Mysore
20
overcast clouds

Social Media

ಮಂಗಳವಾರ, 01 ಸೆಪ್ಟೆಂಬರ್ 2026
Light
Dark

ಅಪ್ಪಂದಿರ ಬದಲು ತಾವೇ ನಾಯಕತ್ವ ಹೊರಲು ಸಜ್ಜಾದ ಪುತ್ರರು

ಕೆ.ಬಿ.ರಮೇಶನಾಯಕ

ಈಗಾಗಲೇ ಜವಾಬ್ದಾರಿ ಹೊತ್ತಿರುವ ಡಾ.ಯತೀಂದ್ರ, ಸುನಿಲ್‌ಬೋಸ್, ಜಿ.ಡಿ.ಹರೀಶ್ ಗೌಡ

ತಂದೆಯಂದಿರ ನಿಧನದಿಂದ ತೆರವಾದ ಸ್ಥಾನ ತುಂಬಿದ ಅನಿಲ್ ಚಿಕ್ಕಮಾದು, ದರ್ಶನ್

ಮೈಸೂರು: ರಾಜ್ಯ ಸೇರಿದಂತೆ ದೇಶದ ಅನೇಕ ಕಡೆಗಳಲ್ಲಿ ವಂಶಪಾರಂಪರ್ಯ ರಾಜಕಾರಣ ನಿರಂತರವಾಗಿ ಮುಂದುವರಿದಿದ್ದು, ಮೈಸೂರು ಜಿಲ್ಲೆಯಲ್ಲೂ ಅಪ್ಪಂದಿರ ಬದಲಿಗೆ ಮುಂದಿನ ದಿನಗಳಲ್ಲಿ ತಂತಮ್ಮ ಸಮುದಾಯ ಹಾಗೂ ಕ್ಷೇತ್ರದ ನಾಯಕತ್ವ ಹೊರಲು ಅವರ ಮಕ್ಕಳು ಸಜ್ಜಾಗಿದ್ದಾರೆ.

೨೦೨೮ರ ಸಾರ್ವತ್ರಿಕ ಚುನಾವಣೆಯಲ್ಲಿ ಹಿರಿಯ ನಾಯಕರು ಸ್ಪರ್ಧೆಯಿಂದ ದೂರ ಉಳಿದು ತಮ್ಮ ಕುಟುಂಬದವರಿಗೆ ಅವಕಾಶ ಮಾಡಿಕೊಡುವ ಮೂಲಕ ರಾಜಕೀಯವಾಗಿ ನೆಲೆಕಾಣುವಂತೆ ಮಾಡುತ್ತಿರುವುದರಿಂದ ಕೆಲವು ಕ್ಷೇತ್ರಗಳಲ್ಲಿ ಹೊಸ ಮುಖಗಳು, ಅನ್ಯ ನಾಯಕತ್ವಕ್ಕೆ ಚಾನ್ಸ್ ಸಿಗುವುದು ಅನುಮಾನವಾಗಿದೆ.

ಈಗಾಗಲೇ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಚುನಾವಣಾ ರಾಜಕೀಯದಿಂದ ದೂರ ಉಳಿಯುವುದಾಗಿ ಘೋಷಣೆ ಮಾಡಿದ್ದರೆ, ಪಿರಿಯಾಪಟ್ಟಣ ಕ್ಷೇತ್ರದ ಶಾಸಕ ಕೆ.ವೆಂಕಟೇಶ್ ಕೂಡ ಅದೇ ಹಾದಿ ಹಿಡಿಯಲು ಮಾನಸಿಕವಾಗಿ ಸಜ್ಜಾಗಿದ್ದಾರೆ. ರಾಜ್ಯ ರಾಜಕಾರಣದಲ್ಲಿ ಹಳೆಯ ಮೈಸೂರು ಪ್ರಾಂತ್ಯ ಮೊದಲಿನಿಂದಲೂ ತಮ್ಮದೇ ಆದ ಪ್ರಭಾವ ಬೀರುವ ಜತೆಗೆ, ಹೊಸ ಹೊಸ ನಾಯಕತ್ವ ಹುಟ್ಟಿಕೊಂಡು ಸಮುದಾಯದ ಜತೆಗೆ, ಮೂರು ಪಕ್ಷಗಳಲ್ಲಿರುವ ನಾಯಕರು ತಮ್ಮದೇ ಆದ ಹಿಡಿತ ಸಾಧಿಸಿಕೊಂಡು ಬಂದಿದ್ದಾರೆ.

ಅದರಲ್ಲಿ ಕಳೆದ ಮೂರು ದಶಕಗಳಿಂದ ಸಿದ್ದರಾಮಯ್ಯ, ಮಾಜಿ ಸಚಿವರಾದ ಡಾ.ಎಚ್.ಸಿ. ಮಹದೇವಪ್ಪ, ಜಿ.ಟಿ.ದೇವೇಗೌಡ, ತನ್ವೀರ್ ಸೇಠ್ ಮುಂಚೂಣಿಯಲ್ಲಿ ಕಾಣಿಸಿಕೊಂಡಿದ್ದಾರೆ. ೨೦೧೮ರ ವಿಧಾನಸಭಾ ಚುನಾವಣೆಯಲ್ಲಿ ಸಿದ್ದರಾಮಯ್ಯ ಅವರು ವರುಣ ಕ್ಷೇತ್ರವನ್ನು ಪುತ್ರ ಡಾ.ಯತೀಂದ್ರರಿಗೆ ಬಿಟ್ಟುಕೊಟ್ಟು ವಿಧಾನಸಭೆ ಪ್ರವೇಶ ಮಾಡುವಂತೆ ನೋಡಿಕೊಂಡರಲ್ಲದೆ, ಈಗ ಪರಿಷತ್ ಸದಸ್ಯರನ್ನಾಗಿ ಮಾಡಿ ಸಚಿವ ಸ್ಥಾನದಲ್ಲಿ ಕೂರಿಸಿದ್ದಾರೆ.

ಇನ್ನು ಎಚ್.ಸಿ.ಮಹದೇವಪ್ಪ ಅವರು ತಮ್ಮ ಪುತ್ರ ಸುನಿಲ್ ಬೋಸ್ ಅವರಿಗೆ ೨೦೧೬ರ ನಂಜನಗೂಡು ಕ್ಷೇತ್ರದ ಉಪ ಚುನಾವಣೆ, ೨೦೧೮ ಹಾಗೂ ೨೦೨೩ರ ಚುನಾವಣೆಯಲ್ಲಿ ಸ್ಪರ್ಧಿಸಲು ಅವಕಾಶ ಕೊಡಿಸಲು ಸಾಧ್ಯವಾಗಿರಲಿಲ್ಲ. ಆದರೆ, ೨೦೨೪ರ ಲೋಕಸಭಾ ಚುನಾವಣೆಯಲ್ಲಿ ಟಿಕೆಟ್ ಕೊಡಿಸಿ ಸಂಸತ್ ಪ್ರವೇಶಿಸುವಂತೆ ನೋಡಿಕೊಳ್ಳುವಲ್ಲಿ ಸಫಲವಾದರು.

ಅವರು ೨೦೨೮ರ ವಿಧಾನಸಭಾ ಚುನಾವಣೆ ಸ್ಪರ್ಧೆಯಿಂದ ಒಂದು ವೇಳೆ ಹಿಂದೆ ಸರಿದರೆ, ಸುನಿಲ್ ಬೋಸ್ರನ್ನೇ ಅಖಾಡಕ್ಕೆ ಇಳಿಸುವ ಸಾಧ್ಯತೆ ಇದೆ. ಎಚ್.ಡಿ.ಕೋಟೆ ಕ್ಷೇತ್ರದ ಶಾಸಕರಾಗಿದ್ದ ಎಸ್. ಚಿಕ್ಕಮಾದು ಅವರ ಅಕಾಲಿಕ ನಿಧನದಿಂದಾಗಿ ಪುತ್ರ ಸಿ.ಅನಿಲ್ ಚಿಕ್ಕಮಾದು ೨೦೧೮ರಲ್ಲಿ ಕಣಕ್ಕಿಳಿದು ಮೊದಲ ಬಾರಿಗೆ ಶಾಸಕರಾಗಿ ತಂದೆಯ ಸ್ಥಾನವನ್ನು ಅಲಂಕರಿಸಿದ್ದರೆ, ೨೦೨೩ರಲ್ಲೂ ಮರು ಆಯ್ಕೆಯಾಗಿದ್ದಾರೆ.

ಕೆಪಿಸಿಸಿ ಕಾರ್ಯಾಧ್ಯಕ್ಷರಾಗಿದ್ದ ಆರ್. ಧ್ರುವನಾರಾಯಣ ಅವರು ೨೦೨೩ರ ಚುನಾವಣೆಯ ಸಂದರ್ಭದಲ್ಲಿ ಅಕಾಲಿಕ ನಿಧನರಾಗಿದ್ದರಿಂದ ಪುತ್ರ ದರ್ಶನ್ ಅವರಿಗೆ ನಂಜನಗೂಡು ಕ್ಷೇತ್ರದಲ್ಲಿ ಅವಕಾಶ ಮಾಡಿಕೊಟ್ಟಿದ್ದು, ಅವರು ಈಗ ಶಾಸಕರಾಗಿದ್ದಾರೆ.

ಹುಣಸೂರು ಕ್ಷೇತ್ರದ ಉಪ ಚುನಾವಣೆಯಲ್ಲಿ ಪುತ್ರ ಜಿ.ಡಿ.ಹರೀಶ್‌ಗೌಡರಿಗೆ ಟಿಕೆಟ್ ಕೈತಪ್ಪಿದ್ದರಿಂದ ಬೇಸರಗೊಂಡಿದ್ದ ಜಿ.ಟಿ.ದೇವೇಗೌಡ ಅವರು ೨೦೨೩ರಲ್ಲಿ ಟಿಕೆಟ್ ಸಿಗುವಂತೆ ನೋಡಿಕೊಂಡರು. ಅದರ -ಲವಾಗಿ ಅಪ್ಪ- ಮಗ ಇಬ್ಬರೂ ಒಟ್ಟಿಗೆ ವಿಧಾನಸಭೆ ಪ್ರವೇಶಿಸಿದರು.

ಸಹಕಾರ ಕ್ಷೇತ್ರದಲ್ಲಿ ತಂದೆಯಷ್ಟೇ ಬೇರೂರಿ ಮೈಮುಲ್, ಎಂಸಿಡಿಸಿಸಿ, ಜಿಲ್ಲಾ ಸಹಕಾರ ಯೂನಿಯನ್‌ನಲ್ಲೂ ತಮ್ಮ ಪ್ರಭಾವ ವಿಸ್ತರಿಸಿಕೊಳ್ಳುವುದಕ್ಕೆ ದಾರಿಯಾಗಿದೆ. ಕೃಷ್ಣರಾಜನಗರ ಕ್ಷೇತ್ರದಲ್ಲಿ ಸಾ.ರಾ.ಮಹೇಶ್ ಅವರ ವಿರುದ್ಧ ೨೦೧೩ರಲ್ಲಿ ದೊಡ್ಡಸ್ವಾಮೇಗೌಡ, ೨೦೧೮ರಲ್ಲಿ ಅವರ ಪುತ್ರ ಡಿ.ರವಿಶಂಕರ್ ಸೋಲು ಕಂಡರೂ ೨೦೨೩ರಲ್ಲಿ ರವಿಶಂಕರ್ ಗೆಲುವು ಸಾಧಿಸಿದ್ದಾರೆ.

೨೦೨೮ರಲ್ಲಿ ಎಚ್.ಡಿ.ಕೋಟೆಯಲ್ಲಿ ಅನಿಲ್ ಚಿಕ್ಕಮಾದು, ನಂಜನಗೂಡು ಕ್ಷೇತ್ರದಲ್ಲಿ ದರ್ಶನ್ ಧ್ರುವನಾರಾಯಣ, ಚಾಮರಾಜ ಕ್ಷೇತ್ರದಲ್ಲಿ ಕೆ.ಹರೀಶ್ಗೌಡ, ಕೆ.ಆರ್.ನಗರದಲ್ಲಿ ಡಿ.ರವಿಶಂಕರ್ ಸ್ಪರ್ಧೆ ಮಾಡುವುದು ಗ್ಯಾರಂಟಿಯಾಗಿದೆ. ಅದೇ ರೀತಿ ವರುಣ ಕ್ಷೇತ್ರದಲ್ಲಿ ಸಿದ್ದರಾಮಯ್ಯ ಅವರು ಸ್ಪರ್ಧೆಯಿಂದ ದೂರ ಉಳಿಯುವ ಕಾರಣ ಪುತ್ರ ಡಾ.ಯತೀಂದ್ರ ಸ್ಪರ್ಧೆ ಮಾಡುವುದು ಗ್ಯಾರಂಟಿ ಇದ್ದರೂ, ಮೊಮ್ಮಗ ಧವನ್ ರಾಕೇಶ್‌ರನ್ನು ಕರೆತಂದು ಕಣಕ್ಕಿಳಿಸಿದರೆ ಕ್ಷೇತ್ರದ ಚಿತ್ರಣವೇ ಬದಲಾಗಲಿದೆ. ಪಿರಿಯಾಪಟ್ಟಣ ಕ್ಷೇತ್ರದಲ್ಲಿ ಶಾಸಕ ಕೆ.ವೆಂಕಟೇಶ್, ತಮ್ಮ ಪುತ್ರ ನಿತಿನ್‌ಗೆ ಅವಕಾಶ ಮಾಡಿಕೊಡಲು ಮುಂದಾಗಿದ್ದಾರೆ. ಮಾಜಿ ಶಾಸಕ ಕೆ.ಮಹದೇವ್ ಪುತ್ರ ಪ್ರಸನ್ನ ಕೂಡ ತಂದೆಯನ್ನು ಬದಿಗಿರಿಸಿ ತಾವೇ ನಿಲ್ಲುವ ಉತ್ಸಾಹದಲ್ಲಿರುವುದರಿಂದ ಹೊಸ ಮುಖಗಳ ನಡುವೆ ಪೈಪೋಟಿಗೆ ದಾರಿಯಾಗಲಿದೆ.

ಹುಣಸೂರು ಕ್ಷೇತ್ರದ ಶಾಸಕ ಜಿ.ಡಿ.ಹರೀಶ್‌ಗೌಡರು ಮಾತ್ರ ಕ್ಷೇತ್ರದ ಅಭಿವೃದ್ಧಿಯ ಜತೆಗೆ, ಚಾಮುಂಡೇಶ್ವರಿಯತ್ತಲೂ ಓಡಾಡುತ್ತಿದ್ದಾರೆ. ಈ ಬೆಳವಣಿಗೆ ಜಿ.ಟಿ.ದೇವೇಗೌಡ- ಜಿ.ಡಿ.ಹರೀಶ್‌ಗೌಡರ ಬೆಂಬಲಿಗರಲ್ಲಿ ಗೊಂದಲ, ಆತಂಕಕ್ಕೂ ದಾರಿಮಾಡಿಕೊಟ್ಟಿರುವುದರಿಂದ ಈ ನಾಯಕರಿಬ್ಬರ ರಾಜಕೀಯ ನಡೆಯು ಆಂತರಿಕವಾಗಿ ಸಾಕಷ್ಟು ಕುತೂಹಲ ಮೂಡಿಸಿದೆ.

ಹೊಸಮುಖಗಳಿಗಿಲ್ಲ ಚಾನ್ಸ್: 

ಮೈಸೂರು: ಜಿಲ್ಲೆಯ ಹನ್ನೊಂದು ಕ್ಷೇತ್ರಗಳಲ್ಲಿ ಹಾಲಿ ಇರುವ ಕ್ಷೇತ್ರಗಳ ಪೈಕಿ ಆಯಾಯ ಶಾಸಕರು, ಪರಾಜಿತ ಅಭ್ಯರ್ಥಿಗಳಿಗೆ ಅವಕಾಶ ದಕ್ಕಿದರೆ ಹೊಸ ಮುಖಗಳಿಗೆ ಚಾನ್ಸ್ ಸಿಗುವುದೇ ಅನುಮಾನವಾಗಿದೆ. ಹೀಗಾಗಿ, ಮುಂದೆ ಅಪ್ಪಂದಿರ ಬದಲಿಗೆ ನಾಯಕತ್ವದ ಹೊಣೆಯನ್ನೇ ಎರಡನೇ ಪಂಕ್ತಿಯ ನಾಯಕರಾಗಿರುವ ಮಕ್ಕಳೇ ಹೊರುತ್ತಿರುವುದರಿಂದ ಹೊಸಬರಿಗೆ ಅವಕಾಶದ ಬಾಗಿಲು ಬಂದ್ ಆದಂತಾಗಿದೆ.

 

 

Tags:
error: Content is protected !!