ಇತ್ತೀಚಿನ ದಿನಗಳಲ್ಲಿ ಅನಗತ್ಯ ದೂರವಾಣಿ ಕರೆಗಳಿಂದ ಜನಸಾಮಾನ್ಯರು ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ. ಎಸ್‌ಎಸ್‌ಎಲ್‌ಸಿ, ಪಿಯುಸಿ ಪರೀಕ್ಷೆ ಬರೆದಿದ್ದ ವಿದ್ಯಾರ್ಥಿಗಳ ಪೋಷಕರ ಮೊಬೈಲ್‌ಗೆ ಕರೆಮಾಡುವ ಕೆಲವು ಖಾಸಗಿ ಕಾಲೇಜು ಹಾಗೂ ಕಂಪ್ಯೂಟರ್ ಸೆಂಟರ್‌ಗಳವರು ನಿಮ್ಮ ಮಗ,ಮಗಳು ಎಸ್‌ಎಸ್‌ಎಲ್‌ಸಿ, ಪಿಯುಸಿ ಪರೀಕ್ಷೆಗಳಲ್ಲಿ ಪಾಸ್ ಆಗಿದ್ದಾರಾ? ಹಾಗಿದ್ದರೆ ನಮ್ಮ ಕಾಲೇಜಿಗೆ, ಕಂಪ್ಯೂಟರ್ ಸೆಂಟರ್‌ಗೆ ಸೇರಿಸಿ ಎಂದು ಹೇಳುತ್ತಾರೆ.
ನಿಮಗೆ ನಮ್ಮ ಫೋನ್ ನಂಬರ್ ಕೊಟ್ಟವರು ಯಾರು ಎಂದು ಕೇಳಿದರೆ ಬೋರ್ಡ್‌ನಿಂದ ಪಡೆಯಲಾಗಿದೆ ಎಂದು ಹೇಳುತ್ತಾರೆ. ಪ್ರತಿಯೊಬ್ಬರ ಮೊಬೈಲ್ ನಂಬರ್ ಖಾಸಗಿಯಾಗಿರುತ್ತದೆ. ಪೋಷಕರ ಅನುಮತಿ ಇಲ್ಲದೇ ಪರೀಕ್ಷಾ ಮಂಡಳಿಯವರು ಹೇಗೆ ಖಾಸಗಿ ಕಾಲೇಜು ಹಾಗೂ ಕಂಪ್ಯೂಟರ್ ಸೆಂಟರ್‌ಗಳಿಗೆ ಮೊಬೈಲ್ ನಂಬರ್ ನೀಡುತ್ತಾರೆ? ಪೋಷಕರ ಮೊಬೈಲ್ ನಂಬರ್ ಪಡೆಯಲು ಖಾಸಗಿ ಶಿಕ್ಷಣ ಸಂಸ್ಥೆಗಳಿಂದ ಹಣ ಸಂದಾಯವಾಗುತ್ತದೆಯೇ ಎಂಬ ಅನುಮಾನ ಮೂಡುತ್ತದೆ.
ಸರ್ಕಾರ ಹಾಗೂ ಶಿಕ್ಷಣ ಇಲಾಖೆಯವರು ಎಸ್‌ಎಸ್‌ಎಲ್‌ಸಿ ಹಾಗೂ ಪಿಯುಸಿ ವಿದ್ಯಾರ್ಥಿಗಳ ಪೋಷಕರ ಮೊಬೈಲ್ ಸಂಖ್ಯೆಗಳನ್ನು ಖಾಸಗಿ ಶಿಕ್ಷಣ ಸಂಸ್ಥೆಗಳು ಹಾಗೂ ಕಂಪ್ಯೂಟರ್‌ಸೆಂಟರ್‌ಗಳಿಗೆ ನೀಡುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವ ಮೂಲಕ ಪೋಷಕರಿಗೆ ಅನಗತ್ಯ ಕರೆಗಳಿಂದ ಆಗುತ್ತಿರುವ ಕಿರಿಕಿರಿಯನ್ನು ತಪ್ಪಿಸಬೇಕಾಗಿದೆ.
– ಮೀನಾಕ್ಷಿ, ಮೈಸೂರು





