ಹೇಮಂತ್‌ಕುಮಾರ್
ರೈತರು ನಿರ್ಲಕ್ಷಿಸಿದರೆ ಶೇ.೪೦ರಿಂದ ೮೦ರಷ್ಟು ಬೆಳೆ ನಷ್ಟವಾಗುವ ಸಂಭವ
ಮಂಡ್ಯ: ಜಿಲ್ಲೆಯಲ್ಲಿ ಕಬ್ಬು ಬೆಳೆಯನ್ನು ಸುಮಾರು ೪೦,೦೦೦ ಹೆಕ್ಟೇರ್ ಪ್ರದೇಶದಲ್ಲಿ ಬೆಳೆಯಲಾಗುತ್ತಿದೆ. ಈಗಾಗಲೇ ವಿವಿಧ ಹಂತಗಳಲ್ಲಿರುವ ಕಬ್ಬು ಬೆಳೆಯಲ್ಲಿ ಬೇರುಹುಳುವಿನ ಬಾಧೆ ಕಂಡುಬಂದಿದ್ದು, ರೈತರು ನಷ್ಟಕ್ಕೊಳ ಗಾಗುವುದನ್ನು ತಪ್ಪಿಸಲು ಕೃಷಿ ವಿಜ್ಞಾನಿಗಳು ಕೆಲವು ಸಲಹೆ ಸೂಚನೆಗಳನ್ನು ನೀಡಿದ್ದಾರೆ.
ವಿ.ಸಿ.ಫಾರಂನ ಕೃಷಿ ವಿಜ್ಞಾನಿಗಳು ಹಾಗೂ ಕೃಷಿ ಇಲಾಖೆಯ ಅಧಿಕಾರಿಗಳು ಈಬೇರುಹುಳುಗಳು ಮಾಡುವ ಹಾನಿಯನ್ನು ಪತ್ತೆ ಹಚ್ಚಿದ್ದಾರೆ. ಸಕಾಲಿಕ ಸಂಶೋಧನೆಗಳಿಂದ ಈ ಹುಳು ಬಾಧೆಯನ್ನು ತಡೆಯಲು ಉಪಕ್ರಮಗಳನ್ನೂ ಕಂಡುಕೊಂಡಿರುವುದು ಆಶಾದಾಯಕ ಬೆಳವಣಿಗೆ. ರೈತರು ಸಕಾಲದಲ್ಲಿ ನಿರ್ವಹಣಾ ಕ್ರಮಗಳನ್ನು ಕೈಗೊಳ್ಳದಿದ್ದಲ್ಲಿ ಬಾಧೆಗೊಳಗಾದ ಬೆಳೆಯಲ್ಲಿ ಶೇ.೪೦ ರಿಂದ ೮೦ರಷ್ಟು ನಷ್ಟ ಉಂಟಾಗುವುದರ ಜೊತೆಗೆ ಸಕ್ಕರೆ ಇಳುವರಿಯೂ ಕುಂಠಿತವಾಗುವ ಸಾಧ್ಯತೆಯಿರುತ್ತದೆ ಎಂದು ಎಚ್ಚರಿಸಿದ್ದಾರೆ.
ಬೇರು ಹುಳುಬಾಧೆ ಕಂಡು ಬಂದಿರುವ ಗ್ರಾಮಗಳು: ಮಂಡ್ಯ ತಾಲ್ಲೂಕಿನ ಶಿವಳ್ಳಿ, ಹಾಡ್ಯ, ಮಾರನಹಳ್ಳಿ, ಚೋಕನಹಳ್ಳಿ, ದುದ್ದ, ಸಂಪಳ್ಳಿ, ಗೊರವಾಲೆ, ಚಂದಗಾಲು, ಬೇಲೂರು, ಕನ್ನಹಟ್ಟಿ, ಹುಲಿವಾನ, ಮದ್ದೂರು ತಾಲ್ಲೂಕಿನ ಸಬ್ಬನಹಳ್ಳಿ, ಕಾಡುಕೊತ್ತನಹಳ್ಳಿ, ಯಡಗನಹಳ್ಳಿ ಭಾಗದಲ್ಲಿ, ಕೆ.ಆರ್.ಪೇಟೆ ತಾಲ್ಲೂಕಿನ ಬೊಮ್ಮೇನಹಳ್ಳಿ, ಕೂಡಲಕುಪ್ಪೆ, ಕೊಮ್ಮೇನಹಳ್ಳಿ ಮತ್ತು ಕೆಲವೆಡೆ, ನಾಗಮಂಗಲ ತಾಲ್ಲೂಕಿನ ಸಾಮಕಹಳ್ಳಿ, ಸುನಗನಹಳ್ಳಿ ಭಾಗದಲ್ಲಿ, ಶ್ರೀರಂಗಪಟ್ಟಣ ತಾಲ್ಲೂಕಿನ ದರಸಗುಪ್ಪೆ, ಕಡತನಾಳು, ಅಚ್ಚಪ್ಪನಕೊಪ್ಪಲು, ರಾಂಪುರ ಮತ್ತಿತರೆಡೆ, ಪಾಂಡಪುರ ತಾಲ್ಲೂಕಿನ ಚಂದ್ರೆ, ಕಡತನಾಳು ಸೇರಿದಂತೆ ಹಲವು ಕಡೆ ಕಂಡುಬಂದಿವೆ.
ಬೇರುಹುಳು-ಗೊಬ್ಬರದ ಹುಳುವಿನ ಪತ್ತೆಯಲ್ಲಿ ಗೊಂದಲ ಗೊಬ್ಬರದ ಹುಳು ಮತ್ತು ಬೇರುಹುಳು ವಿಭಿನ್ನ ಉಪಕುಟುಂಬಗಳಿಗೆ ಸೇರಿದ್ದರೂ ಬಣ್ಣ ಮತ್ತು ಆಕಾರದಲ್ಲಿ ಒಂದೇ ರೀತಿ ಇರುವುದರಿಂದ ರೈತರಿಗೆ ಗೊಂದಲ ಉಂಟಾಗುತ್ತದೆ. ಗೊಬ್ಬರದ ಹುಳು ಕೇವಲ ಗೊಬ್ಬರವನ್ನು ಮಾತ್ರ ತಿಂದು ಜೀವಿಸುತ್ತದೆ ಹಾಗೂ ಸಂಪೂರ್ಣವಾಗಿ ಬೆಳೆದ ಗೊಬ್ಬರದ ಹುಳು ಕೋಶಾವಸ್ಥೆಯ ನಂತರ ತೆಂಗಿನ ಸುಳಿಕೊರೆಯುವ ರೈನೋಸಿರಸ್ ದುಂಬಿಯಾಗಿ ಪರಿವರ್ತಿತವಾಗುತ್ತದೆ. ಆದರೆ, ಬೇರುಹುಳು ಸಸ್ಯದ ಜೀವಂತ ಬೇರನ್ನು ಮಾತ್ರ ತಿಂದು ಜೀವಿಸುತ್ತದೆ ಎಂಬುದು ಇಲ್ಲಿ ಗಮನಾರ್ಹ ಸಂಗತಿ.
ಈ ಹುಳುವಿನ ಬಾಧೆಯ ಲಕ್ಷಣಗಳು: ಕಬ್ಬಿನ ಗರಿಗಳು ಹಳದಿಯಾಗಿ ತ್ವರಿತಗತಿಯಲ್ಲಿ ಒಣಗುವುದು ಮತ್ತು ಅಂತಹ ಗಿಡಗಳು ಗಿಡ್ಡವಾಗುತ್ತವೆ. ನಂತರ ಸೊರಗುತ್ತವೆ. ಇಂತಹ ಗಿಡಗಳನ್ನು ಕೈಯಿಂದ ಸುಲಭವಾಗಿ ಬುಡಸಮೇತ ಕೀಳಬಹುದು. ಬಾಧೆಗೊಳಗಾದ ಗಿಡಗಳ ಬುಡಭಾಗದಲ್ಲಿ ಕೆನೆಬಿಳುಪು ಬಣ್ಣದ, ಕಿರುಬೆರಳು ಗಾತ್ರದ ಮರಿಹುಳು ಕಂಡುಬರುತ್ತವೆ. ಕೂಳೆ ಕಬ್ಬಿನಲ್ಲಿ ಬೇರುಹುಳುವಿನ ಹಾವಳಿ ಸಾಮಾನ್ಯವಾಗಿ ಹೆಚ್ಚಾಗಿರುತ್ತದೆ. ಎಂದರೆ ರೈತರು ಈ ಪೀಡೆಯನ್ನು ನಿವಾರಿಸಿಕೊಳ್ಳದಿದ್ದರೆ ಬೆಳೆ ನಷ್ಟ ಅನುಭವಿಸುವುದು ಗ್ಯಾರಂಟಿ ಎಂದಾಯಿತು.
ಬೇರುಹುಳುವಿನ ನಿವಾರಣೆ ಹೇಗೆ? :
* ಬೇರುಹುಳುಗಳ ಮರಿಹುಳುಗಳು ಮೂರನೇ ಹಂತವನ್ನು ತಲುಪಿದ್ದು, ಈ ಹಂತದಲ್ಲಿ ಹೆಚ್ಚಿನ ಬಾಧೆ ಉಂಟುಮಾಡುವುದರಿಂದ ಬೆಳೆ ಒಣಗುವುದನ್ನು ರೈತರು ಗಮನಿಸಬಹುದು. ಅಂತಹ ಒಣಗಿದ ಬುಡಗಳನ್ನು ಕಿತ್ತು ಮರಿಹುಳು ಇರುವುದನ್ನು ಖಚಿತ ಪಡಿಸಿಕೊಂಡು ನಂತರ ಎಕರೆಗೆ ೫೦೦ ಮಿ.ಲೀ. ಇಮಿಡಾಕ್ಲೋಪ್ರಿಡ್ (೧೭.೮ ಎಸ್.ಎಲ್.) ಅಥವಾ ೨ ಲೀಟರ್ ಕ್ಲೋರೋಪೈರಿಫಾಸ್ (೨೦ ಇ.ಸಿ.) ಕೀಟನಾಶಕವನ್ನು ೮೦೦-೧೦೦೦ ಲೀಟರ್ ನೀರಿನಲ್ಲಿಬೆರೆಸಿ ಮಣ್ಣಿಗೆ ಸೇರಿಸಿ ನಂತರ ಕಬ್ಬಿನ ಬುಡ ನೆನೆಯುವಂತೆ ಒಂದೆರಡು ದಿನ ಗದ್ದೆಯಲ್ಲಿ ನೀರು ನಿಲ್ಲಿಸಬೇಕು.
* ಜೈವಿಕ ಕ್ರಮವಾಗಿ ಎಕರೆಗೆ ೨ ಕಿ.ಗ್ರಾಂ. ಮೆಟರೈಝಿಯಂ ಅನಿಸೋಪ್ಲಿಯೆ ಶಿಲೀಂಧ್ರವನ್ನು ೧೦೦ ಕಿ.ಗ್ರಾಂ. ಕೊಟ್ಟಿಗೆ ಗೊಬ್ಬರದೊಂದಿಗೆ ಮಿಶ್ರಣ ಮಾಡಿ ಬೆಳೆಯ ಸಾಲಿನಲ್ಲಿ ಹಾಕಿ ನೀರು ಕೊಡಬೇಕು. ಈ ಶಿಲೀಂಧ್ರವು ಜೈವಿಕ ಗೊಬ್ಬರಗಳ ಉತ್ಪಾದನಾ ಘಟಕ, ಕೃಷಿ ಸೂಕ್ಷಾ ಣು ಜೀವಿಶಾಸ್ತ್ರ ವಿಭಾಗ, ಕೃಷಿ ಮಹಾವಿದ್ಯಾಲಯ, ವಿ.ಸಿ. ಫಾರಂ, ಮಂಡ್ಯ ಇಲ್ಲಿ ದೊರೆಯುತ್ತದೆ. ಹೆಚ್ಚಿನ ಮಾಹಿತಿಗಾಗಿ ಮೊ.ಸಂ.೯೯೮೦೫೪೨೫೯೮ಅನ್ನು ಸಂಪರ್ಕಿಸಬಹುದು.
* ಕಟಾವು ಹಂತದಲ್ಲಿರುವ ಬೆಳೆಗೆ ಬೇರುಹುಳುವಿನ ಭಾದೆ ಹೆಚ್ಚಿನ ಪ್ರಮಾಣದಲ್ಲಿ ಕಂಡುಬಂದಲ್ಲಿ ಕೂಳೆ ಬೆಳೆ ಬದಲಾಗಿ ಭತ್ತದ ಬೆಳೆಯನ್ನು ಬೆಳೆಯುವುದು ಸೂಕ್ತ ಎಂದು ಕೀಟ ಶಾಸ್ತ್ರಜ್ಞರು ತಿಳಿಸಿದ್ದಾರೆ.
* ರೈತರು ಹೆಚ್ಚಿನ ಮಾಹಿತಿಗಾಗಿ ಡಾ.ಜಿ.ಎಂ.ದರ್ಶಿನಿ, ಕೀಟಶಾಸ್ತ್ರಜ್ಞರು, ವಲಯ ಕೃಷಿ ಸಂಶೋಧನಾ ಕೇಂದ್ರ ವಿ.ಸಿ.ಫಾರಂ ಮೊ.ಸಂ.೬೩೬೨೨೭೫೬೬೪, ೯೪೮೧೯೭೫೨೬೦ಅನ್ನು ಸಂಪರ್ಕಿಸಿ ಮಾಹಿತಿ ಪಡೆಯಬಹುದು.





