ಮೈಸೂರಿನ ಕೆಆರ್ಎಸ್ ರಸ್ತೆಯ ವೆಂಕಟರಮಣ ಸ್ವಾಮಿ ದೇವಸ್ಥಾನ ಎದುರಿನ ಸರ್ಕಾರಿ ಹಿರಿಯ ಮಾಧ್ಯಮಿಕ ಮತ್ತು ಪ್ರಾಥಮಿಕ ಶಾಲೆಯು ಮುಚ್ಚುವ ಹಂತಕ್ಕೆ ಬಂದಿದೆಯೇ ಎಂಬ ಆತಂಕ, ಅನುಮಾನ ಮೂಡಿದೆ. ಕಾರಣ, ಈ ಶಾಲೆಯ ಮುಂಭಾಗದಲ್ಲಿದ್ದ, ವಿಶಾಲವಾದ ಆಟದ ಮೈದಾನದಲ್ಲಿ ರೈಲ್ವೆ ಇಲಾಖೆಯು ವಸತಿ ಗೃಹಗಳನ್ನು ನಿರ್ಮಾಣ ಮಾಡಲು ಕಾಮಗಾರಿ ಆರಂಭ ಮಾಡಿದ್ದು, ಈ ಶಾಲೆ ಇಂದಲ್ಲ ನಾಳೆ ಮುಚ್ಚಬಹುದೆಂದು ಈ ಶಾಲೆಗೆ ಈ ವರ್ಷ ಪೋಷಕರು ತಮ್ಮ ಮಕ್ಕಳನ್ನು ಸೇರಿಸಿಲ್ಲ.
ಐದು ವರ್ಷಗಳ ಹಿಂದೆ ಇದೇ ಶಾಲೆಯಲ್ಲಿ ಒಟ್ಟು ೮೦೦ ಮಕ್ಕಳು ವಿದ್ಯಾಭ್ಯಾಸ ಮಾಡುತ್ತಿದ್ದರು. ಆದರೆ ಈ ವರ್ಷ ಕೇವಲ ೧೨೦ ವಿದ್ಯಾರ್ಥಿಗಳು ಮಾತ್ರ ಇದ್ದಾರೆ. ಈ ಸರ್ಕಾರಿ ಶಾಲೆಯಲ್ಲಿ ಬಡವರ ಮಕ್ಕಳು, ಅನಾಥ ಮಕ್ಕಳು ಸೇರಿದಂತೆ ಆರ್ಥಿಕವಾಗಿ ಹಿಂದುಳಿದ ಮಧ್ಯಮ ವರ್ಗದ ಮಕ್ಕಳು ಓದುತ್ತಿದ್ದಾರೆ. ಈ ಶಾಲೆಯಲ್ಲಿ ಬೋಧನೆ ಮಾಡುವ ಕೆಲವು ಅಧ್ಯಾಪಕರು, ಅವರು ಬೋಧನೆ ಮಾಡುವ ವಿಷಯದಲ್ಲಿ ಪಿಹೆಚ್. ಡಿ. ಪಡೆದಿದ್ದು ಉತ್ತಮ ಪಾಠ ಪ್ರವಚನಗಳು ನಡೆಯುತ್ತಿವೆ. ಇದು ಮೈಸೂರು ಕೇಂದ್ರ ಭಾಗದಲ್ಲಿರುವುದರಿಂದ ಸಕಲ ಸೌಲಭ್ಯಗಳನ್ನೂ ಒಳಗೊಂಡಿದೆ. ಈಗ ಶಾಲೆಯ ಮುಂದೆಯೇ ನಡೆಯುತ್ತಿರುವ ಕಾಮಗಾರಿಯನ್ನು ನಿಲ್ಲಿಸುವಂತೆ ಈ ಶಾಲೆಯಲ್ಲಿ ಹಿಂದೆ ವ್ಯಾಸಂಗ ಮಾಡಿದ ವಿದ್ಯಾರ್ಥಿಗಳು ಮತ್ತು ಮೈಸೂರಿನ ಹಲವು ಜನಪರ ಸಂಘಟನೆಗಳು ಒತ್ತಾಯಿಸಿ, ಪ್ರತಿಭಟನೆ ನಡೆಸುತ್ತಿದ್ದರೂ, ರೈಲೈ ಇಲಾಖೆಯು ಹಠಕ್ಕೆ ಬಿದ್ದಿರುವಂತೆ ಕಾಮಗಾರಿ ಯನ್ನು ಮುಂದುವರಿಸಿದೆ. ಈ ಬಗ್ಗೆ ಜಿಲ್ಲಾಡಳಿತ ಹಾಗೂ ಸ್ಥಳೀಯ ಜನಪ್ರತಿನಿಧಿಗಳು ಕ್ರಮ ಕೈಗೊಳ್ಳಬೇಕು.
-ಬೂಕನಕೆರೆ ವಿಜೇಂದ್ರ, ಮೈಸೂರು




