ಬಿಳಿಗೆರೆ ಸರ್ಕಾರಿ ಶಾಲೆಯಲ್ಲಿ ಸಂಪ್‌ನಿಂದ ಮಕ್ಕಳಿಂದಲೇ ನೀರೆತ್ತುವ ಕಾಯಕ
ಶ್ರೀಧರ್ ಆರ್. ಭಟ್
ವರುಣ: ಬಿಳಿಗೆರೆ ಸರ್ಕಾರಿ ಶಾಲೆಯಲ್ಲಿ ೧೦ ಅಡಿ ಆಳದ ಸಂಪಿನಿಂದ ವಿದ್ಯಾರ್ಥಿಗಳು ತಲೆ ಬಗ್ಗಿಸಿ ನೀರೆತ್ತುವ ಕೆಲಸ ಮಾಡುತ್ತಿರುವುದನ್ನು ಗಮನಿಸಿದ ಸಾರ್ವಜನಿಕರು ಸಂಬಂಧಿಸಿದ ಶಾಲೆಯ ಮುಖ್ಯ ಶಿಕ್ಷಕರು ಹಾಗೂ ಸಹಶಿಕ್ಷಕರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರತಿನಿಧಿಸುವ ವರುಣ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಬಿಳಿಗೆರೆ ಶಾಲೆಯಲ್ಲಿ ಮಕ್ಕಳು ಸಂಪಿನೊಳಗೆ ತಲೆ ಸಹಿತ ನಡು ಬಗ್ಗಿಸಿ ನೀರು ಎತ್ತುವ ಕೆಲಸವನ್ನು ಪ್ರತಿನಿತ್ಯ ಮಾಡುತ್ತಿದ್ದಾರೆ.
೧೦ ಅಡಿ ಆಳ, ಅಷ್ಟೇ ಅಗಲದ ನೀರು ತುಂಬಿರುವ ಸಂಪಿನಿಂದ ವಿದ್ಯಾರ್ಥಿಗಳೇ ಕೊಡ ಹಿಡಿದು ಸಂಪಿನೊಳಗೆ ಬಗ್ಗಿ ನೀರೆತ್ತಿ ಕೊಟ್ಟು ಬಿಸಿ ಯೂಟ ಪಡೆಯಬೇಕಾದ ಪರಿಪಾಠ ಬೆಳೆದು ಬಂದಿದೆ. ಬಿಸಿಯೂಟ ಬೇಕು ಎಂದಾದರೆ ನೀರು ಬೇಕೇ ಬೇಕು. ಹಾಗಾಗಿ ಇಲ್ಲಿ ಮಕ್ಕಳೇ ಬಿಸಿಯೂಟಕ್ಕೆ ಸಂಪಿನಿಂದ ನೀರು ಎತ್ತಬೇಕಾದ ಅಪಾಯಕಾರಿ ಕೆಲಸ ಮಾಡಬೇಕಿದೆ. ಇಲ್ಲಿ ನಲ್ಲಿ ಅಳವಡಿಸದೇ ಇರುವುದರಿಂದ ಸಂಪನ್ನೇ ಅವಲಂಬಿಸಬೇಕಿದೆ.
ಬಗ್ಗಿ ಸಂಪಿನಿಂದ ನೀರು ಎತ್ತುವಾಗ ಸ್ವಲ್ಪ ಎಚ್ಚರ ತಪ್ಪಿದರೂ ಆ ವಿದ್ಯಾರ್ಥಿ ತಲೆ ಕೆಳಗಾಗಿ ಸಂಪಿನೊಳಗೆ ಬಿದ್ದು ನೀರಿನಲ್ಲಿ ಮುಳುಗುವುದು ಖಚಿತ. ಹಾಗಾಗಿ ಈ ಶಾಲೆಯಲ್ಲಿ ವಿದ್ಯಾರ್ಥಿಗಳಿಂದ ಈ ಕೆಲಸ ಮಾಡಿಸುವುದು ನಿಲ್ಲಬೇಕು ಎಂಬುದು ಸಾರ್ವಜನಿಕರು ಹಾಗೂ ಪೋಷಕರ ಆಗ್ರಹವಾಗಿದೆ.
ಮಕ್ಕಳಿಂದ ಶಾಲೆಯಲ್ಲಿ ಕೆಲಸ ಮಾಡಿಸುವಂತಿಲ್ಲ. ಹಾಗಿದ್ದೂ ಇಂಥ ಅಪಾಯಕಾರಿ ಕೆಲಸ ಮಾಡಿಸುತ್ತಿರುವುದು ಅಪರಾಧವಾಗಿದ್ದು, ನೀರು ಎತ್ತಿಕೊಳ್ಳುವುದು ಅಡುಗೆ ಸಿಬ್ಬಂದಿಯ ಕೆಲಸವಾಗಿದ್ದು ಅದನ್ನು ಮಕ್ಕಳಿಂದ ಮಾಡಿಸುತ್ತಿರುವುದರ ಕುರಿತಂತೆ ಇಂದೇ ವರದಿ ನೀಡಲು ಬಿಆರ್‌ಪಿಯವರನ್ನು ಬಿಳಿಗೆರೆ ಶಾಲೆಗೆ ಕಳಿಸುತ್ತಿದ್ದೇನೆ. -ಮಹೇಶ್, ಬಿಇಒ, ನಂಜನಗೂಡು ತಾಲ್ಲೂಕು