ಮಹೇಂದ್ರ ಹಸಗೂಲಿ
ಗುಂಡ್ಲುಪೇಟೆ: ಪಟ್ಟಣದ ಮೂಲಕ ಹಾದುಹೋಗಿರುವ ಮೈಸೂರು- ಕೋಯಿಕೋಡ್ (ಕೇರಳ) ರಾಷ್ಟ್ರೀಯ ಹೆದ್ದಾರಿಯಲ್ಲಿ ಸಾರ್ವಜನಿಕ ಆಸ್ಪತ್ರೆಯಿಂದ ಬಸವ ಭವನದವರೆಗೆ ರಸ್ತೆಯ ಮಧ್ಯೆ ಬಿಡಾಡಿ ದನಗಳು ಓಡಾಡುತ್ತಾ, ಮಲಗುತ್ತಾ ಇರುವುದರಿಂದ ಸಂಚಾರಕ್ಕೆ ಅಡಚಣೆಯಾಗುತ್ತಿದೆ.
ರಾಷ್ಟ್ರೀಯ ಹೆದ್ದಾರಿಯಲ್ಲಿ ವಾಹನಗಳು ವೇಗವಾಗಿ ಚಲಿಸುವಾಗ ಬಿಡಾಡಿ ದನಗಳಿಂದಾಗಿ ತಕ್ಷಣ ವಾಹನ ನಿಲ್ಲಿಸಿದಾಗ ಹಿಂಬದಿಯ ವಾಹನಗಳು ಬಂದು ಡಿಕ್ಕಿ ಹೊಡೆಯುವ ಸಾಧ್ಯತೆ ಇದೆ. ಆದ್ದರಿಂದ ಯಾವುದೇ ಪ್ರಾಣಾಪಾಯ ಸಂಭವಿಸುವಮುನ್ನ ಎಚ್ಚರಿಕೆ ವಹಿಸಬೇಕು. ರಸ್ತೆಗೆ ಬಿಡಾಡಿ ದನಗಳನ್ನು ಬಿಡುವವರ ವಿರುದ್ದ ಕ್ರಮವಹಿಸ ಬೇಕು ಎಂದು ವಾಹನ ಸವಾರರು ಪುರಸಭೆ ಅಧಿಕಾರಿಗಳನ್ನು ಒತ್ತಾಯಿಸಿದ್ದಾರೆ.
ರಸ್ತೆಗೆ ದನ, ಕುದುರೆಗಳನ್ನು ಬಿಡುವವರಿಗೆ ಪುರಸಭೆ ಎಚ್ಚರಿಕೆ ನೀಡಿ ದಂಡ ವಿಧಿಸಬೇಕು ಎಂದು ಸಾರ್ವಜನಿಕರು, ವಾಹನ ಸವಾರರು ಒತ್ತಾಯಿಸಿದ್ದಾರೆ.
” ರಾಷ್ಟ್ರೀಯ ಹೆದ್ದಾರಿಯಲ್ಲಿ ಬಿಡಾಡಿ ದನಗಳ ಹಾವಳಿ ಹೆಚ್ಚಿರುವುದು ಅಪಘಾತ ಸಂಭವಿಸಲು ಕಾರಣವಾಗಿದೆ. ವಾಹನ ಸವಾರರುಓಡಾಡಲು ಕಿರಿಕಿರಿಯಾಗುತ್ತಿದೆ. ಇದನ್ನು ನಿಯಂತ್ರಿಸುವಲ್ಲಿ ಪುರಸಭೆ ಹಿಂದೇಟು ಹಾಕುತ್ತಿರುವುದರಿಂದ ರಸ್ತೆಗೆ ದನಗಳನ್ನು ಮತ್ತೆ ಬಿಡುತ್ತಿದ್ದಾರೆ. ಇನ್ನಾದರೂ ಸೂಕ್ತ ಕ್ರಮ ಕೈಗೊಂಡು ವಾಹನ ಸವಾರರಿಗೆ ಆಗುತ್ತಿರುವ ಕಿರಿಕಿರಿ ತಪ್ಪಿಸಬೇಕು.”
-ಮಧುಶಂಕರ್, ತಾಪಂ ಮಾಜಿ ಅಧ್ಯಕ್ಷ
” ಈ ವಿಚಾರವಾಗಿ ಜಾನುವಾರು ಮಾಲೀಕರಿಗೆ ಅನೇಕ ಬಾರಿ ದಂಡ ವಿಧಿಸಿದ್ದರೂ ಮಾಲೀಕರು ದನಗಳನ್ನು ರಸ್ತೆಗೆ ಬಿಡುತ್ತಿದ್ದು, ಈ ಕುರಿತು ಪ್ರಕಟಣೆಯನ್ನೂ ಹೊರಡಿಸಲಾಗಿದೆ. ಮತ್ತೆ ರಸ್ತೆಗೆ ಹಸು, ಕುದುರೆಗಳನ್ನು ಬಿಟ್ಟು ಸಂಚಾರಕ್ಕೆ ತೊಂದರೆ ಉಂಟುಮಾಡಿದಲ್ಲಿ ಪೊಲೀಸರಸಹಕಾರ ಪಡೆದು ಬಿಡಾಡಿ ದನಗಳು, ಕುದುರೆಗಳನ್ನು ವಶಕ್ಕೆ ಪಡೆಯಲಾಗುವುದು.”
-ಶರವಣ, ಮುಖ್ಯಾಧಿಕಾರಿ, ಪುರಸಭೆ.





