ರಸ್ತೆಯಲ್ಲೇ ಹರಿಯುವ ಮಳೆ ನೀರು ; ಪುರಸಭೆ ಕೃ ಸೇರಿದ ಸರ್ವೆ ವರದಿ: ದಿಟ್ಟ ಕ್ರಮದ ನಿರೀಕ್ಷೆ
ಕಾಂಗೀರ ಬೋಪಣ್ಣ
ವಿರಾಜಪೇಟೆ: ರಾಜಕಾಲುವೆ ಒತ್ತುವರಿಯಿಂದ ಮಳೆಗಾಲದಲ್ಲಿ ಪಟ್ಟಣದ ನಿವಾಸಿಗಳು ಇನ್ನಿಲ್ಲದ ಸಮಸ್ಯೆ ಎದುರಿಸುತ್ತಿದ್ದು, ಪುರಸಭೆ ಸೂಕ್ತ ಕ್ರಮ ತೆಗೆದುಕೊಳ್ಳುವ ನಿರೀಕ್ಷೆಯಲ್ಲಿ ಸ್ಥಳೀಯ ನಿವಾಸಿಗಳಿದ್ದಾರೆ.
ಈ ರಾಜಕಾಲುವೆ ಮಗ್ಗುಲ ಗ್ರಾಮದಿಂದ ಪಟ್ಟಣದ ಮೊಗೆರಾಗಲ್ಲಿ ವಿಜಯನಗರ ಮೂಲಕ ಹರಿದು ಕದನೂರು ನದಿಗೆ ಸೇರಿ ನಂತರ ಕಾವೇರಿ ಒಡಲು ಸೇರುತ್ತದೆ. ಈ ಮುಖ್ಯ ಕಾಲುವೆಯನ್ನು ಕೆಲವು ಕಡೆ ಒತ್ತುವರಿ ಮಾಡಿಕೊಂಡು ಮಳಿಗೆ ನಿರ್ಮಿಸಿದ್ದಾರೆ. ಇದರಿಂದಾಗಿ ಭಾರಿ ಮಳೆಯಾದಾಗ ಮನೆಗಳಿಗೆ ನೀರು ನುಗ್ಗುತ್ತದೆ. ಜೊತೆಗೆ ಪಟ್ಟಣದ ಮಾಂಸ ಮಾರುಕಟ್ಟೆ ಜಂಕ್ಷನ್ ಬಳಿ ನೀರು ಉಕ್ಕಿ ರಸ್ತೆಗೆ ಹರಿದು ವಾಹನ ಸಂಚಾರದಲ್ಲಿ ಅಸ್ತವ್ಯಸ್ತವಾಗುತ್ತದೆ.
ಪಟ್ಟಣದ ರಾಜ ಕಾಲುವೆ ಒತ್ತುವರಿಯಿಂದ ನೀರು ಸರಾಗವಾಗಿ ಹರಿಯದೆ ಸಮಸ್ಯೆ ಸೃಷ್ಟಿಯಾಗುತ್ತಿದೆ. ಹಲವು ವರ್ಷಗಳಿಂದ ಕೊಂಚ ಜಾಸ್ತಿ ಮಳೆ ಬಂದರೂ ರಸ್ತೆಯಲ್ಲಿಯೇ ನೀರು ಹರಿಯಲು ಆರಂಭವಾಗುತ್ತದೆ. ಇದರೊಂದಿಗೆ ಮಾಂಸ ಮಾರುಕಟ್ಟೆ ಬಳಿಯ ತೋಡು ಉಕ್ಕಿ ಹರಿಯುವ ಕಾರಣ ರಸ್ತೆ ಸಂಚಾರಕ್ಕೆ ತೊಡಕುಂಟಾಗುತ್ತಿದೆ. ಈ ತೋಡಿಗೆ ಕೆಲವು ಕಡೆ ನೇರವಾಗಿ ಶೌಚ ತ್ಯಾಜ್ಯವನ್ನು ಬಿಡಲಾಗುತ್ತಿದೆ. ಇದರಿಂದಲೂ ಸಮಸ್ಯೆ ಉಂಟಾಗುತ್ತಿದೆ. ರಾಜಕಾಲುವೆ ಒತ್ತುವರಿ ಬಗ್ಗೆ ಹಿಂದಿನಿಂದಲೂ ಚರ್ಚೆಯಾಗುತ್ತಿತ್ತು. ಈ ಸಂಬಂಧ ಸೇವ್ ಕಾವೇರಿ ಸಂಘಟನೆ ಹಿಂದಿನ ತಹಸಿಲ್ದಾರ್ ಮತ್ತು ಪುರಸಭೆಗೆ ದೂರು ನೀಡಿದ ಹಿನ್ನೆಲೆಯಲ್ಲಿ ರಾಜಕಾಲುವೆ ಒತ್ತುವರಿ ಸಂಬಂಧ ಸರ್ವೆಗೆ ಆದೇಶ ನೀಡಲಾಗಿತ್ತು.
ತ್ಯಾಜ್ಯ ನೀರು ಕಾವೇರಿ ಒಡಲು ಸೇರುತ್ತಿರುವ ಬಗ್ಗೆ ತಹಸಿಲ್ದಾರ್ ಮತ್ತು ಪುರಸಭೆಗೂ ಮಾಹಿತಿ ನೀಡಿ ಕ್ರಮಕ್ಕೆ ಆಗ್ರಹಿಸಿದ ಹಿನ್ನೆಲೆಯಲ್ಲಿ ಅಂದಿನ ತಹಸಿಲ್ದಾರ್ ರಾಮಚಂದ್ರ ಆಸಕ್ತಿ ವಹಿಸಿ ಅಡೆತಡೆಗಳ ಮಧ್ಯೆಯೂ ಸರ್ವೆ ಆರಂಭಿಸಿದ್ದರು. ಈ ಕುರಿತು ಚರ್ಚಿಸಲು ಪುರಸಭೆ ಕರೆದಿದ್ದ ಸಭೆಯಲ್ಲಿ ಆಗ ನೂತನವಾಗಿ ನೇಮಕವಾಗಿದ್ದ ಸ್ಥಳೀಯರೇ ಅದ ಸರ್ವೆ ಇಲಾಖೆಯ ಅಧಿಕಾರಿಯೊಬ್ಬರು ಈ ಸರ್ವೆ ನಡೆಸಲು ಬಿಡುವುದಿಲ್ಲ ಎಂಬ ಮಾತನ್ನೂ ಆಡಿದ್ದರು. ಇವೆಲ್ಲದರ ನಡುವೆ ಈಗ ಸರ್ವೆ ಮುಗಿದು ವರದಿ ಪುರಸಭೆಗೆ ಸೇರಿದೆ.
ಮೇ ೨೬ರಂದು ಕೆಲವು ಬ್ಲಾಕ್‌ಗಳ ಒತ್ತುವರಿಯಾಗಿರುವ ಸ್ಥಳಗಳನ್ನು ಸರ್ವೆಯಲ್ಲಿ ಗುರುತಿಸಿ ವರದಿ ನೀಡಲಾಗಿದೆ. ಪುರಸಭೆ ಮುಂದೆ ಯಾವ ಕ್ರಮ ಕೈಗೊಳ್ಳುತ್ತದೆ ಎಂಬುದು ಸದ್ಯ ಎಲ್ಲರ ಕುತೂಹಲವಾಗಿದೆ. ಪುರಸಭೆ ದಿಟ್ಟ ಕ್ರಮ ಕೈಗೊಳ್ಳುವ ಮೂಲಕ ಮುಂದೆಯೂ ಪಟ್ಟಣದಲ್ಲಿ ಯಾವುದೇ ಸಮಸ್ಯೆಯಾಗದಂತೆ ಸೂಕ್ತ ಕ್ರಮ ಕೈಗೊಳ್ಳಬೇಕೆನ್ನುವುದು ಪ್ರಜ್ಞಾವಂತ ನಾಗರಿಕರ ಒತ್ತಾಯವಾಗಿದೆ.
ರಾಜಕಾಲುವೆ ಒತ್ತುವರಿಯಾಗಿರುವುದು ಸರ್ವೆಯಿಂದ ದೃಢಪಟ್ಟಿದೆ. ವರದಿಯಂತೆ ಪುರಸಭೆ ಯಾವ ಕ್ರಮ ಕೈಗೊಳ್ಳುತ್ತದೆ ಎಂದು ಕಾದು ನೋಡುತ್ತೇವೆ. ಮುಂದೆ ಸೂಕ್ತ ಕ್ರಮ ಕೈಗೊಳ್ಳದೆ ಹೋದರೆ ಕಾನೂನು ಹೋರಾಟ ಮಾಡಬೇಕಾಗುತ್ತದೆ. ರಾಜಕಾಲುವೆ ಸಂಬಂಧ ಅಗತ್ಯ ಕ್ರಮ ಕೈಗೊಳ್ಳುವವರೆಗೆ ಹೋರಾಟ ಮುಂದುರಿಯಲಿದೆ. -ಚೆಟ್ಟೋಳಿರ ಸೋಮಣ್ಣ, ಅಧ್ಯಕ್ಷರು, ಕಾವೇರಿ ಸೇವ್ ಸಂಘಟನೆ
ರಾಜಕಾಲುವೆ ಒತ್ತುವರಿ ಸಂಬಂಧ ಸರ್ವೆ ವರದಿ ಬಂದಿದ್ದು, ಸರ್ವೆ ಇಲ್ಲಿಯವರೆಗೆ ಆಗಿರುವ ಕುರಿತು ನಕ್ಷೆ ನೀಡಿದ್ದಾರೆ. ಅದರ ಪರಿಶೀಲನೆ ಇನ್ನು ಮಾಡಿಲ್ಲ. ಈ ಕುರಿತು ಸರ್ವೆ ಇಲಾಖೆ ಜೊತೆ ಚರ್ಚೆ ನಡೆಸಿ ವರದಿಯ ಕುರಿತು ಸಮಗ್ರ ಮಾಹಿತಿ ಪಡೆಯಬೇಕಿದೆ. ನಂತರ ಈ ಕುರಿತು ಸ್ವಷ್ಟ ಮಾಹಿತಿ ನೀಡಲು ಸಾಧ್ಯ. -ಪಿ. ಕೆ. ನಾಚಪ್ಪ, ಪುರಸಭೆ ಮುಖ್ಯಾಧಿಕಾರಿ





