ರಾಜ್ಯದಲ್ಲಿ ಡೆಂಗ್ಯು ಜ್ವರದ ಪ್ರಕರಣಗಳು ದಿನೇ ದಿನೇ ಹೆಚ್ಚಾಗುತ್ತಿದ್ದು, ಇದರಿಂದ ಸಾವಿಗೀಡಾಗುತ್ತಿರುವವರ ಸಂಖ್ಯೆಯೂ ಹೆಚ್ಚುತ್ತಿರುವುದು ಆತಂಕಕಾರಿ. ಹವಾಮಾನ ವೈಪರೀತ್ಯ ಹಾಗೂ ಅನೈರ್ಮಲ್ಯ ವಾತಾವರಣದಿಂದಾಗಿ ಡೆಂಗ್ಯು ಜ್ವರ ವ್ಯಾಪಕವಾಗಿ ಹರಡುತ್ತಿದೆ. ನಮ್ಮ ಮನೆಯ ಸುತ್ತಮುತ್ತ ಹಾಗೂ ಚರಂಡಿಗಳು ಸ್ವಚ್ಛವಿಲ್ಲದಿದ್ದಾಗ, ನಿಂತ ನೀರಿನಲ್ಲಿ ಸೊಳ್ಳೆಗಳು ಉತ್ಪತ್ತಿಯಾಗುತ್ತವೆ. ಈ ಪೈಕಿ ಈಡಿಸ್ ಈಜಿಪ್ಟ ಎಂಬ ಸೊಳ್ಳೆ ಕಚ್ಚಿದರೆ ಈ ಡೆಂಗ್ಯು ಸೋಂಕು ಹರಡುವ ಸಾಧ್ಯತೆಗಳಿರುತ್ತವೆ. ಡೆಂಗ್ಯು ಕಾಣಿಸಿಕೊಂಡವರಲ್ಲಿ ಜ್ವರ, ತಲೆನೋವು, ವಾಂತಿ, ಕಣ್ಣು ಊದಿಕೊಳ್ಳುವುದು, ಕೈಕಾಲುಗಳಲ್ಲಿ ಸೆಳೆತ, ನೋವು, ಆಯಾಸದಂತಹ ಲಕ್ಷಣಗಳು ಕಾಣಿಸಿಕೊಳ್ಳುತ್ತವೆ. ಈ ಲಕ್ಷಣಗಳು ಕಾಣಿಸಿಕೊಂಡಾಗ ನಾವು ಸ್ಥಳೀಯ ಆಸ್ಪತ್ರೆಗೆ ಭೇಟಿ ನೀಡಿ ತಪಾಸಣೆ ಮಾಡಿಸಿಕೊಳ್ಳುವುದು ಸೂಕ್ತ. ಪ್ರಮುಖವಾಗಿ ಜನನಿಬಿಡ ಪ್ರದೇಶಗಳಲ್ಲಿ ಸೊಳ್ಳೆಗಳ ನಿಯಂತ್ರಣವಾಗಬೇಕು. ಪ್ರತಿಮನೆಯಲ್ಲಿ ಸೊಳ್ಳೆ ಪರದೆ ಬಳಸುವ ಜತೆಗೆ, ಸುತ್ತಮುತ್ತ ನೀರು ನಿಲ್ಲದಂತೆ ಎಚ್ಚರವಹಿಸಬೇಕು. ಜತೆಗೆ ಆರೋಗ್ಯ ಇಲಾಖೆಯೂ ಈ ಬಗ್ಗೆ ಎಚ್ಚರವಹಿಸಿ ಡೆಂಗ್ಯು ಜ್ವರದ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವ ಕೆಲಸ ಮಾಡಬೇಕು. -ಹರಳಹಳ್ಳಿ ಪುಟ್ಟರಾಜು, ಪಾಂಡವಪುರ