ಸಂಸದ ಪ್ರಜ್ವಲ್ ರೇವಣ್ಣ ಅವರದ್ದೆನ್ನಲಾದ ಅಶ್ಲೀಲ ವಿಡಿಯೋ ಪ್ರಕರಣದಲ್ಲಿ ಸಂತ್ರಸ್ತೆಯ ಬಗ್ಗೆ ಕುಹಕಗಳು ಕೇಳಿಬರುತ್ತಿವೆ. ಅದು ಸಲ್ಲದು. ಸಂತ್ರಸ್ತೆಯರು ಬಲವಂತವಾಗಿ ಪ್ರಜ್ವಲ್ ಅವರಿಂದ ಲೈಂಗಿಕ ದೌರ್ಜನ್ಯ ಅನುಭವಿಸಿರಬಹುದು. ಅಥವಾ ಹಲವು ಚಪಲಕೋರರ ಅನಿಸಿಕೆಯಂತೆ ವಿಲಾಸಿ ಜೀವನಕ್ಕಾಗಿಯೇ ಜೀವನ ಹಾಳು ಮಾಡಿಕೊಂಡಿರಬಹುದು. ಈ ಎಲ್ಲದರ ಹಿಂದೆ ಪುರುಷನೊಬ್ಬನ ಪೈಶಾಚಿಕತೆ ಇದೆ ಎಂಬುದು ಸಾಬೀತಾಗಿದೆ. ಅಲ್ಲದೆ, ಅಶ್ಲೀಲ ಪೆನ್‌ಡೈವ್‌ನ್ನು ವಿಡಿಯೋ ಮೂಲಕ ಹರಿಯಬಿಟ್ಟವರು ಕೂಡ ಪುರುಷರೇ ಆಗಿರುತ್ತಾರೆ. ಸೇಡು, ಚಪಲ, ಕಳ್ಳದಂಧೆಗೆ ರಕ್ಷಣೆ ಇತ್ಯಾದಿ ಯಾವುದೇ ದುರುದ್ದೇಶ ಇರಬಹುದು. ಅದರಿಂದ ಅವಮಾನ, ಅಪಹಾಸ್ಯಕ್ಕೆ ಗುರಿಯಾಗುವುದು ಸಂತ್ರಸ್ತೆಯರೇ ಎಂಬ ಸಣ್ಣ ಮಾನವೀಯ ಗುಣವೂ ಇಲ್ಲದ ಈ ಪುರುಷರ ಬಗ್ಗೆ ಸಾರ್ವಜನಿಕ ವಲಯದಲ್ಲಿ ಚರ್ಚೆಯೇ ಕಾಣುತ್ತಿಲ್ಲ. ಈ ಸಂದರ್ಭದಲ್ಲಿ ಅಂತಃಕರಣದ ಮನಸ್ಸುಗಳು ಸಂತ್ರಸ್ತೆಯ ಬಗ್ಗೆ ಅನುಕಂಪ, ಆದರಗಳಿಂದ ಮಾತನಾಡಬೇಕಿದೆ. ಇದರಿಂದ ಮಾನಸಿಕವಾಗಿ, ದೈಹಿಕವಾಗಿ ಘಾಸಿಯಾಗಿರುವ ಸಂತ್ರಸ್ತೆಯರಿಗೆ ಮನೋಸ್ಥೈರ್ಯ ಲಭಿಸುತ್ತದೆ. ಆಗ ಅವರು ಸ್ವಯಂಪ್ರೇರಿತವಾಗಿ ತಮ್ಮ ಮೇಲೆ ದೌರ್ಜನ್ಯ ನಡೆಸಿದ ವ್ಯಕ್ತಿಯ ವಿರುದ್ಧ ನ್ಯಾಯಕ್ಕಾಗಿ ಹೋರಾಟಕ್ಕೆ ಇಳಿಯಬಹುದು. ಅಂತಹ ಆಶಯ ನಮ್ಮೊಳಗೆ ಸದಾ ಜಾಗೃತವಾಗಿರುವುದು ಈ ಪ್ರಕರಣದ ಸಂದರ್ಭದಲ್ಲಿ ಅತ್ಯಂತ ಅಗತ್ಯ.
-ಎಸ್.ಎಂ.ಜಯಂತಿ, ಸರಸ್ವತಿಪುರಂ, ಮೈಸೂರು.