ಕೊಳ್ಳೇಗಾಲ ತಾಲ್ಲೂಕಿನ ಜಕ್ಕಳ್ಳಿಯಲ್ಲಿರುವ ಹಾಲಿನ ಡೇರಿಯಲ್ಲಿ ಕೆಲಸ ಮಾಡುತ್ತಿದ್ದ ಮಹಿಳೆಯೊಬ್ಬರಿಗೆ ನೀನು ಪೌರಕಾರ್ಮಿಕ ವರ್ಗಕ್ಕೆ ಸೇರಿದವಳು, ಹಾಲಿನ ಪರೀಕ್ಷೆ ಮಾಡುವುದು ಬೇಡ’ ಎಂದು ನಿರ್ಬಂಧ ಹೇರಿರುವುದಾಗಿ ವರದಿಯಾಗಿದೆ.
ದೇಶ ಎಷ್ಟೆಲ್ಲ ಅಭಿವೃದ್ಧಿ ಸಾಧಿಸುತ್ತಿದ್ದರೂ ಹಲವು ಕಡೆ ಅಸ್ಪೃಶ್ಯತೆ ಆಚರಣೆ ಚಾಲ್ತಿಯಲ್ಲಿರುವುದು ನಾಚಿಕೆಗೇಡಿನ ಸಂಗತಿ. ಈ ಮಹಿಳೆ ಕಳೆದ 2 ವರ್ಷಗಳಿಂದ ಇದೇ ಹಾಲಿನ ಡೇರಿಯಲ್ಲಿ ಕೆಲಸ ಮಾಡುತ್ತಾ ಬಂದಿದ್ದಾರೆ. ಆದರೆ ಕೆಲದಿನಗಳು ಅನಾರೋಗ್ಯದ ನಿಮಿತ್ತ ಆಸ್ಪತ್ರೆಗೆ ದಾಖಲಾಗಿದ್ದರು. ಚಿಕಿತ್ಸೆ ನಂತರ ಅವರು ಮತ್ತೆ ಕೆಲಸಕ್ಕೆ ಹಾಜರಾದ ಸಂದರ್ಭದಲ್ಲಿ ಈ ರೀತಿ ನಿರ್ಬಂಧ ಹೇರಿದ್ದಾರೆ ಎನ್ನಲಾಗಿದೆ. ಈ ಕುರಿತು ಅವರು ಜಿಲ್ಲಾ ಮಟ್ಟದ ಪ.ಜಾತಿ, ಪ.ಪಂಗಡಗಳ ಕುಂದು ಕೊರತೆಯ ಸಭೆಯಲ್ಲಿ ತಮ್ಮ ಅಳಲನ್ನು ತೋಡಿಕೊಂಡು ನ್ಯಾಯ ದೊರಕಿಸಿಕೊಡುವಂತೆ ಮನವಿ ಮಾಡಿದ್ದಾರೆ. ಸಂಬಂಧಪಟ್ಟ ಅಧಿಕಾರಿಗಳು ಈ ಬಗ್ಗೆ ಗಮನಹರಿಸಿ ಅಸ್ಪೃಶ್ಯತೆ ಆಚರಣೆ ಮಾಡುವವರ ವಿರುದ್ಧ ಕಾನೂನು ಕ್ರಮಕೈಗೊಂಡು ಈ ಮಹಿಳೆಗೆ ನ್ಯಾಯ ದೊರಕಿಸಿಕೊಡಬೇಕಿದೆ.
-ಪಿ.ಸಿ.ಕಂಗಾಣಿ ಸೋಮು, ಕ್ಯಾತಮಾರನಹಳ್ಳಿ, ಮೈಸೂರು.





