Mysore
14
few clouds

Social Media

ಗುರುವಾರ, 22 ಜನವರಿ 2026
Light
Dark

ನಿಗದಿತ ಅವಧಿಯಲ್ಲಿ ಸಮೀಕ್ಷೆ ಪೂರ್ಣಗೊಳಿಸಿದ ಶಿಕ್ಷಕಿ

-ಎಂ.ನಾರಾಯಣ

ತಿ.ನರಸೀಪುರ: ನಿಯುಕ್ತಿಗೊಳಿಸಿದ್ದ ಎಲ್ಲ ಮನೆಗಳ ಸಮೀಕ್ಷೆ ಪೂರ್ಣಗೊಳಿಸಿ ಪ್ರಶಂಸನಾ ಪತ್ರ ಪಡೆದ ರಜಿನಿ ಲತಾ 

ತಿ.ನರಸೀಪುರ: ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ನಾನಾ ಕಾರಣಗಳಿಂದ ನಿಧಾನಗತಿಯಲ್ಲಿ ಸಾಗುತ್ತಿದೆ. ಆದರೆ ತಾಲ್ಲೂಕಿನ ಒಬ್ಬ ಶಿಕ್ಷಕಿ ತಮಗೆ ನೀಡಿದ್ದ ಎಲ್ಲ ಮನೆಗಳ ಸಮೀಕ್ಷಾ ಕಾರ್ಯ ಪೂರ್ಣಗೊಳಿಸಿ ಇಲಾಖೆಗಳ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

ತಾಲ್ಲೂಕಿನ ಚೌಹಳ್ಳಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯಶಿಕ್ಷಕಿ ರಜಿನಿ ಲತಾ ತಮಗೆ ನೀಡಿದ್ದ ೧೮೫ ಮನೆಗಳ ಗಣತಿ ಕಾರ್ಯವನ್ನು ಪೂರ್ಣಗೊಳಿಸಿ ಜಿಲ್ಲಾಡಳಿತ, ಜಿಪಂ, ಶಿಕ್ಷಣ ಇಲಾಖೆ ಮತ್ತು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಸಮೀಕ್ಷೆ ಸೆ.೨೨ರಿಂದ ಆರಂಭವಾಗಿದ್ದು ಅ.೭ರಂದು ಪೂರ್ಣಗೊಳ್ಳಬೇಕಿದೆ. ಮುಖ್ಯಮಂತ್ರಿಗಳು ಸಮೀಕ್ಷಾ ಕಾರ್ಯ

ಚುರುಕಿಗೆ ತಾಕೀತು ಮಾಡಿದ್ದಾರೆ. ಇದರ ನಡುವೆ ಅತ್ಯಂತ ಚುರುಕಾಗಿ ಕೇವಲ ೭ ದಿನಗಳಲ್ಲಿ ರಜಿನಿ ಲತಾ ಗಣತಿ ಪೂರ್ಣ ಗೊಳಿಸಿದ್ದಾರೆ. ಸಮೀಕ್ಷೆ ಆರಂಭಗೊಂಡ ಎರಡೇ ದಿನಗಳಲ್ಲಿ ನೂರು ಮನೆಗಳನ್ನು ಸಮೀಕ್ಷೆ ಮಾಡಿದ ಹೆಗ್ಗಳಿಕೆ ಇವರಿಗೆ ಸಲ್ಲುತ್ತದೆ ಎಂದು ಬಿಆರ್‌ಸಿ ನಾಗೇಶ್ ತಿಳಿಸಿದ್ದಾರೆ.

ಸರ್ವರ್ ಸಮಸ್ಯೆ, ಮೊಬೈಲ್ ಹ್ಯಾಂಗ್, ನೆಟ್‌ವರ್ಕ್ ಸಮಸ್ಯೆ, ಮನೆಗಳಿಗೆ ಹೋದರೆ ಜನರು ಕೂಲಿಗೆ ಹೋಗಿರುತ್ತಾರೆ. ಇಂತಹ ಹಲವಾರು ಸಮಸ್ಯೆಗಳ ಸವಾಲಿನ ನಡುವೆಯೂ ಹಗಲು ರಾತ್ರಿ ಎನ್ನದೆ ತಮ್ಮ ಕರ್ತವ್ಯವನ್ನು ಪೂರ್ಣ ಗೊಳಿಸಿದ್ದಾರೆ.

ಇದನ್ನು ಓದಿ : ಜಂಬೂಸವಾರಿಗೆ ಕಳೆ ತಂದ ಕಲಾ ತಂಡಗಳು

ಸಮೀಕ್ಷೆಯಲ್ಲಿ ಪ್ರತಿ ಕುಟುಂಬದ ವ್ಯಕ್ತಿಗೆ ೬೦ ಪ್ರಶ್ನೆಗಳನ್ನು ಕೇಳಿ, ಉತ್ತರಗಳನ್ನು ಮೊಬೈಲ್ ಆಪ್‌ಗೆ ಅಪ್‌ಲೋಡ್ ಮಾಡಬೇಕಿತ್ತು. ನಿಗದಿತ ಗಡುವಿಗೆ ಮುಂಚಿತವಾಗಿ ಮುಗಿಸಿ ಗುರಿ ಸಾಧಿಸಿರುವ ಹಿನ್ನೆಲೆಯಲ್ಲಿ ಜಿಲ್ಲಾಡಳಿತದಿಂದ ಪ್ರಶಂಸನಾ ಪತ್ರ ನೀಡಿ ಅಭಿನಂದಿಸಲಾಗಿದೆ.

ರಾತ್ರಿಯೂ ಮನೆ ಭೇಟಿ: ತಾಲ್ಲೂಕಿನ ಚೌಹಳ್ಳಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕಿಯಾಗಿರುವ ರಜಿನಿ ಲತಾ ತಿ.ನರಸೀಪುರ ಪಟ್ಟಣದಿಂದ ಗ್ರಾಮಕ್ಕೆ ಓಡಾಡುತ್ತಾ ರಾತ್ರಿ ೯ ಗಂಟೆಯವರೆಗೂ ಗ್ರಾಮದಲ್ಲಿ ಸಮೀಕ್ಷಾ ಕಾರ್ಯ ನಡೆಸಿದ್ದಾರೆ.೭ ದಿನಗಳಲ್ಲಿ ಸಮೀಕ್ಷೆ ಪೂರ್ಣಗೊಳಿಸುವ ಮೂಲಕ ಇತರರಿಗೆ ಮಾದರಿಯಾಗಿದ್ದಾರೆ.

ಗಣತಿ ಕಾರ್ಯದಲ್ಲಿ ಸಂಪೂರ್ಣವಾಗಿ ತಮ್ಮನ್ನು ತಾವು ತೊಡಗಿಸಿಕೊಂಡು ಗ್ರಾಮದಸಮಸ್ಯೆಯನ್ನು ಅರಿತು, ಜನ ಸಿಗುವ ವೇಳೆಯಲ್ಲಿ ಹಗಲು ರಾತ್ರಿ ಎನ್ನದೆ ಹೋಗಿ ಸಮೀಕ್ಷೆ ಕಾರ್ಯವನ್ನು ಪೂರ್ಣಗೊಳಿಸಿದ್ದಾರೆ. ಸಮೀಕ್ಷೆ ಕಾರ್ಯ ಆರಂಭಗೊಂಡ ೨ ದಿನಗಳಲ್ಲೇ ಶಿಕ್ಷಕಿ ರಜಿನಿ ಲತಾರವರು ೧೦೦ ಕುಟುಂಬಗಳ ಗಣತಿ ಕಾರ್ಯವನ್ನು ಪೂರ್ಣ ಗೊಳಿಸಿ ವೆಬ್‌ಸೈಟ್‌ಗೆ ಅಪ್ಲೋಡ್ ಮಾಡುವ ಮೂಲಕ ತಾಲ್ಲೂಕಿನ ಇತರೆ ಶಿಕ್ಷಕರಿಗೆ ಮಾದರಿಯಾಗಿ ದ್ದಾರೆ ಎಂದು ಟಿಒಟಿ, ಸಮೀಕ್ಷೆ ಕಾರ್ಯದ ಮೇಲ್ವಿಚಾರಕರಾದ ನಾಗರಾಜು ಹೇಳಿದರು

” ಪ್ರತಿದಿನ ಬೆಳಿಗ್ಗೆ, ಸಂಜೆ ಎನ್ನದೆ ಜವಾಬ್ದಾರಿ ಅರಿತು ಗುರಿ ಸಾಧಿಸಿದ್ದಾರೆ. ಮೊಬೈಲ್‌ನ ತಾಂತ್ರಿಕ ಸಮಸ್ಯೆಗಳು ಸೇರಿದಂತೆ ನಾನಾ ಸಮಸ್ಯೆಗಳನ್ನು ತಮ್ಮ ಹಂತದಲ್ಲಿಯೇ ಬಗೆಹರಿಸಿಕೊಂಡು ಕೇವಲ ೭ ದಿನಗಳಲ್ಲಿ ಗಣತಿ ಪೂರ್ಣಗೊಳಿಸಿ ರುವುದು ಅವರ ಕರ್ತವ್ಯನಿಷ್ಠೆ ಮತ್ತು ಬದ್ಧತೆಯನ್ನು ಸೂಚಿಸುತ್ತದೆ.”

-ಸುರೇಶಾಚಾರ್, ತಹಸಿಲ್ದಾರ್, ತಿ.ನರಸೀಪುರ

” ರಜಿನಿ ಲತಾ ಅವರು ನಿಗದಿತ ಅವಧಿಗೂ ಮುನ್ನ ಸಮೀಕ್ಷೆ ಪೂರ್ಣಗೊಳಿಸಿರುವ ಹಿನ್ನೆಲೆಯಲ್ಲಿ ಜಿಲ್ಲಾಡಳಿತದಿಂದ ಪ್ರಶಂಸನಾ ಪತ್ರ ಪಡೆದಿದ್ದು, ಇತರೆ ಶಿಕ್ಷಕರಿಗೆ ಮಾದರಿಯಾಗಿದ್ದಾರೆ. ಉಳಿದ ಶಿಕ್ಷಕರೂ ಅವರಿಗೆ ನೀಡಿರುವ ಜವಾಬ್ದಾರಿಯನ್ನು ಅವಧಿ ಒಳಗೆ ಪೂರ್ಣಗೊಳಿಸುವ ಮೂಲಕ ಶಿಕ್ಷಣ ಇಲಾಖೆಗೆ ಕೀರ್ತಿ ತರಬೇಕು.”

-ಎಸ್.ಸಿ.ಶಿವಮೂರ್ತಿ, ಬಿಇಒ, ತಿ.ನರಸೀಪುರ

 

Tags:
error: Content is protected !!