Mysore
29
scattered clouds

Social Media

ಬುಧವಾರ, 10 ಡಿಸೆಂಬರ್ 2025
Light
Dark

ನವೆಂಬರ್‌ನಲ್ಲೇ 1.59 ಕೋಟಿ ರೂ ರಾಜಸ್ವ ಸಂಗ್ರಹ

ನವೀನ್ ಡಿಸೋಜ

ಮಡಿಕೇರಿ ಪ್ರಾದೇಶಿಕ ಸಾರಿಗೆ ಕಚೇರಿ ಅಧಿಕಾರಿಗಳ ಸಾಧನೆ ಜಿಲ್ಲೆಯಾದ್ಯಂತ ನಿರಂತರ ವ್ಯಾಪಕ ತಪಾಸಣಾ ಕ್ರಮ

ಮಡಿಕೇರಿ: ಪ್ರಾದೇಶಿಕ ಸಾರಿಗೆ ಕಚೇರಿ ಅಧಿಕಾರಿಗಳು ಪಾರ್ಟ್ ಎ, ಪಾರ್ಟ್ ಬಿ ತೆರಿಗೆ ಹಾಗೂ ದಂಡ ಸೇರಿದಂತೆ ಒಟ್ಟು ೧.೫೯ ಕೋಟಿ ರೂ. ರಾಜಸ್ವ ಸಂಗ್ರಹಿಸುವ ಮೂಲಕ ಸಾಧನೆ ಮಾಡಿದ್ದಾರೆ.

ಕೊಡಗು ಜಿಲ್ಲೆಯಲ್ಲಿ ಪ್ರವಾಸಿ ಸೀಜನ್ ಆರಂಭವಾಗಿದೆ. ನವೆಂಬರ್ ತಿಂಗಳಿನಿಂದಲೇ ಹೆಚ್ಚಿನ ಪ್ರವಾಸಿ ವಾಹನಗಳು ಜಿಲ್ಲೆಗೆ ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ಆರ್‌ಟಿಒ ಅಧಿಕಾರಿಗಳು ಹೊರಗಿನಿಂದ ಆಗಮಿಸುವ ಪ್ರವಾಸಿ ವಾಹನಗಳ ನಿರಂತರ ತಪಾಸಣೆಯಲ್ಲಿ ತೊಡಗಿದ್ದಾರೆ. ಆ ಮೂಲಕ ನವೆಂಬರ್ ತಿಂಗಳಲ್ಲೇ ಅತಿ ಹೆಚ್ಚು ರಾಜಸ್ವ ಸಂಗ್ರಹಿಸಿದ್ದಾರೆ.

ಕೇರಳ ರಾಜ್ಯ ಸೇರಿದಂತೆ ರಾಜ್ಯದ ನಾನಾ ಭಾಗಗಳಿಗೆ ಪ್ರವಾಸಿಗರನ್ನು ಹೊತ್ತ ಸಾವಿರಾರು ವಾಹನಗಳು ದಿನನಿತ್ಯ ಬರುತ್ತವೆ. ನೂರಾರು ಬಸ್‌ಗಳು ಕೊಡಗು ಜಿಲ್ಲೆಯ ಗಡಿಯ ಮೂಲಕವೇ ರಾಜ್ಯದ ಗಡಿಯನ್ನು ಪ್ರವೇಶಿ ಸುತ್ತವೆ. ಈ ಹಿನ್ನೆಲೆಯಲ್ಲಿ ವಿರಾಜಪೇಟೆಯ ಮಾಕುಟ್ಟ ಸೇರಿದಂತೆ ಕೇರಳದ ಗಡಿಯಲ್ಲಿ ನಿರಂತರ ತಪಾಸಣೆ ನಡೆಸಲಾಗುತ್ತಿದೆ.

ಕೇರಳದ ಬಸ್ ಮತ್ತು ಇತರೆ ವಾಹನಗಳ ದಾಖಲೆ ಪರಿಶೀಲನೆ ನಡೆಸಲಾಗುತ್ತಿದ್ದು, ತೆರಿಗೆ ಕಟ್ಟಿಸಿಕೊಳ್ಳುತ್ತಿದ್ದಾರೆ. ಅಲ್ಲದೇ ಸರಿಯಾದ ದಾಖಲೆಗಳನ್ನು ಹೊಂದಿಲ್ಲದ ವಾಹನಗಳಿಗೆ ದಂಡ ವಿಧಿಸುತ್ತಿದ್ದಾರೆ. ರಾಜ್ಯಕ್ಕೆ ಬರುವ ಮೊದಲು ಕೇರಳದಲ್ಲಿ ವಿಶೇಷ ಪರವಾನಗಿ ಪಡೆದು ಬರುವ ವಾಹನಗಳು(ಬಸ್ಸುಗಳು) ಇಲ್ಲಿ ತೆರಿಗೆ ಪಾವತಿ ಮಾಡಬೇಕಾಗುತ್ತದೆ. ಹೀಗೆ ಪ್ರತಿ ವಾಹನದಿಂದಲೂ ಪಾರ್ಟ್ ಎ ಮತ್ತು ಪಾರ್ಟ್ ಬಿ ತೆರಿಗೆ ಸಂಗ್ರಹ ಮಾಡಲಾಗುತ್ತಿದ್ದು, ಪಾರ್ಟ್ ಬಿ ತೆರಿಗೆಯಿಂದಲೇ ಬರೋಬ್ಬರಿ ೧.೫೭ ಕೋಟಿ ರೂ. ಸಂಗ್ರಹವಾಗಿದೆ ಎಂದು ಪ್ರಾದೇಶಿಕ ಸಾರಿಗೆ ಅಧಿಕಾರಿ ಎಸ್.ಟಿ.ಸತೀಶ್ ಮಾಹಿತಿ  ನೀಡಿದರು. ಡಿಸೆಂಬರ್ ಮತ್ತು ಜನವರಿ ತಿಂಗಳುಗಳಲ್ಲಿ ರಾಜ್ಯದಿಂದ ಹೆಚ್ಚು ವಾಹನಗಳು ಕೇರಳದ ಶಬರಿಮಲೆಗೆ ತೆರಳುತ್ತವೆ. ಇಲ್ಲಿಂದ ತೆರಳುವ ಮತ್ತು ಅಲ್ಲಿಂದ ಬರುವ ವಾಹನಗಳು ಆಯಾ ರಾಜ್ಯಗಳಿಂದ ವಿಶೇಷ ಪರ್ಮಿಟ್ ಪಡೆದು ಗಡಿ ಪ್ರವೇಶ ಮಾಡಬೇಕಾಗುತ್ತದೆ.

ಆದರೆ ಕೆಲವರು ಈ ತೆರಿಗೆ ಉಳಿಸುವ ಸಲುವಾಗಿ ಕೇರಳದ ವಾಹನಗಳನ್ನೇ ರಾಜ್ಯಕ್ಕೆ ಕರೆಸಿ ಶಬರಿಮಲೆಗೆ ತೆರಳುತ್ತಾರೆ. ಅಂತಹ ತೆರಿಗೆ ವಂಚನೆ ಪ್ರಕರಣಗಳು ಕಂಡುಬಂದರೆ ಅಂತಹ ವಾಹನ ಗಳಿಗೆ ಭಾರೀ ದಂಡ ವಿಧಿಸಲಾಗುತ್ತದೆ ಎಂದು ಆರ್‌ಟಿಒ ಎಸ್.ಟಿ ಸತೀಶ್ ತಿಳಿಸಿದ್ದಾರೆ.

ಎಷ್ಟೆಷ್ಟು ತೆರಿಗೆ ಸಂಗ್ರಹ?:  ನವೆಂಬರ್ ತಿಂಗಳಿನಲ್ಲಿ ಜಿಲ್ಲೆಯಲ್ಲಿ ತಪಾಸಣೆ ನಡೆಸಲಾದ ವಾಹನಗಳ ಪೈಕಿ ೧,೧೪೦ ವಾಹಗಳಿಂದ ಪಾರ್ಟ್ ಬಿ ತೆರಿಗೆ ೧,೫೭,೨೧,೦೨೪ ರೂ. ಪಾರ್ಟ್ ಎ ತೆರಿಗೆ ೨೯,೩೫೭ ರೂ. ಮತ್ತು ೨,೨೭,೮೦೦ ರೂ. ದಂಡ ಸೇರಿದಂತೆ ಒಟ್ಟು ೧ಕೋಟಿ ೫೯ ಲಕ್ಷ ೭೮ ಸಾವಿರದ ೧೮೧ ರೂ. ಸಂಗ್ರಹ ಮಾಡಲಾಗಿದೆ. ಪ್ರಾದೇಶಿಕ ಸಾರಿಗೆ ಕಚೇರಿಗೆ ವಾರ್ಷಿಕ ೫,೭೦೦ ಕೇಸ್ ಗುರಿಯನ್ನು ಹೊಂದಿದ್ದು, ನವೆಂಬರ್ ತಿಂಗಳೊಂದರಲ್ಲಿಯೇ ೧,೧೪೦ ವಾಹನಗಳಿಂದ ತೆರಿಗೆ, ದಂಡ ಸಂಗ್ರಹ ಮಾಡಲಾಗಿದೆ.

” ಬೆಂಗಳೂರಿನ ಅಪರ ಸಾರಿಗೆ ಆಯುಕ್ತರಾದ (ಪ್ರವರ್ತನ) ಓಂಕಾರೇಶ್ವರಿ ಮತ್ತು ಮೈಸೂರು ವಿಭಾಗ ಜಂಟಿ ಸಾರಿಗೆ ಆಯುಕ್ತ ವಸಂತ್ ಈಶ್ವರ್ ಚೌವ್ಹಾಣ್ ಮಾರ್ಗದರ್ಶನದ ಮೇರೆಗೆ ನವೆಂಬರ್ ಮಾಹೆಯಲ್ಲಿ ಕೊಡಗು ಜಿಲ್ಲೆಯಾದ್ಯಂತ ನಿರಂತರ ತಪಾಸಣೆ ಕೈಗೊಳ್ಳಲಾಗಿತ್ತು. ಹೊರ ರಾಜ್ಯಗಳ ಪ್ರವಾಸಿ ವಾಹನಗಳೂ ಸೇರಿದಂತೆ ಎಲ್ಲಾ ರೀತಿಯ ವಾಹನಗಳ ತಪಾಸಣೆ ನಡೆಸಿ ಒಟ್ಟು ೧,೫೯,೭೮,೧೮೧ ರೂ.ರಾಜಸ್ವವನ್ನು ಸಂಗ್ರಹಿಸಲಾಗಿದೆ. ಇದು ಕೊಡಗಿನಲ್ಲಿ ಗುರಿ ಮೀರಿದ ಸಾಧನೆಯಾಗಿದೆ.”

-ಎಸ್.ಟಿ.ಸತೀಶ್,  ಪ್ರಾದೇಶಿಕ ಸಾರಿಗೆ ಅಧಿಕಾರಿ

Tags:
error: Content is protected !!