ಮೈಸೂರಿನ ದಟ್ಟಗಳ್ಳಿ ೩ ನೇ ಹಂತದ ಕನಕದಾಸನಗರವು, ಬಡಾವಣೆ ನಿರ್ಮಾಣವಾದ ಆರಂಭದಲ್ಲಿ ರಾಮಕೃಷ್ಣ ನಗರ ಉಪ ಅಂಚೆ ಕಚೇರಿಗೆ ಸೇರಿತ್ತು. ಹಾಗಾಗಿ ಬಡಾವಣೆಯ ಎಲ್ಲರೂ ಪಿನ್ ಕೋಡ್ ೫೭೦೦೨೨ ಎಂದೇ ಬಳಸುತ್ತಿದ್ದಾರೆ.
ಅಂಚೆ ಇಲಾಖೆಯವರು ಈ ಹಿಂದೆ ಇದ್ದ ರಾಮಕೃಷ್ಣ ನಗರ ಉಪ ಅಂಚೆ ಕಚೇರಿಯ ಪಿನ್ ಕೋಡ್ ೫೭೦೦೨೨ ಅನ್ನು ರಾಮಕೃಷ್ಣ ನಗರಕ್ಕೆ ಮಾತ್ರ ಸೀಮಿತಗೊಳಿಸಿ, ದಟ್ಟಗಳ್ಳಿಗೆ ಹೊಸ ಪಿನ್ ಕೋಡ್ ೫೭೦೦೩೩ ಎಂದು ಬದಲಾವಣೆ ಮಾಡಿದ್ದಾರೆ. ಆ ಸಂದರ್ಭದಲ್ಲಿ ಪತ್ರಿಕಾ ಪ್ರಕಟಣೆಯನ್ನೂ ನೀಡಲಾಗಿತ್ತು. ಆದರೆ ಬಡಾವಣೆಯ ಬಹುತೇಕ ನಿವಾಸಿಗಳಿಗೆ ಈ ಬದಲಾವಣೆ ಗಮನಕ್ಕೆ ಬಂದಿಲ್ಲ. ಬಂದಿದ್ದರೂ ಈಗಾಗಲೇ ತಮ್ಮ ಆಧಾರ್ ಸೇರಿದಂತೆ ಮನೆ ವಿಳಾಸವೆಲ್ಲವೂ ಹಳೆಯ ಪಿನ್ ೫೭೦೦೨೨ ಎಂದು ಇರುವುದರಿಂದ ಈಗಲೂ ದಾಖಲೆ, ವಿಳಾಸದಲ್ಲಿ ಅದೇ ಸಂಖ್ಯೆಯನ್ನು ನಮೂದಿಸಿ ವ್ಯವಹಾರ ಮಾಡುತ್ತಿದ್ದಾರೆ. ಆದರೆ ಈಗ ಪಿನ್ ಕೋಡ್ ಬದಲಾವಣೆಯಾಗಿರುವುದರಿಂದ ಅದನ್ನು ಪಾಸ್ ಪೋರ್ಟ್, ಆಧಾರ್ ಕಾರ್ಡ್ ನಲ್ಲಿ ಬದಲಾವಣೆ ಮಾಡಲು ಮೈಸೂರು ಒನ್ ಕೇಂದ್ರದಲ್ಲಿ ಕೇಳಿದರೆ ಅದು ಅಪ್ ಡೇಟ್ ಆಗಿಲ್ಲ ಎನ್ನುತ್ತಾರೆ. ಗ್ಯಾಸ್ ಏಜೆನ್ಸಿಯವರನ್ನು ಪಿನ್ ಕೋಡ್ ಬದಲಾವಣೆ ಮಾಡುವುದು ಅಂಚೆ ಕಚೇರಿಯವರ ಕೆಲಸ ಎಂದು ಹೇಳುತ್ತಿದ್ದಾರೆ. ಈ ಸಂಬಂಧ ಮೈಸೂರು ವಿಭಾಗೀಯ ಅಂಚೆ ಕಚೇರಿಗೆ ದೂರವಾಣಿ ಕರೆ ಮಾಡಿದರೆ ದಟ್ಟಗಳ್ಳಿಯ ಪಿನ್ ಕೋಡ್ ಬದಲಾವಣೆಯ ಬಗ್ಗೆ ನಮಗೆ ಮಾಹಿತಿ ಇಲ್ಲ ಎಂದು ಹೇಳುತ್ತಾರೆ.
ಇನ್ನು ಗ್ಯಾಸ್ ಏಜೆನ್ಸಿಯವರನ್ನು ವಿಳಾಸದಲ್ಲಿ ಪಿನ್ ಕೋಡ್ ಬದಲಾವಣೆ ಮಾಡಲು ಕೋರಿದರೆ ಬದಲಾವಣೆಯನ್ನು ಸಿಸ್ಟಮ್ ತೆಗೆದುಕೊಳ್ಳುತ್ತಿಲ್ಲ, ಅದು ಪೋಸ್ಟ್ ಆಫೀಸ್, ಕೇಂದ್ರ ಸರ್ಕಾರದ ಕಡೆಯಿಂದ ಅಪ್ ಡೇಟ್ ಆಗಬೇಕು ಎನ್ನುತ್ತಾರೆ. ಒಂದು ಸಣ್ಣ ಸಮಸ್ಯೆಯನ್ನು ಪರಿಹಾರ ಮಾಡಲು ಇಲಾಖೆಗಳು ಹೇಗೆ ಜನರನ್ನು ಸತಾಯಿಸುತ್ತವೆ ಎನ್ನುವುದಕ್ಕೆ ಇದು ಒಂದು ನಿದರ್ಶನವಷ್ಟೇ. ಸಂಬಂಧಟ್ಟವರು ಈಗಲಾದರೂ ಪಿನ್‌ಕೋಡ್ ಸಮಸ್ಯೆಯನ್ನು ನಿವಾರಿಸುವ ಮೂಲಕ ಸಾರ್ವಜನಿಕರಿಗೆ ಅನುಕೂಲ ಕಲ್ಪಿಸಬೇಕಾಗಿದೆ.
-ಪ್ರಕಾಶ್ ಮುಳ್ಳೂರು, ಕನಕದಾಸನಗರ, ಮೈಸೂರು




