದ ಐಸಿಸಿ ಮಹಿಳಾ ಏಕದಿನ ವಿಶ್ವಕಪ್ ಪಂದ್ಯಾವಳಿಯಲ್ಲಿ ಭಾರತದ ಮಹಿಳಾ ತಂಡ ಗೆದ್ದು ಸಂಭ್ರಮಿಸಿತು. ಸೌತ್ ಆಫ್ರಿಕಾದ ವಿರುದ್ಧ ನಡೆದ ಫೈನಲ್ ಪಂದ್ಯದಲ್ಲಿ ಸುಲಭ ಜಯ ಸಾಧಿಸಿದ ಹರ್ಮನ್ ಪ್ರೀತ್ ಕೌರ್ ನೇತೃತ್ವದ ತಂಡವು ಮೊದಲ ಬಾರಿ ಐಸಿಸಿ ಚಾಂಪಿಯನ್ ಆಗಿ ಹೊರ ಹೊಮ್ಮಿತು. ಇದಕ್ಕೂ ಮುನ್ನ ಸೆಮಿ ಫೈನಲ್‌ನಲ್ಲಿ ಬಲಿಷ್ಠ ಆಸ್ಟ್ರೇಲಿಯಾ ಮಹಿಳಾ ತಂಡವನ್ನು ಬೃಹತ್ ಮೊತ್ತದ ಮೂಲಕ ಬೆನ್ನತ್ತಿ, ಸೋಲಿಸಿ ಇತಿಹಾಸ ನಿರ್ಮಿಸಿತು.
ಖೋ ಖೋ ಅಂಗಳದಲ್ಲಿ ಚೈತ್ರಾ ಮಿಂಚು : ಜ.೨೦ರಂದು ಹೊಸದಿಲ್ಲಿಯಲ್ಲಿ ನಡೆದ ಚೊಚ್ಚಲ ಖೋ ಖೋ ವಿಶ್ವಕಪ್ ಫೈನಲ್ ನಲ್ಲಿ ಪ್ರಶಸ್ತಿ ಎತ್ತಿ ಹಿಡಿದ ಭಾರತ ತಂಡದಲ್ಲಿ ಗಮನಾರ್ಹ ಪ್ರದರ್ಶನ ನೀಡುವ ಮೂಲಕ ಮೈಸೂರಿನ ಕೀರ್ತಿ ಪತಾಕೆಯನ್ನು ಕ್ರೀಡಾ ಕ್ಷೇತ್ರದಲ್ಲಿ ಇನ್ನಷ್ಟು ಎತ್ತರಕ್ಕೆ ಕೊಂಡೊಯ್ದವರು ಮೈಸೂರು ಜಿಲ್ಲೆ ತಿ.ನರಸೀಪುರ ತಾಲ್ಲೂಕಿನ ಕುರುಬೂರು ಗ್ರಾಮದ ಖೋ ಖೋ ಆಟಗಾರ್ತಿ ಚೈತ್ರಾ.
ಇದನ್ನು ಓದಿ; ಗುಬ್ಬಚ್ಚಿ ಶಾಲೆಯಲ್ಲಿ ಬರೀ 12 ವಿದ್ಯಾರ್ಥಿಗಳು!
ಐಸಿಸಿ ಟ್ರೋಫಿ ಎತ್ತಿಹಿಡಿದ ಸೌತ್ ಆಫ್ರಿಕಾ: ೨೭ ವರ್ಷಗಳ ಬಳಿಕ ದಕ್ಷಿಣ ಆಫ್ರಿಕಾ ಕ್ರಿಕೆಟ್ ತಂಡ ಐಸಿಸಿ ಟ್ರೋಫಿ ಗೆಲ್ಲುವ ಮೂಲಕ ಚೌಕರ‍್ಸ್ ಎಂಬ ತನ್ನ ಹಣೆಪಟ್ಟಿಯನ್ನು ಕಳಚಿತು. ತೆಂಬಾ ಬವುಮಾ ನಾಯಕತ್ವದಲ್ಲಿ ಮುನ್ನಡೆದ ತಂಡವೂ ಆಸ್ಟ್ರೇಲಿಯಾವನ್ನು ಮಣಿಸಿ ಟೆಸ್ಟ್ ಕ್ರಿಕೆಟ್ ಚಾಂಪಿಯನ್ ಪಟ್ಟ ಅಲಂಕರಿಸಿತು. ಲಾರ್ಡ್ಸ್ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಐತಿಹಾಸಿಕ ಗೆಲುವು ಸಾಧಿಸಿ ಐಸಿಸಿ ಟ್ರೋಫಿಯ ಬರ ನೀಗಿಸಿಕೊಂಡಿತು. ೧೯೮೮ರ ಚಾಂಪಿಯನ್ ಟ್ರೋಫಿ ಬಳಿಕ, ಮೊದಲ ಐಸಿಸಿ ಕಪ್ ಗೆದ್ದು ಸಾಧನೆ ಮಾಡಿತು.
ನೀರಜ್ ಚೋಪ್ರಾಗೆ ತಪ್ಪಿದ ವಿಶ್ವ ಚಾಂಪಿಯನ್ ಪಟ್ಟ: ಭಾರತದ ಜಾವೆಲಿನ್ ಥ್ರೋ ತಾರೆ ನೀರಜ್ ಚೋಪ್ರಾ ಅವರು ಮೇ ೧೬ರಂದು ನಡೆದ ದೋಹಾ ಡೈಮಂಡ್ ಲೀಗ್‌ನಲ್ಲಿ ೯೦.೨೩ ಮೀ. ದಾಟಿದರು. ಆದರೆ, ಸತತ ಎರಡನೇ ಬಾರಿ ವಿಶ್ವ ಚಾಂಪಿಯನ್ ಕಿರೀಟ ಧರಿಸುವ ಅವರ ಕನಸು ಭಗ್ನವಾಯಿತು. ಟೋಕಿಯೊದಲ್ಲಿ ಸೆಪ್ಟೆಂಬರ್‌ನಲ್ಲಿ ನಡೆದ ವಿಶ್ವಚಾಂಪಿಯನ್ ಶಿಪ್‌ನಲ್ಲಿ ಎಂಟನೇ ಸ್ಥಾನ ಪಡೆದರು.
ಕಬಡ್ಡಿ: ಭಾರತ ವನಿತೆಯರ ಕಬಡ್ಡಿ ತಂಡವು ನವೆಂಬರ್‌ನಲ್ಲಿ ತೈವಾನ್ ತಂಡವನ್ನು ಮಣಿಸಿ ಸತತ ಎರಡನೇ ಬಾರಿಗೆ ವಿಶ್ವಕಪ್ ಕಿರೀಟವನ್ನು ಮುಡಿಗೇರಿಸಿಕೊಂಡಿತು. ಭಾರತ ತಂಡದಲ್ಲಿ ಕರ್ನಾಟಕವನ್ನು ಧನಲಕ್ಷ್ಮಿ ಪೂಜಾರಿ ಪ್ರತಿನಿಧಿಸಿ ಇದ್ದರು.
೧೮ ವರ್ಷಗಳ ಬಳಿಕ ಐಪಿಎಲ್ ಚಾಂಪಿಯನ್ ಆದ ಆರ್‌ಸಿಬಿ: ಕ್ರಿಕೆಟ್ ಜಗತ್ತಿನಲ್ಲಿ ಅತ್ಯಂತ ಹೆಚ್ಚು ಅಭಿಮಾನಿಗಳನ್ನು ಹೊಂದಿರುವ ಆರ್‌ಸಿಬಿ ತಂಡ ಐಪಿಎಲ್‌ನಲ್ಲಿ ಚೊಚ್ಚಲ ಪ್ರಶಸ್ತಿ ಗೆದ್ದು ಬೀಗಿತು. ೧೮ ವರ್ಷಗಳ ಕಾಯುವಿಕೆಯ ನಂತರ ಪಂಜಾಬ್ ಕಿಂಗ್ಸ್ ತಂಡದ ವಿರುದ್ಧ ರೋಚಕ ಗೆಲುವು ಸಾಧಿಸಿ ಐಪಿಎಲ್ ಟ್ರೋಫಿಗೆ ಮುತ್ತಿಟ್ಟಿತು. ವಿರಾಟ್ ಕೊಹ್ಲಿ ಅವರ ಭಾವುಕ ಕ್ಷಣಗಳಿಗೆ ಹಾಗೂ ದೇಶದಾದ್ಯಂತ ದೊಡ್ಡ ಮಟ್ಟದಲ್ಲಿ ನಡೆದ ಸಂಭ್ರಮಾಚರಣೆಗೆ ಈ ಗೆಲುವು ಸಾಕ್ಷಿಯಾಯಿತು.
ಇದನ್ನು ಓದಿ: ಮತ್ತೆ ಆರಂಭವಾದ ಕೋಟೆ ಪೊಲೀಸ್ ಕ್ಯಾಂಟೀನ್
ಶೀತಲ್ ದೇವಿ ಹೆಗ್ಗಳಿಕೆ: ವಿಶ್ವ ಆರ್ಚರಿ ಚಾಂಪಿಯನ್‌ಶಿಪ್‌ನಲ್ಲಿ ಕೈಗಳ ಸಹಾಯವಿಲ್ಲದೇ ಚಿನ್ನ ಗೆದ್ದ ವಿಶ್ವದ ಮೊದಲ ಮಹಿಳಾ ಸ್ಪರ್ಧಿ ಎಂಬ ಹೆಗ್ಗಳಿಕೆಗೆ ಜಮ್ಮುವಿನ ಶೀತಲ್ ದೇವಿ ಪಾತ್ರರಾದರು.
ಅಂಧ ಮಹಿಳಾ ಕ್ರಿಕೆಟ್‌ನಲ್ಲಿ ಭಾರತ ವಿಶ್ವ ಚಾಂಪಿಯನ್ : ಮಹಿಳಾ ಅಂಧರ ಟಿ-೨೦ ವಿಶ್ವಕಪ್ ಚಾಂಪಿಯನ್‌ಶಿಪ್‌ನಲ್ಲಿ ಭಾರತ ತಂಡ ಗೆದ್ದು ಚೊಚ್ಚಲ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡು ಇತಿಹಾಸ ಬರೆಯಿತು. ಕೊಲಂಬೊದಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ನೆರೆಯ ನೇಪಾಳ ತಂಡವನ್ನು ಮಣಿಸಿ ವಿಶ್ವ ಚಾಂಪಿಯನ್ ಕಿರೀಟ ಧರಿಸಿತು. ಅಂಧ ಮಹಿಳೆಯರ ಸಾಧನೆಗೆ ದೇಶ ಸಂಭ್ರಮಿಸಿತು.
ರೋಹಿತ್ ಕೊಹ್ಲಿ ನಿವೃತ್ತಿ: ವಿಶ್ವ ಕ್ರಿಕೆಟ್ ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ ತಾವು ಹೆಚ್ಚು ಪ್ರೀತಿಸುವ ಟೆಸ್ಟ್ ಕ್ರಿಕೆಟ್‌ಗೆ ದಿಢೀರ್ ನಿವೃತ್ತಿ ಘೋಷಿಸಿದರು. ಟೆಸ್ಟ್ ಕ್ರಿಕೆಟ್‌ನ ನಾಯಕರಾಗಿದ್ದ ರೋಹಿತ್ ಶರ್ಮಾ ಟೆಸ್ಟ್ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ ಕೆಲವೇ ವಾರಗಳಲ್ಲಿ ವಿರಾಟ್ ಕೊಹ್ಲಿ ನಿವೃತ್ತಿ ಘೋಷಿಸಿ ಅಚ್ಚರಿ ಮೂಡಿಸಿದರು. ಈ ಇಬ್ಬರ ದಿಢೀರ್ ನಿವೃತ್ತಿ ಅಭಿಮಾನಿಗಳಲ್ಲಿ ನಿರಾಸೆ ಮೂಡಿಸಿತು.
ಗಂಭೀರ್ – ಅಗರ್ಕರ್ ವಿರುದ್ಧ ಟೀಕೆ: ಒಂದೇ ವರ್ಷದಲ್ಲಿ ನಡೆದ ೪ ಟೆಸ್ಟ್ ಸರಣಿಯಲ್ಲಿ ಭಾರತ ತಂಡ ಸರಣಿ ಸೋಲು ಅನುಭವಿಸುವ ಜೊತೆಗೆ ದ.ಆಫ್ರಿಕಾ ತಂಡ ೨೫ ವರ್ಷ ಗಳ ಬಳಿಕ ಭಾರತದಲ್ಲಿ ಟೆಸ್ಟ್ ಸರಣಿ ಗೆದ್ದ ಕಾರಣದಿಂದ ಕೋಚ್ ಗೌತಮ್ ಗಂಭೀರ್ ಮತ್ತು ಆಯ್ಕೆ ಸಮಿತಿಯ ಅಜಿತ್ ಅಗರ್ಕರ್ ವ್ಯಾಪಕ ಟೀಕೆಗೆ ಗುರಿಯಾದರು. ಸತತ ಸೋಲಿಗೆ ಗಂಭೀರ್ ನೇರ ಹೊಣೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.





