ಕೇರಳದ ಕನ್ನಡ ಮಾಧ್ಯಮ ಶಾಲೆಗಳಲ್ಲಿ ಮಲಯಾಳಂ ಭಾಷೆಯನ್ನು ಕಡ್ಡಾಯವಾಗಿ ಕಲಿಯಬೇಕು ಎಂಬ ಹಿನ್ನೆಲೆಯಲ್ಲಿ, ಮಲಯಾಳಂ ಭಾಷಾ ಮಸೂದೆ ೨೦೨೫ ಅನ್ನು ಕೇರಳ ವಿಧಾನ ಸಭೆ ಅಂಗೀಕಾರ ಮಾಡಿರುವುದನ್ನು ತಕ್ಷಣ ಹಿಂತೆಗೆದುಕೊಳ್ಳಬೇಕೆಂದು, ಕೇರಳದ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರನ್ನು ಒತ್ತಾಯಿಸುತ್ತೇನೆ ಎಂದು ಮುಖ್ಯಮಂತ್ರಿ ಶ್ರೀ ಸಿದ್ದರಾಮಯ್ಯ ಅವರು ಹೇಳಿರುವುದು ಸ್ವಾಗತಾರ್ಹ. ಕೇರಳದ ಗಡಿಜಿಲ್ಲೆಯಾದ ಕಾಸರಗೋಡಿನಲ್ಲಿ ಶೇ.೭೦ಕ್ಕಿಂತ ಹೆಚ್ಚಿನ ವಿದ್ಯಾರ್ಥಿಗಳು ಕನ್ನಡ ಭಾಷೆಯನ್ನು ಮತ್ತು ಕನ್ನಡ ಮಾಧ್ಯಮದಲ್ಲೇ ಕಲಿಯಲು ಬಯಸುತ್ತಾರೆ. ಮಲಯಾಳಂ ಕಲಿಕೆ ಕಡ್ಡಾಯಗೊಳಿಸಿದರೆ ಕೇರಳ ರಾಜ್ಯದಲ್ಲಿ ಭಾಷಾ ಅಲ್ಪಸಂಖ್ಯಾತರಾದ ಕನ್ನಡಿಗರು ಮಾತೃ ಭಾಷೆ ಕಲಿಕೆ ಅವಕಾಶದಿಂದ ವಂಚಿತರಾಗುವುದರ ಜೊತೆಗೆ, ಕನ್ನಡಿಗರ ಮೂಲಭೂತ ಹಕ್ಕನ್ನು ದಮನ ಮಾಡುವಂತಹ ಇಂತಹ ಕೆಲಸಕ್ಕೆ ಕೇರಳ ಸರ್ಕಾರ ಮುಂದಾಗಿರುವುದು ವಿಷಾದಕರ ಸಂಗತಿ. ಈ ವಿಷಯದಲ್ಲಿ ರಾಜ್ಯ ಸರ್ಕಾರ ಕಾಸರಗೋಡಿನ ಕನ್ನಡಿಗರ ಜೊತೆ ನಿಲ್ಲುವುದು ಸೂಕ್ತ.
-ಬೆಸಗರಹಳ್ಳಿ ರವಿ ಪ್ರಸಾದ್, ಮೈಸೂರು





