Mysore
26
clear sky

Social Media

ಗುರುವಾರ, 12 ಮಾರ್ಚ್ 2026
Light
Dark

28 ಕೇಂದ್ರಗಳಲ್ಲಿ ಎಸ್‌ಎಸ್‌ಎಲ್‌ಸಿ ಪರೀಕ್ಷೆ

ನವೀನ್ ಡಿಸೋಜ

ಕೊಡಗು ಜಿಲ್ಲೆಯಲ್ಲಿ ಅಗತ್ಯ ಸಿದ್ಧತೆ; ಪರೀಕ್ಷೆಗೆ ನೋಂದಾಯಿಸಿಕೊಂಡಿರುವ ೬,೧೮೩ ವಿದ್ಯಾರ್ಥಿಗಳು

ಮಡಿಕೇರಿ: ಮಾ.೧೮ರಿಂದ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಆರಂಭವಾಗ ಲಿದ್ದು, ಶಾಲಾ ಶಿಕ್ಷಣ ಮತ್ತು ಸಾಕ್ಷರತೆ ಇಲಾಖೆಯಿಂದ ಅಗತ್ಯ ಸಿದ್ಧತೆ ಮಾಡಿಕೊಳ್ಳಲಾಗಿದೆ. ಈ ಬಾರಿ ಜಿಲ್ಲೆಯಲ್ಲಿ ೬,೧೮೩ ವಿದ್ಯಾರ್ಥಿಗಳು ಪರೀಕ್ಷೆಗೆ ನೋಂದಾಯಿಸಿಕೊಂಡಿದ್ದಾರೆ.

ಈ ಬಾರಿ ಮಾ.೧೮ರಿಂದ ಏ.೨ರವರೆಗೆ ಎಸ್‌ಎಸ್‌ಎಲ್‌ಸಿ ಪರೀಕ್ಷೆಗಳು ನಡೆಯಲಿವೆ. ಒಟ್ಟು ೬,೧೮೩ ವಿದ್ಯಾರ್ಥಿಗಳಲ್ಲಿ ೩,೦೪೯ ಮಂದಿ ಬಾಲಕರು, ೩,೧೩೪ ಮಂದಿ ಬಾಲಕಿಯರು ಪರೀಕ್ಷೆಗೆ ನೋಂದಾಯಿಸಿಕೊಂಡಿದ್ದಾರೆ. ಹಾಗೆಯೇ ೩೯೯ ಮಂದಿ ಪುನರಾವರ್ತಿತ ವಿದ್ಯಾರ್ಥಿಗಳು ಪರೀಕ್ಷೆಗೆ ನೋಂದಾಯಿಸಿ ಕೊಂಡಿದ್ದಾರೆ. ಪರೀಕ್ಷೆಯನ್ನು ವ್ಯವಸ್ಥಿತವಾಗಿ ಯಾವುದೇ ಲೋಪ ಉಂಟಾಗದಂತೆ ನಡೆಸಲು ಕ್ರಮ ಕೈಗೊಳ್ಳಲಾಗಿದೆ.

ಜಿಲ್ಲೆಯ ೨೮ ಕೇಂದ್ರಗಳಲ್ಲಿ ಪರೀಕ್ಷೆ ನಡೆಯಲಿದ್ದು, ಮಡಿಕೇರಿ ೮, ವಿರಾಜಪೇಟೆ ೮ ಹಾಗೂ ಸೋಮವಾರಪೇಟೆ ೧೨ ಕೇಂದ್ರಗಳಲ್ಲಿ ಪರೀಕ್ಷೆ ನಡೆಯಲಿದೆ. ಪರೀಕ್ಷಾ ಕೇಂದ್ರಗಳಲ್ಲಿ ಸಿಸಿಟಿವಿ ಅಳವಡಿಕೆ, ಕುಡಿಯುವ ನೀರಿನ ಸೌಲಭ್ಯ, ಬೆಳಕಿನ ವ್ಯವಸ್ಥೆ, ಶೌಚಾಲಯ, ಶುಶ್ರೂಷಕರು, ಪೊಲೀಸರ ನಿಯೋಜನೆ ಸೇರಿದಂತೆ ವಿವಿಧ ಇಲಾಖೆಗಳ ಸಹಕಾರದಲ್ಲಿ ಅಗತ್ಯ ಕ್ರಮವಹಿಸಲಾಗಿದೆ.

೨೦೧೪ರಲ್ಲಿ ಎಸ್‌ಎಸ್‌ಎಲ್‌ಸಿ ಫಲಿತಾಂಶದಲ್ಲಿ ಕೊಡಗು ಜಿಲ್ಲೆ ೪ನೇ ಸ್ಥಾನ ಪಡೆದಿತ್ತು. ಆದರೆ, ೨೦೧೫ರಲ್ಲಿ ಒಂದು ಸ್ಥಾನ ಕುಸಿತ ಕಂಡು ೫ನೇ ಸ್ಥಾನ ಗಳಿಸಿತ್ತು. ಈ ಬಾರಿ ಕಳೆದ ಬಾರಿಗಿಂತ ಉತ್ತಮ ಸ್ಥಾನ ಗಳಿಸಲು ಸಿದ್ಧತೆ ಮಾಡಿಕೊಳ್ಳಲಾಗಿದೆ. ಶಿಕ್ಷಕರು ಮಕ್ಕಳಿಗೆ ಅಗತ್ಯ ಮಾರ್ಗದರ್ಶನ ನೀಡಿದ್ದು, ಭಯದ ವಾತಾವರಣ ಇಲ್ಲದೆ ಪರೀಕ್ಷೆ ಎದುರಿಸಲು ಮಕ್ಕಳನ್ನು ಸಿದ್ದಗೊಳಿಸಿದ್ದಾರೆ. ಪರೀಕ್ಷಾ ಕೇಂದ್ರಗಳಲ್ಲಿ ಅಗತ್ಯ ಮೂಲ ಸೌಲಭ್ಯ ದೊರೆಯುವಂತೆ ವ್ಯವಸ್ಥೆ ಕಲ್ಪಿಸಲಾಗುತ್ತಿದೆ. ಅಗತ್ಯ ಪೀಠೋಪಕರಣ, ಇಂಟರ್‌ನೆಟ್ ಸಂಪರ್ಕ ಸಹಿತ ಸಿಸಿಟಿವಿ, ಶೌಚಾಲಯ, ಶುದ್ಧ ಕುಡಿಯುವ ನೀರು, ಪರೀಕ್ಷಾ ಕೊಠಡಿಯಲ್ಲಿ ಗಾಳಿ ಬೆಳಕಿನ ವ್ಯವಸ್ಥೆ, ವಿಶೇಷ ಅಗತ್ಯತೆವುಳ್ಳ ಮಕ್ಕಳಿಗೆ ಸೌಲಭ್ಯ ಹೀಗೆ ಹಲವು ಮೂಲ ಸೌಕರ್ಯಗಳನ್ನು ಒದಗಿಸಲು ಅಗತ್ಯ ಕ್ರಮ ಕೈಗೊಳ್ಳಲಾಗಿದೆ.

ಪರೀಕ್ಷಾ ಕೇಂದ್ರದ ಮುಖ್ಯ ಅಧಿಕ್ಷಕರು, ಉಪ ಮುಖ್ಯ ಅಧಿಕ್ಷಕರು, ಕಸ್ಟೋಡಿಯನ್, ಸಾರಿಗೆ ಜಾಗೃತ ದಳ, ಮಾರ್ಗಾಧಿಕಾರಿಗಳು, ಕೊಠಡಿ ಮೇಲ್ವಿಚಾರಕರನ್ನು ನಿಯೋಜಿಸಲಾಗಿದೆ. ಈಗಾಗಲೇ ಜಿಲ್ಲಾಧಿಕಾರಿ ಅಧ್ಯಕ್ಷತೆಯಲ್ಲಿ ವಿವಿಧ ಇಲಾಖೆಗಳ ಅಧಿಕಾರಿಗಳ ಸಭೆ ನಡೆಸಲಾಗಿದೆ. ವಿವಿಧ ಇಲಾಖೆಗಳ ಸಹಕಾರದೊಂದಿಗೆ ಯಾವುದೇ ಲೋಪದೋಷ ಉಂಟಾಗದಂತೆ ಪರೀಕ್ಷೆ ನಡೆಸಲು ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ.

” ಪರೀಕ್ಷೆಯ ಮೌಲ್ಯ ಉಳಿಸಿಕೊಳ್ಳಬೇಕು. ಶಿಕ್ಷಕರೇ ಮಕ್ಕಳ ಬೇಸ್‌ಮೆಂಟ್ ಆಗಿದ್ದಾರೆ. ಆ ನಿಟ್ಟಿನಲ್ಲಿ ಮಕ್ಕಳ ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡಬೇಕು. ಕಳೆದ ಬಾರಿಯಂತೆ ಈ ಬಾರಿಯೂ ಎಸ್‌ಎಸ್‌ಎಲ್‌ಸಿ ಪರೀಕ್ಷೆಯನ್ನು ಅಚ್ಚುಕಟ್ಟಾಗಿ ನಡೆಸಬೇಕು. ಯಾವುದೇ ರೀತಿ ಲೋಪ ಉಂಟಾಗದಂತೆ ಎಚ್ಚರವಹಿಸಬೇಕು. ಆ ನಿಟ್ಟಿನಲ್ಲಿ ಶಿಕ್ಷಣ ಇಲಾಖೆ ಅಧಿಕಾರಿಗಳು ಮತ್ತು ಸಿಬ್ಬಂದಿಗಳ ಕರ್ತವ್ಯ ಮತ್ತು ಜವಾಬ್ದಾರಿ ಹೆಚ್ಚಿನದ್ದಾಗಿದೆ.”

-ಎಸ್.ಜೆ.ಸೋಮಶೇಖರ್, ಕೊಡಗು ಜಿಲ್ಲಾಧಿಕಾರಿ

” ಈ ಬಾರಿ ಮಾ.೧೮ರಿಂದ ಏ.೨ರವರೆಗೆ ಎಸ್‌ಎಸ್‌ಎಲ್‌ಸಿ ಪರೀಕ್ಷೆ ನಡೆಯಲಿದ್ದು, ಜಿಲ್ಲೆಯಲ್ಲಿ ೬,೧೮೩ ವಿದ್ಯಾರ್ಥಿಗಳು ಪರೀಕ್ಷೆಗೆ ನೋಂದಾಯಿಸಿಕೊಂಡಿದ್ದಾರೆ. ಜಿಲ್ಲೆಯ ೨೮ ಕೇಂದ್ರಗಳಲ್ಲಿ ಪರೀಕ್ಷೆ ನಡೆಯಲಿದೆ. ಪರೀಕ್ಷಾ ಕೇಂದ್ರಗಳಲ್ಲಿ ಸಿಸಿಟಿವಿ ಅಳವಡಿಕೆ, ಕುಡಿಯುವ ನೀರಿನ ಸೌಲಭ್ಯ, ಬೆಳಕಿನ ವ್ಯವಸ್ಥೆ, ಶೌಚಾಲಯ ಸೇರಿದಂತೆ ವಿವಿಧ ಇಲಾಖೆಗಳ ಸಹಕಾರದಲ್ಲಿ ಅಗತ್ಯ ಕ್ರಮವಹಿಸಲಾಗಿದೆ.”

-ಬಸವರಾಜು, ಉಪನಿರ್ದೇಶಕರು, ಶಾಲಾ ಶಿಕ್ಷಣ ಇಲಾಖೆ 

” ಪರೀಕ್ಷಾ ಕೇಂದ್ರಗಳಲ್ಲಿ ಅಗತ್ಯ ಮೂಲ ಸೌಲಭ್ಯಗಳನ್ನು ಕಲ್ಪಿಸಲಾಗಿದೆ. ಅಗತ್ಯ ಪೀಠೋಪಕರಣ ವ್ಯವಸ್ಥೆ ಮಾಡಲಾಗಿದೆ. ಇಂಟರ್‌ನೆಟ್ ಸಂಪರ್ಕ ಸಹಿತ ಸಿಸಿಟಿವಿ, ಶೌಚಾಲಯ, ಪರೀಕ್ಷಾ ಕೊಠಡಿಯಲ್ಲಿ ಗಾಳಿ ಬೆಳಕಿನ ವ್ಯವಸ್ಥೆ, ವಿಶೇಷ ಅಗತ್ಯತೆವುಳ್ಳ ಮಕ್ಕಳಿಗೆ ಸೌಲಭ್ಯ ಹೀಗೆ ಹಲವು ಮೂಲ ಸೌಕರ್ಯ ಒದಗಿಸಲಾಗಿದೆ. ಪರೀಕ್ಷಾ ಕೇಂದ್ರಗಳಿಗೆ ಮೇಲ್ವಿಚಾರಕರನ್ನು ನಿಯೋಜಿಸಲಾಗಿದೆ.”

-ಬಿಂದು, ಜಿಲ್ಲಾ ನೋಡಲ್ ಅಧಿಕಾರಿ

 

 

Tags:
error: Content is protected !!