Mysore
17
overcast clouds

Social Media

ಮಂಗಳವಾರ, 09 ಡಿಸೆಂಬರ್ 2025
Light
Dark

ಓದುಗರ ಪತ್ರ: ತುಕ್ಕು ಹಿಡಿದ ವಿದ್ಯುತ್ ಟ್ರಾನ್ಸ್ ಫಾರ್ಮರ್ ಕಂಬ; ಅನಾಹುತಕ್ಕೆ ಆಹ್ವಾನ!

ಓದುಗರ ಪತ್ರ

ಮೈಸೂರು ನಗರದ ಅಗ್ರಹಾರ ಬಡಾವಣೆಯ ರಾಮಾನುಜ ರಸ್ತೆಯ ೭ನೇ ಮತ್ತು ೮ನೇ ಕ್ರಾಸ್ ಬಳಿ ಇರುವ ವಿದ್ಯುತ್ ಟ್ರಾನ್ಸ್ ಫಾರ್ಮರ್‌ಗೆ ಆಧಾರವಾಗಿ ಅಳವಡಿಸಿರುವ ಕಬ್ಬಿಣದ ಕಂಬವು ಬಹುಪಾಲು ತುಕ್ಕು ಹಿಡಿದು ಉದುರುತ್ತಿದ್ದು, ಭಾರೀ ಅನಾಹುತಕ್ಕೆ ಕಾದುನಿಂತಿದೆ. ಈ ಕಂಬವು ವಿದ್ಯುತ್ ಟ್ರಾನ್ಸ್ ಫಾರ್ಮರ್‌ನ ಸಂಪೂರ್ಣ ಭಾರವನ್ನು ಹೊತ್ತು ನಿಂತಿದೆ. ಆದರೆ ಕಂಬದ ತಳಭಾಗ ಬಹುಪಾಲು ತುಕ್ಕುಹಿಡಿದು ಉದುರುತ್ತಿರುವುದರಿಂದ ಕುಸಿದು ಬೀಳುವ ಹಂತದಲ್ಲಿದೆ.

ಈಗ ಮಳೆಗಾಲವಾದ್ದರಿಂದ ಕಂಬ ಮತ್ತಷ್ಟು ತುಕ್ಕು ಹಿಡಿದು ದುರ್ಬಲಗೊಳ್ಳುವ ಸಾಧ್ಯತೆ ಹೆಚ್ಚಿದೆ. ಒಂದು ವೇಳೆ ಕಂಬ ಸಂಪೂರ್ಣ ತುಕ್ಕು ಹಿಡಿದು ದುರ್ಬಲಗೊಂಡು ಕುಸಿದರೆ, ಟ್ರಾನ್ಸ್ ಫಾರ್ಮರ್ ನೆಲಕ್ಕುರುಳಲಿದ್ದು, ಭಾರಿ ಅನಾಹುತ ಸಂಭವಿಸಲಿದೆ ಎಂದು ರಸ್ತೆಯ ಅಕ್ಕಪಕ್ಕದ ಮನೆಗಳವರು ಆತಂಕಗೊಂಡಿದ್ದಾರೆ.ಸಾರ್ವಜನಿಕರು ಈ ರಸ್ತೆಯಲ್ಲಿ ಪ್ರಾಣ ಕೈಯಲ್ಲಿ ಹಿಡಿದುಕೊಂಡು ಓಡಾಡಬೇಕಾದ ಪರಿಸ್ಥಿತಿಯಿದೆ.

ಆದ್ದರಿಂದ ಸಂಬಂಧಪಟ್ಟ ಅಧಿಕಾರಿಗಳು ಯಾವುದೇ ರೀತಿಯ ಅನಾಹುತ ಸಂಭವಿಸುವ ಮೊದಲೇ ಎಚ್ಚೆತ್ತುಕೊಂಡು ವಿದ್ಯುತ್ ಟ್ರಾನ್ಸ್ ಫಾರ್ಮರ್‌ಗೆ ಆಧಾರವಾಗಿ ಸದೃಢವಾದ ಹೊಸ ಕಂಬವನ್ನು ಅಳವಡಿಸಬೇಕು. ಅನಂತರ ತುಕ್ಕುಹಿಡಿದು ಬೀಳುವ ಸ್ಥಿತಿಯಲ್ಲಿರುವ ಕಂಬವನ್ನು ತೆರವುಗೊಳಿಸಬೇಕು ಎಂದು ಒತ್ತಾಯಿಸಿದ್ದಾರೆ. ಸಾರ್ವಜನಿಕರ ಪ್ರಾಣ ಹಾನಿ ತಡೆಗಟ್ಟುವುದು ಮತ್ತು ಆಸ್ತಿ ರಕ್ಷಣೆ ಹಿತದೃಷ್ಟಿಯಿಂದ ಫುಟ್‌ಪಾತ್, ರಸ್ತೆಯ ಮಧ್ಯೆ ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ವಿದ್ಯುತ್ ಟ್ರಾನ್ಸ್ ಫಾರ್ಮರ್‌ಗಳನ್ನು ಅಳವಡಿಸಬಾರದು ಎಂಬುದಾಗಿ ಇತ್ತೀಚೆಗೆ ಹೈಕೋರ್ಟ್ ಕೂಡ ಆದೇಶ ನೀಡಿರುವುದನ್ನು ಇಲ್ಲಿ ಸ್ಮರಿಸಬಹುದು.

Tags:
error: Content is protected !!