Mysore
21
scattered clouds
Light
Dark

ಹೆಣ್ಣು ದನಿಗೆ ಮಿಡಿವ ಸಬಿಹಾ ಕಥೆಗಳು

• ಶಭಾನ ಮೈಸೂರು

ವಿಜಯಪುರ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯದ ಕುಲಪತಿಗಳಾಗಿ, ಮಂಗಳೂರು ವಿ.ವಿ.ಯಲ್ಲಿ ಕನ್ನಡ ಪ್ರಾಧ್ಯಾಪಕಿಯಾಗಿ ಸೇವೆ ಸಲ್ಲಿಸಿ ನಿವೃತ್ತರಾಗಿರುವ ಸಬಿಹಾ ಭೂಮಿಗೌಡ ಅವರು ಇದೀಗ ಮೈಸೂರು ನಿವಾಸಿ. ಚಿತ್ತಾರ, ಕಡಲತಡಿಯ ಮನೆ, ಗೆರೆಗಳು, ಕೀಲಿಕೈ ಮತ್ತು ಇತರ ಪ್ರಬಂಧಗಳು, ನಾರಿನೋಟ ಈ ಮುಂತಾದ ಇವರ ಕವಿತೆ, ಕಥೆ, ಲೇಖನ, ಪ್ರಬಂಧ, ಅಂಕಣ, ವಿಮರ್ಶಾ ಸಂಕಲನಗಳ ಕೇಂದ್ರ ವಸ್ತು ಹೆಣ್ಣೆ ಆಗಿದ್ದಾಳೆ.

ದಶಕಗಳಿಗೂ ಹಿಂದೆ ಅಚ್ಚಾದ ಇವರ ಬರಹ ಗಳು ವರ್ತಮಾನದಲ್ಲೂ ತೀವ್ರವಾಗಿ ಕಾಡುವ ಅನೇಕ ಸಂಗತಿಗಳಿಂದ ಕೂಡಿವೆ. ಜಾತಿ-ಧರ್ಮ, ಮತ-ಪಂಥ ಇವ್ಯಾವುದಕ್ಕೂ ಕಟ್ಟುಬೀಳದೆ, ಸಮಾಜ ರೂಪಿತ ಸಿದ್ದ ಮಾದರಿಗಳನ್ನು ಒಡೆಯುವ ಪ್ರಯತ್ನದಲ್ಲಿ ಸಾಗುವ ‘ಕಡಲತಡಿಯ ಮನೆ’ ಸಂಕಲನದ ಬಹುತೇಕ ಕಥೆಗಳು ಮನುಷ್ಯ ಸಂಬಂಧಕ್ಕೆ ಹೆಚ್ಚಿನ ಪ್ರಾಶಸ್ತ್ರ ನೀಡುವತ್ತ ಕೇಂದ್ರೀಕೃತವಾಗಿವೆ. ‘ಎತ್ತಣಿಂದೆತ್ತ ಕತೆಯ ಸಾಬರ ಹೀರವ್ವ ಹಾಗೂ ಶಿವಮ್ಮರ ಸ್ನೇಹ ಇಲ್ಲಿ ಆದರ್ಶ. ತನ್ನ ಕಡೇಗಾಲವನ್ನು ಮಡಿಮೈಲಿಗೆಯನ್ನೇ ಬದುಕಾಗಿಸಿಕೊಂಡಿರುವ ಗೆಳತಿ ಶಿವಣ್ಣನೊಂದಿಗೆ ಕಳೆಯುವ ಸಾಬರ ಹೀರವ್ವ “ನಿಂಗೇನ್ ಗೊತ್ತು ಶಿವಮ್ಮನ ಮನ್ನು, ಅಕಿಯಂಥಾ ದೊಡ್‌ಗುಣ ನಮ್ ಮಂದ್ಯಾಗ ಯಾರೆ ಐತಿ’ ಎನ್ನುತ್ತ ಸುತ್ತಲ ಮಂದಿಯ ಬಾಯಿ ಮುಚ್ಚಿಸುತ್ತಾಳೆ. ‘ತುಪ್ಪ ಮೆತ್ತಿದ ಕನಡಿ’ ಕತೆಯೂ ಜಾತಿ ಧರ್ಮಗಳಿಂದಾಚೆಗೆ ಬದುಕು ಕಟ್ಟಿಕೊಂಡಿರುವ ಮಹಿಳೆಯರನ್ನು ಪ್ರತಿನಿಧಿಸುತ್ತದೆ. ಇಟಗಿ ಗ್ರಾಮದಲ್ಲಿ ಮಡಿ-ಮೈಲಿಗೆಗಳು ಮನೆಮಾಡಿದ್ದರೂ ಕುಡಿದ ಪೀರ್‌ಸಾಬನ ಏಟಿನಿಂದ ಹೆಂಡತಿ ಹುಸಿನೆವಳನ್ನು ಪಾರು ಮಾಡುತ್ತಿದ್ದದ್ದು ಇತರ ಸಮುದಾಯದ ಆಕೆಯ ಸ್ನೇಹಿತರೆ. ಸಾಬರ ಹೀರವ್ವ ಮನೆಯಲ್ಲಿ ಕರೆಯಲು ಎಮ್ಮೆ ಇಲ್ಲದಾಗ ಹಾಲಿಗೆ ಆಶ್ರಯಿಸಬೇಕಿದ್ದದ್ದು ಕುರುಬರ ಚೆನ್ನಮ್ಮನನ್ನೇ. ಇದೇ ಕುರುಬರ, ಕಂಬಾರರ ಅಕ್ತಸಾಲಿಗರ ಮನೆಯಲ್ಲಿ ಊಟಕ್ಕೆ ಏನೂ ಇಲ್ಲದಾಗ ನೆರವಾಗುತ್ತಿದ್ದದ್ದು ಸಾಬರ ಹೀರವ್ವನ ಮನೆ ಮಜ್ಜಿಗೆ, ಬಿಸಿ ರೊಟ್ಟಿ, ಅನ್ನವೇ. ‘ಸಂಬಂಧ’ ಕತೆಯ ಲಿಂಗಾಯತ ಸಾಹುಕಾರ ಬಸವಣ್ಣೆಪ್ಪ ಸಾಯುವುದಕ್ಕೂ ಮೊದಲು ಬರೆದಿಟ್ಟಿದ್ದ ವಿಲ್‌ನಲ್ಲಿ ಮೂವತ್ತೈದು ವರ್ಷಗಳ ಕಾಲ ಜೊತೆಗಿದ್ದ ಸಾಬರ ರಾಜವ್ವನಿಗೆ ಏನೂ ಪಾಲು ನೀಡದಿದ್ದಾಗ ಮೊದಲ ಹೆಂಡತಿ ಚೆನ್ನವ್ವ ಆಸ್ತಿಯ ಹಣವನ್ನು ಆಕೆಗೂ ಹಂಚುವುದು ಪರಸ್ಪರ ಮಾನವೀಯ ಸಂಬಂಧವನ್ನು ಬಿಂಬಿಸುತ್ತದೆ. ಹಿಂದೂ-ಮುಸ್ಲಿಂ ಭೇದವೇ ಕಾಣದ ಕತೆಯಲ್ಲಿ ರಾಜವ್ವ ಮತ್ತು ಆಕೆಯ ಮಗಳು ಸುಂದ್ರವ್ವ “ಸುತ್ತಲಿನವರು ಕರೆದ ಹಿಂದು ಹೆಸರುಗಳಿಂದಲೇ ಗುರುತಿಸಿಕೊಂಡವರು. ಮುಂದೆ ತಾವು ಮುಸಲ್ಮಾನರೆಂಬುದನ್ನೇ ಆ ತಾಯಿ ಮಗಳು ಮರೆತಿದ್ದರು”

‘ಒಂದು ಸಾವಿನ ಸುತ್ತ’, ‘ಬಿಟ್ಟೆನೆಂದರೆ ಬಿಡದೀ…’, ‘ಬಳೆ’ ಕತೆಗಳಲ್ಲಿನ ಸ್ತ್ರೀ ಪಾತ್ರಗಳನ್ನು ಸಬಿಹಾ ಅವರು ಸಶಕ್ತವಾಗಿ ಕಟ್ಟಿಕೊಟ್ಟಿದ್ದಾರೆ. ಒಂದು ಸಾವಿನ ಸುತ್ತ ಕತೆಯ ಶಮೀಮ ತನ್ನ ಗಂಡ ಇಸ್ಮಾಯಿಲ್‌ನ ನಪುಂಸಕತ್ವದ ವಂಚನೆಯಿಂದ ಹೊರಬರಲು ತಾನೇ ತಲಾಖ್ ಕೇಳಲು ಮುಂದಾಗುತ್ತಾಳೆ. ಅಷ್ಟೇಯಲ್ಲ, ಆತನ ಸಾವಿನ ನಂತರ ಆಸ್ತಿಯ ಹಕ್ಕಿಗಾಗಿ ಹೋರಾಡಿ ಗೆಲುವನ್ನೂ ಸಾಧಿಸುತ್ತಾಳೆ. ಹೆಣ್ಣಿನ ಈ ರೀತಿಯ ಹೋರಾಟಕ್ಕೆ ನ್ಯಾಯ ದೊರಕುವಂತೆ ಮಾಡುವುದು ಇಲ್ಲಿನ ಕತೆಗಳ ವೈಶಿಷ್ಟ್ಯ. ‘ಬಿಟ್ಟೆನೆಂದರೆ ಬಿಡದಿ…’ ಕತೆಯ ನಾಯಕಿ ಕೂಡ ಪುರುಷ ಪ್ರಧಾನ ವ್ಯವಸ್ಥೆಯೊಂದಿಗೆ ತನ್ನ ಇರುವಿಕೆಯನ್ನು ಮತ್ತೆ ಮತ್ತೆ ಪ್ರಶ್ನಿಸಿಕೊಳ್ಳುತ್ತ ತರ್ಕಬದ್ದವಾದ ಚಿಂತನೆಯತ್ತ ಸಾಗುತ್ತಾಳೆ. ಜಾತಿ ಧರ್ಮವೆಂಬ ನಿರ್ಬಂಧಗಳನ್ನು ಮೀರಿದ ಬದುಕನ್ನು ಮಗಳಿಗೆ ದಕ್ಕಿಸಬೇಕೆಂಬ ಪ್ರಯತ್ನ ‘ನಮ್ಮೂರು ಚಂದವೋ… ಕತೆಯ ತಾಯಿಯದು. ಆದರೆ ಮಗಳು ಕೇಳುವ, ‘ಅಮ್ಮಾ, ನಾವು ಹಿಂದೂನಾ? ಮುಸ್ಲಿಮಾ?’ ಎಂಬ ಪ್ರಶ್ನೆ ಆಕೆಯನ್ನು ದಂಗಾಗುವಂತೆ ಮಾಡುತ್ತದೆ. ಜಾತಿ, ಉಪಜಾತಿ, ಧರ್ಮ, ಊರು, ರಾಜ್ಯ ಎಂಬ ಪ್ರತ್ಯೇಕ ಐಡೆಂಟಿಯೇ ಇಲ್ಲವಾದ ಕಾಲದಿಂದ, ಗೋಡೆಗೆ ಬಳಿದ ಬಣ್ಣದಿಂದಲೇ ಯಾವ ಧರ್ಮೀಯರೆಂದು ಗುರುತಿಸುವ ಈ ಹೊತ್ತಿಗೆ ಬಂದು ತಲುಪಿರು ವಾಗ ಮಗಳನ್ನು ಇದರ ಸೋಂಕಿನಿಂದ ಹೇಗೆ ದೂರವಿರಿಸಬೇಕೆಂದು ತಾಯಿ ಚಿಂತಿಸು ವಷ್ಟರಲ್ಲಿ ವ್ಯವಸ್ಥೆಯೇ ಇಲ್ಲಿ ಮೇಲುಗೈ ಸಾಧಿಸಿರುತ್ತದೆ.

ಅಂತರ್ಜಾತಿ ಮತ್ತು ಅಂತರಧರ್ಮಿಯ ವೈವಾಹಿಕ ಸಂಬಂಧಗಳು ಇಲ್ಲಿನ ಕತೆಗಳಲ್ಲಿ ಗಟ್ಟಿಯಾಗಿ ಬೆಸೆದುಕೊಂಡಿದೆ. ‘ಇಡಿಗಾಳು’ ಕತೆಯ ನಫೀಸಾ-ಸದಾಶಿವ ದಂಪತಿ, ‘ಸಂಬಂಧ’ದಲ್ಲಿನ ಬಸವಣ್ಣೆಪ್ಪ-ಸಾಬರ ರಾಜವ್ವ, ‘ಸಂವೇದನೆ’ಯಲ್ಲಿನ ಮನೋಹರ -ಜರೀನಾ ದಂಪತಿ ಇದಕ್ಕೆ ಉದಾಹರಣೆಯಾಗುತ್ತಾರೆ. ಮರ್ಯಾದ ಹತ್ಯೆ, ಮತೀಯ ಗಲಭೆಗಳು ಹೆಚ್ಚಾಗುತ್ತಿರುವ ವರ್ತಮಾನದ ಸಂದರ್ಭದಲ್ಲಿ ಈ ಪಾತ್ರಗಳು ವಿಶೇಷವೆನಿಸುತ್ತವೆ. ಈ ರೀತಿಯ ಹೊಸ ಬಗೆಯ ಸಾಂಸ್ಕೃತಿಕ ಲೋಕವೊಂದನ್ನು ತೆರೆದಿಡುವ ಸಬೀಹಾ ‘ಕಡಲ ತಡಿಯ ಮನೆ’ ಅವರ ಕಥಾ ಸಂಕಲನದ ಕತೆಗಳು ಮೇಲಿನ ಎಲ್ಲ ಕಾರಣಕ್ಕೆ ಮುಖ್ಯವಾಗುತ್ತವೆ.