Mysore
28
light rain

Social Media

ಶುಕ್ರವಾರ, 16 ಅಕ್ಟೋಬರ್ 2026
Light
Dark

ದರ್ಶನ್ ತಂಗಿದ್ದ ಜಾಗದ ರಹಸ್ಯ ಬಯಲು!

ವರದಿ ರೂಪ: ರವಿಚಂದ್ರ ಚಿಕ್ಕೆಂಪಿಹುಂಡಿ

ಎಸಿಪಿ ಚಂದನ್ ಎಂಟ್ರಿ; ಒಂದೇ ಮಾತಿಗೆ ಗುಟ್ಟು ಬಾಯಿಬಿಟ್ಟ ಪ್ರದೋಷ್

ಮೈಸೂರಿನ ರ‍್ಯಾಡಿಷನ್‌ ಬ್ಲೂ ಹೋಟೆಲ್‌ನಲ್ಲಿದ್ದ ದರ್ಶನ್‌ ಅರೆಸ್ಟ್‌ 

ಮೈಸೂರಿನಲ್ಲಿ ದರ್ಶನ್ ಅವರನ್ನು ನೋಡಿ ಮಾತನಾಡಿಕೊಂಡು ೧೦.೦೬.೨೦೨೪ರ ಮಧ್ಯರಾತ್ರಿ ೧೨ ಗಂಟೆ ಸುಮಾರಿಗೆ ಬೆಂಗಳೂರಿನತ್ತ ಹೊಗುತ್ತಿದ್ದ ನಮ್ಮ ಕಾರನ್ನು ಬಿಡದಿ ಟೋಲ್ ಲಾಕ್ ಮಾಡಿದ ಪೊಲೀಸರು, ಪವನ್‌ನನ್ನು ನಮ್ಮ ಕಾರಿನಿಂದ ಇಳಿಸಿಕೊಂಡು ಅವರ ಜೀಪಿನಲ್ಲಿ ಕರೆದುಕೊಂಡು ಹೊರಟರು. ನಂತರ ಪೊಲೀಸರು ನನ್ನ ಕಾರನ್ನು ತಮ್ಮ ವಶಕ್ಕೆ ಪಡೆದು ಅದೇ ಕಾರಿನಲ್ಲಿ ನಮ್ಮನ್ನು (ಪ್ರದೋಷ್, ಲಕ್ಷ್ಮಣ್, ನಾಗರಾಜ್, ನಂದೀಶ್) ಕಾಮಾಕ್ಷಿಪಾಳ್ಯ ಸ್ಟೇಷನ್ ಕಡೆ ಕರೆದುಕೊಂಡು ಹೊರಟರು. ಹೋಗುವಾಗ ಮಾರ್ಗ ಮಧ್ಯೆ ಗಾಡಿ ನಿಲ್ಲಿಸಿದರು. ನಂತರ ನಮ್ಮನ್ನು ನಮ್ಮ ಕಾರಿನಿಂದ ಇಳಿಸಿದರು.

ಆ ವೇಳೆಗೆ ಅಲ್ಲಿಗೆ ತಂದು ನಿಲ್ಲಿಸಿಕೊಂಡಿದ್ದ ಪೊಲೀಸ್ ಜೀಪ್‌ಗೆ ನಮ್ಮನ್ನೆಲ್ಲ ಹತ್ತಿಸಿದರು. ನಮ್ಮ ಮೊಬೈಲ್ಗಳನ್ನು ನಮ್ಮ ನಮ್ಮ ಕೈಗೆ ಕೊಟ್ಟು, ಎಲ್ಲರೂ ಮೊಬೈಲ್ ಗಳನ್ನು  ಫ್ಲೈಟ್‌ಮೋಡ್‌ಗೆ ಹಾಕಿ ಎಂದರು. ಪೊಲೀಸರು ಹೇಳಿದಂತೆ ಎಲ್ಲರೂ ಮೊಬೈಲ್‌ಗಳನ್ನು ಫ್ಲೈಟ್‌ಮೋಡ್ಗೆ ಹಾಕಿದೆವು. ನಂತರ ಅವರ ಜೀಪಿನಲ್ಲಿಯೇ ನಮ್ಮನ್ನು ಕಾಮಾಕ್ಷಿಪಾಳ್ಯ ಸ್ಟೇಷನ್‌ಗೆ ಕರೆದುಕೊಂಡು ಹೋದರು. ಸ್ಟೇಷನ್‌ಗೆ ಹೋದಾಗ ಮಧ್ಯರಾತ್ರಿ ೧ ಗಂಟೆಯಾಗಿತ್ತು. ಅಷ್ಟೊತ್ತಿಗೆ ಇಬ್ಬರು ಬಂದಿದ್ದರು. ಅವರು ನಮ್ಮ ಮೊಬೈಲ್‌ಗಳ ಪಂಚನಾಮೆಯನ್ನು ಮಾಡಿದರು. ನನ್ನ ಐ ಫೋನ್ ಮೊಬೈಲ್‌ನ IMEI ನಂಬರ್, ಮೊಬೈಲ್ ನಂಬರ್, ಮೊಬೈಲ್‌ನ ನಿಖರವಾದ ಬಣ್ಣ(pacific blue), ಮಾಡಲ್ (-I-Phone 12Promax) ಎಲ್ಲವನ್ನೂ ದಾಖಲು ಮಾಡಿಕೊಂಡು ಮೊಬೈಲ್ ವಶಕ್ಕೆ ಪಡೆದರು. ಅದೇ ರೀತಿ ಎಲ್ಲರ ಮೊಬೈಲ್‌ಗಳ ವಿವರಣೆಗಳನ್ನು ದಾಖಲಿಸಿ ವಶಕ್ಕೆ ಪಡೆದರು. ನಂತರ ಲಕ್ಷ್ಮಣ್, ನಾಗರಾಜ್, ನಂದೀಶ್, ಪವನ್, ದೀಪಕ್, ವಿನಯ್ ಮತ್ತು ನನ್ನ(ಪ್ರದೋಷ್) ಹೇಳಿಕೆಗಳನ್ನು ದಾಖಲು ಮಾಡಿಕೊಂಡರು. ತದ ನಂತರ ನಮ್ಮೆಲ್ಲರ ಫೊಟೋಗಳನ್ನು ತೆಗೆಸಿದರು. ಅಲ್ಲಿಯೇ ನಮ್ಮ ಎದುರಿಗೆ ಎಲ್ಲವನ್ನೂ ಪ್ರಿಂಟೌಟ್ ತೆಗೆದು ಮಹಜರ್‌ಗೆ ನಾವು ೭ ಜನರ ಸಹಿ ಪಡೆದರು. ಇದೆಲ್ಲವೂ ಸ್ಟೇಷನ್‌ನ ೧ನೇ ಮಹಡಿಯಲ್ಲಿ ನಡೆಯಿತು.

ಬೆಳಗಿನ ಜಾವ ೬ ಗಂಟೆಗೆ ರ‍್ಯಾಡಿಸನ್ ಬ್ಲೂ ಹೋಟೆಲ್ ಮುಂದೆ ಪೊಲೀಸ್ ಪಡೆ: ಇದಾದ ನಂತರ ಬೆಳಗಿನ ಜಾವ ೩ರಿಂದ ೪ ಗಂಟೆ ಸುಮಾರಿಗೆ ಎಸಿಪಿ ಚಂದನ್ ಅವರು ಸ್ಟೇಷನ್‌ಗೆ ಬಂದರು. ನಮ್ಮ ಬಳಿ ಬಂದು ನೇರವಾಗಿ ನನ್ನ ಮುಖವನ್ನು ನೋಡುತ್ತಾ, ‘ನೀವು ಹೋಗಿ ದರ್ಶನ್ ಅವರನ್ನು ಭೇಟಿ ಮಾಡಿ ಬಂದಿದ್ದೀರಲ್ಲಾ, ನಮ್ಮನ್ನು ಅಲ್ಲಿಗೆ ಕರೆದುಕೊಂಡು ಹೋಗಿ ದರ್ಶನ್ ಇರುವ ಸ್ಥಳವನ್ನು ತೋರಿಸುತ್ತೀರಾ?’ ಎಂದು ಕೇಳಿದರು. ಅದಕ್ಕೆ ನಾನು ಆಯ್ತು ಎಂದು ಹೇಳಿದೆ. ಆನಂತರ ಎಸಿಪಿ ಚಂದನ್ ಅವರು ನನ್ನನ್ನು ಮೈಸೂರಿಗೆ ಕರೆದುಕೊಂಡು ಹೋದರು. ಮೈಸೂರು ತಲು ಪುತ್ತಿದಂತೆ ಅವರಿಗೆ ರ‍್ಯಾಡಿಸನ್ ಬ್ಲೂ ಹೋಟೆಲ್‌ನ ದಾರಿ ತೋರಿಸಿದೆ. ಬೆಳಗಿನ ಜಾವ ಸುಮಾರು ೬ ಗಂಟೆಗೆ ಹೋಟೆಲ್ ಗೇಟ್ ಒಳಗೆ ಎಂಟ್ರಿ ಆದೆವು. ನನ್ನನ್ನು ಹೋಟೆಲ್‌ನ ಹೊರಗಡೆಯೇ ಇರಿಸಿದರು.

ನಂತರ ಎಸಿಪಿ ಚಂದನ್ ಹಾಗೂ ಅವರೊಂದಿಗೆ ಬಂದಿದ್ದ ಪೊಲೀಸ್ ಸಿಬ್ಬಂದಿ ಹೋಟೆಲ್ ಒಳಗಡೆ ಹೋದರು. ಬೆಳಿಗ್ಗೆ ೭ರಿಂದ ೮ ಗಂಟೆಯಷ್ಟೊತ್ತಿಗೆ ದರ್ಶನ್‌ಅವರನ್ನು ಕರೆದುಕೊಂಡು ಹೊರಗಡೆ ಬಂದರು. ನಂತರ ನಮ್ಮನ್ನು ಬೆಂಗಳೂರಿನತ್ತ ಕರೆದುಕೊಂಡು ಹೊರಟರು. ಮಾರ್ಗ ಮಧ್ಯೆ ನಾನು ನನ್ನ ಕುಟುಂಬದವರಿಗೆ ಫೋನ್ ಮಾಡಿ ಮಾಹಿತಿ ನೀಡಬೇಕು ನಿಮ್ಮ ಮೊಬೈಲ್ಕೊಡಿ ಎಂದು ಪೊಲೀಸರ ಬಳಿ ರಿಕ್ವೆಸ್ಟ್ ಮಾಡಿದೆ. ಆಗ ಪೊಲೀಸರೊಬ್ಬರು ತಮ್ಮ ಮೊಬೈಲ್ ಅನ್ನು ನನ್ನ ಕೈಗೆ ಕೊಟ್ಟರು. ನಂತರ ನನ್ನ ಹೆಂಡತಿಗೆ ಫೋನ್ ಮಾಡಿ ನಾನು ಅರೆಸ್ಟ್ ಆಗಿರುವ ವಿಚಾರ ತಿಳಿಸಿ, ಟೂತ್ ಪೇಸ್ಟ್, ಬ್ರಶ್ ಮತ್ತು ಒಂದು ಜೊತೆ ಬಟ್ಟೆ ತೆಗೆದುಕೊಂಡು ಕಾಮಾಕ್ಷಿಪಾಳ್ಯ ಪೊಲೀಸ್ ಸ್ಟೇಷನ್‌ಗೆ ಬಾ ಎಂದು ತಿಳಿಸಿದೆ.

ಎಲ್ಲರೂ ಕೋರ್ಟ್‌ಗೆ ಹಾಜರು: ಬೆಂಗಳೂರು ತಲುಪಿದ ನಂತರ ನಮ್ಮನ್ನು ನೇರವಾಗಿ ಅನ್ನಪೂರ್ಣೇಶ್ವರಿನಗರ ಪೊಲೀಸ್ ಸ್ಟೇಷನ್‌ಗೆ ಕರೆದುಕೊಂಡು ಹೋದರು. ಅಷ್ಟೊತ್ತಿಗೆ ಪವಿತ್ರಾ ಗೌಡ ಅವರನ್ನು ಕರೆದುಕೊಮಡು ಬಂದಿದ್ದರು. ಮಧ್ಯಾಹ್ನ ನಮ್ಮನ್ನು (ದರ್ಶನ್, ಪವಿತ್ರಾ ಗೌಡ, ಪ್ರದೋಷ್, ಲಕ್ಷ್ಮಣ್, ನಂದೀಶ್, ಪವನ್, ನಾಗರಾಜ್, ವಿನಯ್, ದೀಪಕ್, ರಾಘವೇಂದ್ರ) ವೈದ್ಯಕೀಯ ಪರೀಕ್ಷೆಗಾಗಿ ಬೌರಿಂಗ್ ಆಸ್ಪತ್ರೆಗೆ ಕರೆದುಕೊಂಡು ಹೋದರು. ಅದಾದ ನಂತರ ನಮ್ಮೆನ್ನೆಲ್ಲ ನ್ಯಾಯಾಲಯಕ್ಕೆ ಹಾಜರುಪಡಿಸಿದರು. ಅಲ್ಲಿಂದ ಮತ್ತೆ ನಮ್ಮನ್ನು ಅನ್ನಪೂರ್ಣೇಶ್ವರಿ ನಗರ ಪೊಲೀಸ್ ಸ್ಟೇಷನ್‌ಗೆ ವಾಪಸ್ ಕರೆದುಕೊಂಡು ಬಂದರು.

೩೦ ಲಕ್ಷ ರೂಪಾಯಿ ಎಲ್ಲಿದೆ ಹೇಳಿ?:  ಸ್ಟೇಷನ್‌ಗೆ ಬಂದ ನಂತರ, ನಾನು ಫ್ರೆಸ್‌ಅಪ್‌  ಆಗಬೇಕು ಅವಕಾಶ ಕೊಡಿ ಎಂದು ಇನ್‌ಸ್ಪೆಕ್ಟರ್(ಪಿಐ) ಗಿರೀಶ್ ನಾಯ್ಕ ಅವರಿಗೆ ರಿಕ್ವೆಸ್ಟ್ ಮಾಡಿದೆ. ಅವರು ಅದಕ್ಕೆ ಅವಕಾಶ ಕೊಟ್ಟರು. ನಂತರ ಫ್ರೆಸ್‌ಅಪ್‌  ಆಗಿ ಬಂದ ಅರ್ಧ ಮುಕ್ಕಾಲು ಗಂಟೆ ನಂತರ, ಅಂದರೆ ರಾತ್ರಿ ಸುಮಾರು ೧೦.೩೦ರಿಂದ ೧೧ ಗಂಟೆ ವೇಳೆಗೆ ಪೊಲೀಸ್ ಇನ್‌ಸ್ಟೆಕ್ಟರ್ ಗಿರೀಶ್ ನಾಯ್ಕ ಅವರು ಬಂದು, ‘ನಿಮ್ಮ ಹೇಳಿಕೆಯಲ್ಲಿ ದರ್ಶನ್ ಅವರಿಂದ ೩೦ ಲಕ್ಷ ರೂಪಾಯಿ ಪಡೆದು ಕೊಂಡಿದ್ದೇನೆ ಎಂದು ತಿಳಿಸಿದ್ದೀರಿ. ಆ ಹಣ ವನ್ನು ಮಹಜರ್ ಮಾಡಿ ರಿಕವರಿ(ವಶಕ್ಕೆ) ಮಾಡಬೇಕು ಎಂದು ಹೇಳಿದರು. ಆ ಸಮಯದಲ್ಲಿ ಅವರೊಂದಿಗೆ ಇದ್ದ ಇಬ್ಬರು ಮಹಜರ್ ಸಾಕ್ಷಿದಾರರು ನನ್ನ ಮನೆಯ ವಿಳಾಸವನ್ನು ಕೇಳಿದರು. ನಂತರ ಅವರನ್ನು ಗಿರಿನಗರದಲ್ಲಿರುವ ನಮ್ಮ ಮನೆಗೆ ಕರೆದುಕೊಂಡು ಹೋದೆ. ಮನೆಯ ಕಾಲಿಂಗ್ ಬೆಲ್ ಮಾಡಿದಾಗ, ನನ್ನ ತಾಯಿ ಮತ್ತು ನನ್ನ ಹೆಂಡತಿ ಮನೆಯ ಬಾಗಿಲನ್ನು ತೆರೆದರು. ಪೊಲೀಸರು ಹಣವನ್ನು ಎಲ್ಲಿ ಇಟ್ಟಿದ್ದೀರಾ ಎಂದು ತೋರಿಸುತ್ತೀರಾ ಎಂದು ಕೇಳಿದರು.

ನೋಟಿನ ಕಂತೆಗಳ ಎಣಿಕೆ:  ನಂತರ ಪೊಲೀಸ್ ಸಿಬ್ಬಂದಿ ಮತ್ತು ಮಹಜರ್ ಸಾಕ್ಷಿದಾರರನ್ನು ಕರೆದುಕೊಂಡು ನಮ್ಮ ರೂಂಗೆ ಹೋದೆ. ಅಲ್ಲಿ ವಾರ್ಡ್‌ರೋಬ್‌ನಲ್ಲಿ ನೇತುಹಾಕಿದ್ದ ನನ್ನ ಶರ್ಟ್ ಜೇಬಿನಲ್ಲಿ ಇಟ್ಟಿದ್ದ ಕೀ ತೆಗೆದುಕೊಂಡು, ಹಣ ಇಟ್ಟಿದ್ದ ಇನ್ನೊಂದು ವಾರ್ಡ್‌ರೋಬ್ ಅನ್ನು ತೆರೆದೆ. ಅಲ್ಲಿ ಇಟ್ಟಿದ್ದ ಬ್ಲಾಕ್ ಕಲರ್ ಬ್ಯಾಗ್ ಅನ್ನು ತೆಗೆದು ಹಾಸಿಗೆ ಮೇಲೆ ಇಟ್ಟೆ. ನಂತರ ಬ್ಲಾಕ್ ಕಲರ್ ಬ್ಯಾಗ್‌ನೊಳಗೆ ಇದ್ದ ಇನ್ನೊಂದು ವೈಟ್ ಅಂಡ್ ಎಲ್ಲೋ ಕಲರ್ ಬ್ಯಾಗ್ ಅನ್ನು ತೆರೆದು ಅದರಲ್ಲಿಟ್ಟಿದ್ದ ನೋಟಿನ ಕಂತೆಗಳನ್ನು ಹೊರಗೆ ತೆಗೆದು ಹಾಸಿಗೆ ಮೇಲಿಟ್ಟೆ. ನಂತರ ಮಹಜರ್ ಮಾಡಲು ಬಂದಿದ್ದವರು ಆ ಕಟ್ಟುಗಳನ್ನು ಎಣಿಕೆ ಮಾಡಲು ಆರಂಭಿಸಿದರು. ಒಂದೊಂದು ಕಟ್ಟಿನಲ್ಲಿ ೫೦೦ ರೂಪಾಯಿಯ ನೋಟುಗಳಿದ್ದವು. ಪ್ರತಿ ಕಟ್ಟಿನಲ್ಲೂ ೫೦ ಸಾವಿರ ರೂಪಾಯಿ ಇತ್ತು. ಅಂತಹ ೬೦ ಕಟ್ಟುಗಳು ಇದ್ದವು. ಮಹಜರ್ ಸಾಕ್ಷಿದಾರರು ಎಲ್ಲ ಹಣವನ್ನೂ ಎಣಿಕೆ ಮಾಡಿದಾಗ ಒಟ್ಟು ೩೦ ಲಕ್ಷ ರೂಪಾಯಿ ಆಯಿತು. ಆ ವಿವರವನ್ನು ಬರೆದು ಅಲ್ಲಿಯೇ ಪ್ರಿಂಟ್ ತೆಗೆದು ನನ್ನ ಸಹಿ ಪಡೆದರು.

Tags:
error: Content is protected !!