ವಿಜಯನಗರ ಒಂದನೇ ಹಂತದಿಂದ ಕಾಳಿದಾಸ ರಸ್ತೆಗೆ ಸಂಪರ್ಕ ಕಲ್ಪಿಸುವ ಕನ್ನಡ ಸಾಹಿತ್ಯ ಪರಿಷತ್ತಿನ ರಸ್ತೆಯಲ್ಲಿ ಇತ್ತೀಚೆಗೆ ಬಿಡಾಡಿ ಕುದುರೆಗಳು ಕಾಣಿಸಿಕೊಳ್ಳುತ್ತಿದ್ದು, ವಾಹನ ಸವಾರರಿಗೆ ಅನಿರೀಕ್ಷಿತ ತಲೆನೋವು ತಂದೊಡ್ಡಿವೆ. ಈ ಕುದುರೆಗಳು ರಸ್ತೆಯಲ್ಲಿ ನಿಂತು ವಾಹನ ಸವಾರರಿಗೆ ದಾರಿ ಬಿಡದೇ ತೊಂದರೆ ನೀಡುತ್ತಿವೆ. ತರಕಾರಿ ಅಂಗಡಿಗಳಿಗೂ ನುಗ್ಗಿ ತರಕಾರಿಗಳನ್ನು ತಿಂದು ಹಾಳು ಮಾಡುತ್ತಿದ್ದು, ವ್ಯಾಪಾರಿಗಳಿಗೂ ತೊಂದರೆ ನೀಡುತ್ತಿವೆ. ನಗರ ಪಾಲಿಕೆ ಅಧಿಕಾರಿಗಳು ಕೂಡಲೇ ಬಿಡಾಡಿ ಕುದುರೆಗಳನ್ನು ಹಿಡಿದು ನಗರದಿಂದ ಹೊರಗೆ ಸಾಗಿಸುವ ಮೂಲಕ ಸಾರ್ವಜನಿಕರಿಗೆ ಆಗುತ್ತಿರುವ ತೊಂದರೆಯನ್ನು ತಪ್ಪಿಸಬೇಕಾಗಿದೆ.
-ಆರ್. ಯಶಸ್, ಮೈಸೂರು





