ಮಂಜು ಕೋಟೆ
ದಾಖಲೆ ಸೃಷ್ಟಿಸಿದ ಫಲಿತಾಂಶ; ಕ್ಷೇತ್ರ ಶಿಕ್ಷಣಾಧಿಕಾರಿ, ವಿದ್ಯಾರ್ಥಿ ವೇದಶ್ರೀ ಅವರಿಗೆ ಶಾಸಕರಿಂದ ಸನ್ಮಾನ
ಎಚ್.ಡಿ.ಕೋಟೆ: ತಾಲ್ಲೂಕಿನ ಇತಿಹಾಸದಲ್ಲಿ ಎಸ್‌ಎಸ್‌ಎಲ್‌ಸಿ ಪರೀಕ್ಷಾ ಫಲಿತಾಂಶದಲ್ಲಿ ಈ ಬಾರಿ ಜಿಲ್ಲೆಗೆ ಪ್ರಥಮ ಸ್ಥಾನ ಗಳಿಸಿ ಶೈಕ್ಷಣಿಕ ಪ್ರಗತಿಗೆ ಕಾರಣವಾಗಿದ್ದರೆ, ಸರ್ಕಾರಿ ಆದರ್ಶ ಶಾಲೆಯ ವಿದ್ಯಾರ್ಥಿ ವೇದಶ್ರೀ ತಾಲ್ಲೂಕಿಗೆ ಪ್ರಥಮ ಸ್ಥಾನ ಪಡೆದಿದ್ದಾರೆ.
ಕಳೆದ ಬಾರಿ ಎಸ್‌ಎಸ್‌ಎಲ್‌ಸಿ ಫಲಿತಾಂಶದಲ್ಲಿ ಜಿಲ್ಲೆಗೆ ತಾಲ್ಲೂಕು ಕೊನೆ ಸ್ಥಾನ ಪಡೆದಿತ್ತು. ಇದರಿಂದ ಜನಪ್ರತಿನಿಧಿಗಳು, ಅಧಿಕಾರಿಗಳು, ಶಿಕ್ಷಕರು ತಲೆತಗ್ಗಿಸುವಂತಾಗಿತ್ತು.
ಇದನ್ನು ಸವಾಲಾಗಿ ಸ್ವೀಕರಿದ ಶಾಸಕ ಅನಿಲ್ ಚಿಕ್ಕಮಾದು, ಕ್ಷೇತ್ರ ಶಿಕ್ಷಣಾಧಿಕಾರಿ ರಾಜು ಮತ್ತು ಶಾಲೆಗಳ ಮುಖ್ಯ ಶಿಕ್ಷಕರು ತೆಗೆದುಕೊಂಡ ಹೊಸ ಕಾರ್ಯಕ್ರಮಗಳು, ವಿಭಿನ್ನ ರೀತಿಯ ಯೋಜನೆಗಳು, ಕಠಿಣ ಪರಿಶ್ರಮದಿಂದ ಈ ಬಾರಿ ಜಿಲ್ಲೆಗೆ ಪ್ರಥಮ ಸ್ಥಾನ ಪಡೆದುಕೊಂಡಿರುವುದು ತಾಲ್ಲೂಕಿನ ಜನತೆಯಲ್ಲಿ ಸಂತತ ಉಂಟು ಮಾಡಿದೆ.
ಜಿಲ್ಲೆಯಲ್ಲಿ ಎಚ್.ಡಿ.ಕೋಟೆ ಕ್ಷೇತ್ರ ಮೊದಲನೇ ಸ್ಥಾನದಲ್ಲಿದ್ದರೆ ಮೈಸೂರು ಗ್ರಾಮಾಂತರ ಎರಡನೇ ಸ್ಥಾನದಲ್ಲಿದೆ. ಮೈಸೂರು ಉತ್ತರ ಮೂರನೇ ಸ್ಥಾನದಲ್ಲಿದೆ. ಮೈಸೂರು ದಕ್ಷಿಣ ೪ನೇ ಸ್ಥಾನ, ತಿ.ನರಸೀಪುರ ಐದನೇ ಸ್ಥಾನ, ನಂಜನಗೂಡು ೬ನೇ ಸ್ಥಾನ, ಪಿರಿಯಾಪಟ್ಟಣ ೭ನೇ ಸ್ಥಾನ, ಕೆ .ಆರ್.ನಗರ ೮ನೇ ಸ್ಥಾನ, ಹುಣಸೂರು ೯ನೇ ಸ್ಥಾನ ಪಡೆದುಕೊಂಡಿವೆ.
ಎಚ್.ಡಿ.ಕೋಟೆ ಕ್ಷೇತ್ರದಿಂದ ಎಸ್ ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಒಟ್ಟು ೨,೯೭೧ ವಿದ್ಯಾರ್ಥಿಗಳ ಪೈಕಿ ಬಾಲಕರು ೧,೩೬೩, ಬಾಲಕಿಯರು ೧,೫೧೩ ಉತ್ತೀರ್ಣರಾಗಿದ್ದಾರೆ. ಕೇವಲ ೯೫ ವಿದ್ಯಾರ್ಥಿಗಳು ಮಾತ್ರ ಅನುತ್ತೀರ್ಣರಾಗಿದ್ದಾರೆ. ಈ ಮೂಲಕ ತಾಲ್ಲೂಕಿಗೆ ೯೬.೮೦ರಷ್ಟು ಫಲಿತಾಂಶ ಲಭಿಸಿದೆ. ಈ ಬಾರಿ ಬಾಲಕರಿಗಿಂತ ಬಾಲಕಿಯರೇ ಮೇಲುಗೈ ಸಾಽಸಿ, ಖಾಸಗಿ ಶಾಲೆಗಳಿಗೆ ಸಡ್ಡು ಹೊಡೆದು ಪಟ್ಟಣದ ಸರ್ಕಾರಿ ಆದರ್ಶ ಶಾಲೆ ವಿದ್ಯಾರ್ಥಿಗಳು ಪ್ರಥಮ ಮತ್ತು ದ್ವಿತೀಯ ಸ್ಥಾನ ಪಡೆದುಕೊಂಡಿದ್ದಾರೆ.
ತಾಲ್ಲೂಕಿನ ಅಣ್ಣೂರು ಹೊಸಳ್ಳಿ ಗ್ರಾಮದ ಬಡ ಕುಟುಂಬದ ನಿವಾಸಿಗಳಾದ ವೆಂಕಟೇಶ್ ಮತ್ತು ಸವಿತಾ ದಂಪತಿಯ ಪುತ್ರಿ ಪಟ್ಟಣದ ಆದರ್ಶ ಸರ್ಕಾರಿ ಶಾಲೆಯ ವಿದ್ಯಾರ್ಥಿ ವೇದಶ್ರೀ ೬೨೫ಕ್ಕೆ ೬೧೮ ಅಂಕಗಳನ್ನು ಗಳಿಸಿ ತಾಲ್ಲೂಕಿಗೆ ಪ್ರಥಮ ಸ್ಥಾನ ಪಡೆದಿದ್ದಾರೆ. ಇದೇ ಶಾಲೆಯ ಪಟ್ಟಣದ ಹ್ಯಾಂಡ್ ಪೋಸ್ಟ್‌ನ ನಿವಾಸಿಗಳಾದ ವೆಂಕಟರಾಮ ಶೆಟ್ಟಿ ಮತ್ತು ಶ್ರುತಿ ದಂಪತಿಯ ಪುತ್ರಿ ವಿ.ಲಿಖಿತ ೬೧೪ ಅಂಕಗಳನ್ನು ಪಡೆದು ದ್ವಿತೀಯ ಸ್ಥಾನ ಪಡೆದುಕೊಂಡಿದ್ದಾರೆ. ಈ ಮೂಲಕ ಈ ಬಾರಿಯ ಎಸ್‌ಎಸ್‌ಎಲ್‌ಸಿ ಫಲಿತಾಂಶ ತಾಲ್ಲೂಕಿನಲ್ಲಿ ಹೊಸ ದಾಖಲೆಗಳನ್ನು ನಿರ್ಮಿಸಿದೆ.
” ಕಳೆದ ಬಾರಿಯ ಫಲಿತಾಂಶದಿಂದ ೯ನೇ ಸ್ಥಾನಕ್ಕೆ ಕುಸಿದಿದ್ದರಿಂದ ತುಂಬಾ ಬೇಸರವಾಗಿತ್ತು. ಶಾಸಕರಾದ ಅನಿಲ್ ಚಿಕ್ಕಮಾದು ಅವರ ಮಾರ್ಗದರ್ಶನದಲ್ಲಿ ನಾನೂ ಸೇರಿದಂತೆ ಶಾಲೆಯ ಮುಖ್ಯ ಶಿಕ್ಷಕರು ಮತ್ತು ಪೋಷಕರ ಹಾಗೂ ವಿದ್ಯಾರ್ಥಿಗಳ ಪರಿಶ್ರಮದಿಂದ ಉತ್ತಮ ಫಲಿತಾಂಶ ಬರಲು ಸಾಧ್ಯವಾಗಿದೆ. ಕಠಿಣ ಪರಿಶ್ರಮಪಟ್ಟರೆ ಸಾಧನೆ ಮಾಡಬಹುದು ಎಂಬುದಕ್ಕೆ ಈ ಫಲಿತಾಂಶ ಸಾಕ್ಷಿಯಾಗಿದೆ.”
-ರಾಜು, ಕ್ಷೇತ್ರ ಶಿಕ್ಷಣಾಧಿಕಾರಿ
” ಎಸ್‌ಎಸ್‌ಎಲ್‌ಸಿ ಫಲಿತಾಂಶದಲ್ಲಿ ಮೈಸೂರು ಜಿಲ್ಲೆಗೆ ಹೆಚ್.ಡಿ .ಕೋಟೆ ಕ್ಷೇತ್ರ ಪ್ರಥಮ ಸ್ಥಾನ ಗಳಿಸಿದೆ. ಇದು ಶೈಕ್ಷಣಿಕ ಪ್ರಗತಿಯ ಮುನ್ಸೂಚನೆಯಾಗಿದೆ. ಶಿಕ್ಷಣಾಧಿಕಾರಿಗಳು, ಮುಖ್ಯ ಶಿಕ್ಷಕರು, ಶಿಕ್ಷಕರು, ಪೋಷಕರ ಕಠಿಣ ಪರಿಶ್ರಮದಿಂದ ಶೈಕ್ಷಣಿಕ ಕ್ಷೇತ್ರದಲ್ಲಿ ತಾಲ್ಲೂಕು ಹೊಸ ದಾಖಲೆ ಮಾಡಿದೆ. ಕ್ಷೇತ್ರದಲ್ಲಿ ಶೈಕ್ಷಣಿಕ ಮಟ್ಟ ಕುಸಿದಿದೆ ಮತ್ತು ಅಭಿವೃದ್ಧಿ ಕೆಲಸಗಳು ನಡೆಯುತ್ತಿಲ್ಲ ಎಂದು ಸುಳ್ಳು ಆರೋಪ ಮಾಡುತ್ತಿದ್ದ ವಿರೋಧ ಪಕ್ಷದವರಿಗೆ ಈ ಫಲಿತಾಂಶ ಉತ್ತರ ನೀಡಿದೆ. ತಾಲ್ಲೂಕಿನಲ್ಲಿ ಕೋಟ್ಯಂತರ ರೂ. ಅನುದಾನದಲ್ಲಿ ನಡೆಯುತ್ತಿರುವ ಕಾಮಗಾರಿಗಳ ಕೆಲಸಗಳು ತಕ್ಕ ಉತ್ತರ ಕೊಡುತ್ತಿವೆ.”
ಅನಿಲ್ ಚಿಕ್ಕಮಾದು, ಶಾಸಕರು





