ಕನ್ನಡ ಪರ ಹೋರಾಟಗಾರ, ಹಿರಿಯ ಗಾಂಧಿವಾದಿ ಹಾಗೂ ಮೈಸೂರಿನ ನೃಪತುಂಗ ಶಾಲೆಯ ಸಂಸ್ಥಾಪಕರಲ್ಲೊಬ್ಬರಾದ ಸ.ರ.ಸುದರ್ಶನ ಇನ್ನಿಲ್ಲ ಎಂಬುದು ನೋವಿನ ಸಂಗತಿ. ಗೋಕಾಕ್ ಚಳವಳಿ, ಕನ್ನಡ ಭಾಷೆಗೆ ಶಾಸ್ತ್ರೀಯ ಸ್ಥಾನಮಾನ ಪಡೆಯಲು ಆಗ್ರಹಿಸಿ ನಡೆದ ಚಳವಳಿ ಸೇರಿದಂತೆ ಹಲವಾರು ಚಳವಳಿಗಳಲ್ಲಿ ಸಕ್ರಿಯವಾಗಿ ಪಾಲ್ಗೊಂಡಿದ್ದರು. ನಾಡು, ನುಡಿಗೆ ಧಕ್ಕೆ ಬಂದಾಗ ಸಮಾನ ಮನಸ್ಕ ರೊಂದಿಗೆ ಚಳವಳಿಗೆ ಧುಮುಕುತ್ತಿದ್ದರು. ಕನ್ನಡ ಕ್ರಿಯಾ ಸಮಿತಿಯ ಪ್ರಧಾನ ಕಾರ್ಯ ದರ್ಶಿಯಾಗಿಯೂ ತಮ್ಮ ಜೀವಿತ ಕಾಲದವರೆಗೂ ಮುಂದುವರಿದಿದ್ದರು. ನಗರದ ಮಹಾರಾಣಿ ಎನ್ ಟಿಎಂ ಮಾದರಿ ಶಾಲೆಯನ್ನು ಉಳಿಸಿಕೊಳ್ಳಲು ಹೋರಾಟ ನಡೆಸಿದ್ದರು. ಮೈಸೂರು ವಿಶ್ವವಿದ್ಯಾನಿಲಯದ ಪ್ರಸಾರಾಂಗದಲ್ಲಿ ಇಂಗ್ಲಿಷ್-ಕನ್ನಡ ನಿಘಂಟಿನ ಸಹಾಯಕ ಸಂಪಾದಕರಾಗಿ ಕಾರ್ಯನಿರ್ವಹಿಸಿದ್ದ ಅವರು ೨೫,೦೦೦ ಪದಗಳಿರುವ ಸಂಕ್ಷಿಪ್ತ ಇಂಗ್ಲಿಷ್- ಕನ್ನಡ ನಿಘಂಟನ್ನು ಸಿದ್ಧಪಡಿಸಿದ್ದರು. ಕನ್ನಡಕ್ಕಾಗಿ ಅವರು ನಡೆಸಿದ ಹೋರಾಟ ಇತರರಿಗೆ ಮಾದರಿ ಯಾಗಿದೆ.
– ಕೆ.ವಿ.ವಾಸು, ವಿವೇಕಾನಂದ ನಗರ, ಮೈಸೂರು





