ಇತ್ತೀಚಿನ ದಿನಗಳಲ್ಲಿ ಮಾಧ್ಯಮಗಳು ಬಿತ್ತರಿಸುತ್ತಿರುವ ಚುನಾವಣಾ ಪೂರ್ವ ಮತಗಟ್ಟೆ ಸಮೀಕ್ಷೆಗಳು ಸುಳ್ಳಾಗುತ್ತಿದ್ದು, ಸಮೀಕ್ಷೆಗಳ ಫಲಿತಾಂಶಕ್ಕೂ ನೈಜ ಫಲಿತಾಂಶಕ್ಕೂ ಅಜಗಜಾಂತರ ವ್ಯತ್ಯಾಸ ಕಂಡುಬರುತ್ತಿದೆ. ಮತಗಟ್ಟೆ ಸಮೀಕ್ಷೆಗಳನ್ನು ನಂಬಿಕೊಂಡು ಕೆಲವರು ತಮ್ಮ ಹಣ, ಆಸ್ತಿಗಳನ್ನು ಬೆಟ್ಟಿಂಗ್ ಕಟ್ಟಿ ಸೋಲುತ್ತಿದ್ದಾರೆ. ಇತ್ತೀಚೆಗೆ ನಡೆದ ಮಹಾರಾಷ್ಟ್ರ ಹಾಗೂ ಜಾರ್ಖಂಡ್ ವಿಧಾನಸಭಾ ಚುನಾವಣೆಗಳು ಹಾಗೂ ಕರ್ನಾಟಕದ ಮೂರು ವಿಧಾನಸಭಾ ಕ್ಷೇತ್ರಗಳ ಉಪ ಚುನಾವಣೆಗಳ ಫಲಿತಾಂಶ ಚುನಾವಣಾ ಪೂರ್ವ ಸಮೀಕ್ಷೆಗಳನ್ನು ತಲೆಕೆಳಗಾಗುವಂತೆ ಮಾಡಿದೆ. ಇತ್ತೀಚೆಗೆ ನಡೆದ ಎಲ್ಲ ಚುನಾವಣೆ ಸಮೀಕ್ಷೆಗಳು ಸಂಪೂರ್ಣ ಸುಳ್ಳಾಗಿದ್ದು, ಜನರಿಗೆ ಸಮೀಕ್ಷೆಗಳ ಮೇಲೆ ವಿಶ್ವಾಸ ಇಲ್ಲದಂತಾಗಿದೆ. ಅಲ್ಲದೆ ಮತದಾರರ ಮನಸ್ಸನ್ನು ಯಾರೂ ಅರಿಯಲು ಸಾಧ್ಯವಿಲ್ಲ ಎಂಬುದು ಮತ್ತೊಮ್ಮೆ ಸಾಬೀತಾಗಿದೆ.
ಚುನಾವಣಾ ಪೂರ್ವ ಸಮೀಕ್ಷೆ ಮಾಡುವವರು ವಾಸ್ತವ ಸ್ಥಿತಿಯನ್ನು ಅರಿಯದೆ, ಕ್ಷೇತ್ರಕ್ಕೆ ಭೇಟಿ ನೀಡಿ ಹೆಚ್ಚು ಜನರ ಅಭಿಪ್ರಾಯವನ್ನೂ ಸಂಗ್ರಹಿಸದೇ ಕಾಟಾಚಾರಕ್ಕೆ ತಮ್ಮಿಷ್ಟದಂತೆ ಸಮೀಕ್ಷೆ ವರದಿ ನೀಡುತ್ತಿದ್ದಾರೆ. ಅಲ್ಲದೆ ಆಸೆ, ಆಮಿಷಗಳಿಗೆ ಬಲಿಯಾಗಿ ರಾಜಕೀಯ ಪಕ್ಷಗಳನ್ನು ಮೆಚ್ಚಿಸುವ ಸಲುವಾಗಿ ಅವರ ಪರವಾಗಿಯೂ ಸಮೀಕ್ಷೆ ವರದಿ ನೀಡುತ್ತಿದ್ದಾರೇನೋ ಎಂಬ ಅನುಮಾನ ಮೂಡುತ್ತದೆ. ಇಂತಹ ಮತಗಟ್ಟೆ ಸಮೀಕ್ಷೆಗಳು ಸಾಕಷ್ಟು ಲೋಪದಿಂದ ಕೂಡಿದ್ದು, ಚುನಾವಣಾ ಆಯೋಗ ಇಂತಹ ಸುಳ್ಳು ಸಮೀಕ್ಷೆಗಳಿಗೆ ಕಡಿವಾಣ ಹಾಕಬೇಕು.
-ಬೂಕನಕೆರೆ ವಿಜೇಂದ್ರ, ಕುವೆಂಪುನಗರ, ಮೈಸೂರು,