ಮೈಸೂರು ಆಕಾಶವಾಣಿಗೆ ೯೦ ವರ್ಷಗಳು ತುಂಬಿದ್ದು, ಅಂದಿನಿಂದ ಇಂದಿನವರೆಗೂ ವಿಶೇಷ ಕಾರ್ಯಕ್ರಮಗಳನ್ನು ಪ್ರಸಾರ ಮಾಡಿ ಶ್ರೋತೃಗಳ ಮನ ಗೆದ್ದಿದೆ. ಇನ್ನು ಹತ್ತು ವರ್ಷಗಳನ್ನು ದಾಟಿದರೆ ಶತಮಾನದ ಸಂಭ್ರಮದಲ್ಲಿ ಮೈಸೂರು ಆಕಾಶವಾಣಿ ಮಿಂದೇಳುತ್ತದೆ! ‘ಮೈಸೂರು ಆಕಾಶವಾಣಿಗೆ (೯೦) ತೊಂಬತ್ತು: ನೆನಪುಗಳ ಹೊತ್ತು!’ ಕಾರ್ಯಕ್ರಮ ಆಕರ್ಷಕವಾಗಿ ಮೂಡಿ ಬಂತು. ಜೊತೆಗೆ ಸವಿ ಸವಿ ನೆನಪುಗಳನ್ನು ಮೂಡಿಸಿತು. ಮೈಸೂರು ಆಕಾಶವಾಣಿ ಕೇವಲ ಮನರಂಜನೆಯಷ್ಟೇ ಅಲ್ಲದೆ, ಮಾಹಿತಿಯನ್ನೂ ಕೂಡ ನೀಡುತ್ತಾ ಬರುತ್ತಿದೆ. ಈ ನಿಟ್ಟಿನಲ್ಲಿ ಹಿಂದೆ ಪ್ರಸಾರವಾದ ಅನೇಕ ಕಾರ್ಯಕ್ರಮಗಳು, ಜೊತೆಗೆ ನವ ನವೀನ ಕಾರ್ಯಕ್ರಮಗಳು, ಯುವಜನತೆಗೆ, ವೃದ್ಧರಿಗೆ, ಕೃಷಿಕರಿಗೆ, ಮಹಿಳೆಯರಿಗೆ ಉಪಯುಕ್ತವಾದ ಕಾರ್ಯಕ್ರಮಗಳ ಮೂಲಕ ಎಲ್ಲ ವರ್ಗದವರನ್ನೂ ತನ್ನತ್ತ ಸೆಳೆದಿದೆ. ಆಕಾಶವಾಣಿ ನಿರ್ದೇಶಕರಿಗೆ, ಕಾರ್ಯಕ್ರಮ ಅಧಿಕಾರಿಗಳಿಗೆ, ತಂತ್ರಜ್ಞರಿಗೆ, ಕಲಾವಿದರಿಗೆ, ಜೊತೆಗೆ ಕೇಳುಗ ವರ್ಗಕ್ಕೂ ವಿಶೇಷ ಅಭಿನಂದನೆಗಳು.
-ಕಾಳಿಹುಂಡಿ ಶಿವಕುಮಾರ್, ಮೈಸೂರು





