ಈ ವರ್ಷ ನಾಡ ಹಬ್ಬ ದಸರಾದಲ್ಲಿ ಕಂಬಳ ಕ್ರೀಡೆಯನ್ನು ಆಯೋಜಿಸಲು ಸರ್ಕಾರ ಹಠಕ್ಕೆ ಬಿದ್ದಂತೆ ವರ್ತಿಸುತ್ತಿದೆ. ಈಗಾಗಲೇ ಸಾರ್ವಜನಿಕರು ಹಾಗೂ ಹಲವಾರು ಹಿರಿಯ ರಾಜಕಾರಣಿಗಳು ಕಂಬಳ ಬೇಡ ಎಂದರೂ ಸರ್ಕಾರ ಕಂಬಳಕ್ಕೆ ಸಿದ್ಧತೆ ನಡೆಸುತ್ತಿರುವುದು ಹಠಮಾರಿತನದ ಧೋರಣೆಯಾಗಿದೆ. ದಸರಾ ಹಬ್ಬ ಮೈಸೂರಿನ ಅಸ್ಮಿತೆ. ಪ್ರತಿ ವರ್ಷವೂ ಒಂದೊಂದು ಹೊಸ ಹೊಸ ಕಾರ್ಯಕ್ರಮಗಳನ್ನು ಸೇರಿಸುತ್ತಾ ಹೋದರೆ ಮೂಲ ದಸರಾ ತನ್ನ ಅಸ್ತಿತ್ವವನ್ನೇ ಕಳೆದುಕೊಳ್ಳುವ ಅಪಾಯವೂ ಇದೆ. ಮುಂದಿನ ದಿನಗಳಲ್ಲಿ, ತಮಿಳುನಾಡಿನ ಪ್ರಸಿದ್ಧ ಕ್ರೀಡೆ ಜಲ್ಲಿ ಕಟ್ಟು, ಬಿಹಾರದ ನೃತ್ಯ, ಬೆಂಗಾಲಿ ಡ್ಯಾನ್ಸ್ ಹೀಗೆ ಸೇರಿಸುತ್ತಾ ಹೋದರೇ ನಾಡ ಹಬ್ಬ ದಸರಾದ ಮೆರುಗು ಮರೆಯಾಗುತ್ತಾ ಹೋಗುತ್ತದೆ. ಈ ವರ್ಷ ‘ಕೆಲವರು’ ಹಣ ಮಾಡಲು ಕಂಬಳವನ್ನು ಆಯೋಜಿಸಲು ಮುಂದಾದಂತೆ ಕಾಣುತ್ತಿದೆ.
ಇದಕ್ಕೆ ಸರ್ಕಾರ ಅವಕಾಶ ನೀಡಬಾರದು. ಇನ್ನೊಂದು ವಿಷಯ ಇಲ್ಲಿ ಪ್ರಸ್ತಾಪಿಸಬೇಕಾಗುತ್ತದೆ. ದಸರಾ ಮುಗಿದು ನಾಲ್ಕೈದು ತಿಂಗಳಾದರೂ ಲೆಕ್ಕ ಪತ್ರವನ್ನೇ ಕೊಡುವುದಿಲ್ಲ. ನಂತರ ಸಾರ್ವಜನಿಕರನ್ನು ತೃಪ್ತಿಪಡಿಸಲೆಂದೋ ಲೆಕ್ಕಪತ್ರ ನೀಡುವ ಸಂಪ್ರದಾಯವನ್ನು ಕಾಣಬಹುದು. ಈ ವರ್ಷದಿಂದಾದರೂ ದಸರಾ ಮುಗಿದ ಕೆಲವು ದಿನಗಳಲ್ಲೇ ಜನರಿಗೆ ‘ಒಪ್ಪಿಗೆ’ಯಾಗುವಂತಹ ಲೆಕ್ಕಪತ್ರ ನೀಡುವ ಅಭ್ಯಾಸ ರೂಢಿಸಿಕೊಳ್ಳಬೇಕಾಗಿದೆ.
-ಬೂಕನಕೆರೆ ವಿಜೇಂದ್ರ, ಮೈಸೂರು




