ಕೆ.ಬಿ.ರಮೇಶನಾಯಕ
ನಮೂನೆ-೬ ಸಲ್ಲಿಸಿ ಮತದಾರರ ಪಟ್ಟಿಗೆ ಹೆಸರು ಸೇರಿಸಲು ಇನ್ನೂ ಇದೆ ಅವಕಾಶ
ಮೈಸೂರು: ಮುಂಬರುವ ವಿಧಾನಸಭೆ, ಲೋಕಸಭಾ ಚುನಾವಣೆಗೂ ಮುನ್ನ ನಡೆದ ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ(ಎಸ್‌ಐಆರ್)ಪ್ರಕ್ರಿಯೆಯ ಮನೆ ಮನೆಗೆ ಭೇಟಿ ನೀಡಿ ಗಣತಿ ನಮೂನೆ ವಿತರಣೆ ಹಾಗೂ ಭರ್ತಿ ಮಾಡಿದ ಅರ್ಜಿ ಹಿಂತಿರುಗಿಸುವ ಕಾರ್ಯ ಮುಗಿದಿದ್ದು, ಅಲ್ಪಸಂಖ್ಯಾತ ವರ್ಗದ ಮತದಾರರು ಹೆಚ್ಚಾಗಿರುವ ನರಸಿಂಹರಾಜ ಕ್ಷೇತ್ರದಲ್ಲೇ ಒಂದು ಲಕ್ಷ ಮತದಾರರು ಮತಪಟ್ಟಿಯಿಂದ ಔಟ್ ಆಗಿದ್ದಾರೆ.
ಮೈಸೂರು ನಗರ ಮತ್ತು ಗ್ರಾಮಾಂತರ ಪ್ರದೇಶದ ಮತ ಗಟ್ಟೆಗಳನ್ನು ಹೊಂದಿರುವ ಚಾಮುಂಡೇಶ್ವರಿ, ಅತಿ ಹೆಚ್ಚು ಶಿಕ್ಷಿತ ಮತದಾರರನ್ನು ಹೊಂದಿರುವ ಚಾಮರಾಜ, ಕೃಷ್ಣರಾಜ ಕ್ಷೇತ್ರಗಳಲ್ಲೂ ೭೫ಸಾವಿರಕ್ಕೂ ಹೆಚ್ಚು ಮತದಾರರು ಮತದಾರರ ಪಟ್ಟಿ ಯಿಂದ ಹೊರಗುಳಿದಿದ್ದಾರೆ.
ಕರಡು ಮತದಾರರ ಪಟ್ಟಿ ಹೊರಬಿದ್ದ ಬಳಿಕ ಮೈಸೂರು ಜಿಲ್ಲೆಯ ಮತದಾರರ ಸಂಖ್ಯೆ ಕುಸಿತ ಕಾಣಲಿದೆ. ಮೈಸೂರು ಜಿಲ್ಲೆಯಲ್ಲಿ ೨,೯೧೫ ಬೂತ್ಗಳು, ೨,೭೯೯,೬೯೩ ಮತದಾರರು ಇದ್ದು, ಚುನಾವಣಾ ಆಯೋಗ ಮುದ್ರಣ ಮಾಡಿ ತಯಾರಿಸಿದ್ದ -ರಂಗಳನ್ನು ೨,೭೯೯,೬೯೩ ಮತದಾರರಿಗೆ ಹಂಚಲಾಗಿತ್ತು. ಜೂನ್ ೩೦ರಿಂದ ಆಗಸ್ಟ್ ೧೭ರ ಸೋಮವಾರದವರೆಗೆ ಬಿಎಲ್‌ಒಗಳು ಗಣತಿ ನಮೂನೆಗಳನ್ನು ವಿತರಿಸಲು ಮತದಾರರ ಮನೆಗಳಿಗೆ ಭೇಟಿ ನೀಡಿದ ವೇಳೆ ಪತ್ತೆಯಾಗದವರು, ಗೈರು, ಶಾಶ್ವತ ಸ್ಥಳಾಂತರ, ಮೃತರು, ಈಗಾಗಲೇ ಬೇರೆ ಕಡೆ ನೋಂದಣಿಯಾದವರು ಮತ್ತು ಇತರೆ (ಎಎಸ್‌ಡಿಡಿಒ) ಎಂದು ೫,೫೭,೧೮೪ ಮತದಾರರನ್ನು ಗುರುತುಮಾಡಿದ್ದಾರೆ.
ಅಂದರೆ ಈ ಮತದಾರರ ಹೆಸರು ಹಾಲಿ ಮತದಾರರ ಪಟ್ಟಿಯಿಂದ ರದ್ದಾಗಲಿದೆ ಮತ್ತು ಆ.೨೪ರಂದು ಕೇಂದ್ರ ಚುನಾವಣಾ ಆಯೋಗ ಪ್ರಕಟಿಸುವ ಕರಡು ಮತದಾರರ ಪಟ್ಟಿಯಲ್ಲಿ ಇರುವುದಿಲ್ಲ. ೨,೨೪೨,೫೦೯ ಮತದಾರರ ಹೆಸರು ಮಾತ್ರ ಪ್ರಕಟವಾಗಲಿದೆ.
ನರಸಿಂಹರಾಜ ಕ್ಷೇತ್ರದಲ್ಲೇ ೧ ಲಕ್ಷ ಜಿಲ್ಲೆಯ ಮತದಾರರ ಪಟ್ಟಿಯಲ್ಲಿ ೨,೭೯೯,೬೯೩ ಮತದಾರರು ಇದ್ದು, ಈ ಪೈಕಿ ಎಸ್‌ಐಆರ್ ವೇಳೆ ಆಬ್ಸೆಂಟ್-೧,೩೪,೩೨೫, ಪರ್ಮನೆಂಟ್ ಶಿಫ್ಟ್- ೨,೪೭,೦೯೯, ಡೆತ್-೧,೧೪,೧೫೭, ಡೂಪ್ಲಿಕೇಟ್-೪೩,೯೦೩, ಇತರೆ-೧೭,೭೦೦ ಸೇರಿದಂತೆ ೫,೫೭,೧೮೪ ಮತದಾರರು ಎಂದು ಗುರುತಿಸಲಾಗಿದೆ. ನರಸಿಂಹರಾಜ ಕ್ಷೇತ್ರದ ೨೮೩ ಮತಗಟ್ಟೆಗಳಿಂದ ೩,೨೭,೮೯೮ ಮತದಾರರಿದ್ದು, ೨,೨೮,೪೮೨ ಮತದಾರರು ಡಿಜಿಟಲೈಸೇಷನ್ ಮಾಡಿ ಕೊಂಡಿದ್ದು, ೯೯೪೧೬ ಮಂದಿ ಹೊರಗುಳಿದಿದ್ದಾರೆ.
ಕೃಷ್ಣರಾಜ ಕ್ಷೇತ್ರದಲ್ಲಿ ೨೬೫ ಮತಗಟ್ಟೆಗಳು, ೨೬೩,೬೩೨ ಮತದಾರರಿದ್ದು, ೧೭೬೮೭೫ ಮಂದಿ ಡಿಜಿಟಲೈಸೇಷನ್ ಮಾಡಿದ್ದು, ೮೬೭೫೭ ಮಂದಿ ಕೈ ಬಿಡಲಾಗಿದೆ. ಚಾಮರಾಜ ಕ್ಷೇತ್ರದ ೨೪೮ ಮತಗಟ್ಟೆಗಳಿಂದ ೨,೬೪,೦೪೫ ಮತದಾರರ ಪೈಕಿ ೧,೭೮,೧೯೧ ಮತದಾರರು ಡಿಜಿಟಲೈ ಸೇಷನ್ ಮಾಡಿದ್ದು, ೮೫೮೫೪ ಮಂದಿ ಹೊರಗಿದ್ದರೆ, ಚಾಮುಂಡೇಶ್ವರಿ ಕ್ಷೇತ್ರದ ೩೪೧ ಮತಗಟ್ಟೆಗಳಿಂದ ೩೫೭೩೨೭ ಮತದಾರರ ಪೈಕಿ ೨೮೧೪೮೧ ಡಿಜಿಟಲೈಸೇಷನ್ ಮಾಡಿದ್ದು, ೭೫೮೪೬ ಮಂದಿ ಹೊರಗೆ ಉಳಿದಿದ್ದಾರೆ. ಜಿಲ್ಲೆಯ ೧೧ ವಿಧಾನಸಭಾ ಕ್ಷೇತ್ರಗಳ ಪೈಕಿ ನರಸಿಂಹರಾಜ ಕ್ಷೇತ್ರದಲ್ಲೇ ಆಬ್ಸೆಂಟ್, ಪರ್ಮನೆಂಟ್ ಶಿಫ್ಟ್, ಡೆತ್, ಡೂಪ್ಲಿಕೇಟ್,ಇತರೆ ಸೇರಿ ಒಂದು ಲಕ್ಷ ಮತದಾರರು ಹೊರಗುಳಿದಿರುವುದು ಗಮನಾರ್ಹವಾಗಿದೆ.
ಫಾರಂ-೬ ಸಲ್ಲಿಸಿ ಸೇರ್ಪಡೆ: ಎಎಸ್‌ಡಿಡಿಒ ವರ್ಗದ ೫,೫೭,೧೮೪ ಮತದಾರರಲ್ಲಿ ೧,೩೪,೩೨೫ ಮತದಾರರನ್ನು ಶಾಶ್ವತ ಮತದಾರರು ಎಂದು ಗುರುತಿಸಲಾಗಿದ್ದು, ಹೀಗಾಗಿ, ಈ ಮತದಾರರು ನಿಗದಿತ ದಾಖಲೆಗಳೊಂದಿಗೆ ಹೊಸದಾಗಿ ಫಾರಂ-೬ ಭರ್ತಿ ಮಾಡಿ ಸಲ್ಲಿಸಿದರೆ ಸಂಬಂಧಪಟ್ಟ ಇಆರ್‌ಒ ಪರಿಶೀಲಿಸಿ ಮತದಾರರ ಪಟ್ಟಿಗೆ ಸೇರ್ಪಡೆಗೊಳಿಸಲಿ ದ್ದಾರೆ. ಈವರೆಗೂ ಮತದಾರರ ಪಟ್ಟಿಗೆ ನೋಂದಣಿ ಮಾಡಿಕೊಳ್ಳದ ಮತದಾರರು ಫಾರಂ-೬ ಭರ್ತಿ ಮಾಡಲು ಅವಕಾಶವಿದೆ.
ನೋಟಿಸ್ ಕೊಟ್ಟರೆ ದಾಖಲೆ ಸಲ್ಲಿಸಿ: ಹಕ್ಕು ಮತ್ತು ಆಕ್ಷೇಪಣೆ ಸಲ್ಲಿಕೆ ವೇಳೆ ಮತದಾರರು ಈಗಾ ಗಲೇ ಗಣತಿ ನಮೂನೆಗಳಲ್ಲಿ ನೀಡಿರುವ ಮಾಹಿತಿಯಲ್ಲಿ ವ್ಯತ್ಯಾಸ ಕಂಡು ಬಂದಲ್ಲಿ ಅಂತಹ ಮತದಾರರಿಗೆ ಮತದಾರರ ನೋಂದಣಾಧಿಕಾರಿ (ಇಆರ್‌ಒ) ನೋಟಿಸ್ ಜಾರಿಗೊಳಿಸಲಿದ್ದಾರೆ. ಆಗ ಮತದಾರರು ನಿಗದಿತ ದಾಖಲೆ ಗಳನ್ನು ಇಆರ್‌ಒಗೆ ಸಲ್ಲಿಕೆ ಮಾಡಬೇಕು. ಬಳಿಕ ಅವುಗಳನ್ನು ಪರಿಶೀಲಿಸಿ ಆ ಮತದಾರರ ಹೆಸರನ್ನು ಅಂತಿಮ ಮತದಾರರ ಪಟ್ಟಿ ಯಲ್ಲಿ ಪ್ರಕಟಿಸಲಾಗುತ್ತದೆ. ಒಂದು ವೇಳೆ ನಿಗದಿತ ದಾಖಲೆ ನೀಡುವಲ್ಲಿ ವಿಫಲವಾದಲ್ಲಿ ಅಂತಹ ಮತದಾರರ ಹೆಸರನ್ನು ಅಂತಿಮ ಮತದಾರರ ಪಟ್ಟಿಯಿಂದ ಕೈಬಿಡುವುದು ಖಚಿತವಾಗಿದೆ.
” ಚುನಾವಣಾ ಆಯೋಗದ ನಿರ್ದೇಶನದಂತೆ ಜಿಲ್ಲಾಡಳಿತದಿಂದ ಮತದಾರರ ಪಟ್ಟಿ ವಿಶೇಷ ಪರಿಷ್ಕರಣೆ ನಡೆದಿದ್ದು, -ರಂ ೬ ಸಲ್ಲಿಸಿ ನೋಂದಣಿಗೆ ಅವಕಾಶವಿದೆ. ಆಕ್ಷೇಪಣೆ ಸಲ್ಲಿಸುವ ಅರ್ಜಿಗಳನ್ನು ಸಹಾಯಕ ಚುನಾವಣಾಧಿಕಾರಿಗಳು ಪರಿಶೀಲಿಸಿ ಮತದಾರರ ಪಟ್ಟಿಗೆ ಸೇರಿಸಲು ಅವಕಾಶವಿದೆ.”
-ಜಿ.ಲಕ್ಷ್ಮೀಕಾಂತ ರೆಡ್ಡಿ, ಜಿಲ್ಲಾಧಿಕಾರಿ




