Mysore
21
few clouds

Social Media

ಮಂಗಳವಾರ, 27 ಜನವರಿ 2026
Light
Dark

ಹೂವಿನ ಭಾಗ್ಯಮ್ಮ ಮತ್ತು ಹಿರಳೇಕಾಯಿಯ ಮಾದೇವಮ್ಮ

• ಮನಸ್ವಿನಿ

ಮೈಸೂರಿನ ಚಿಕ್ಕ ಗಡಿಯಾರದ ಬಳಿ ಸಂಜೆ ಹೊತ್ತಿ ನಲ್ಲಿ ತರಕಾರಿ ಕೊಳ್ಳುವ ಸಲುವಾಗಿ ಹೋಗಿದ್ದೆ. ತರಕಾರಿ ಮಾರುವವರ ತಂತ್ರವನ್ನು ಕಂಡು ಎಷ್ಟೋ ಸಲ ಬೆರಗಾಗಿದ್ದಿದೆ. ತಲೆಯಾಡಿಸುತ್ತಾ, ಹೇಳಿದಷ್ಟು ದುಡ್ಡನ್ನು ಕೊಟ್ಟು ಬಂದವರ ತಲೆಯ ಮೇಲೆ ಟೋಪಿ ಬಿತ್ತೆಂದೇ ಲೆಕ್ಕ. ಮಾತಿಗೆಂದು ನಿಂತು, ವ್ಯವಹಾರ ಗೊತ್ತಿದೆಯೆಂದು ತೋರಿಸಿದವರು ಮಾತ್ರ ಗೆದ್ದರೆಂದೇ ಅರ್ಥ ತರಕಾರಿಗಳನ್ನೆಲ್ಲ ಟಾರ್ಪಲ್ ಮೇಲೆ ಹಾಕಿಕೊಂಡಿದ್ದ ಒಬ್ಬರೆದುರು ಈ ತರಕಾರಿ ಕೆಜಿಗೆಷ್ಟು ಎಂದು ಕೇಳಬಹುದು. ಆದರೆ, ಪಕ್ಕದಲ್ಲಿದ್ದವರ ಹತ್ತಿರವೂ ಅದೇ ತರಕಾರಿ ಇದ್ದು, ದುಡ್ಡೆಷ್ಟು ಅಂತ ನಾನು ಕೇಳಿ, ಅಪ್ಪಿತಪ್ಪಿ ಅವರೆಲ್ಲಾದರೂ ಬೆಲೆ ಹೇಳಿದರೆ ರವಿಚಂದ್ರನ್ ಸಿನೆಮಾದ ಥರ ‘ಎಲ್ಲಾ ಪೀಸ್ ಪೀಸ್’ ಆದಂತೆಯೇ ಸರಿ.

ಹಾಗೇ ಕಣ್ಣಿಗೆ ಕಂಡಿದ್ದು, ಹೆಂಗಸರ ಗುಂಪು, ಕೆಲ ದಿನಗಳಿಂದ ಹಿರಳೇಕಾಯಿಗಾಗಿ ಹುಡುಕಾಡುತ್ತಿದ್ದೆ. ಹೆಂಗಸೊಬ್ಬರು ಮಾರುತ್ತಿದ್ದರು. ಸರಿ, ಒಂದಕ್ಕೆಷ್ಟು ಎಂದೆ. ಮೂವತ್ತಕ್ಕೆರಡು ಎಂದರು. ಆಶ್ಚರ್ಯದಿಂದ ನಾನು ಮೂವತ್ತಾ!’ ಎಂದೆ. ಅದಕ್ಕಿವರು ‘ಹೂಂ, ಹೇಗೆ ತರ್ತೀವಿ ಗೊತ್ತಾ?’ ಎಂಬ ಮರು ಪ್ರಶ್ನೆವಿತ್ತರು. ಹೇಗೆ ಎನ್ನುತ್ತಾ ಕತೆ ಕೇಳಲು ಶುರುವಿಟ್ಟೆ.

ಉದ್ದೂರು ಹತ್ತಿರದ ಟೀಕಾಟುವಿನಲ್ಲಿ ಮಾದೇವಿ ಅವರ ಮನೆ. ಚಿಕ್ಕವಯಸ್ಸಿನಲ್ಲಿ ಮದುವೆಯಾಯಿತು. ಆದರೆ, ಸ್ವಾಭಿಮಾನದಿಂದ ಬದುಕುವ ಈ ಛಲ ಗಾರ್ತಿ ಮನೆಯನ್ನು ನಿಭಾಯಿಸ ಬೇಕೆಂದು ಹೊಲದ ಮನೆ ಕೆಲಸಕ್ಕೆ ಹೋದರು. ಕಳೆ ಕೀಳುತ್ತಾ, ಬಂದ ಆದಾಯದಿಂದ ಬದುಕು ಕಟ್ಟಿಕೊಂಡರು. ಮಗಳ ಮದುವೆಯ ಜವಾಬ್ದಾರಿಯನ್ನು ಪೂರೈಸಿ ದರು. ತರಕಾರಿ ಮಾರುವ ಕೆಲಸವಿಡಿದು ನಾಲ್ಕು ವರ್ಷಗಳಾಯಿತು.

ಮಧ್ಯಾಹ್ನ ಹನ್ನೆರಡಕ್ಕೆ ಮನೆಯಿಂದ ಹೊರಟು, ಎರಡು ಗಂಟೆಯ ಹೊತ್ತಿಗೆ ಇಲ್ಲಿಗೆ ಸೇರುತ್ತಾರೆ. ‘ನಮಗೇನೂ ಟಿಕೆಟ್ ಇಲ್ಲ. ಹಾಕಿಕೊಂಡು ಬಂದ ಸಾಮಾನಿಗೆ ಒಂದು ಆಳಿನ ಲೆಕ್ಕ ಟಿಕೇಟ್ ತೆಗೀತಾರೆ’ ಎನ್ನುವ ಸಂಕಟ ಬೇರೆ. ಒಂದು ವೇಳೆ ಇಪ್ಪತ್ತು ರೂಪಾಯಿ ಉಳಿಸಿದರೆಂದು ಇಟ್ಟುಕೊಳ್ಳಿ, ಅಕಸ್ಮಾತಾಗಿ ಚೆಕ್ಕಿಂಗ್ ಆಫೀಸರ್‌ ಬಂದರೆ ವಸೂಲಿ ಯಾಗುತ್ತಿದ್ದದ್ದು, ಬರೋಬ್ಬರಿ ಇನ್ನೂರು ರೂಪಾಯಿ! ಲಾಭದ ಆಸೆ ಆವತ್ತು ಕೈಬಿಟ್ಟಂತೆಯೇ.

ಮಧ್ಯಾಹ್ನದ ಊಟ ಮುಗಿಸಿ ಹೊರಟರೆ ಮತ್ತೆ ಮನೆಗೆ ಬರುವ ತನಕ ಹೊಟ್ಟೆಗೇನೂ ಇಲ್ಲ. ‘ಏನೂ ಬೇಕೆನಿಸಲ್ಲ ಕಣವ್ವಾ’ ಎಂದು ಸುಮ್ಮನೆ ನಗು ತ್ತಾರೆ. ಊರಿನ ಕತೆ ಹೇಳುವಷ್ಟರಲ್ಲಿ ಗಿರಾಕಿಯೊಬ್ಬರು ಬದನೆ ಕಾಯಿ ಎಷ್ಟು? ಎಂದು ಕೇಳಿದರು. ಮಾದೇವಮ್ಮ “ಪಾಲಿಗಿಪ್ಪತ್ತು ಎನ್ನುತ್ತಿದ್ದಾಗ, ಪಕ್ಕದಲ್ಲಿ ಹೂ ಮಾರುತ್ತಿದ್ದಾಕೆಯಲ್ಲಿ, ‘ಮ್ಯೋ, ಇವತ್ ಯಾಪಾರ ಆದಂಗೆಯಾ’ ಎಂದು ಸಿಡಿಮಿಡಿಯನ್ನು ತಮ್ಮ ಮಾತಿನಲ್ಲೇ ಕಾಣಿಸಿದರು. ಭಾಗ್ಯಮ್ಮ ಈ ಮಾದೇವಮ್ಮನಿಗೆ ಪ್ರೀತಿಯಿಂದ ಇಟ್ಟ ಅಡ್ಡ ಹೆಸರೇ, ‘ಮೋ’.

ತಮ್ಮ ಕುಟುಂಬ ಪುರಾಣಗಳನ್ನು ಹೇಳಬೇಕೆಂದಿದ್ದ ಮಾತೆಲ್ಲವೂ ಮಾದೇವಮ್ಮನ ಬಾಯಿಯ ತುದಿಯಲ್ಲೇ ಉಳಿದು ಹೋಯಿತು. ಮತ್ತೆ ಇವರನ್ನು ಒತ್ತಾಯಿಸದೆ, ಬೈದವರ ಮನವೊಲಿಸಲು ಹೋದೆ. ಹಿಂದುಗಡೆಯಲ್ಲಿ ಕೂತು, ನಿಮ್ಮ ಊರಲ್ಲಿ, ಎಷ್ಟೊತ್ತಿಗೆ ಬರ್ತೀರಿ… ಹೀಗೆ ಮಾತು ಬೆಳೆಯುತ್ತಲೇ ಹೋಯಿತು. ಹತ್ತಿರ ಬಂದ ತಕ್ಷಣವೇ ಅದೇನು ಖುಷಿ, ಮಾತು ಮುಗಿಯುವ ತನಕವೂ ಚಂದದ ನಗುವಿತ್ತು! ಚೆಂಡು ಹೂ, ಕಾಕಡ, ಮಲ್ಲಿಗೆ ಹೂ ಮಾರುವ ಭಾಗ್ಯಮ್ಮನದು ಹೂವಿನಂಥ ಮೃದು ಮನಸ್ಸು. ಜೀವದ ಮಗಳೀಗ ಬೆಂಗಳೂರಿನಲ್ಲಿ ಕೆಲಸಕ್ಕೆ ಸೇರಿದ್ದಾಳೆ. ಮಗಳ ತಿಂಗಳ ಸಂಬಳ ಆಕೆಯ ಖರ್ಚಿಗೆ ಸಾಲುತ್ತದೆ. ಇವರ ಹೊಟ್ಟೆಯ ಹಸಿವನ್ನು ತಣಿಸುವುದಕ್ಕೆ ಹೂಗಳೇ ಬೇಕು. ಹೂ ಮಾರುವ ಕೆಲಸದಲ್ಲಿ ಹತ್ತು ವರ್ಷಗಳ ಅನುಭವವಿರುವ ಭಾಗ್ಯಮ್ಮನಿಗೆ ತಾಪತ್ರಯ ಶುರುವಾಗಿದ್ದು, ಬೆಲೆ ಏರಿಕೆ ಯಿಂದ ಬಂದ ಗಿರಾಕಿಗಳು ದುಡ್ಡು ಕೇಳುತ್ತಿದ್ದಂತೆ ಮುಂದೆ ಹೋಗುತ್ತಾರೆ. ಏನಾದರೂ, ದೇವರು ಇರುವ ತನಕ ಹಿಟ್ಟಾಗುತ್ತದೆಂಬ ನಂಬಿಕೆಯಲ್ಲೇ ಇದ್ದಾರೆ. ಮಧ್ಯಾಹ್ನದ ಉರಿಬಿಸಿಲಿರಲಿ, ಗಾಳಿ, ಮಳೆಯಿರಲಿ ಜಗ್ಗದ ಗಟ್ಟಿಗಿತ್ತಿ ಯರ ಬಳಗವೇ ಅಲ್ಲಿದೆ. ಒಂಭತ್ತು ಗಂಟೆಯವರೆಗೆ ಕತೆಯಾಡುತ್ತಾ, ನಗುತ್ತಾ, ಅರ್ಧಗಂಟೆಗೊಮ್ಮೆ ಜಗಳ ವಾಡುತ್ತಾ ಬದುಕು ಕಟ್ಟಿಕೊಳ್ಳುತ್ತಿದ್ದಾರೆ.

Tags:
error: Content is protected !!