Mysore
33
scattered clouds

Social Media

ಶನಿವಾರ, 28 ಮಾರ್ಚ್ 2026
Light
Dark

ಮಳೆ ಅನಾಹುತ ತಡೆಯಲು ತಾಲ್ಲೂಕು ಆಡಳಿತ ಸನ್ನದ್ಧ

  • ತಡಿಮಾಲಂಗಿಯಲ್ಲಿ ತಡೆಗೋಡೆ ನಿರ್ಮಾಣಕ್ಕೆ ಸಿದ್ಧತೆ
  • ಸೇಂಟ್ ಮೇರಿಸ್ ಶಾಲೆ ರಸ್ತೆ ದುರಸ್ತಿಗೆ ಆಗ್ರಹ

ತಿ. ನರಸೀಪುರ: ಮುಂಗಾರು ಮಳೆಯಿಂದ ಆಗುವ ಅನಾಹುತಗಳನ್ನು ತಡೆಗಟ್ಟಲು ತಾಲ್ಲೂಕು ಆಡಳಿತ ಸಿದ್ಧತೆಗಳನ್ನು ಮಾಡಿಕೊಂಡಿದ್ದು, ಯಾವುದೇ ಅನಾಹುತಗಳು ಆಗದಂತೆ ಕ್ರಮ ವಹಿಸಲಾಗಿದೆ.

ತಾಲ್ಲೂಕಿನಲ್ಲಿ ಭಾರೀ ಮಳೆ ಆದರೆ ಮನೆಗಳಿಗೆ ಹಾನಿ, ಬೆಳೆ ಹಾನಿ ಹಾಗೂ ಜಾನುವಾರುಗಳಿಗೆ ತೊಂದರೆ ಯಾಗುವುದನ್ನು ತಪ್ಪಿಸಲು ಗ್ರಾಮಸೇವಕರುಗಳಿಗೆ ಮುನ್ನೆಚ್ಚರಿಕೆ ಕ್ರಮವಾಗಿ ಮಾಹಿತಿ ನೀಡಲಾಗಿದ್ದು ಬೆಳೆ ಹಾನಿಯಾದ ಬಗ್ಗೆ ಗಮನಕ್ಕೆ ತಂದ ಕೂಡಲೇ ತೋಟಗಾರಿಕೆ ಹಾಗೂ ಕೃಷಿ ಇಲಾಖೆಗಳು ಜಂಟಿಯಾಗಿ ಸರ್ವೆ ನಡೆಸಿ ಪರಿಹಾರ ನೀಡಲು ಕ್ರಮಕೈಗೊಳ್ಳಲಾಗುತ್ತದೆ. ಮನೆಗೆ ಹಾನಿಯಾದರೆ ಎಸ್‌ಡಿಎಫ್‌ಆರ್ ಯೋಜನೆಯಡಿ ಪರಿಹಾರ ನೀಡಲಾಗುವುದು. ಮಳೆ ಹಾಗೂ ಭೂಕುಸಿತದಿಂದ ಪ್ರಾಣ ಹಾನಿಯಾದರೆ ೫ ಲಕ್ಷ ರೂ. ಪರಿಹಾರ ನೀಡಲಾಗುವುದು. ಒಟ್ಟಾರೆ ಮಳೆಯಿಂದ ಯಾವುದೇ ಅನಾಹುತಗಳು ಸಂಭವಿಸದಂತೆ ಮುನ್ನೆಚ್ಚರಿಕೆ ವಹಿಸಲಾಗಿದೆ.

ತಡಿಮಾಲಂಗಿಯಲ್ಲಿ ಎಚ್ಚರಿಕೆ: ಹೆಚ್ಚಾಗಿ ಮಳೆಯಾದರೆ ಕಾವೇರಿ ಹಾಗೂ ಕಪಿಲ ನದಿಗಳಲ್ಲಿ ನೀರಿನ ಮಟ್ಟ ಹೆಚ್ಚಾಗುವುದರಿಂದ ತಡಿಮಾಲಂಗಿ ಗ್ರಾಮದಲ್ಲಿ ಅನಾಹುತಗಳು ಆಗುತ್ತವೆ. ಈ ಹಿನ್ನೆಲೆಯಲ್ಲಿ ಗ್ರಾಮದ ಸುತ್ತ ತಡೆಗೋಡೆ ನಿರ್ಮಾಣ ಮಾಡಲು ರಾಜ್ಯ ಸರ್ಕಾರದಿಂದ ೧ ಕೋಟಿ ರೂ. ಮಂಜೂರಾಗಿದ್ದು, ಲೋಕೋಪಯೋಗಿ ಇಲಾಖೆ ವತಿಯಿಂದ ಶೀಘ್ರದಲ್ಲಿ ಕಾಮಗಾರಿ ಆರಂಭವಾಗಲಿದೆ ಎಂದು ತಹಸಿಲ್ದಾರ್ ಸುರೇಶಾಚಾರ್ ಪತ್ರಿಕೆಗೆ ತಿಳಿಸಿದ್ದಾರೆ.

ಕೆಸರು ಗುಂಡಿಯಾಗುವ ರಸ್ತೆಗಳು: ತಿ. ನರಸೀಪುರದ ಸೇಂಟ್ ಮೇರಿಸ್ ಶಾಲೆ ರಸ್ತೆಯು ಮಳೆ ಬಿದ್ದಾಗ ಕೆಸರುಗದ್ದೆಯಂತಾಗುತ್ತದೆ. ನಂಜನಗೂಡು, ಕೊಳ್ಳೇಗಾಲದ ರಸ್ತೆಗಳು ಹಳ್ಳ ಕೊಳ್ಳಗಳಿಂದ ಕೂಡಿದ್ದು, ಮಳೆಯಾದರೆ ರಸ್ತೆಯಲ್ಲಿ ವಾಹನ ಸವಾರರು ಬೀಳುವಂತಹ ಸ್ಥಿತಿ ನಿರ್ಮಾಣವಾಗಿದೆ. ಸಂಸದ ಸುನಿಲ್ ಬೋಸ್ ಅವರು ಭೂಮಿ ಪೂಜೆ ಮಾಡಿ ತಿಂಗಳುಗಳೇ ಕಳೆದರೂ ಕಾಮಗಾರಿ ಇನ್ನೂ ಆರಂಭವಾಗಿಲ್ಲ.

ಮಳೆಗಾಲ ಆರಂಭವಾಗಿರುವುದರಿಂದ ತಾಲ್ಲೂಕಿನಲ್ಲಿ ಸಂಭವಿಸಬಹುದಾದ ಅನಾಹುತಗಳ ಬಗ್ಗೆ ಗ್ರಾಮ ಸಹಾಯಕರುಗಳಿಗೆ ಸೂಚನೆ ನೀಡಲಾಗಿದ್ದು, ತಾಲ್ಲೂಕಿನ ಯಾವುದೇ ಗ್ರಾಮದಲ್ಲಿ ಹಾನಿ ಉಂಟಾದ ಕೂಡಲೇ ಮಾಹಿತಿ ನೀಡುವಂತೆ ಸಲಹೆ ನೀಡಲಾಗಿದೆ. ಹಾನಿ ಉಂಟಾದ ಕೂಡಲೇ ಸ್ಥಳಕ್ಕೆ ಭೇಟಿ ನೀಡಿ ಏಳು ದಿನಗಳ ಒಳಗೆ ಪರಿಹಾರ ನೀಡಲಾಗುವುದು. – ಸುರೇಶಾಚಾರ್, ತಹಸಿಲ್ದಾರ್

ಮಳೆಗಾಲ ಆರಂಭವಾಗಿರುವುದರಿಂದ ಮನೆಗಳಲ್ಲಿ ಸಂಗ್ರಹಿಸಿದ ನೀರನ್ನು ಆಶಾ ಕಾರ್ಯಕರ್ತರ ಮೂಲಕ ಪರಿಶೀಲಿಸಿ, ಸೊಳ್ಳೆ, ಕ್ರಿಮಿಕೀಟಗಳು ಕೂರದಂತೆ ಹಾಗೂ ನೀರನ್ನು ಬದಲಾಯಿಸುವಂತೆ ತಿಳಿಸಲಾಗು ತ್ತದೆ. ಬಿಸಿನೀರು ಸೇವನೆ ಮಾಡಲು ಸೂಚನೆ ನೀಡಲಾಗಿದೆ. ಗ್ರಾಮ ಪಂಚಾಯಿತಿಯ ವರು ಚರಂಡಿಗಳಲ್ಲಿ ನೀರು ನಿಲ್ಲದಂತೆ ಕ್ರಮ ವಹಿಸಬೇಕು. -ಡಾ. ರವಿಕುಮಾರ್, ತಾಲ್ಲೂಕು ಆರೋಗ್ಯಾಧಿಕಾರಿ

ಪಟ್ಟಣದ ಸೇಂಟ್ ಮೇರಿಸ್ ಶಾಲೆ ರಸ್ತೆಯಲ್ಲಿ ಮಳೆ ಬಂದಾಗ ಶಾಲೆಗೆ ರಜೆ ನೀಡುವಂತಹ ಸ್ಥಿತಿ ನಿರ್ಮಾಣವಾಗಿದೆ. ಮಳೆ ಬಿದ್ದರೆ ಮಕ್ಕಳು ಶಾಲೆಗೆ ನಡೆದುಕೊಂಡು ಹೋಗು ವುದು ಅಸಾಧ್ಯ ಎಂಬಂತಾಗಿದೆ. ಹೀಗಿದ್ದರೂ ಪುರಸಭೆಯ ಅಧಿಕಾರಿಗಳು ಗಮಹರಿಸದಿರುವುದು ವಿಷಾದನೀಯ. – ಪರಮೇಶ್, ವಕೀಲರು, ತಿ. ನರಸೀಪುರ

Tags:
error: Content is protected !!