ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ಪಟ್ಟಣದ ಊಟಿ ರಸ್ತೆಯಲ್ಲಿರುವ ಜಿಲ್ಲಾ ಕೇಂದ್ರ ಗ್ರಂಥಾಲಯ ಶಾಖೆಗೆ ಪ್ರತಿನಿತ್ಯ ಹಿರಿಯ ನಾಗರಿಕರು, ವಿದ್ಯಾರ್ಥಿಗಳು, ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸುತ್ತಿರುವ ಪುರುಷರು, ಮಹಿಳೆಯರು ಬರುತ್ತಾರೆ. ಈ ಗ್ರಂಥಾಲಯದಲ್ಲಿ ಕುಡಿಯುವ ನೀರಿನ ವ್ಯವಸ್ಥೆಯಿಲ್ಲ.
ಶೌಚಾಲಯ ಇದ್ದರೂ ಸ್ವಚ್ಛತೆ ಇಲ್ಲದೆ ದುರ್ವಾಸನೆ ಬೀರುತ್ತಿದ್ದು, ಇಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಸಿಬ್ಬಂದಿಗಳಿಗೂ ತೊಂದರೆಯಾಗುತ್ತಿದೆ. ಗ್ರಂಥಾಲಯದ ಮುಂಭಾಗದಲ್ಲಿ ಸ್ವಚ್ಛತೆ, ಮೈದಾನವು ಸಮತಟ್ಟಿಲ್ಲದೆ ಮಣ್ಣಿನ ಗುಡ್ಡೆಗಳ ಮೇಲೆ ಕಳೆ ಬೆಳೆದು ನಿಂತಿದ್ದು, ಸಂಜೆಯಾದರೆ ವಿದ್ಯುತ್ ದೀಪಗಳಿಲ್ಲದೆ ಕತ್ತಲಾವರಿಸುವುದರೊಂದಿಗೆ ಸೊಳ್ಳೆಗಳ ಕಾಟವೂ ಹೆಚ್ಚಾಗುತ್ತಿದೆ. ಇಲ್ಲಿ ಗ್ರಂಥಾಲಯವಿದೆ ಎಂದು ಬಹುತೇಕರಿಗೆ ತಿಳಿಯುವುದೇ ಇಲ್ಲ. ಶಾಸಕರು ಹಾಗೂ ಅಧಿಕಾರಿಗಳು ಸಮಸ್ಯೆಗಳ ನಿವಾರಣೆಗೆ ಕ್ರಮ ಕೈಗೊಂಡು ಗ್ರಂಥಾಲಯದ ಬಳಿ ಫಲಕವನ್ನು ಹಾಕುವ ಮೂಲಕ ಸಾರ್ವಜನಿಕರಿಗೆ ಅನುಕೂಲ ಕಲ್ಪಿಸಬೇಕಾಗಿದೆ.
-ನಾಗೇಶ್, ಮಾನಸಗಂಗೋತ್ರಿ, ಮೈಸೂರು





