ಮೊಬೈಲ್ ಗೀಳಿನಿಂದಾಗಿ ಯುವಜನರ ಭವಿಷ್ಯ ಮಸುಕಾಗುತ್ತಿರುವುದು ಆತಂಕಕಾರಿ ಸಂಗತಿಯಾಗಿದೆ. ಮೊಬೈಲ್ ಎಂಬ ಮಾಯಾಜಾಲದಲ್ಲಿ ಹಿರಿಯರು, ಕಿರಿಯರು ಎಂಬ ವಯಸ್ಸಿನ ತಾರತಮ್ಯವಿಲ್ಲದೆ ಪ್ರತಿಯೊಬ್ಬರೂ ಸಿಲುಕಿದ್ದಾರೆ. ಇಂದಿನ ಡಿಜಿಟಲ್ ಯುಗದಲ್ಲಿ ಮೊಬೈಲ್ ಅನಿವಾರ್ಯ ಕೂಡ ಹೌದು.
ರಾಜ್ಯ ಮತ್ತು ಕೇಂದ್ರ ಸರ್ಕಾರಗಳ ಬಹುತೇಕ ಸೇವಾ ಸೌಲಭ್ಯಗಳನ್ನು ಪಡೆಯಲು ಮೊಬೈಲ್ ತೀರಾ ಅವಶ್ಯ. ಮೊಬೈಲ್ ಇಲ್ಲದ ಬದುಕನ್ನು ಊಹಿಸಿಕೊಳ್ಳುವುದೇ ಕಷ್ಟವಾಗಿದೆ. ಶಾಲಾ ಕಾಲೇಜುಗಳ ವಿದ್ಯಾರ್ಥಿಗಳೂ ಮೊಬೈಲ್‌ಗಳಿಗೆ ದಾಸರಾಗಿಬಿಟ್ಟಿದ್ದಾರೆ. ಅನೇಕ ವಿದ್ಯಾರ್ಥಿ, ವಿದ್ಯಾರ್ಥಿನಿಯರು ದಿನದ ತಮ್ಮ ಬಹುತೇಕ ವೇಳೆಯನ್ನು ಮೊಬೈಲ್ ಜೊತೆಯಲ್ಲೇ ಕಳೆಯುತ್ತಿರುವುದರಿಂದ ಶೈಕ್ಷಣಿಕವಾಗಿ ಹಿಂದುಳಿಯುತ್ತಿದ್ದಾರೆ. ಇಂದು ಸಾಮಾಜಿಕ ಜಾಲತಾಣಗಳಲ್ಲಿ ವಿದ್ಯಾರ್ಥಿ, ವಿದ್ಯಾರ್ಥಿನಿಯರೇ ಹೆಚ್ಚಾಗಿ ಸಕ್ರಿಯರಾಗಿದ್ದಾರೆ.
ಮೊಬೈಲ್‌ನಿಂದ ಹೊರಬರುವ ವಿಕಿರಣಗಳು ದೀರ್ಘ ಕಾಲದಲ್ಲಿ ದೃಷ್ಟಿ ಮತ್ತು ನರಗಳ ಸಮಸ್ಯೆಗಳನ್ನು ಉಂಟು ಮಾಡಬಹುದು ಎಂಬುದನ್ನು ನರರೋಗಗಳ ತಜ್ಞರೇ ಹೇಳುತ್ತಾರೆ. ಆದ್ದರಿಂದ ವಿದ್ಯಾರ್ಥಿಗಳು, ಅಗತ್ಯಕ್ಕನುಗುಣವಾಗಿ ಮೊಬೈಲ್ ಬಳಸುವುದು ಉತ್ತಮ. ಅತಿಯಾದರೆ ಅಮೃತ ಕೂಡ ವಿಷವಾಗಿ ಪರಿಣಮಿಸಬಲ್ಲದು ಎಂಬುದನ್ನು ತಿಳಿದು ನಡೆದರೆ ಭವಿಷ್ಯ ಉಜ್ವಲವಾಗುತ್ತದೆ.
– ಕೆ.ವಿ.ವಾಸು, ವಿವೇಕಾನಂದ ನಗರ, ಮೈಸೂರು





