ರಾಜ್ಯ ಸರ್ಕಾರ ಸರ್ಕಾರಿ ಶಾಲೆಗಳಲ್ಲಿ ಶಿಕ್ಷಕರ ಕೊರತೆ ನೀಗಿಸುವ ಉದ್ದೇಶದಿಂದ 40,000 ಅತಿಥಿ ಶಿಕ್ಷಕರ ನೇಮಕಾತಿಗೆ ಆದೇಶ ಹೊರಡಿಸಿದೆ. 34,000 ಪ್ರಾಥಮಿಕ ಶಾಲೆ 9,000 ಪ್ರೌಢ ಶಾಲಾ ಅತಿಥಿ ಶಿಕ್ಷಕರ ನೇಮಕಾತಿ ಪ್ರಕ್ರಿಯೆ ನಡೆಯುತ್ತಿದೆ. ಆದರೆ ಶಿಕ್ಷಕರ ನೇಮಕಾತಿಯನ್ನು ವಿಷಯವಾರು ಹಾಗೂ ಮೆರಿಟ್ ಆಧಾರದ ಮೇಲೆ ಮಾಡದೇ ಶಾಸಕರ ಮಾತಿನಂತೆ ಬಿಇಒಗಳು ಸರ್ಕಾರಿ ನಿಯಮಗಳನ್ನು ಗಾಳಿಗೆ ತೂರಿ ನೇಮಕಾತಿ ಮಾಡುತ್ತಿದ್ದಾರೆ.
ಸರ್ಕಾರಿ ಶಾಲೆಗಳ ಮುಖ್ಯ ಶಿಕ್ಷಕರಿಗೆ ಇದು ನುಂಗಲಾರದ ತುತ್ತಾಗಿದ್ದು , ಸಂಕಟಕ್ಕೆ ಸಿಲುಕಿದ್ದಾರೆ. ಶಾಲಾಭಿವೃದ್ಧಿ ಸಮಿತಿ (ಎಸ್‌ಡಿಎಂಸಿ) ಕಿರಿಕಿರಿ, ಊರಿನ ಗಣ್ಯರು, ಹಲವು ಪಕ್ಷಗಳ ಕಾರ್ಯಕರ್ತರು ಹಸ್ತಕ್ಷೇಪ ಮಾಡುತ್ತಿದ್ದು, ಮೆರಿಟ್ ಶಿಕ್ಷಕರ ನೇಮಕಾತಿ ಮಾಡದೇ ಶಾಸಕರ ಹಿಂಬಾಲಕರ ಸಂಬಂಽಗಳು ಹಾಗೂ ಇತರರನ್ನು ನೇಮಕಾತಿ ಮಾಡಲಾಗಿದೆ.
ಅತಿಥಿ ಶಿಕ್ಷಕರ ನೇಮಕಾತಿಯಲ್ಲಿ ಶಾಸಕರು ಹಸ್ತಕ್ಷೇಪ ಮಾಡದಂತೆ ಶಿಕ್ಷಣ ಸಚಿವರು ಹಾಗೂ ಮುಖ್ಯಮಂತ್ರಿಗಳು ಕ್ರಮ ಕೈಗೊಳ್ಳಬೇಕು ಹಾಗೂ ಅತಿಥಿ ಶಿಕ್ಷಕರ ನೇಮಕಾತಿಯ ಜವಾಬ್ದಾರಿಯನ್ನು ಬಿಇಒ ಹಾಗೂ ಮುಖ್ಯ ಶಿಕ್ಷಕರಿಗೆ ವಹಿಸಬೇಕಾಗಿದೆ.
– ಮಹಾಂತೇಶ್, ಧಾರವಾಡ





