ಎಸ್.ಎಲ್.ಚೆನ್ನಬಸವಣ್ಣ ಐಪಿಎಸ್, ಉಪನಿರ್ದೇಶಕರು, ಕರ್ನಾಟಕ ಪೊಲೀಸ್ ಅಕಾಡೆಮಿ, ಮೈಸೂರು
ಸುಧಾರಣೆ ತರುವ ಹಾದಿಯಲ್ಲಿ ವಿರೋಧಿಗಳು ಸಹಜ
ಸಾರ್ವಜನಿಕ ಸೇವೆ ಅಥವಾ ಪೊಲೀಸ್ ಇಲಾಖೆಯಂತಹ ಜವಾಬ್ದಾರಿಯುತ ಕ್ಷೇತ್ರಗಳಲ್ಲಿ ಯಾವುದೇ ವಿರೋಧಿಗಳಿಲ್ಲದ, ಎಲ್ಲರನ್ನೂ ಒಂದೇ ರೀತಿಯಲ್ಲಿ ಮೆಚ್ಚಿಸುವ ಪ್ರಭಾವಶಾಲಿ ನಾಯಕನೊಬ್ಬ ಇರಲು ಸಾಧ್ಯವೇ? ಎಂದು ಪ್ರಶಿಕ್ಷಣಾರ್ಥಿಯೊಬ್ಬರು ನನಗೆ ಪ್ರಶ್ನಿಸಿದ್ದರು… ಆಗ ನನಗೆ ಅನಿಸಿದ್ದು- ಅರ್ಥಪೂರ್ಣ ಸುಧಾರಣೆಯನ್ನು ತರುವಾಗ ಯಾರಾದರೂ ಸಂಪೂರ್ಣವಾಗಿ ‘ಅಜಾತಶತ್ರು’ ಆಗಿರಲು ಸಾಧ್ಯವೇ? ಇದು ಸಾರ್ವಜನಿಕ ಆಡಳಿತ, ನೈತಿಕತೆ ಮತ್ತು ನಾಯಕತ್ವದ ಸ್ವರೂಪವನ್ನು ಕುರಿತು ಆಲೋಚಿಸುವಾಗ ನಮ್ಮ ಮುಂದೆ ಬಂದು ನಿಲ್ಲುವ ಅತ್ಯಂತ ಚಿಂತನಾರ್ಹ ಪ್ರಶ್ನೆಗಳಾಗಿವೆ. ಎಲ್ಲರಿಗೂ ಅನುಕೂಲಕರವಾದ ಯಥಾಸ್ಥಿತಿಯನ್ನು ಕಾಯ್ದುಕೊಳ್ಳುವುದು ಅತ್ಯಂತಸುಲಭವಾದ ಮಾರ್ಗವಾಗಿರಬಹುದು, ಆದರೆ ನಿಜವಾದ ಸುಧಾರಣೆ ಎನ್ನುವುದು ಪ್ರತಿರೋಧದ ಅಗ್ನಿಕುಂಡದಲ್ಲಿ ಕಾಯದೇ ಎಂದಿಗೂ ಹೊರಹೊಮ್ಮುವುದಿಲ್ಲ.
ಯಾವುದೇ ಸರ್ಕಾರಿ ಇಲಾಖೆಯಲ್ಲಿ ಅಥವಾ ಸಮಾಜದಲ್ಲಿ ವ್ಯವಸ್ಥಿತವಾದಸುಧಾರಣೆ ತರಲು ಹೊರಟಾಗ, ದಶಕಗಳಿಂದ ಬೇರೂರಿರುವ ಪಟ್ಟಭದ್ರ ಹಿತಾಸಕ್ತಿಗಳಿಗೆ ಮತ್ತು ಪ್ರಭಾವಿಗಳಿಗೆ ನೇರ ಧಕ್ಕೆಯಾಗುತ್ತದೆ. ಎಂದಿನಿಂದಲೂ ನಡೆದುಕೊಂಡು ಬಂದಿರುವ ಸಾಂಪ್ರದಾಯಿಕ ಪದ್ಧತಿಗಳನ್ನು, ಅಪರಿಪೂರ್ಣ ವ್ಯವಸ್ಥೆಯನ್ನು ಅಥವಾ ಆಡಳಿತಾತ್ಮಕ ಲೋಪಗಳನ್ನು ಪ್ರಶ್ನಿಸಿ ಸುಧಾರಿಸಲು ಪ್ರಯತ್ನ ಮಾಡಿದಾಗ, ಆ ಬದಲಾವಣೆಯನ್ನು ಪ್ರತಿಯೊಬ್ಬರೂ ಮುಕ್ತ ಮನಸ್ಸಿನಿಂದ ಸ್ವಾಗತಿಸುವುದಿಲ್ಲ. ಬದಲಿಗೆ, ಈಗಾಗಲೇ ಒಗ್ಗಿಕೊಂಡಿರುವ ಹಳೆಯ ಯಥಾಸ್ಥಿತಿಯಿಂದ ಲಾಭ ಪಡೆಯುತ್ತಿದ್ದವರು ಅಥವಾ ಪ್ರಭಾವಿಗಳು ತಕ್ಷಣವೇ ವಿರೋಧಿಗಳಾಗಿ ಮಾರ್ಪಡುತ್ತಾರೆ. ಆದ್ದರಿಂದ ಪ್ರಾಮಾಣಿಕತೆ ಮತ್ತು ನಿಷ್ಪಕ್ಷಪಾತ ಗುಣದಿಂದ ರಾಜಿಯಿಲ್ಲದ ನಿರ್ಧಾರಗಳನ್ನು ತೆಗೆದುಕೊಳ್ಳುವ ಅಧಿಕಾರಿಗಳು ವೃತ್ತಿಪರ ಪ್ರತಿರೋಧವನ್ನು ಆಹ್ವಾನಿಸುವುದು ಹಾಗೂ ಸಮಾಜಘಾತಕ ವಿರೋಧಿಗಳನ್ನು ಸೃಷ್ಟಿಸಿಕೊಳ್ಳುವುದು ಸಾರ್ವಜನಿಕ ಸೇವೆಯಲ್ಲಿ ಅನಿವಾರ್ಯ ಮತ್ತು ಸ್ವಾಭಾವಿಕವಾಗಿದೆ. ಇದು ಪ್ರಸಿದ್ಧ ಕವಿ ಚಾಲ್ಸ ಮೆಕೇ ಅವರ ನೋ ಎನಿಮೀಸ್’ ಎಂಬ ಕಾಲಾತೀತ ಕವಿತೆಯ ಸಾರವನ್ನು ನೆನಪಿಸುತ್ತದೆ.
ನನಗೆ ಶತ್ರುಗಳೇ ಇಲ್ಲ ಎಂದು ನೀವು ಹೆಮ್ಮೆಯಿಂದ ಹೇಳಿದರೆ, ಆ ಹೆಗ್ಗಳಿಕೆ ತೀರಾ ಕಳಪೆಯದ್ದು, ಧೀರರು ಎದುರಿಸುವ ಕರ್ತವ್ಯದ ಕಣದಲ್ಲಿ ಧುಮುಕಿದ ಪ್ರತಿಯೊಬ್ಬ ನಾಯಕನೂ ಶತ್ರುಗಳನ್ನು ಕಟ್ಟಿಕೊಂಡೇ ಇರುತ್ತಾನೆ. ನಿಮಗ್ಯಾರೂ ವಿರೋಧಿಗಳಿಲ್ಲದಿದ್ದರೆ, ನೀವು ಮಾಡಿದ ಕೆಲಸ ತೀರಾ ಅಲ್ಪವೆಂದು, ತಟಸ್ಥ ಅಥವಾ ಯಾರಿಗೂ ಯಾವುದೇ ತೊಂದರೆಯಾಗದ ಸಣ್ಣ ವಿಷಯ ಎಂದೇ ಅರ್ಥ. ಈ ಸಾಲುಗಳು ಆಡಳಿತ ಕ್ಷೇತ್ರದಲ್ಲಿ ಸತ್ಯ ಹಾಗೂ ನ್ಯಾಯಕ್ಕಾಗಿಧೈರ್ಯದಿಂದ ಕೆಲಸ ಮಾಡುವ ಪ್ರತಿಯೊಬ್ಬ ಅಧಿಕಾರಿಗೂ, ನಾಯಕನಿಗೂ ಸಂಪೂರ್ಣವಾಗಿ ಅನ್ವಯಿಸುತ್ತವೆ.
ಪ್ರತಿಯೊಂದು ಅರ್ಥಪೂರ್ಣ ಸುಧಾರಣೆಯೂ ಸಮಾಜದಲ್ಲಿ ಅಥವಾ ಇಲಾಖೆಯಲ್ಲಿ ಯಾರೋ ಒಬ್ಬರ ಅಥವಾ ವ್ಯವಸ್ಥೆಯೊಂದರ ಸುಲಭದ ಆರಾಮದಾಯಕ ಸ್ಥಿತಿಯನ್ನು ಅಸ್ಥಿರಗೊಳಿಸುತ್ತದೆ. ಹೀಗೆ ಕೆಲಸ ಮಾಡುವಾಗ ಎದುರಾಗುವ ತೀವ್ರ ಪ್ರತಿರೋಧವು ನಾಯಕನೊಬ್ಬ ತಪ್ಪು ಹಾದಿಯಲ್ಲಿದ್ದಾನೆ ಎಂದರ್ಥವಲ್ಲ; ಬದಲಾಗಿ ಈಗಿರುವ ಯಥಾಸ್ಥಿತಿಯನ್ನು (ಸ್ಟೇಟಸ್ ಕೋ) ಯಶಸ್ವಿಯಾಗಿ ಸರಿಪಡಿಸಿ ಸರಿಯಾದ ಹಾದಿಯಲ್ಲಿ ಹೆಜ್ಜೆ ಇಡಲು ಪ್ರಯತ್ನಿಸುತ್ತಿರುವುದರ ಸ್ಪಷ್ಟ ಸೂಚನೆಯಾಗಿದೆ. ಇದ್ದದ್ದನ್ನು ಇದ್ದಹಾಗೆ ಬಿಟ್ಟುಬಿಡುವುದು, ಯಾರೊಂದಿಗೂ ವಿರೋಧ ಕಟ್ಟಿಕೊಳ್ಳದೆ ಸಮಯ ತಳ್ಳುವುದು ಅತ್ಯಂತ ಸುರಕ್ಷಿತ ಮತ್ತು ಸುಲಭವಾದ ಹಾದಿ. ಆದರೆ ಸಮಾಜಕ್ಕೆ ಇಂದಿನ ಅಗತ್ಯವಿರುವುದು ಅಂತಹ ಸುರಕ್ಷಿತ ಹಾದಿ ಹುಡುಕುವ ವ್ಯಕ್ತಿಗಳನ್ನಲ್ಲ. ಬದಲಾಗಿ, ವೈಯಕ್ತಿಕ ಅಥವಾ ವೃತ್ತಿಪರ ನಷ್ಟವನ್ನು ಅನುಭವಿಸಬೇಕಾಗಿ ಬಂದರೂ, ಸತ್ಯದ ಪರವಾಗಿ ನಿಂತು ತಪ್ಪಿರುವುದನ್ನು ಧೈರ್ಯವಾಗಿ ಸರಿಪಡಿಸುವ ದಿಟ್ಟ ನಾಯಕರನ್ನು.
ನಾಯಕತ್ವ ಎನ್ನುವುದು ಪ್ರತಿಯೊಬ್ಬರಿಗೂ ಇಷ್ಟವಾಗುವ ಅಥವಾ ಸದಾ ಅಗ್ಗದ ಜನಪ್ರಿಯತೆಯ ಬೆನ್ನತ್ತುವ ಸಾಹಸವಲ್ಲ. ಕೆಲವೊಮ್ಮೆ ಕಠಿಣ, ಬದಲಾವಣೆ ಬಯಸದವರ ಅಭಿಪ್ರಾಯಕ್ಕೆ ವಿರುದ್ಧವಾದ ಹಾಗೂ ಜನಪ್ರಿಯವಲ್ಲದ ನಿರ್ಧಾರಗಳನ್ನು ತೆಗೆದುಕೊಳ್ಳಬೇಕಾಗಿ ಬಂದರೂ, ದೀರ್ಘಕಾಲೀನ ಸಾರ್ವಜನಿಕ ಹಿತದೃಷ್ಟಿಯಿಂದ ಯಾವುದು ಸರಿಯೋ ಅದನ್ನು ಮಾಡುವುದೇ ನಿಜವಾದ ನಾಯಕತ್ವದ ಶಕ್ತಿ. ಅದಕ್ಕೆ ಶರಣರು ಹೇಳುವಂತೆ ನ್ಯಾಯ, ನಿಷ್ಠುರಿ, ದಾಕ್ಷಿಣ್ಯಪರನಲ್ಲ, ಲೋಕ ವಿರೋಧಿ ಶರಣನಾರಿಗೂ ಅಂಜುವನಲ್ಲ ಎಂಬಂತೆ ಜನಕ್ಕಂಜಿ ನಡೆಯುವದಕ್ಕಿಂತ ಮನಕ್ಕಂಜಿ ನಡೆಯಬೇಕು ಎಂಬ ಅನುಭಾವಿಗಳ ಮಾತಿನಂತೆ ತಮ್ಮ ಸೇವಾವಧಿಯಲ್ಲಿ ಶಾಶ್ವತವಾದ ಸಕಾರಾತ್ಮಕ ಬದಲಾವಣೆಯನ್ನು ತಂದು, ಇಲಾಖೆಯ ಘನತೆ ಮತ್ತು ಸಮಾಜದ ಸ್ವಾಸ್ಥತೆಯನ್ನು ಎತ್ತಿಹಿಡಿಯುವ ಇಂತಹ ಅಧಿಕಾರಿಗಳು ಮತ್ತು ಮಾರ್ಗದರ್ಶಕರು ಇಡೀ ವ್ಯವಸ್ಥೆಗೆ ಅತ್ಯಂತ ದೊಡ್ಡ ಪ್ರೇರಣೆಯಾಗುತ್ತಾರೆ.
ತಮ್ಮ ಸ್ವಂತ ಆರಾಮದಾಯಕ ಮತ್ತು ಸುರಕ್ಷಿತ ಬದುಕಿಗಿಂತಲೂ ವ್ಯವಸ್ಥೆಯ ಸುಧಾರಣೆಯನ್ನು ಧೈರ್ಯವಾಗಿ ಆಯ್ಕೆ ಮಾಡಿಕೊಳ್ಳುವ ಪ್ರತಿಯೊಬ್ಬ ನಾಯಕನೂ ಸಮಾಜದ ಗೌರವಕ್ಕೆ ಅರ್ಹ. ವೃತ್ತಿಪರ ಸವಾಲುಗಳು, ಒತ್ತಡಗಳು ಮತ್ತು ಶತ್ರುಗಳ ಎದುರಾಗುವಿಕೆಗಳ ನಡುವೆಯೂ ಧೃತಿಗೆಡದೆ ಮುನ್ನಡೆಯುವ ಇಂತಹ ನಾಯಕರ ಅಗತ್ಯ ನಮ್ಮ ದೇಶಕ್ಕೆ ಎಂದೆಂದಿಗೂ ಮುಗಿಯದ ಅಗತ್ಯವಾಗಿದೆ. ಏಕೆಂದರೆ ಇತಿಹಾಸವು ಯಾವಾಗಲೂ ನೆನಪಿಸಿಕೊಳ್ಳುವುದು ಯಾವುದೇ ಅಪಾಯ ತೆಗೆದುಕೊಳ್ಳದೆ ಸುರಕ್ಷಿತವಾಗಿ ಕಾಲಕಳೆದವರನ್ನಲ್ಲ, ಬದಲಾಗಿ ಪರಿಸ್ಥಿತಿಯನ್ನು ಎದುರಿಸಿ ಬದಲಾಯಿಸಲು ಮತ್ತು ವ್ಯವಸ್ಥೆಯನ್ನು ಉತ್ತಮಗೊಳಿಸಲು ಧೈರ್ಯ ತೋರಿದ ನಾಯಕರನ್ನು.
ಬಸವಣ್ಣನವರು ಹೇಳುವಂತೆ ಸ್ತುತಿಸುವವನೊಬ್ಬ, ನಿಂದಿಸುವವನೊಬ್ಬ. ಇವರಿಬ್ಬರೂ ನಮ್ಮ ಶರಣರ ಬಂಧುಗಳಯ್ಯ. ಸ್ತುತಿಸುವವ ಪುಣ್ಯವ ಕೊಂಬ, ನಿಂದಿಸುವವ ಪಾಪವ ಕೊಂಬ, ಇದು ಕಾರಣ ಕೂಡಲ ಸಂಗಮದೇವ ನಿಮ್ಮ ಶರಣರು ನಿತ್ಯ ಮುಕ್ತರು ಎಂಬಂತೆ ನಿಜವಾದ ನಾಯಕರು ಮಾತ್ರ ಎಲ್ಲವನ್ನೂ ಸಮಾನವಾಗಿ ಸ್ವೀಕರಿಸುತ್ತಾರೆ. ಹೀಗೆ ವ್ಯವಸ್ಥೆಯನ್ನು ಸುಧಾರಿಸುವ ಅಧಿಕಾರಿಗಳನ್ನು, ನಾಯಕರನ್ನು ಮಾತ್ರ ಇತಿಹಾಸ ಶಾಶ್ವತವಾಗಿ ತನ್ನ ಪುಟಗಳಲ್ಲಿ ನೆನಪಿನಲ್ಲಿಡುತ್ತದೆ.
” ಕೆಲವೊಮ್ಮೆ ಕಠಿಣ, ಬದಲಾವಣೆ ಬಯಸದವರ ಅಭಿಪ್ರಾಯಕ್ಕೆ ವಿರುದ್ಧವಾದ ಹಾಗೂ ಜನಪ್ರಿಯವಲ್ಲದ ನಿರ್ಧಾರಗಳನ್ನು ತೆಗೆದುಕೊಳ್ಳಬೇಕಾಗಿ ಬಂದರೂ, ದೀರ್ಘಕಾಲೀನ ಸಾರ್ವಜನಿಕ ಹಿತದೃಷ್ಟಿಯಿಂದ ಯಾವುದು ಸರಿಯೋ ಅದನ್ನು ಮಾಡುವುದೇ ನಿಜವಾದ ನಾಯಕತ್ವದ ಶಕ್ತಿ.”





