Mysore
15
overcast clouds

Social Media

ಬುಧವಾರ, 10 ಡಿಸೆಂಬರ್ 2025
Light
Dark

ದೊಡ್ಡಹೆಜ್ಜೂರು ಆಸ್ಪತ್ರೆಯಲ್ಲಿ ಆರೋಗ್ಯ ಸಿಬ್ಬಂದಿ ಕೊರತೆ; ರೋಗಿಗಳ ಪರದಾಟ

ದಾ.ರಾ.ಮಹೇಶ್

ಗಿರಿಜನ ಹಾಡಿ ವ್ಯಾಪ್ತಿಯ ಆಸ್ಪತ್ರೆಯಲ್ಲಿ ಹುದ್ದೆಗಳು ಖಾಲಿ; ಇರುವ ಸಿಬ್ಬಂದಿ ಮೇಲೆ ಕಾರ್ಯದೊತ್ತಡ 

ವೀರನಹೊಸಹಳ್ಳಿ: ಸಮೀಪದ ದೊಡ್ಡ ಹೆಜ್ಜೂರು ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಅನೇಕ ಹುದ್ದೆಗಳು ಖಾಲಿ ಇದ್ದು, ರೋಗಿಗಳಿಗೆ ಸೂಕ್ತ ವೈದ್ಯಕೀಯ ಸೌಲಭ್ಯ ದೊರೆಯದೆ ತೊಂದರೆಯಾಗಿದೆ.

ಈ ಭಾಗದಲ್ಲಿ ಅತಿ ಹೆಚ್ಚು ಗಿರಿಜನ ಹಾಡಿಗಳಿವೆ. ಆದರೆ, ಸಿಬ್ಬಂದಿ ಕೊರತೆಯಿಂದ ನಲುಗುತ್ತಿರುವ ಆಸ್ಪತ್ರೆಯಲ್ಲಿ ರೋಗಿಗಳಿಗೆ ಸಕಾಲಕ್ಕೆ ಆರೋಗ್ಯ ಸೇವೆ ದೊರೆಯುತ್ತಿಲ್ಲ ಎಂಬ ಆರೋಪ ಕೇಳಿಬಂದಿದೆ. ಈ ಸಮಸ್ಯೆಯನ್ನು ಸಂಬಂಧಿಸಿದ ಅಧಿಕಾರಿಗಳಾಗಲಿ, ಜನಪ್ರತಿನಿಧಿಗಳಾಗಲಿ ಗಂಭೀರವಾಗಿ ಪರಿಗಣಿಸಿಲ್ಲ. ಹೀಗಾಗಿ, ಜನರು ತೊಂದರೆ ಅನುಭವಿಸುವುದು ಅಥವಾ ದುಬಾರಿ ಹಣ ತೆತ್ತು ಖಾಸಗಿ ಆಸ್ಪತ್ರೆಗಳತ್ತ ಹೋಗುವುದು ಅನಿವಾರ್ಯವಾಗಿದೆ. ಆರೋಗ್ಯ ಕೇಂದ್ರಗಳನ್ನು ಆರಂಭಿಸಿದ ಸರ್ಕಾರವು ಮಂಜೂರಾದ ಹುದ್ದೆಗಳ ಭರ್ತಿಗೆ ಕ್ರಮಕೈಗೊಂಡಿಲ್ಲ ಎನ್ನುವುದು ಸ್ಥಳೀಯರ ದೂರು.

ಆಸ್ಪತ್ರೆಯಲ್ಲಿ ವೈದ್ಯಕೀಯ, ಅರೆ ವೈದ್ಯಕೀಯ ಹಾಗೂ ಇತರ ಸಿಬ್ಬಂದಿಗಳ ಹುದ್ದೆಗಳು ಖಾಲಿ ಇವೆ. ಸಾಂಕ್ರಾಮಿಕ ಕಾಯಿಲೆಗಳು, ಡೆಂಗ್ಯು, ಚಿಕುನ್‌ಗುನ್ಯಾ ಮೊದಲಾದ ರೋಗಗಳು ಕಾಡುತ್ತಿರುವ ಈ ಸಂದರ್ಭದಲ್ಲಿ ಆರೋಗ್ಯ ಸಿಬ್ಬಂದಿ ಕೊರತೆಯು ಇಲಾಖೆಯ ಕಾರ್ಯ ಕ್ರಮಗಳ ಅನುಷ್ಠಾನಗಳ ಮೇಲೆ ಪರಿಣಾಮ ಬೀರುತ್ತಿದೆ.

ಯಾವ್ಯಾವ ಹುದ್ದೆ ಖಾಲಿ?: ಆರೋಗ್ಯ ಇಲಾಖೆಯ ಮೂಲಗಳ ಪ್ರಕಾರ, ಫಾರ್ಮಾಸಿಸ್ಟ್‌ಗಳು, ಸ್ಟಾಫ್ ನರ್ಸ್, ಹಿರಿಯ ಪ್ರಾಥಮಿಕ ಆರೋಗ್ಯ ಸುರಕ್ಷತಾ ಅಧಿಕಾರಿ, ಕಿರಿಯ ಪ್ರಯೋಗಾಲಯ ಸಹಾಯಕರು (ತಂತ್ರಜ್ಞರು) ತಂತ್ರಜ್ಞರು, ಫಾರ್ಮಾಸಿಸ್ಟ್ ಹುದ್ದೆಗಳು ಖಾಲಿ ಇವೆ. ಹೀಗಾಗಿ ವೈದ್ಯರಿಗೆ ಹೆಚ್ಚುವರಿ ಕಾರ್ಯಭಾರ ವಹಿಸಲಾಗಿದೆ. ಈ ‘ಪ್ರಭಾರ’ ವ್ಯವಸ್ಥೆಯು ಎಲ್ಲ ಕೇಂದ್ರಗಳಲ್ಲೂ ವ್ಯವಸ್ಥಿತವಾಗಿ ನಡೆಯುತ್ತಿಲ್ಲ. ಕೆಲವೆಡೆ, ಸಿಬ್ಬಂದಿ ಮೇಲೆ ಅಧಿಕ ಕಾರ್ಯದ ಒತ್ತಡ ಬೀಳುತ್ತಿದೆ. ಸಮರ್ಪಕ ನಿರ್ವಹಣೆಯ ಕೊರತೆಯೂ ಕಂಡುಬರುತ್ತಿದೆ.

” ಆಸ್ಪತ್ರೆಯಲ್ಲಿ ಹುದ್ದೆಗಳು ಖಾಲಿ ಇರುವ ಬಗ್ಗೆ ಸಭೆಗಳಲ್ಲಿ ಪ್ರಸ್ತಾಪಿಸಲಾಗುತ್ತಿದೆ. ಲಭ್ಯ ಸಿಬ್ಬಂದಿಗೆ ಹೆಚ್ಚುವರಿ ಕೆಲಸ ವಹಿಸಿ ನಿರ್ವಹಿಸಲಾಗುತ್ತಿದೆ. ಗ್ರಾಮೀಣ ಪ್ರದೇಶದ ಆಸ್ಪತ್ರೆಗಳಲ್ಲಿ ಕೆಲಸ ಮಾಡಲು ಸಿಬ್ಬಂದಿ ಕೊರತೆ ಜೊತೆಗೆ ಮೂಲಸೌಕರ್ಯ ಕೊರತೆ ಇರುವ ಕುರಿತು ನನ್ನ ಗಮನಕ್ಕೆ ಬಂದಿದೆ. ಇದೆಲ್ಲವನ್ನೂ ನಾನು ಆರೋಗ್ಯ ಸಚಿವರ ಜೊತೆಗೆ ಚರ್ಚಿಸಿದ್ದೇನೆ. ಶೀಘ್ರದಲ್ಲಿ ಸಮಸ್ಯೆ ಬಗೆಹರಿಸುವ ಭರವಸೆ ನೀಡಿದ್ದಾರೆ.”

-ಜಿ.ಡಿ.ಹರೀಶ್ ಗೌಡ, ಶಾಸಕ

” ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಹಲವುಹುದ್ದೆಗಳು ಖಾಲಿ ಇವೆ. ಹೀಗಾಗಿ ಖಾಲಿ ಇರುವ ಕಡೆಗೆ ಸಿಬ್ಬಂದಿ ನಿಯೋಜನೆ ಮಾಡಲು ಹಿರಿಯ ಅಧಿಕಾರಿಗಳ ಗಮನಕ್ಕೆ ತರಲಾಗಿದೆ. ಆದರೆ, ಹುದ್ದೆಗಳ ಭರ್ತಿಗೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ.”

-ಡಾ.ದರ್ಶನ್, ಟಿಎಚ್‌ಒ

Tags:
error: Content is protected !!