Mysore
25
scattered clouds

Social Media

ಬುಧವಾರ, 07 ಜನವರಿ 2026
Light
Dark

ಟ್ರಾಫಿಕ್‌ ಸಮಸ್ಯೆಗೆ ತಾತ್ಕಾಲಿಕ ಮುಕ್ತಿ

Temporary relief from traffic problems strict instructions to follow rules

ನಿಯಮ ಪಾಲನೆಗೆ ಖಡಕ್ ಸೂಚನೆ: ಇಲಾಖೆ ನಡೆಗೆ ಸಾರ್ವಜನಿಕರು ಮೆಚ್ಚುಗೆ 

ಸಿದ್ದಾಪುರ: ಸಿದ್ದಾಪುರ ಪಟ್ಟಣದಲ್ಲಿ ಟ್ರಾಫಿಕ್ ಸಮಸ್ಯೆಯಿಂದ ಹೈರಾಣಾಗಿದ್ದ ಜನರಿಗೆ ಇಲಾಖೆ ತೆಗದುಕೊಂಡ ಕಟ್ಟುನಿಟ್ಟಿನ ಕ್ರಮದಿಂದ ತಾತ್ಕಾಲಿಕ ಮುಕ್ತಿ ಸಿಕ್ಕಂತಾಗಿದೆ.

ಹೌದು, ದಿನದಿಂದ ದಿನಕ್ಕೆ ಅಭಿವೃದ್ಧಿ ಹೊಂದುತ್ತಿರುವ ಪಟ್ಟಣಕ್ಕೆ ಪ್ರತಿನಿತ್ಯ ಸಾವಿರಾರು ವಾಹನಗಳು ಬರುತ್ತಿದ್ದು, ಟ್ರಾಫಿಕ್ ಸಮಸ್ಯೆಯಿಂದ ಜನ ಹೈರಾಣಾಗಿದ್ದರು. ಸಿದ್ದಾಪುರ ಪೊಲೀಸ್ ಠಾಣೆಯ ನೂತನ ಠಾಣಾಧಿಕಾರಿ ಮಂಜುನಾಥ್ ಅಧಿಕಾರ ಸ್ವೀಕರಿಸಿದ ತಕ್ಷಣ ಕೆಲವು ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಂಡಿದ್ದರ ಭಾಗವಾಗಿ ಟ್ರಾಫಿಕ್ ಸಮಸ್ಯೆಗೆ ತಾತ್ಕಾಲಿಕ ಪರಿಹಾರ ದೊರೆತ್ತಿದ್ದು, ಅಧಿಕಾರಿಗಳ ನಡೆಗೆ ಸಾರ್ವಜನಿಕರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ.

ಇತ್ತೀಚೆಗೆ ವಾಹನ ಚಾಲಕರ ಸಭೆ ನಡೆಸಿದ ಅಧಿಕಾರಿ ವಾಹನ ಚಾಲಕರು ತಮ್ಮ ದಾಖಲೆ ಪತ್ರಗಳಾದ ಚಾಲನಾ ಪರವಾನಗಿ, ವಾಹನ ವಿಮೆ ದಾಖಲಾತಿ, ಮಾಲಿನ್ಯ ತಪಾಸಣೆ ದಾಖಲಾತಿ, ಟ್ಯಾಕ್ಸಿ ಚಾಲಕರು ಸಮವಸ್ತ್ರ ಧರಿಸುವುದು, ದ್ವಿಚಕ್ರ ವಾಹನ ಚಾಲಕರು ಹೆಲ್ಮೆಟ್ ಕಡ್ಡಾಯವಾಗಿ ಧರಿಸುವುದು ಹಾಗೂ ಸಂಚಾರ ನಿಯಮದ ಬಗ್ಗೆ ಅರಿವು ಮೂಡಿಸಿದರು. ದಾಖಲೆ ಪತ್ರ ಸರಿಪಡಿಸಿಕೊಳ್ಳಲು ಹದಿನೈದು ದಿನಗಳ ಗಡುವು ನೀಡಿದ್ದು, ತಪ್ಪಿದಲ್ಲಿ ಬಾರಿ ಮೊತ್ತದ ದಂಡ ವಿಧಿಸುವ ಎಚ್ಚರಿಕೆ ನೀಡಿದ್ದಾರೆ.

ಪಟ್ಟಣದಲ್ಲಿ ವಾಹನ ನಿಲುಗಡೆಗೆ ಪಾರ್ಕಿಂಗ್ ಸ್ಥಳದ ಕೊರತೆ ಇದ್ದು, ಇರುವ ಸ್ಥಳದಲ್ಲಿ ಚಾಲಕರು ಗಾಡಿಗಳನ್ನು ಅಡ್ಡಾದಿಡ್ಡಿ ನಿಲ್ಲಿಸುವುದರಿಂದ ಸಮಸ್ಯೆ ಸೃಷ್ಟಿಯಾಗಿತ್ತು. ಸಿಬ್ಬಂದಿ ಕೊರತೆಯ ನಡುವೆಯೂ ಇರುವ ಸಿಬ್ಬಂದಿಗಳ ನೇತೃತ್ವದಲ್ಲಿ ಸಂತೆ ದಿನವಾದ ಭಾನುವಾರದಂದು ಪಟ್ಟಣದಲ್ಲಿ ಟ್ರಾಫಿಕ್ ಸಮಸ್ಯೆಯನ್ನು ನಿಯಂತ್ರಿಸುವಲ್ಲಿ ಯಶಸ್ವಿಯಾಗಿದ್ದು, ಸಾರ್ವಜನಿಕ ವಲಯದಲ್ಲಿ ಶ್ಲಾಘನೆ ವ್ಯಕ್ತವಾಗಿದೆ.

ಈ ಹಿಂದೆ ಪಟ್ಟಣದ ಮಧ್ಯೆ ಎಲ್ಲೆಂದರಲ್ಲಿ ಆಟೋ ಚಾಲಕರು ಸವಾರರನ್ನು ತಾವೇ ಕೂಗಿ ಕರೆದು ಕೂರಿಸಿಕೊಂಡು ಹೋಗಲಾಗುತ್ತಿದ್ದು ಇದಕ್ಕೆ ತಡೆ ನೀಡಿದ ಠಾಣಾಧಿಕಾರಿ, ಆಟೋ ಚಾಲಕರು ತಮ್ಮ ನಿಲ್ದಾಣಗಳಿಂದಲೇ ಪ್ರಯಾಣಿಕರನ್ನು ಕರೆದುಕೊಂಡು ಹೋಗಬೇಕೆಂದು ತಾಕೀತು ಮಾಡಿದರು. ಇವರ ನಿರ್ಧಾರಗಳಿಗೆ ಸಂತೆ ದಿನವಾದ ಭಾನುವಾರದಂದು ಸೂಕ್ತ ಸ್ಪಂದನೆ ದೊರೆತಿದೆ. ಬೆಳಿಗ್ಗೆಯಿಂದಲೇ ಪೊಲೀಸ್ ತಂಡ ಸಿದ್ದಾಪುರ, ನೆಲ್ಯಾಹುದಿಕೇರಿ ಪಟ್ಟಣದಲ್ಲಿ ನಿಯಮ ಪಾಲಿಸದವರಿಗೆ ಖಡಕ್ ಸೂಚನೆ ನೀಡಿತು.

ಖಾಸಗಿ ವಾಹನಗಳು ತಮಗೆ ನಿಗದಿಪಡಿಸಿದ ಸ್ಥಳದಲ್ಲಿ ಸರತಿ ಸಾಲಿನಲ್ಲಿ ಅಚ್ಚುಕಟ್ಟಾಗಿ ನಿಲ್ಲಿಸಿದ್ದರಿಂದ ಗ್ರಾಹಕರು ಸುಗಮವಾಗಿ ನಿರ್ಭೀತಿಯಿಂದ ದಿನಸಿ ಖರೀದಿಸಿ ಮನೆ ತೆರಳಿದರು. ಮುಂದಿನ ದಿನಗಳಲ್ಲಿ ಇದೇ ರೀತಿ ಅಧಿಕಾರಿಗಳು ಕರ್ತವ್ಯ ನಿಭಾಯಿಸಿದಲ್ಲಿ ಟ್ರಾಫಿಕ್ ಸಮಸ್ಯೆಗೆ ಮುಕ್ತಿ ದೊರಕುವ ವಿಶ್ವಾಸವನ್ನು ಸಾರ್ವಜನಿಕರು ವ್ಯಕ್ತಪಡಿಸಿದ್ದರು.

“ವರ್ತಕರು ಪಾದಾಚಾರಿ ರಸ್ತೆಗಳ ಮೇಲೆ ತಮ್ಮ ವ್ಯಾಪಾರ ಸಾಮಗ್ರಿಗಳ ಜೋಡಣೆ ಮಾಡುತ್ತಿದ್ದಾರೆ, ಅಂಗಡಿ ಮಾಲೀಕರು ತಮ್ಮ ವಾಹನಗಳನ್ನು ಮಳಿಗೆ ಮುಂದೆಯೇ ನಿಲ್ಲಿಸುತ್ತಿದ್ದಾರೆ. ನಾಲ್ಕು ಚಕ್ರ ವಾಹನಗಳ ನಿಲುಗಡೆ ಸ್ಥಳದಲ್ಲಿ ದ್ವಿಚಕ್ರ ವಾಹನ ನಿಲ್ಲಿಸಲಾಗುತ್ತಿದ್ದು, ಇವುಗಳ ಬಗ್ಗೆ ಮುಂದಿನ ದಿನಗಳಲ್ಲಿ ಸಭೆ ಕರೆದು ಮಾಹಿತಿ ನೀಡಲಾಗುವುದು. ಯಾವುದೇ ವಾಹನವು ೧.೩೦ ಗಂಟೆಗಿಂತ ಹೆಚ್ಚು ಸಮಯ ಪಾರ್ಕಿಂಗ್ ಸ್ಥಳದಲ್ಲಿ ನಿಲ್ಲಿಸಿದಲ್ಲಿ ದಂಡ ವಿಧಿಸಲಾಗುವುದು. ಪದೇ ಪದೇ ತಪ್ಪುಗಳು ಮರುಕಳಿಸುತ್ತಿದ್ದಲ್ಲಿ ಅಂತಹ ವಾಹನವನ್ನು ನಿಯಮಾನುಸಾರ ಮುಟ್ಟುಗೋಲು ಹಾಕಿಕೊಳ್ಳಲಾಗುವುದು.”  – ಮಂಜುನಾಥ್, ಸಬ್‌ಇನ್‌ಸ್ಪೆಕ್ಟರ್, ಸಿದ್ದಾಪುರ ಪೊಲೀಸ್ ಠಾಣೆ

“ಟ್ರಾಫಿಕ್ ನಿಯಂತ್ರಣಕ್ಕೆ ಠಾಣಾಧಿಕಾರಿ ಕೈಗೊಂಡ ನಿರ್ಧಾರ ಸ್ವಾಗತಾರ್ಹ. ಪಟ್ಟಣದ ರಸ್ತೆ ಅಗಲೀಕರಣವಾಗದ ಕಾರಣ ದಿನದಿಂದ ದಿನಕ್ಕೆ ವಾಹನ ಸಂಖ್ಯೆಯು ಹೆಚ್ಚುತ್ತಿರುವುದರಿಂದ ನಿಲುಗಡೆಗೆ ಸಮಸ್ಯೆ ಉಂಟಾಗಿದ್ದು, ಇಲಾಖೆ ಕ್ರಮಗಳಿಗೆ ಚಾಲಕರು ಸಹಕರಿಸಲಿದ್ದೇವೆ.”  – ಸುರೇಶ್, ಜಿಲ್ಲಾ ಸಂಚಾಲಕರು, ಕರ್ನಾಟಕ ಚಾಲಕರ ಒಕ್ಕೂಟ

– ಕೃಷ್ಣ ಸಿದ್ದಾಪುರ

Tags:
error: Content is protected !!