Mysore
21
overcast clouds
Light
Dark

ಗ್ರಾಮೀಣ ದಾರಿ ಅಪಘಾತಕ್ಕೆ ರಹದಾರಿ; ಬೇಕು ಹಂಪ್‌ಗಳು, ಬ್ಯಾರಿಕೇಡ್‌ಗಳು

ಮೈಸೂರು: ಮೈಸೂರು – ತಿ.ನರಸೀಪುರ ಮುಖ್ಯ ರಸ್ತೆಯಲ್ಲಿ ಇರುವ ಮೊಸಂಬಾಯನಹಳ್ಳಿಗೆ ತೆರಳುವವರು ತಿರುವು ತೆಗೆದುಕೊಳ್ಳುವಾಗ ಅಪಘಾತ ಸಂಭವಿಸುವ ಸಾಧ್ಯತೆಗಳು ಇವೆ. ಏಕೆಂದರೆ ಸ್ಥಳದಲ್ಲಿ ವಾಹನಗಳ ವೇಗಕ್ಕೆ ಕಡಿವಾಣ ಹಾಕುವುದಕ್ಕೆ ಯಾವುದೇ ಹಂಪ್‌ಗಳು ಅಥವಾ ಬ್ಯಾರಿಕೇಡ್‌ಗಳು ಇಲ್ಲ. ಹಾಗಾಗಿ ಇಲ್ಲಿ ಅಪಘಾತಗಳು ಸಂಭವಿಸಿವೆ. ಮೊಸಂಬಾಯನಹಳ್ಳಿಯ ಗ್ರಾಮಸ್ಥರ ಪೈಕಿ ಬಹುತೇಕ ಮಂದಿ ಪ್ರತಿದಿನ ಕೆಲಸ ಕಾರ್ಯಗಳ ನಿಮಿತ್ತ ದ್ವಿಚಕ್ರ ವಾಹನಗಳಲ್ಲಿ ಮೈಸೂರಿಗೆ ಬಂದು ಹೋಗುತ್ತಾರೆ.

ಅಲ್ಲದೆ, ಈ ಗ್ರಾಮದ ಮಾರ್ಗವಾಗಿ ಕಿರಾಳು, ಆಯರಹಳ್ಳಿ, ಹದಿನಾರು, ಸುತ್ತೂರು ಮುಂತಾದ ಗ್ರಾಮಗಳ ಕಡೆಯಿಂದ ಪ್ರತಿದಿನ ವಿವಿಧ ಕೆಲಸ ಕಾರ್ಯಗಳ ನಿಮಿತ್ತ ಜನ ಸಾಗಣೆ, ಸರಕು ಸಾಗಣೆಯ ನಾನಾ ರೀತಿಯ ವಾಹನಗಳು ಈ ರಸ್ತೆಯಲ್ಲಿ ಸಂಚರಿಸುತ್ತವೆ. ಇಲ್ಲಿ ಸಂಭವಿಸಿದ ಕೆಲ ಅಪಘಾತಗಳಲ್ಲಿ ಪ್ರಾಣಾಪಾಯ ಕೂಡ ಆಗಿವೆ ಎನ್ನಲಾಗಿದೆ. ಮೊಸಂಬಾಯನಹಳ್ಳಿ ರಸ್ತೆಯ ಕಡೆಯಿಂದ ಮೈಸೂರಿನತ್ತ ಸಂಚರಿಸುವ ವಾಹನಗಳು ಈ ಮುಖ್ಯ ರಸ್ತೆಯ ಮುಖಾಂತರವೇ ಹಾದುಹೋಗಬೇಕಿದೆ. ಈ ರಸ್ತೆಯಲ್ಲಿ ಯಾವುದೇ ಹಂಪ್‌ಗಳು ಅಥವಾ ಬ್ಯಾರಿಕೇಡ್ ಗಳು ಇಲ್ಲದಿರುವ ಕಾರಣ ಅಪಘಾತಗಳು ನಿರಂತರವಾಗಿ ನಡೆಯುತ್ತಿವೆ ಎಂಬುದು ಮೊಸಂಬಾಯಹಳ್ಳಿ ಗ್ರಾಮಸ್ಥರ ಆರೋಪವಾಗಿದೆ.

ಇನ್ನಷ್ಟು ಅಪಘಾತಗಳು ಸಂಭವಿಸುವ ಮುನ್ನವೇ ಸಂಬಂಧಪಟ್ಟ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳು ಮೈಸೂರು- ತಿ.ನರಸೀಪುರ ರಸ್ತೆಯಿಂದ ಮೊಸಂಬಾಯನಹಳ್ಳಿ ಕಡೆಗೆ ತಿರುವಿಗೆ ಮುಂಚೆಯೇ ಅನತಿ ದೂರದಲ್ಲಿ ಎರಡೂ ಕಡೆ ರಸ್ತೆ ಹಂಪ್‌ ಗಳನ್ನು ನಿರ್ಮಿಸಲು ಅಥವಾ ಬ್ಯಾರಿಕೇಡ್‌ಗಳನ್ನು ಅಳವಡಿಸಲು ಕ್ರಮಕೈಗೊಳ್ಳಬೇಕು ಎಂದು ಅವರು ಆಗ್ರಹಿಸಿದ್ದಾರೆ.

ಮನವಿ ಸಲ್ಲಿಸಿದ್ದರೂ ಕ್ರಮ ಕೈಗೊಂಡಿಲ್ಲ

ಮೈಸೂರು – ತಿ.ನರಸೀಪುರ ಮುಖ್ಯ ರಸ್ತೆಯಿಂದ ಮೊಸಂಬಾಯನಹಳ್ಳಿಯ ರಸ್ತೆಯ ಕಡೆಗೆ ತಿರುಗುವ ಜಾಗದಲ್ಲಿ ಹಂಪ್‌ಗಳು, ಬ್ಯಾರಿಕೇಡ್‌ಗಳನ್ನು ಅಳವಡಿಸಲು ಕ್ರಮಕೈಗೊಳ್ಳುವಂತೆ ಸುಮಾರು 15 ದಿನಗಳ ಹಿಂದೆಯೇ ಮೊಸಂಬಾಯನಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಚೋರನಹಳ್ಳಿ ಗ್ರಾಮದ ಈಶ್ವ‌ರ್ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯಶಿಕ್ಷಕರು ಹಾಗೂ ಗ್ರಾಮಸ್ಥರು ವರುಣ ಪೊಲೀಸ್ ಠಾಣೆಗೆ ಮನವಿ ಸಲ್ಲಿಸಿದ್ದಾರೆ. ಆದರೆ ಯಾವುದೇ ಪ್ರಯೋಜನ ಆಗಿಲ್ಲ ಎಂದು ದೈಹಿಕ ಶಿಕ್ಷಣ ಶಿಕ್ಷಕ ಬಿ.ಗುರುಪಾದಸ್ವಾಮಿ ದೂರಿದ್ದಾರೆ.

ಅಪಘಾತದಲ್ಲಿ ಎದೆಯ ಭಾಗಕ್ಕೆ ಪೆಟ್ಟು

2022ರ ನವೆಂಬರ್‌ 1ರಂದು ಮೈಸೂರು- ನರಸೀಪುರ ಮುಖ್ಯ ರಸ್ತೆಯಿಂದ ಮೊಸಂಬಾಯನಹಳ್ಳಿಯ ರಸ್ತೆಯ ಕಡೆಗೆ ತಿರುಗುವಾಗ ತಿ.ನರಸೀಪುರದಿಂದ ಬರುತ್ತಿದ್ದ ನಾಲ್ಕು ಚಕ್ರದ ವಾಹನವೊಂದು ಡಿಕ್ಕಿ ಹೊಡೆದು ಎದೆಯ ಭಾಗಕ್ಕೆ ಪೆಟ್ಟಾಗಿ, ಖಾಸಗಿ ಆಸ್ಪತ್ರೆಗೆ ದಾಖಲಾಗಿ 8 ದಿನಗಳು ಚಿಕಿತ್ಸೆ ಪಡೆದು ಗುಣಮುಖನಾಗಿದ್ದೇನೆ. ಈ ತರಹ ಅಪಘಾತಗಳು ಇಲ್ಲಿ ನಿರಂತವಾಗಿ ನಡೆಯುತ್ತಿವೆ.
ಮಹದೇವಸ್ವಾಮಿ, ಶಿಕ್ಷಕರು, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಮಾರಶೆಟ್ಟಿಹಳ್ಳಿ

 

ಸೂಚನಾ ಫಲಕ ಅಳವಡಿಸಿ

ಈ ರಸ್ತೆಯಲ್ಲಿ ಅನೇಕ ಅಪಘಾತಗಳು ಸಂಭವಿಸಿವೆ. ಅನೇಕರು ಅಪಘಾತವಾದ ಸ್ಥಳದಲ್ಲಿಯೇ ಪ್ರಾಣ ಕಳೆದುಕೊಂಡಿದ್ದಾರೆ. ದ್ವಿಚಕ್ರ ವಾಹನ ಹಾಗೂ ಇತರೆ ವಾಹನ ಸವಾರರು ಮಿತಿ ಮೀರಿದ ವೇಗದಲ್ಲಿ ಸಂಚರಿಸುತ್ತಾರೆ. ಆದ್ದರಿಂದ ಸೂಚನಾ ಫಲಕ ಅಳವಡಿಸಿ ಅಪಘಾತಗಳಾಗದಂತೆ ಸುಗಮ ಸಂಚಾರಕ್ಕಾಗಿ ಸೂಕ್ತ ಕ್ರಮ ಕೈಗೊಳ್ಳಬೇಕು.
– ಬಿ.ಗುರುಪಾದಸ್ವಾಮಿ, ದೈಹಿಕ ಶಿಕ್ಷಣ ಶಿಕ್ಷಕ, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಮೊಸಂಬಾಯನಹಳ್ಳಿ.

ಜೀವ ಕೈಯಲ್ಲಿ ಹಿಡಿದು ರಸ್ತೆ ದಾಟಬೇಕು
ಎಲ್ಲಾ ವಾಹನ ಸವಾರರು ಈ ರಸ್ತೆಯಲ್ಲಿ ತುಂಬಾ ವೇಗವಾಗಿ ವಾಹನ ಚಾಲನೆ ಮಾಡುವುದರಿಂದ ಸಣ್ಣ-ಪುಟ್ಟ ಮಕ್ಕಳು, ಶಾಲಾ ಕಾಲೇಜಿನ ವಿದ್ಯಾರ್ಥಿಗಳು, ಹಿರಿಯ ನಾಗರಿಕರು ಪ್ರಾಣ ಕೈಯಲ್ಲಿ ಹಿಡಿದುಕೊಂಡು ರಸ್ತೆ ದಾಟಬೇಕಾದ ಪರಿಸ್ಥಿತಿ ಇದೆ.
– ಸಿದ್ದಪ್ಪ, ಸ್ಥಳೀಯ ನಿವಾಸಿ.