ಸೈಬರ್ ವಂಚನೆಯ ಸಂತ್ರಸ್ತರಿಗೆ ಗರಿಷ್ಟ ರೂ.೨೫,೦೦೦ ಪರಿಹಾರ ನೀಡುವುದಾಗಿ ಭಾರತದ ರಿಸರ್ವ್ ಬ್ಯಾಂಕ್ ಪ್ರಕಟಿಸಿರುವುದು ಸ್ವಾಗತಾರ್ಹವಾಗಿದೆ. ಆದರೆ, ಅನೇಕ ಸಂದರ್ಭಗಳಲ್ಲಿ ಕಳೆದುಕೊಂಡ ಮೊತ್ತ ಹಲವಾರು ಲಕ್ಷಗಳನ್ನು ಮೀರುತ್ತಿರುವುದರಿಂದ, ಆರ್‌ಬಿಐ ನೀಡುವ ಪರಿಹಾರ ಆನೆ ಹೊಟ್ಟೆಗೆ ಅರೆಕಾಸಿನ ಮಜ್ಜಿಗೆ ಅನ್ನುವ ಹಾಗಿದೆ. ಆದರೂ ಕೂಡ ಇದೊಂದು ಒಳ್ಳೆಯ ಉಪಕ್ರಮವಾಗಿದ್ದು, ಮುಂದಿನ ದಿನಗಳಲ್ಲಿ ಈ ಪರಿಹಾರದ ಮೊತ್ತ ಹೆಚ್ಚಾಗುವ ಸಾಧ್ಯತೆಯಿದೆ. ದೇಶಾದ್ಯಂತ ಸೈಬರ್ ವಂಚನೆ ದಿನೇ ದಿನೇ ಹೆಚ್ಚುತ್ತಿದೆ. ಅಮಾಯಕರನ್ನು ‘ ಡಿಜಿಟಲ್ ಅರೆಸ್ಟ್’ ಮೂಲಕ ತಮ್ಮ ಬಲೆಗೆ ಕೆಡವಿಕೊಂಡು ಲಕ್ಷಾಂತರ ರೂಪಾಯಿಗಳನ್ನು ಲಪಟಾಯಿಸುವ ವಂಚಕರ ಜಾಲ ಇಡೀ ದೇಶಾದ್ಯಂತ ಹರಡಿರುವುದು ಅತ್ಯಂತ ಕಳವಳಕಾರಿಯಾದ ವಿಚಾರವಾಗಿದೆ. ಇದರ ಬಗ್ಗೆ ದೇಶದ ಸರ್ವೋಚ್ಚ ನ್ಯಾಯಾಲಯ ಕೂಡ ತೀವ್ರ ಕಳವಳ ವ್ಯಕ್ತಪಡಿಸಿ, ಡಿಜಿಟಲ್ ಅರೆಸ್ಟ್ ಪ್ರಕರಣಗಳ ಸಂಬಂಧ ಸಕಾಲಿಕ ಕ್ರಮ ಕೈಗೊಳ್ಳುವಂತೆ ಭಾರತೀಯ ರಿಸರ್ವ್ ಬ್ಯಾಂಕ್ ಮತ್ತು ಇತರ ಬ್ಯಾಂಕುಗಳಿಗೆ ಇತ್ತೀಚೆಗೆ ನಿರ್ದೇಶನ ನೀಡಿದೆ. ಡಿಜಿಟಲ್ ವಂಚನೆಗಳಿಂದ ದೇಶಾದ್ಯಂತ ರೂ. ೫೪ ಸಾವಿರ ಕೋಟಿಗಳಿಗಿಂತ ಅಧಿಕ ಹಣ ದೋಚಿರುವುದನ್ನು ಸಂಪೂರ್ಣ ದರೋಡೆ ಅಥವಾ ಡಕಾಯಿತಿ ಪ್ರಕರಣವೆಂದು ಹೇಳಿರುವ ಸುಪ್ರೀಂ ಕೋರ್ಟ್ ಭವಿಷ್ಯದಲ್ಲಿ ಇಂತಹ ಪ್ರಕರಣಗಳನ್ನು ತಡೆಯಲು ಮಾರ್ಗೋಪಾಯಗಳನ್ನು ಸೂಚಿಸುವಂತೆಸಂಬಂಧಪಟ್ಟವರಿಗೆ ನಿರ್ದೇಶನ ನೀಡಿದೆ. ಈ ಬಗ್ಗೆ ಸಂಬಂಧಪಟ್ಟ ಇಲಾಖೆಗಳು ತುರ್ತು ಕ್ರಮ ತೆಗೆದುಕೊಳ್ಳುವುದು ತೀರಾ ಅಗತ್ಯವಾಗಿದೆ. ಅದೇ ರೀತಿಸಾರ್ವಜನಿಕರು, ಇಂತಹ ಸೈಬರ್ ವಂಚನೆಯ ಬಗ್ಗೆ ಸಾಕಷ್ಟು ಜಾಗೃತರಾಗಿರುವುದು ಅಗತ್ಯ .
-ಕೆ.ವಿ.ವಾಸು, ವಿವೇಕಾನಂದ ನಗರ, ಮೈಸೂರು



