Mysore
26
haze

Social Media

ಶುಕ್ರವಾರ, 05 ಡಿಸೆಂಬರ್ 2025
Light
Dark

ಜಿಲ್ಲೆಯಲ್ಲಿ ರಿವರ್‌ ರ‍್ಯಾಫ್ಟಿಂಗ್‌ಗೆ ಜೀವಕಳೆ

River rafting in Madikeri district

ಮಡಿಕೇರಿ: ಪ್ರವಾಸಿಗರ ಹಾಟ್‌ಸ್ಪಾಟ್ ಕೊಡಗು ಜಿಲ್ಲೆ ಯಲ್ಲಿ ರಿವರ್ ರ‍್ಯಾಫ್ಟಿಂಗ್ ಜೀವಕಳೆ ಪಡೆದುಕೊಂಡಿದ್ದು, ಜಿಲ್ಲೆಯ ದುಬಾರೆ ಹಾಗೂ ಬರಪೊಳೆಯಲ್ಲಿ ರಿವರ್ ರ‍್ಯಾಫ್ಟಿಂಗ್ (ಜಲಕ್ರೀಡೆ) ಆರಂಭಗೊಂಡಿದೆ.

ಜಿಲ್ಲೆಯಲ್ಲಿ ಉತ್ತಮವಾಗಿ ಮಳೆಯಾಗುತ್ತಿರುವ ಪರಿಣಾಮ ನೀರಿನ ಹರಿವು ಹೆಚ್ಚಿದ್ದು, ರ‍್ಯಾಫ್ಟಿಂಗ್ ಮಾಡುವ ಪ್ರವಾಸಿಗರಿಗೆ ಇದು ಮತ್ತಷ್ಟು ಹೊಸ ಅನುಭವ ನೀಡುತ್ತಿದೆ. ನದಿ ಹರಿಯುತ್ತಿರುವಾಗ ಅದರಲ್ಲಿ ರ‍್ಯಾಫ್ಟಿಂಗ್ ಮಾಡುವ ಅನುಭವವೇ ಬೇರೆ. ಅದರಲ್ಲೂ ಹೆಚ್ಚಿನ ಮಳೆಯಾದ ಇಂತಹ ಸಂದರ್ಭದಲ್ಲಿ ಜಲಸಾಹಸಗಳಲ್ಲಿ ಭಾಗವಹಿಸಲು ಪ್ರವಾಸಿಗರು ಮುಗಿ ಬೀಳುತ್ತಾರೆ.

ಮುಂಗಾರು ಸಂದರ್ಭದಲ್ಲಿ ಜಲಪಾತ ವೀಕ್ಷಣೆ ಹಾಗೂ ಜಲಸಾಹಸ ಕ್ರೀಡೆ ಆಕರ್ಷಣೀಯ ಹಾಗೂ ಪ್ರವಾಸಿಗರನ್ನು ಸೆಳೆ ಯುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಪ್ರವಾಸೋದ್ಯಮ ಕ್ಷೇತ್ರದಲ್ಲಿ ರಿವರ್ ರ‍್ಯಾಫ್ಟಿಂಗ್ ಒಂದು ಭಾಗವಾಗಿದ್ದು, ಪ್ರವಾಸಿಗರು ಜಲಕ್ರೀಡೆಯಲ್ಲಿ ಪಾಲ್ಗೊಳ್ಳಲು ಕಾತರದಿಂದ ಕಾಯುತ್ತಿರುತ್ತಾರೆ. ಅದರಲ್ಲೂ ಕೊಡಗಿನ ಪ್ರಕೃತಿಯ ನಡುವಿನ ಈ ಜಲಕ್ರೀಡೆ ಪ್ರವಾಸಿಗಳಿಗೆ ವಿಶೇಷ ಅನುಭವ ನೀಡುತ್ತದೆ. ಇದೆಲ್ಲದರ ನಡುವೆ ರ‍್ಯಾಫ್ಟಿಂಗ್ ನಡೆಸುವವರಿಗೆ ಜಿಲ್ಲಾಡಳಿತ ಸೂಕ್ತ ಎಚ್ಚರಿಕೆಯನ್ನು ನೀಡಿದ್ದು, ರ‍್ಯಾಫ್ಟ್ ಮಾಲೀಕರು ಕಡ್ಡಾಯವಾಗಿ ಪರವಾನಗಿ ನವೀಕರಣ ಹಾಗೂ ಫಿಟ್ನೆಸ್ ಪ್ರಮಾಣಪತ್ರ ಪಡೆದುಕೊಂಡು ಜಲಕ್ರೀಡೆ ನಡೆಸಲು ರಿವರ್ ರ‍್ಯಾಫ್ಟಿಂಗ್ ನಿರ್ವಹಣೆ ಮತ್ತು ಮೇಲುಸ್ತುವಾರಿ ಸಮಿತಿ ಸಭೆಯಲ್ಲಿ ಸೂಚಿಸಲಾಗಿದೆ.

ರಿವರ್ ರ‍್ಯಾಫ್ಟಿಂಗ್ ಸಂದರ್ಭದಲ್ಲಿ ಪ್ರತಿಯೊಬ್ಬರ ಸುರಕ್ಷತೆ ಮತ್ತು ಜೀವರಕ್ಷಣೆ ಅತಿ ಮುಖ್ಯ ವಾಗಿದೆ. ಆ ನಿಟ್ಟಿನಲ್ಲಿ ರಿವರ್ ರ‍್ಯಾಫ್ಟರ್‌ಗಳಿಗೆ ಕಡ್ಡಾಯ ವಾಗಿ ಫಿಟ್ನೆಸ್ ಪ್ರಮಾಣಪತ್ರ ಪಡೆಯಬೇಕು. ಜೊತೆಗೆ ಪ್ರತಿ ವರ್ಷ ನವೀಕರಣ ಮಾಡಿಕೊಳ್ಳಬೇಕು. ನಂತರ ರಿವರ್ ರ‍್ಯಾಫ್ಟಿಂಗ್ ನಡೆಸಬೇಕು ಎಂದು ಸೂಚಿಸಲಾಗಿದೆ.

ಸೈನ್‌ಬೋರ್ಡ್ ಅಳವಡಿಕೆ: ಪ್ರವಾಸಿಗರನ್ನು ಮತ್ತಷ್ಟು ಸೆಳೆಯುವ ನಿಟ್ಟಿನಲ್ಲಿ ಹುಣಸೂರು ತಾಲ್ಲೂಕಿನ ಬಿಳಿಕೆರೆ, ಮೈಸೂರು ರಸ್ತೆಯ ಹುಣಸೂರು-ಗೋಣಿಕೊಪ್ಪ ಜಂಕ್ಷನ್, ಪಿರಿಯಾಪಟ್ಟಣ ಸಿದ್ದಾಪುರ ಬಳಿಯ ಜಂಕ್ಷನ್‌ಗಳಲ್ಲಿ ಸೈನ್ ಬೋರ್ಡ್ ಅಳವಡಿಸುವಂತೆಯೂ ಜಿಲ್ಲಾಡಳಿತ ಸೂಚಿಸಿದ್ದು, ಹೆಚ್ಚಿನ ಪ್ರವಾಸಿಗರನ್ನು ಜಿಲ್ಲೆಯತ್ತ ಆಕರ್ಷಿಸಲು ಮುಂದಾಗಿದೆ.

ಕಾಯಕಿಂಗ್ ಜಲಕ್ರೀಡೆಗೆ ಸಿದ್ಧತೆ: ಕರ್ನಾಟಕ ಪ್ರವಾಸೋದ್ಯಮ ನೀತಿ ೨೦೨೪-೨೯ರಡಿ ಜಲ ಸಾಹಸ ಕ್ರೀಡೆಯಲ್ಲಿ ಒಂದಾದ ಕಾಯಕಿಂಗ್ ನಡೆಸಲು ಅವಕಾಶವಿದೆ. ಈ ಸಂಬಂಧ ಕೊಡಗು ಜಿಲ್ಲೆಯಲ್ಲಿ ೧೧ ಅರ್ಜಿಗಳು

ಸಲ್ಲಿಕೆಯಾಗಿವೆ. ಹೇಮಾವತಿ ನದಿ ಪಾತ್ರ ಕೊಡ್ಲಿಪೇಟೆ ದೊಡ್ಡಕುಂದ, ಹಟ್ಟಿಹೊಳೆ ಬಳಿಯ ದೇವಸ್ತೂರು ನದಿ, ಕಾವೇರಿ ನದಿ ಪಾತ್ರದ ಐವತ್ತೊಕ್ಲು, ಹೊದ್ದೂರು, ಹಾರಂಗಿ ಹಿನ್ನೀರು ಪ್ರದೇಶದ ಹೆರೂರು, ನಾಕೂರು ಶಿರಂಗಾಲ, ಬೈರಂಪಾಡ, ಚಿಕ್ಕಬೆಟ್ಟಗೇರಿ ಈ ಪ್ರದೇಶಗಳಲ್ಲಿ ಕಾಯಕಿಂಗ್ ಮಾಡಲು ಅರ್ಜಿಗಳು ಸಲ್ಲಿಕೆಯಾಗಿದೆ. ಈ ಅರ್ಜಿಗಳ ಸಂಬಂಧ ಕಾರ್ಯಸಾಧ್ಯತಾ ವರದಿ ನೋಡಿಕೊಂಡು ಮುಂದಿನ ಕ್ರಮವಹಿಸಲು ತೀರ್ಮಾನಿಸಲಾಗಿದೆ. ದುಬಾರೆಯಲ್ಲಿ ಒಟ್ಟು ೭೫ ರ‍್ಯಾಫ್ಟಿಂಗ್ ಕಾರ್ಯ ನಿರ್ವಹಿಸುತ್ತಿದ್ದು, ಬರಪೊಳೆಯಲ್ಲಿ ೨೪ ರ‍್ಯಾಫ್ಟ್‌ಗಳು ಕಾರ್ಯನಿರ್ವಹಿಸುತ್ತಿವೆ ಎಂದು ಪ್ರವಾಸೋದ್ಯಮ ಇಲಾಖೆಯ ಉಪ ನಿರ್ದೇಶಕಿ ಅನಿತಾ ಭಾಸ್ಕರ್ ಮಾಹಿತಿ ನೀಡಿದ್ದಾರೆ.

ರ‍್ಯಾಫ್ಟಿಂಗ್ ಫಿಟ್ನೆಸ್ ಪ್ರಮಾಣ ಪತ್ರ ವನ್ನು ಕಡ್ಡಾಯವಾಗಿ ಜನರಲ್ ತಿಮ್ಮಯ್ಯ ರಾಷ್ಟ್ರೀಯ ಸಾಹಸ ಅಕಾಡೆಮಿ(ಜೇತ್ನ)ಯಿಂದ ಪಡೆಯಬೇಕು. ಜೊತೆಗೆ ಪೊಲೀಸ್ ಇಲಾಖೆಯಿಂದಲೂ ಪರಿಶೀಲನೆ ನಡೆಸಬೇಕು. ಜಲಕ್ರೀಡೆ ಸಂದರ್ಭದಲ್ಲಿ ಜೀವರಕ್ಷಕ ಜಾಕೆಟ್‌ಅನ್ನು ಕಡ್ಡಾಯವಾಗಿ ಧರಿಸಬೇಕು. ಜೊತೆಗೆ ಗೈಡ್ ಗಳು ಕೌಶಲ ಪರೀಕ್ಷೆ ಮಾಡಿಸಿರಬೇಕು. ಸಮವಸ್ತ್ರವನ್ನು ಧರಿಸಿ ಕರ್ತವ್ಯ ನಿರ್ವಹಿಸಬೇಕು. – ಡಾ. ಮಂಥರ್‌ಗೌಡ, ಶಾಸಕರು

ರಿವರ್ ರ‍್ಯಾಫ್ಟಿಂಗ್ ಸಂದರ್ಭದಲ್ಲಿ ಏನಾದರೂ ತೊಂದರೆ ಉಂಟಾದಲ್ಲಿ ಕೊಡಗು ಜಿಲ್ಲೆಯ ಇಡೀ ಪ್ರವಾಸೋದ್ಯಮಕ್ಕೆ ಪೆಟ್ಟು ಬೀಳಲಿದೆ. ಆದ್ದರಿಂದ ಈ ಬಗ್ಗೆ ಎಚ್ಚರವಹಿಸಿ ಕಾರ್ಯನಿರ್ವ ಹಿಸಬೇಕು. ರಿವರ್ ರ‍್ಯಾಫ್ಟಿಂಗ್ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು. ಸೋಮವಾರಪೇಟೆ ತಾಲ್ಲೂಕಿನ ಕುಮಾರಹಳ್ಳಿಯಲ್ಲಿ ರಿವರ್ ರ‍್ಯಾಫ್ಟಿಂಗ್ ನಡೆಸುವ ಸಂಬಂಧ ಈಗಾಗಲೇ ಅನುಮತಿ ನೀಡಲಾಗಿದೆ. ಆದರೆ ಇನ್ನೂ ಕಾರ್ಯರೂಪಕ್ಕೆ ಬಾರದಿರುವ ಹಿನ್ನೆಲೆಯಲ್ಲಿ ಸ್ಥಳ ಪರಿಶೀಲಿಸಿ ಮುಂದಿನ ಕ್ರಮ ವಹಿಸಲಾಗುವುದು. – ವೆಂಕಟ್‌ರಾಜಾ, ಜಿಲ್ಲಾಧಿಕಾರಿ

– ಪುನೀತ್ ಮಡಿಕೇರಿ 

Tags:
error: Content is protected !!