‘ಕನ್ನಡದಲ್ಲಿ ಮಾತನಾಡಿ ಸೈಬರ್ ಸ್ಯಾಮ್‌ನಿಂದ ಪಾರಾಗಿ’ ಎಂದು ಪೊಲೀಸ್ ಅಧಿಕಾರಿಯೊಬ್ಬರು ಕರೆ ನೀಡಿದ್ದಾರೆ. ಇದು ತಮಾಷೆ ಅನಿಸಿದರೂ ಸತ್ಯವಾದ ಮಾತು.
ಬಹುತೇಕ ಆನ್‌ಲೈನ್ ಸ್ಯಾಮ್‌ಗಳ ಮೂಲ ಹಿಂದಿ ಭಾಷೆ ಮಾತನಾಡುವ ರಾಜ್ಯಗಳದ್ದಾಗಿದ್ದು, ಈ ಸ್ಯಾಮ್ ಮಾಡುವವರು ಹಿಂದಿ ಅಥವಾ ಇಂಗ್ಲಿಷ್ ಭಾಷೆಗಳಲ್ಲಿ ಮಾತನಾಡುತ್ತಾರೆ. ಅವರಿಗೆ ಸ್ಪಂದಿಸಿದರೆ ಅವರು ಇನ್ನೂ ಉತ್ತೇಜಿತರಾಗಿ ತಮ್ಮ ಕುಕೃತ್ಯಗಳನ್ನು ಮುಂದುವರಿಸುತ್ತಾರೆ. ಇಂಗ್ಲಿಷ್ ಭಾಷೆಯಲ್ಲಿ ಉತ್ತರಿಸಿದರೆ ಸ್ವಲ್ಪ ತಡವರಿಸುತ್ತಾರೆ. ಒಂದು ವೇಳೆ ಕನ್ನಡದಲ್ಲಿ ಮಾತನಾಡಿದರೆ ಫೋನ್ ಕಟ್ ಮಾಡುತ್ತಾರೆ. ಆದರೆ ಬಹುತೇಕ ಕನ್ನಡಿಗರು ಹಿಂದಿಯಲ್ಲಿ ಮಾತನಾಡಲು ಹೋಗಿ ವಂಚಕರ ಜಾಲಕ್ಕೆ ಬಲಿಯಾಗುತ್ತಿದ್ದಾರೆ. ಈ ಆನ್ ಲೈನ್ ವಂಚನೆ ಪ್ರಕರಣಗಳು ಕರ್ನಾಟಕಕ್ಕಿಂತ ತಮಿಳುನಾಡಿನಲ್ಲಿ ತೀರಾ ಕಡಿಮೆ ಎನ್ನಲಾಗಿದೆ. ಕಾರಣ ಅಲ್ಲಿನ ಜನರು ಯಾವುದೇ ಕರೆಗಳು ಬಂದರೂ ತಮಿಳಿನಲ್ಲಿ ಉತ್ತರಿಸುತ್ತಾರೆ. ಇದರಿಂದಾಗಿ ಅವರು ವಂಚನೆಗಳಿಗೆ ತುತ್ತಾಗುವುದು ಕಡಿಮೆ. ಆದ್ದರಿಂದ ಪೊಲೀಸ್ ಆಧಿಕಾರಿಯೊಬ್ಬರು ಹೇಳಿರುವಂತೆ ನಾವೂ ಇಂತಹ ಅನುಮಾನಾಸ್ಪದ ಕರೆಗಳು ಬಂದಾಗ ಕನ್ನಡದಲ್ಲಿಯೇ ಮಾತನಾಡುವುದರಿಂದ ವಂಚನೆಗಳಿಂದ ಪಾರಾಗಬಹುದು ಅನಿಸುತ್ತದೆ.
-ರಮಾನಂದ ಶರ್ಮಾ, ಜೆ.ಪಿ.ನಗರ, ಬೆಂಗಳೂರು.