ಮಂಜು ಕೋಟೆ
ಕೋಟೆ: ಜು.೨೬ರಂದು ಚುನಾವಣೆ; ನಾಮಪತ್ರ ಸಲ್ಲಿಕೆ ಶುರು; ಮುಖಂಡರಿಂದ ಕಾರ್ಯತಂತ್ರ
ಎಚ್.ಡಿ.ಕೋಟೆ: ತಾಲ್ಲೂಕಿನ ಟಿಎಪಿಸಿಎಂಎಸ್ ನಿರ್ದೇಶಕರ ಚುನಾವಣೆ ಜು.೨೬ರಂದು ನಡೆಯಲಿದ್ದು, ಚುನಾವಣೆ ಕಾಂಗ್ರೆಸ್, ಬಿಜೆಪಿ, ಜಾ.ದಳ ಪಕ್ಷಗಳ ಮುಖಂಡರಿಗೆ ಪ್ರತಿಷ್ಠೆಯಾಗಿ ಮಾರ್ಪಟ್ಟಿದೆ.
ವಿವಿಧ ಪಕ್ಷಗಳ ಅಭ್ಯರ್ಥಿಗಳು ಭಾನುವಾರದಿಂದ ನಾಮಪತ್ರ ಸಲ್ಲಿಸಲು ಆರಂಭಿಸಿದ್ದಾರೆ. ತಾಲ್ಲೂಕು ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘದ ೧೨ ಮಂದಿ ನಿರ್ದೇಶಕರ ಚುನಾವಣೆಯಲ್ಲಿ ಗೆಲುವು ಸಾಧಿಸಿ ಅಧಿಕಾರ ಹಿಡಿಯಲೇಬೇಕೆಂದು ಕಾಂಗ್ರೆಸ್ ಪಕ್ಷದ ಶಾಸಕ ಅನಿಲ್ ಚಿಕ್ಕಮಾದು, ಪಕ್ಷದ ಅಧ್ಯಕ್ಷರಾದ ಏಜಾಜ್ ಪಾಷ, ಮಾದಪ್ಪ, ನಾಗನಹಳ್ಳಿ ಪ್ರದೀಪ, ಹಿರೇಹಳ್ಳಿ ಸೋಮೇಶ್, ಜಿನ್ನಳ್ಳಿ ರಾಜ ನಾಯಕ, ಶಿವಮಲ್ಲಪ್ಪ, ಪರಶಿವ, ಬಿಜೆಪಿ ತಾಲ್ಲೂಕು ಅಧ್ಯಕ್ಷರುಗಳಾದ ಅಣ್ಣೂರು ಟಿ.ವೆಂಕಟೇಶ್, ಮುಳ್ಳೂರು ಗಿರೀಶ್, ಮೊತ್ತ ಬಸವರಾಜಪ್ಪ, ಜಾ.ದಳದ ಕೆ.ಎಂ.ಕೃಷ್ಣನಾಯಕ, ಕಾಳಿಹುಂಡಿ ಸಿದ್ದೇಗೌಡ, ಗುಂಡತ್ತೂರು ಪ್ರಕಾಶ, ಮಹೇಶ, ಬೆಳಗನಹಳ್ಳಿ ಶಿವರಾಜ್, ಕರವೇ ನಟರಾಜ್ ಅವರುಗಳು ತಮ್ಮ ಪಕ್ಷಗಳ ಮುಖಂಡರು ಮತ್ತು ಕಾರ್ಯಕರ್ತರೊಡನೆ ಕಾರ್ಯತಂತ್ರ ರೂಪಿಸಿ ಅಭ್ಯರ್ಥಿಗಳನ್ನು ಕಣಕ್ಕಿಳಿಸುತ್ತಿದ್ದಾರೆ.
ಎ ತರಗತಿಯ ೪ ಸ್ಥಾನಗಳಿಗೆ ಸ್ಪರ್ಧಿಸಲು ಮತ್ತು ಮತದಾನ ಮಾಡಲು ತಾಲ್ಲೂಕಿನ ೨೨ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳಲ್ಲಿ ಮೂರೂ ಪಕ್ಷದವರು ಪೈಪೋಟಿಯಲ್ಲಿ ಡೆಲಿಗೇಟ್ ಮೂಲಕ ನೇಮಕ ಮಾಡಿಕೊಂಡಿದ್ದಾರೆ. ಇವರಲ್ಲಿ ಯಾರು ಸ್ಪರ್ಧಿಸುತ್ತಾರೆ, ಯಾರು ಗೆಲುವು ಸಾಧಿಸುತ್ತಾರೆ ಎಂಬುದು ತೀವ್ರ ಕುತೂಹಲ ಮೂಡಿಸಿದೆ. ಬಿ ತರಗತಿಯ ೮ ಸ್ಥಾನಗಳ ಪೈಕಿ ೨ ಸಾಮಾನ್ಯ ಮಹಿಳೆಯರು, ಎಸ್‌ಸಿ, ಎಸ್‌ಟಿ, ಬಿಸಿಎಂ ಎ, ಬಿಸಿಎಂ ಬಿಗೆ ಒಂದೊಂದು ಸ್ಥಾನ ಮೀಸಲಾಗಿದ್ದು, ೧,೯೧೪ ಮತದಾರರಿದ್ದಾರೆ. ಟಿಎಪಿಸಿಎಂಎಸ್‌ನ ೧೨ ನಿರ್ದೇಶಕರ ಸ್ಥಾನಗಳಿಗೆ ಭಾನುವಾರ (ಜು.೧೨) ದಿಂದ ನಾಮಪತ್ರ ಸಲ್ಲಿಕೆ ಆರಂಭವಾಗಿದೆ.
ನಾಮಪತ್ರ ಸಲ್ಲಿಸಲು ಜು.೧೮ ಕೊನೆಯ ದಿನವಾಗಿದೆ. ಜು.೨೬ರ ಭಾನುವಾರ ಸಂಘದ ಕಚೇರಿಯಲ್ಲಿ ಮತದಾನ ನಡೆಯಲಿದೆ.
ಅಭಿಪ್ರಾಯ ಸಂಗ್ರಹ: ಎಂ.ಡಿ.ಮಂಚಯ್ಯ ಮುಂದಾಗಿದ್ದಾರೆ. ಚುನಾವಣೆಯಲ್ಲಿ ಗೆದ್ದು ಅಧಿಕಾರ ಹಿಡಿಯಬೇಕೆಂದು ಕಾಂಗ್ರೆಸ್, ಬಿಜೆಪಿ, ಜಾ.ದಳ ಪಕ್ಷಗಳ ತಾಲ್ಲೂಕು ವರಿಷ್ಠರು, ಮುಖಂಡರು, ಕಾರ್ಯಕರ್ತರ ಸಭೆಗಳನ್ನು ಪ್ರತ್ಯೇಕವಾಗಿ ನಡೆಸಿ ಅಭಿಪ್ರಾಯಗಳನ್ನು ಪಡೆದುಕೊಂಡಿದ್ದಾರೆ.
ಜಾ.ದಳಕ್ಕೆ ಆಘಾತ: ಎ ತರಗತಿಯಿಂದ ಸ್ಪರ್ಧಿಸಲು ಮತ್ತು ಮತದಾನ ಮಾಡಲು ಮಾದಾಪುರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಜಾ.ದಳದ ಎಂ.ಡಿ.ಮಂಚಯ್ಯರವರ ಡೆಲಿಗೇಟ್‌ನ ನಿರ್ಣಯವನ್ನು ಸಂಘದ ಕಾರ್ಯದರ್ಶಿ ಮೋಹನ್ ಸಮರ್ಪಕವಾಗಿ ಬರೆದಿಲ್ಲ ಎಂದು ಸಹಕಾರ ಇಲಾಖೆ ಅಧಿಕಾರಿ ಎ.ಆರ್.ರೇಣುಕ ಅವರು ರದ್ದುಗೊಳಿಸಿರುವುದು ಜಾ.ದಳ ಮುಖಂಡರಿಗೆ ದೊಡ್ಡ ಆಘಾತ ಉಂಟುಮಾಡಿದೆ. ಇದನ್ನು ಪ್ರಶ್ನಿಸಿ, ನ್ಯಾಯಾಲಯದ ಮೊರೆ ಹೋಗಲು ಅಭಿಪ್ರಾಯ ಸಂಗ್ರಹ ಎಂ.ಡಿ.ಮಂಚಯ್ಯ ಮುಂದಾಗಿದ್ದಾರೆ.




