Mysore
18
overcast clouds

Social Media

ಮಂಗಳವಾರ, 09 ಡಿಸೆಂಬರ್ 2025
Light
Dark

ಓದುಗರ ಪತ್ರ | ಧನಕರ್ ರಾಜೀನಾಮೆ ಹಿಂದಿನ ಮರ್ಮವೇನು?

jagdeep dhankar

ಕಳೆದ ೧೦ ದಿನಗಳ ಹಿಂದಷ್ಟೇ ಸಮಾರಂಭವೊಂದರಲ್ಲಿ “೨೦೨೭ರವರೆಗಿನ ನನ್ನ ಅವಧಿಯನ್ನು ಪೂರೈಸುತ್ತೇನೆ. ದೇವರ ಇಚ್ಛೆ ಇದ್ದರೆ. . . ” ಎಂದು ಹೇಳಿದ್ದ ರಾಜ್ಯ ಸಭೆಯ ಸಭಾಪತಿಯೂ ಆಗಿದ್ದ ಉಪ ರಾಷ್ಟ್ರಪತಿ ಜಗದೀಪ್ ಧನಕರ್ ಅವರು ತಮ್ಮ ಸ್ಥಾನಕ್ಕೆ ಜು. ೨೧ರಂದು ರಾತ್ರಿ ದಿಢೀರನೇ ರಾಜೀನಾಮೆ ನೀಡಿದರು. ರಾಷ್ಟ್ರಪತಿಗಳು ಅದನ್ನು ಅಂಗೀಕರಿಸಿದ್ದಾರೆ ಕೂಡ.

ಧನಕರ್ ಅವರು ತಮ್ಮ ರಾಜೀನಾಮೆಗೆ ಅನಾರೋಗ್ಯದ ಕಾರಣ ನೀಡಿದ್ದಾರೆ. ಆದರೆ ಕೇಂದ್ರ ಸರ್ಕಾರ ಮತ್ತು ಧನಕರ್ ನಡುವೆ ಹೊಂದಾಣಿಕೆ ಇಲ್ಲದಿದ್ದುದೇ ಇದಕ್ಕೆ ಕಾರಣ ಎಂಬುದಾಗಿ ಮಾಧ್ಯಮಗಳಲ್ಲಿ ವರದಿಯಾಗಿದೆ. ರಾಜ್ಯಸಭೆಯಲ್ಲಿ ಪಹಾಲ್ಗಮ್ ಚರ್ಚೆಗೆ ಒಪ್ಪಿಗೆ ನೀಡಿದ್ದು, ಅದನ್ನು ಕೇಂದ್ರ ಸರ್ಕಾರದ ಗಮನಕ್ಕೆ ತರದೇ ಇದ್ದುದು ಹಾಗೂ ನ್ಯಾಯಮೂರ್ತಿ ವರ್ಮಾ ಅವರನ್ನು ಪದಚ್ಯುತಿಗೊಳಿಸುವ ತೀರ್ಮಾನವನ್ನು ಕೇಂದ್ರ ಸರ್ಕಾರಕ್ಕೆ ತಿಳಿಸದೇ ಒಪ್ಪಿಗೆ ನೀಡಿದ ಪ್ರಕರಣಗಳು ಕಾರಣ ಎನ್ನಲಾಗಿದೆ. ಒಮ್ಮೆ ವಿರೋಧ ಪಕ್ಷ ಕಾಂಗ್ರೆಸ್‌ನವರು ಧನಕರ್ ಅವರನ್ನು ಪದಚ್ಯುತಗೊಳಿಸಲು ಯತ್ನ ನಡೆಸಿ ವಿಫಲರಾಗಿದ್ದರು. ಮಾಧ್ಯಮಗಳ ವರದಿ ನಿಜವಾಗಿದ್ದರೆ, ಈಗ ಆಡಳಿತ ಪಕ್ಷವೇ ವಿಪಕ್ಷದವರ ಆಸೆಯನ್ನು ಈಡೇರಿಸಿದಂತಾಯಿತು.

ನಿಜಕ್ಕೂ ಇದು ಸರ್ಕಾರದ ಸರ್ವಾಧಿಕಾರ ಧೋರಣೆಯನ್ನು ಬಿಂಬಿಸಿದೆ. ಧನಕರ್ ಅವರನ್ನು ಇಳಿಸಿ, ಬಿಹಾರದ ನಿತೀಶ್ ಕುಮಾರ್ ರವರನ್ನು ಉಪ ರಾಷ್ಟ್ರಪತಿ ಹುದ್ದೆಗೆ ಕೂರಿಸುವುದು, ಬಿಹಾರದಲ್ಲಿ ಬಿಜೆಪಿ ಪಕ್ಷದವರನ್ನು ಮುಖ್ಯಮಂತ್ರಿ ಮಾಡುವ ಹುನ್ನಾರವೂ ಇದೆ ಎಂದು ಹೇಳಲಾಗಿದೆ. ಅದೇನೇ ಇರಲಿ ಧನಕರ್ ಅವರಂತಹ ನೇರ ನುಡಿ ನಡೆಯ ವ್ಯಕ್ತಿ ತಮ್ಮ ಸ್ಥಾನದಿಂದ ಹಿಂದೆ ಸರಿದಿರುವುದರಿಂದ ಪ್ರಜಾಪ್ರಭುತ್ವ ಮತ್ತು ರಾಜ್ಯ ಸಭೆ ಬಡವಾದಂತಾಗಿದೆ.

-ಮುಳ್ಳೂರು ಪ್ರಕಾಶ್, ಕನಕದಾಸನಗರ, ಮೈಸೂರು

Tags:
error: Content is protected !!